ADVERTISEMENT

ಬದುಕು ಟ್ಟಿಕೊಟ್ಟ ಚಪಾತಿ ಉದ್ಯಮ

ಎನ್.ಸಿದ್ದರಾಜಯ್ಯ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST
ಬದುಕು  ಟ್ಟಿಕೊಟ್ಟ ಚಪಾತಿ ಉದ್ಯಮ
ಬದುಕು ಟ್ಟಿಕೊಟ್ಟ ಚಪಾತಿ ಉದ್ಯಮ   

ಮನೆಯಲ್ಲೇ ಸಣ್ಣ ಮಟ್ಟದಲ್ಲಿ ಚಪಾತಿ ತಯಾರಿಕೆ ಆರಂಭಿಸಿ, ಸ್ವ-ಉದ್ಯೋಗದ ಹಾದಿಯಲ್ಲಿ ಮುನ್ನಡೆದು ಬದುಕನ್ನು ಕಟ್ಟಿಕೊಂಡು ಈಗ ಸಣ್ಣ ಉದ್ಯಮ ಸ್ಥಾಪಿಸುವ ಹೊಸ್ತಿಲಲ್ಲಿ ನಿಂತಿರುವ ಮೈಸೂರಿನ ಕಲ್ಪನಾ ಸುರೇಂದ್ರ ಅವರ ಯಶೋಗಾಥೆ ವಿಶೇಷವಾದುದು.

ಕಲ್ಪನಾ ಅವರ ಮೂಲ ಮಹಾರಾಷ್ಟ್ರ. ಓದಿದ್ದು ಬೆಳೆದದ್ದು ಚೆನ್ನೈ. ಆದರೆ ಬದುಕು ಕಟ್ಟಿಕೊಂಡದ್ದು ಮೈಸೂರಿನಲ್ಲಿ. ಹುಣಸೂರಿನಲ್ಲಿ ಆಟೋಮೊಬೈಲ್ ಷೋ ರೂಮ್ ಹೊಂದಿರುವ ಪತಿ ಸುರೇಂದ್ರ ಜಾಧವ್‌ಗೆ ಉತ್ತಮ ಸಂಪಾದನೆ ಇದೆ.

ಇದರಿಂದ ಕುಟುಂಬ ನಿರ್ವಹಣೆಗೆ ಹಣಕಾಸಿನ ಮುಗ್ಗಟ್ಟೇನು ಇರಲಿಲ್ಲ. ಆದರೆ ಪರಾವಲಂಬಿ ಆಗದೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ತುಡಿತದಿಂದ ಕಲ್ಪನಾ ಚಪಾತಿ ತಯಾರಿಕೆಗೆ ಮುಂದಾದರು.

ಮೂರು ವರ್ಷಗಳ ಕಾಲ ಕಲ್ಯಾಣಗಿರಿಯಲ್ಲಿರುವ ತಮ್ಮ ಮನೆಯಲ್ಲೇ ಚಪಾತಿ ತಯಾರಿಸಿ ಹತ್ತಿರದ ಅಂಗಡಿ, ಹೋಟೆಲ್‌ಗಳಿಗೆ ಮಾರುತ್ತಿದ್ದರು. ಗುಣಮಟ್ಟದಿಂದ ಕೂಡಿದ್ದ ಇವರ ಉತ್ಪನ್ನಕ್ಕೆ ಉತ್ತಮ ಬೇಡಿಕೆ ಬರತೊಡಗಿತು. ನಂತರ ನಾಲ್ಕೈದು ಮಹಿಳೆಯರಿಗೆ ಕೆಲಸ ನೀಡಿದರು.

ತರಬೇತಿ-ಕಾರ್ಯಾಗಾರ
ಸಮಾಜಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದಿರುವ ಕಲ್ಪನ 2002ರಲ್ಲಿ ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ನಡೆದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದಡಿ ಒಂದು ತಿಂಗಳ ತರಬೇತಿ, ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದಲ್ಲಿ 14 ದಿನಗಳ ತರಬೇತಿ ಪಡೆದರು.

ಅಲ್ಲದೇ, 2009ರಲ್ಲಿ ಮೈಸೂರಿನ ಎಸ್‌ಜೆಸಿಇ ಕಾಲೇಜಿನಲ್ಲಿ ನಡೆದ ಇಡಿಪಿ ಅಡಿ 6 ವಾರಗಳ ತರಬೇತಿ, 2010ರಲ್ಲಿ `ಆಹಾರ ಉತ್ಪಾದನೆಯಲ್ಲಿ ತಾಂತ್ರಿಕ ಆಧಾರಿತ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ~ ಹೀಗೆ ಹಂತ ಹಂತವಾಗಿ ತರಬೇತಿ ಪಡೆದು ವ್ಯಾವಹಾರಿಕ ಜ್ಞಾನ, ಅನುಭವ ಹೆಚ್ಚಿಸಿಕೊಂಡರು. ಸಿಂಗಪುರ, ಮಲೇಷ್ಯಾ ದೇಶಗಳಿಗೆ ಭೇಟಿ ನೀಡಿ ಅಲ್ಲಿ ಚಪಾತಿ ಉತ್ಪನ್ನಗಳಿಗೆ ಯಾವ ರೀತಿ ಬೇಡಿಕೆ ಇದೆ ಎಂಬುದನ್ನು ತಿಳಿದುಕೊಂಡು ಬಂದಿದ್ದಾರೆ.

 ಬಂಡಿಪಾಳ್ಯ, ಮೈಸೂರು ಸಿಟಿಯಿಂದ ಗೋಧಿ, ಮಸಾಲೆ ಪದಾರ್ಥ ತಂದು, ಪ್ಲೇನ್, ಮೇತಿ, ಮಸಾಲೆ, ಹಾಗೂ  ನ್ಯೂಟ್ರಿಷಿಯಸ್ ಮಲ್ಟಿ ಗ್ರೈೇನ್ ಎಂಬ 4 ವಿಧದ ಚಪಾತಿ ತಯಾರಿಸುತ್ತಾರೆ. ನಂತರ ಚಪಾತಿ ಪ್ಯಾಕಿಂಗ್ ಮಾಡಿ, ಅದಕ್ಕೆ `ಕಲ್ಪನಾಸ್ ಕಿಚನ್~ ಎಂಬ ಲೇಬಲ್ ಹಚ್ಚುತ್ತಾರೆ.

ಪ್ರತಿನಿತ್ಯ ಸರಾಸರಿ 500-600 ಚಪಾತಿಗಳು ಬಿಕರಿಯಾಗುತ್ತವೆ. ವಿಶೇಷ ಸಂದರ್ಭಗಳಲ್ಲಿ ಸಾವಿರಕ್ಕೂ ಹೆಚ್ಚು ಚಪಾತಿಗಳು ಮಾರಾಟವಾಗುವುದು ಉಂಟು. ಪ್ರತಿನಿತ್ಯ ಬೆ.9ರಿಂದ ಸಂಜೆ 6 ರವರೆಗೂ ಬಿಡುವಿಲ್ಲದ ಕೆಲಸ.
 
ಒಟ್ಟು 4 ಚಪಾತಿಗಳ 1 ಪ್ಯಾಕ್‌ಗೆ 15ರಿಂದ 20ರೂ.ಗಳ ಬೆಲೆ ಇದೆ. ಇದರಿಂದ ದಿನಕ್ಕೆ ಸರಾಸರಿ ರೂ.600 ಆದಾಯವಿದೆ. ಬೆಲೆ ತುಸು ದುಬಾರಿ ಎನಿಸಿದರೂ, ಇತರ ಕಂಪೆನಿಗಳ ಚಪಾತಿ ಗುಣಮಟ್ಟಕ್ಕೆ ಹೋಲಿಸಿದರೆ ನಮ್ಮದು ಉತ್ಕೃಷ್ಟವಾಗಿದ್ದು ಹೆಚ್ಚು ಬೇಡಿಕೆ ಇದೆ ಎಂಬುದು ಕಲ್ಪನಾ ಅವರ ಅಂಬೋಣ.

ಎಲ್ಲೆಲ್ಲಿ ಮಾರಾಟ?
ಕಲ್ಪನಾ ಅವರು ಸ್ಕೂಟಿ, ಟಿವಿಎಸ್ ಎಕ್ಸೆಲ್ ಸೂಪರ್ ಹಾಗೂ ಮಾರುತಿ ಕಾರ್‌ನಲ್ಲಿ ಚಪಾತಿಗಳನ್ನು ತುಂಬಿಕೊಂಡು ಮೈಸೂರಿನ ಒಂಟಿಕೊಪ್ಪಲಿನ ಲಾಯಲ್ ವರ್ಲ್ಡ್, ಕುವೆಂಪು ನಗರದ ಎ ಟು ಜಡ್ ಶಾಪ್, ಸಿದ್ಧಾರ್ಥ ಲೇ ಔಟ್‌ನ ಡೈಲಿ ನೀಡ್ಸ್, ಬಿಗ್ ಬಜಾರ್‌ಗಳಿಗೆ, ಹೋಟೆಲ್‌ಗಳಿಗೆ ಚಪಾತಿ ಒದಗಿಸುತ್ತಾರೆ.
 
ಪ್ರವಾಸಗಳಿಗೆ ಹಾಗೂ ವಿದೇಶಗಳಿಗೆ ಹೋಗುವವರು ಮನೆಗೇ ಬಂದು ಚಪಾತಿ ಕೊಳ್ಳುತ್ತಾರೆ. ಇವರ ಮಕ್ಕಳಾದ ಸ್ವರೂಪ್  (ಡಿಪ್ಲೊಮಾ ಇನ್ ಆಟೋಮೊಬೈಲ್ ವಿದ್ಯಾರ್ಥಿ) ಮತ್ತು ಸಾಗರ್ (9ನೇ ತರಗತಿ) ಅವರೂ ಕೂಡ ಕೆಲಸದಲ್ಲಿ ತಾಯಿಯ ಜೊತೆ ಕೈ ಜೋಡಿಸುತ್ತಾರೆ. ಗಂಡ ಸುರೇಂದ್ರ ಜಾಧವ್ ಇವರ ಎಲ್ಲ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪಿಜಿ, ಹಾಸ್ಟೆಲ್ ಇತರ ಕಡೆಗಳಿಗೂ ತಮ್ಮ ವ್ಯಾಪಾರ ವಿಸ್ತರಿಸುವ ಯೋಜನೆ ಹೊಂದಿದ್ದಾರೆ.

ಕನಸಿನ `ಕೈಗಾರಿಕೆ~ ಸ್ಥಾಪನೆ

ಸಣ್ಣ  ಕೈಗಾರಿಕೆ ಸ್ಥಾಪಿಸಲು ಕೆಎಸ್‌ಎಸ್‌ಐಡಿಸಿ ಯಿಂದ ಸೈಟ್ ದೊರೆತಿದ್ದು, ಕರ್ನಾಟಕ ಖಾದಿ ಮಂಡಳಿಯಿಂದ ರೂ.25 ಲಕ್ಷ ಲೋನ್ ಮಂಜೂರಾಗಿದೆ. ಅದರಲ್ಲಿ ಶೇ 35 ಸಬ್ಸಿಡಿ ಸಿಗುತ್ತದೆ. ಶೀಘ್ರದಲ್ಲೇ  ಕೈಗಾರಿಕೆ ಸ್ಥಾಪಿಸಿ ಸುಮಾರು 15-20 ಮಹಿಳೆಯರಿಗೆ ಕೆಲಸ ನೀಡಿ, ಇತರ ಮಹಿಳೆಯರಿಗೂ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ಹಾಗೂ 20 ಬಗೆಯ ಚಪಾತಿ ಅನ್ನು ವಿದೇಶಗಳಿಗೆ ರಫ್ತು ಮಾಡುವ ಕನಸನ್ನೂ ಹೊಂದಿದ್ದಾರೆ.

ಗುಡಿ ಕೈಗಾರಿಕೆಯಿಂದ ಆರಂಭವಾದ ಇವರ ಸ್ವ-ಉದ್ಯೋಗದ ಕ್ರಾಂತಿ ಸಣ್ಣ ಉದ್ಯಮ ಕೈಗಾರಿಕೆ ಸ್ಥಾಪಿಸುವವರೆಗೆ ನಡೆದಿದೆ.

(ಕಲ್ಪನ ಮೊಬೈಲ್ 9342100567)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.