ADVERTISEMENT

ವಿಜ್ಞಾನ ಕಾಂಗ್ರೆಸ್‌ನಲ್ಲಿ ಮೋದಿ: ತಂತ್ರಜ್ಞಾನದ ಸಹಯೋಗದಿಂದ ದೇಶ ಸದೃಢ

ಪ್ರಧಾನಮಂತ್ರಿ ನರೇಂದ್ರಮೋದಿ ಶುಕ್ರವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಐದು ದಿನಗಳ ಈ ಕಾರ್ಯಕ್ರಮದಲ್ಲಿ 15,000 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. 150 ಕ್ಕೂ ಹೆಚ್ಚು ಸಂಘ– ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಅವುಗಳಲ್ಲಿ 24 ದೇಶಗಳ 74 ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನೊಬೆಲ್‌ ಪುರಸ್ಕೃತ ವಿಜ್ಞಾನಿಗಳಾದ ಜರ್ಮನಿಯ ಪ್ರೊ. ಸ್ಟೀಫನ್‌ ಹೆಲ್‌, ಇಸ್ರೇಲ್‌ನ ಪ್ರೊ. ಅಡಾ ಇಯೊನಾಥ್ ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ.

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 6:22 IST
Last Updated 3 ಜನವರಿ 2020, 6:22 IST

ಭಾಷಣ ಮುಕ್ತಾಯ

ಹೊಸ ವರ್ಷದ ಶುಭಾಶಯಗಳೊಂದಿಗೆ ನರೇಂದ್ರ ಮೋದಿ ಭಾಷಣ ಮುಗಿಸಿದರು.

ತಂತ್ರಜ್ಞಾನದ ಸಹಯೋಗದಿಂದ ದೇಶ ಸದೃಢ

ತಂತ್ರಜ್ಞಾನವು ನಿಷ್ಪಕ್ಷಪಾತವಾಗಿರುತ್ತೆ. ಮಾನವೀಯತೆ ಮತ್ತು ಅಧುನಿಕ ತಂತ್ರಜ್ಞಾನದ ಸಹಯೋಗದಿಂದ ಹೊಸ ದಶಕದಲ್ಲಿ ಹೊಸ ಭಾರತವನ್ನು ಮತ್ತಷ್ಟು ಸದೃಢಗೊಳಿಸಲು ಸಾಧ್ಯವಾಗುತ್ತದೆ. –ನರೇಂದ್ರ ಮೋದಿ

ಕ್ಷಯ ನಿರ್ಮೂಲನೆಯ ಗುರಿ

ಆರೋಗ್ಯವೇ ದೊಡ್ಡ ಸಂಪತ್ತು. ಚಿನ್ನದ ತುಣುಕಲ್ಲ ಎಂದು ಮಹಾತ್ಮಗಾಂಧಿ ಒಮ್ಮೆ ಹೇಳಿದ್ದರು. 2024ರ ಹೊತ್ತಿಗೆ ಕ್ಷಯ ರೋಗ ನಿರ್ಮೂಲನೆಯ ಗುರಿ ಹಾಕಿಕೊಂಡಿದ್ದೇವೆ. ಜಗತ್ತಿನ ದೊಡ್ಡ ಔಷಧ ರಫ್ತು ದೇಶವಾಗುವ ಗುರಿ ಇದೆ. –ನರೇಂದ್ರ ಮೋದಿ

ADVERTISEMENT

ರೈತ ಕೇಂದ್ರಿತ ಪರಿಹಾರ ಯೋಚಿಸಿ

2022ರ ಹೊತ್ತಿಗೆ ನಾವು ಕಚ್ಚಾತೈಲದ ಆಮದನ್ನು ಶೇ 10ರಷ್ಟು ಕಡಿಮೆ ಮಾಡುವಂತೆ ಆಗಬೇಕು. ಜೈವಿಕ ಇಂಧನ, ಎಥೆನಾಲ್‌ ಬಳಕೆಯಿಂದ ಇದು ಸಾಧ್ಯವಾಗುತ್ತೆ. ನೀವು ಈ ಬಗ್ಗೆ ಯೋಚಿಸಿ. ಭಾರತವನ್ನು 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯಾಗಿಲು ನಿಮ್ಮೆಲ್ಲರ ಸಹಕಾರ ಬೇಕಿದೆ. ಕೃಷಿ ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿಗೆ ರೈತ ಕೇಂದ್ರಿತ ಪರಿಹಾರಗಳನ್ನು ಯೋಚಿಸಿ. –ನರೇಂದ್ರ ಮೋದಿ

ಸುಲಭದ ತಂತ್ರಗಳ ಬಗ್ಗೆ ಯೋಚಿಸಿ

ಏಕ ಬಳಕೆ ಪ್ಲಾಸ್ಟಿಕ್ ನಾವು ನಿಷೇಧಿಸಿದ್ದೇವೆ. ಈಗ ಪ್ಲಾಸ್ಟಿಕ್‌ಗಿಂತಲೂ ಕಡಿಮೆ ಬೆಲೆಯ ಬೇರೊಂದು ಉಪಕರಣದ ಬಗ್ಗೆ ಯೋಚಿಸಿ. ಎಲೆಕ್ಟ್ರಾನಿಕ್ ಉಪಕರಣಗಳಲ್ಲಿರುವ ಲೋಹವನ್ನು ಹೊರತೆಗೆದು ಬಳಸಲು ಸಾಧ್ಯವಾಗುವ ಸುಲಭದ ತಂತ್ರಗಳ ಬಗ್ಗೆ ಯೋಚಿಸಿ. ಇದರಿಂದ ವಾತಾವರಣವೂ ಸುರಕ್ಷಿತವಾಗುತ್ತದೆ. ಸಣ್ಣ ಉದ್ಯೋಗಗಳು ಸೃಷ್ಟಿಯಾಗುತ್ತವೆ. –ನರೇಂದ್ರ ಮೋದಿ

ನೀರು, ಬೀಜಕ್ಕಾಗಿ ಹೊಸ ಯೋಚನೆ ಬೇಕು

ನೀರು ನಿರ್ವಹಣೆ ಬಗ್ಗೆ ವಿಜ್ಞಾನಿಗಳು ಹೆಚ್ಚು ಗಮನ ನೀಡಬೇಕು. ಮನೆಯಿಂದ ಹೊರಹೋಗುವ ನೀರನ್ನು ಕೃಷಿಗೆ ಹೇಗೆ ಸುಲಭವಾಗಿ, ಕಡಿಮೆ ಖರ್ಚಿನಲ್ಲಿ ಬಳಸಬಹುದು ಎಂಬ ಬಗ್ಗೆ ಯೋಚಿಸಬೇಕಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ಮತ್ತು ಸಮೃದ್ಧ ಪೋಷಕಾಂಶಗಳನ್ನು ಕೊಡುವ ಬೀಜಗಳ ಅಭಿವೃದ್ಧಿ ಆಗಬೇಕಿದೆ. ದೇಶದಾದ್ಯಂತ ನೀಡಿರುವ ಮಣ್ಣು ಕಾರ್ಡ್‌ಗಳ ದತ್ತಾಂಶವನ್ನು ಇದಕ್ಕೆ ಬಳಸಿಕೊಳ್ಳಬಹುದು. –ನರೇಂದರ ಮೋದಿ.

ತಂತ್ರಜ್ಞಾನ ಬದುಕು ಸುಧಾರಿಸಿದೆ

ರಿಯಲ್ ಟೈಂ ಮಾನಿಟರಿಂಗ್, ಜಿಯೊ ಟ್ಯಾಗಿಂಗ್‌ ಮೂಲಕ ಆಡಳಿತ ಸುಧಾರಣೆ, ಯೋಜನೆಗಳ ಅನುಷ್ಠಾನಕ್ಕೆ ವೇಗ ಸಿಕ್ಕಿದೆ. ರೈತರು ಇನ್ನೊಬ್ಬರ ಹಂಗಿಲ್ಲದೆ ತಮ್ಮ ಉತ್ಪನ್ನಗಳನ್ನು ಮಾರುವಂತಾಗಿದೆ. ರೈತರಿಗೆ ಅಗತ್ಯವಿರುವ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ತಮ್ಮ ಅಂಗೈಯಲ್ಲಿರುವ ಫೋನ್‌ಗಳಲ್ಲಿ ಸುಲಭವಾಗಿ ಪಡೆದುಕೊಳ್ಳುತ್ತಿದ್ದಾರೆ. –ನರೇಂದ್ರ ಮೋದಿ

ತಂತ್ರಜ್ಞಾನ ಸರ್ವವ್ಯಾಪಿ: ಮೋದಿ

ಸ್ವಚ್ಛ ಭಾರತದಿಂದ ಆಯುಷ್ಮಾನ್‌ ಭಾರತ್‌ವರೆಗೆ ಬಹುತೇಕ ಯೋಜನೆಗಳಿಗೆ ತಂತ್ರಜ್ಞಾನದ ನೆರವು ಸಿಕ್ಕಿದೆ. ಸರ್ಕಾರವು ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ದೊಡ್ಡಮಟ್ಟದಲ್ಲಿ ಬಳಸಿಕೊಳ್ಳುತ್ತಿದ್ದೇವೆ. ಈ ಹಿಂದೆ ಎಂದಿಗೂ ಇಂಥ ಪ್ರಯೋಗಗಳು ನಡೆದಿರಲಿಲ್ಲ. ನಿನ್ನೆ ಒಮ್ಮೆಲೆ ದೇಶದ ಎಲ್ಲ ರೈತರ ಖಾತೆಗಳಿಗೆ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯನ್ನು ಜಮಾ ಮಾಡಿದೆವು. ಇದು ಸಾಧ್ಯವಾಗಿದ್ದು ತಂತ್ರಜ್ಞಾನದ ನೆರವಿನಿಂದ. ದೇಶದ ಮೂಲೆಮೂಲೆಗೆ ಶೌಚಾಲಯ, ವಿದ್ಯುತ್ ತಲುಪಲು ಸಹ ತಂತ್ರಜ್ಞಾನವೇ ಕಾರಣ. –ನರೇಂದ್ರ ಮೋದಿ

ಪರಿವರ್ತನೆಗೆ ಪ್ರೋತ್ಸಾಹ

ತಂತ್ರಜ್ಙಾನದ ಸದ್ಬಳಕೆಯಿಂದಲೇ ದೇಶದ ಎಲ್ಲರೂ ಸರ್ಕಾರದ ಭಾಗವಾಗಲು ಸಾಧ್ಯವಾಗಿದೆ. ಇಂಥ ಪರಿವರ್ತನೆಯನ್ನು ನಾವು ಪ್ರೋಥ್ಸಾಹಿಸಬೇಕು, ಸದೃಢಪಡಿಸಬೇಕು. –ನರೇಂದ್ರ ಮೋದಿ

ಆವಿಷ್ಕಾರ, ಪೇಟೆಂಟ್, ಉತ್ಪಾದನೆ, ಸಮೃದ್ಧಿಯ ಮಂತ್ರ

ನಮ್ಮ ವಿಜ್ಞಾನಿಗಳು ಸಾಕಷ್ಟು ಸಾಧಿಸಿದ್ದಾರೆ. ಭಾರತದ ಅಭಿವೃದ್ಧಿ ಕಥನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಯು ನಿರ್ಧರಿಸುತ್ತೆ. ಸಂಶೋಧಿಸಿ, ಪೇಟೆಂಟ್ ಪಡೆದುಕೊಳ್ಳಿ, ಉತ್ಪಾದಿಸಿ ಮತ್ತು ಸಮೃದ್ಧರಾಗಿರಿ ಎನ್ನುವ ನಾಲ್ಕು ಮಂತ್ರಗಳನ್ನು ನಾವು ಅಳವಡಿಸಿಕೊಳ್ಳಬೇಕು. ಉತ್ಪಾದನೆ ಹೆಚ್ಚಾದರೆ ಸಮೃದ್ಧಿ ಬರುತ್ತದೆ. –ನರೇಂದ್ರ ಮೋದಿ

ವೈಯಕ್ತಿಕ ಸಾಧನೆ, ದೇಶದ ಸಾಧನೆಯೂ ಆಗಬೇಕು

ಉದ್ಯಾನಗಳ ನಗರ ಬೆಂಗಳೂರು ಈಗ ನವೋದ್ಯಮಗಳ ನಗರವೂ ಆಗಿದೆ. ಯುವ ವಿಜ್ಞಾನಿ, ಉದ್ಯಮಿಗಳು ಕೇವಲ ತಮ್ಮ ವೈಯಕ್ತಿಕ ಪ್ರಗತಿಗಾಗಿ ಮಾತ್ರ ಶ್ರಮಿಸುವುದಲ್ಲ. ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಭಾವನೆ, ತಮ್ಮ ಸಾಧನೆ ದೇಶದ ಸಾಧನೆ ಆಗಬೇಕು ಎನ್ನುವ ಆಕಾಂಕ್ಷೆಯೊಂದಿಗೆ ನಡೆಯಬೇಕು. –ನರೇಂದ್ರ ಮೋದಿ

ವಿಜ್ಞಾನದ ಸಂಭ್ರಮ

ಈ ವರ್ಷವು ನಿಮ್ಮ ಬದುಕಿನಲ್ಲಿ ಸಮೃದ್ಧಿ ತರಲಿ. ಹೊಸ ವರ್ಷ, ಹೊಸ ದಶಕದಲ್ಲಿ ನನ್ನ ಮೊದಲ ಯೋಜನೆ ವಿಜ್ಞಾನದ ಕ್ಷೇತ್ರದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಚಂದ್ರಯಾನ್–2 ಸಂದರ್ಭ ನಾನು ಬೆಂಗಳೂರಿಗೆ ಬಂದಿದ್ದೆ. ಅಗ ನಮ್ಮ ದೇಶ ವಿಜ್ಞಾನವನ್ನು ಸಂಭ್ರಮಿಸಿದ್ದ ರೀತಿ ನನಗೆ ಸದಾ ನೆನಪಿರುತ್ತೆ. –ನರೇಂದ್ರ ಮೋದಿ

ಅಳವಡಿಕೆಗೆ ಬದ್ಧ

ಈ ಸಮಾವೇಶದ ಫಲಶ್ರುತಿಯನ್ನು ರಾಜ್ಯ ಸರ್ಕಾರವೂ ಕುತೂಹಲದಿಂದ ಗಮನಿಸುತ್ತಿದೆ. ವಿಜ್ಞಾನಿಗಳ ಚಿಂತನೆಗಳನ್ನು ತನ್ನ ನೀತಿಗಳಲ್ಲಿ ಅಳವಡಿಸಿಕೊಳ್ಳಲು ಬದ್ದವಾಗಿದೆ. –ಯಡಿಯೂರಪ್ಪ

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ

ಈ ವರ್ಷದ ವಿಜ್ಞಾನ ಸಮಾವೇಶದ ಆಶಯದಂತೆ ಗ್ರಾಮೀಣ ಅಭಿವೃದ್ಧಿಗೆ ವೈಜ್ಞಾನಿಕ ಸಂಶೋಧನೆಗಳ ಫಲ ತಲುಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಪ್ರಧಾನಿಗಳು ರೈತರ ಆದಾಯ ದ್ವಿಗುಣಗೊಳಿಸುವ ಗುರಿ ನೀಡಿದ್ದಾರೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನಗೆ ರಾಜ್ಯ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ. –ಯಡಿಯೂರಪ್ಪ

ಇದು ನಮಗೆ ಸಿಕ್ಕ ಗೌರವ

ಇಂಥ ದೊಡ್ಡ ಕಾರ್ಯಕ್ರಮವನ್ನು ನಡೆಸಲು ಅವಕಾಶ ಸಿಕ್ಕಿದ್ದು ನಮ್ಮ ರಾಜ್ಯಕ್ಕೆ ಸಿಕ್ಕ ಗೌರವ ಎಂದೇ ಭಾವಿಸುತ್ತೇನೆ. –ಯಡಿಯೂರಪ್ಪ

ಜೈ ಅನುಸಂಧಾನ್

ಅಟಲ್‌ ಬಿಹಾರಿ ವಾಜಪೇಯಿ ಜೈ ವಿಜ್ಞಾನ್‌ ಘೋಷಣೆ ನೀಡಿದ್ದರು. ಮೋದಿ ಅವರು ಜೈ ಅನುಸಂಧಾನ್‌ ಘೋಷಣೆ ಸೇರಿಸಿದರು. –ಹರ್ಷವರ್ಧನ

ಎಲ್ಲರನ್ನೂ ತಲುಪೋಣ

2015ರ ಕಾಂಗ್ರೆಸ್‌ನಲ್ಲಿ ಪ್ರಧಾನಿ ಸೈಂಟಿಫಿಕ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ಅನ್ನುವ ಪದ ಬಳಸಿದ್ದರು. ಅದನ್ನು ಹೇಗೆ ಪೂರೈಸುವುದು ಎಂದು ನಮ್ಮ ವಿಜ್ಞಾನಿಗಳು ಯೋಚಿಸಿದರು. ನಾವು ವಿಜ್ಞಾನ ಕ್ಷೇತ್ರದಿಂದ ದೇಶದ, ವಿಶ್ವದ ಎಲ್ಲರನ್ನೂ ತಲುಪಲು ಪ್ರಯತ್ನಿಸಬೇಕು –ಹರ್ಷವರ್ಧನ

ಸಂಶೋಧನೆ ಗುಣಮಟ್ಟಕ್ಕೆ ಪರಿಶ್ರಮ

ನಮ್ಮ ಸಚಿವಾಲಯವು ಸಂಶೋಧನೆಯ ಗುಣಮಟ್ಟ ವೃದ್ಧಿಗೆ ಶ್ರಮಿಸುತ್ತಿದೆ. ನಾವು ವಿಶ್ವದ ಪ್ರತಿಭಾವಂತ ವಿಜ್ಞಾನಿಗಳನ್ನು ಭಾರತಕ್ಕೆ ಕರೆಸಲು ಯತ್ನಿಸುತ್ತಿದ್ದೇವೆ. ಸಂಶೋಧನಾಲಯ, ಕೈಗಾರಿಕೆಗಳು ಮತ್ತು ಸಮಾಜದ ಬಳಕೆಗೆ ಈ ಸಂಶೋಧನೆಗಳ ಫಲಿತಾಂಶವನ್ನು ವರ್ಗಾವಣೆ ಮಾಡಲು ಶ್ರಮಿಸುತ್ತಿದ್ದೇವೆ. –ಹರ್ಷವರ್ಧನ

ಕನಸುಗಾರ ಪ್ರಧಾನಿ

ನಮ್ಮ ಪ್ರಧಾನಿ ಎಲ್ಲ ಕ್ಷೇತ್ರಗಳಿಗೂ ಗುರಿಗಳನ್ನು ನಿಗದಿಪಡಿಸಿ, ಅದಕ್ಕೆ ಅನುಗುಣವಾಗಿ ನೀತಿ ರೂಪಿಸುತ್ತಾರೆ. ಎಲ್ಲರನ್ನೂ ಭಾಗಿದಾರರನ್ನಾಗಿ ಮಾಡಿ ಅನುಷ್ಠಾನಕ್ಕೆ ತರಲು ಶ್ರಮಿಸುತ್ತಾರೆ. 2022ರ ವೇಳೆಗೆ ಹೊಸ ಭಾರತ ರೂಪಿಸಬೇಕು, 2024–25ರವೇಳೆಗೆ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಆಗಬೇಕು ಎಂಬುದು ಮೋದಿ ಅವರ ಕನಸಾಗಿದೆ. –ಹರ್ಷವರ್ಧನ

ಭಾರತಕ್ಕೆ 3ನೇ ಸ್ಥಾನ

ಪರಿಸರ, ಕೃಷಿ ಅಥವಾ ಯಾವುದೇ ಕ್ಷೇತ್ರವಿರಲಿ ವಿಜ್ಞಾನಿಗಳು ದೇಶಕ್ಕೆ ಅತ್ಯಗತ್ಯ ಎಂದು ಪ್ರಧಾನಿ ಹೇಳುತ್ತಿರುತ್ತಾರೆ. ವಿಜ್ಞಾನ ಸಂಶೋಧನಾ ವರದಿಗಳ ಪ್ರಕಟಣೆಯಲ್ಲಿ ಭಾರತವು 6ನೇ ಸ್ಥಾನ ಪಡೆದಿದೆ. 2030ರ ಹೊತ್ತಿಗೆ ಇದು 2 ಅಥವಾ 3ನೇ ಸ್ಥಾನ ಪಡೆಯಲಿದೆ ಎಂದು ಮೋದಿ ಹೇಳುತ್ತಿದ್ದರು. ಈಚೆಗೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು ಭಾರತ 3ನೇ ಸ್ಥಾನ ಪಡೆದಿದೆ ಎಂದು ಘೋಷಿಸಿದೆ. –ಹರ್ಷವರ್ಧನ

ಪ್ರಧಾನಿಗಳು ಭಾಗಿ

ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಪ್ರತಿ ವರ್ಷದ ಆರಂಭದಲ್ಲಿ ನಡೆಯುವ ವಿಜ್ಞಾನಿಗಳ ಸಮಾವೇಶದಲ್ಲಿ ಪ್ರಧಾನಿ ಭಾಗಿಯಾಗುವುದು ವಿಶೇಷ. 1947ರಿಂದ ಇಲ್ಲಿಯವರೆಗೆ, ಜವಾಹರಲಾಲ್ ನೆಹರು ಅವರಿಂದ ನರೇಂದ್ರ ಮೋದಿ ಅವರವರೆಗೆ ಎಲ್ಲ ಪ್ರಧಾನಿಗಳು ಭಾಗಿಯಾಗಿದ್ದಾರೆ. –ಹರ್ಷವರ್ಧನ

ಸಚಿವ ಹರ್ಷವರ್ಧನ ಭಾಷಣ ಆರಂಭ

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ ಭಾಷಣ ಆರಂಭ.

ಜಿಕೆವಿಕೆಯಲ್ಲಿ ನರೇಂದ್ರ ಮೋದಿ: ಲೈವ್‌ ಇಲ್ಲಿ ನೋಡಿ

ದೇಶದ ಪ್ರಗತಿಗೆ ಸಶಕ್ತ ರೈತ ಅತ್ಯಗತ್ಯ

ಮೋದಿ ಆರಂಭಿಸಿದ ಹಲವು ಯೋಜನೆಗಳು ಈಗಾಗಲೇ ಫಲ ನೀಡುತ್ತಿವೆ. ದೇಶದ ಅಭಿವೃದ್ಧಿಗೆ ರೈತರಿಗೆ ಶಕ್ತಿ ತುಂಬುವುದು ಅಗತ್ಯ. ಸಶಕ್ತ ರೈತರಿಲ್ಲದಿದ್ದರೆ ದೇಶ ಮುಂದುವರಿಯುವುದು ಕಷ್ಟ ಎನ್ನುವ ಮೋದಿ ಅವರ ಮಾತು ಇಲ್ಲಿ ಉಲ್ಲೇಖನೀಯ. ಮೋದಿ ಅವರು ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ –ರಂಗಪ್ಪ

ದೇಶದ ವಿಜ್ಞಾನ ನೀತಿಯಲ್ಲಿ ಮಹತ್ವದ ಪಾತ್ರ

ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ ಅವರಿಂದ ಸ್ವಾಗತ ಭಾಷಣ.

ಈ ಸಮಾವೇಶದಲ್ಲಿ ನಡೆಯುವ ಚರ್ಚೆ, ವಿಚಾರಗೋಷ್ಠಿಗಳಲ್ಲಿ ಹರಳುಗಟ್ಟುವ ವಿಚಾರಗಳು ದೇಶದ ವಿಜ್ಞಾನ ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. –ರಂಗಪ್ಪ

ಜೆಕೆವಿಕೆಯಲ್ಲಿ ಅನುರಣಿಸಿದ ‘ಮೋದಿ ಮೋದಿ’ ಘೋಷಣೆ

ವೇದಿಕೆಗೆ ಬಂದ ನರೇಂದ್ರ ಮೋದಿ. ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳಿಂದ ‘ಮೋದಿ ಮೋದಿ’ ಘೋಷಣೆ.

ವೇದಿಕೆಯತ್ತ ಪ್ರಧಾನಿ ನರೇಂದ್ರ ಮೋದಿ

ಜಿಕೆವಿಕೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್‌ಗೆ ಮೋದಿ ಆಗಮಿಸಿದರು. ಚಾಲನೆಗೆ ಕ್ಷಣಗಣನೆ.

ಜಿಕೆವಿಕೆ ತಲುಪಿದ ಮೋದಿ

ರಾಜಭವನದಿಂದ ಹೊರಟ ಪ್ರಧಾನಿ ನರೇಂದ್ರ ಮೋದಿ ಹೆಬ್ಬಾಳ ದಾಟಿ ಜಿಕೆವಿಕೆ ಸಮೀಪ ಬಂದಿದ್ದಾರೆ.

107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.