ADVERTISEMENT

ವೈನಾಹಾರದ ಈ ಬಗೆ...

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST
ವೈನ್‌ ಬಳಸಿ ಆಹಾರ ಸಿದ್ಧಪಡಿಸುತ್ತಿರುವ ಮೈಕೆಲ್‌ ಸ್ವಾಮಿ
ವೈನ್‌ ಬಳಸಿ ಆಹಾರ ಸಿದ್ಧಪಡಿಸುತ್ತಿರುವ ಮೈಕೆಲ್‌ ಸ್ವಾಮಿ   

ಸಂಜೆಯಾಗುತ್ತಿದ್ದರಿಂದ ಚಳಿ ಹೆಚ್ಚಾಗುತ್ತಿತ್ತು.  ರೆಸ್ಟೋರೆಂಟ್‌ಗೆ ಬಂದಿದ್ದ ಬಾಣಸಿಗ ಸಭಾಂಗಣದ ಮಧ್ಯದಲ್ಲೇ ಇಂಡಕ್ಷನ್‌ ಒಲೆಯ ಬಿಸಿ ಹೆಚ್ಚಿಸುತ್ತಿದ್ದ. ಬಾಣಲೆಗೆ ಒಂದಿಷ್ಟು ರೋಸ್‌ ವೈನ್‌, ರುಚಿಗೆ ತಕ್ಕಷ್ಟು ಸಕ್ಕರೆ, ಅದಕ್ಕೊಂದಷ್ಟು ಚಕ್ಕೆ ಹಾಕಿ ಕುದಿಸತೊಡಗಿದರು. ಆಮೇಲೆ, ಅದಕ್ಕೆ ಸ್ಟ್ರಾಬೆರಿ ತುಂಡುಗಳನ್ನು ಹಾಕಿದರು. ನಂತರ ಅಂಜೂರ ಹಾಕಿ ಕಲಕತೊಡಗಿದರು. ಮೂರರಿಂದ ಐದು ನಿಮಿಷ ಬೇಯಿಸಿದ ನಂತರ ಅದನ್ನು ಒಂದು ಗಾಜಿನ ಲೋಟಕ್ಕೆ ಹಾಕಿದರು. ಅದರೊಳಗೆ ಎಳೆ ಪುದೀನಾ ಎಲೆಗಳನ್ನು ಹಾಕಿ ಜೊತೆಗೊಂದಿಷ್ಟು ಕ್ರೀಂ ಸೇರಿಸಿ ಅಲಂಕರಿಸಿ ಟೇಬಲ್‌ ಮೇಲಿಟ್ಟರು. ಇದು ‘ಮಡ್ಡಲ್ಡ್‌ ಸೀಸನಲ್‌ ಫ್ರೂಟ್‌’ ಇಟಲಿಯ ಡೆಸರ್ಟ್‌ ಎಂದು ಆ ಬಾಣಸಿಗ ಹೇಳಿದ ತಕ್ಷಣ ಅಲ್ಲಿದ್ದವರೂ ಅದರ ರುಚಿ ನೋಡಲು ಮುಂದಾದರು.

ಯಶವಂತಪುರದ ಶೆರಟನ್ನಲ್ಲಿರುವ ‘ಬೆನೆ’ ಇಟಾಲಿಯನ್ ರೆಸ್ಟೊರೆಂಟ್ನಲ್ಲಿ ಸೀಗ್ರಾಮ್ಸ್ ನೈನ್ ಹಿಲ್ಸ್ ವೈನ್ ಕಂಪೆನಿ ಆಯೋಜಿಸಿದ್ದ ‘ವೈನ್ ಇನ್‌ ಫುಡ್‌’ ಅಡುಗೆ ಕಾರ್ಯಕ್ರಮದಲ್ಲಿ ಮುಂಬೈನ ಬಾಣಸಿಗ ಮೈಕೆಲ್‌ ಸ್ವಾಮಿ ಅವರು ಇಟಲಿಯ ಖಾದ್ಯವನ್ನು ಮಾಡಿ ಬಡಿಸಿದ ಸಂದರ್ಭವದು.

ನೈನ್ ಹಿಲ್ಸ್ ವೈನ್ ಕಂಪೆನಿ ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರು, ಮುಂಬೈ, ಪುಣೆ, ಗುಡಗಾಂವ್‌, ಚೆನ್ನೈ, ಹೈದರಾಬಾದ್‌ ಹಾಗೂ ಢಾಕಾ ನಗರಗಳಲ್ಲಿ ‘ವೈನ್ ಇನ್‌ ಫುಡ್‌’ ಅಡುಗೆ ಕಾರ್ಯಕ್ರಮ ಆಯೋಜಿಸಿದೆ.

‘ಮಡ್ಡಲ್ಡ್‌ ಸೀಸನಲ್‌ ಫ್ರೂಟ್‌’ನ ನಂತರ ಸಫ್ರಾನ್‌ ಸಾಸ್‌ನಲ್ಲಿ ತಯಾರಿಸಿದ್ದು ಪುದುಚೇರಿ ಶೈಲಿಯ ಪಾನ್‌ ಗ್ರಿಲ್ಡ್‌ ಸ್ಕ್ಯಾಲಪ್ಸ್‌. ವೈಟ್‌ ವೈನ್‌ ಹಾಕಿ ಮಾಡಿದ್ದ ಈ ಖಾದ್ಯ ಬಾಣಸಿಗ ಮೈಕೆಲ್‌ ಸ್ವಾಮಿ ಅವರು ಪರಿಚಯಿಸಿದ ಹೊಸ ಮೆನುವಾಗಿತ್ತು. ಸಪ್ಪೆ ಸಪ್ಪೆಯಾಗಿದ್ದ ಈ ಖಾದ್ಯವು ಇಟಲಿ ಹಾಗೂ ಫ್ರಾನ್ಸ್‌ ದೇಶಗಳ ಮುಖ್ಯ ಖಾದ್ಯದ ರುಚಿ ನೆನಪಿಸುವಂತೆ ಮಾಡಿದ್ದರು.

ನಂತರ ಅಲ್ಲಿದ್ದ ಪತ್ರಕರ್ತರಿಗೆ ಇಟಾಲಿಯನ್‌ ಔತಣಕೂಟ ಆರಂಭವಾಯಿತು.

ಸ್ಟಾರ್ಟರ್‌ಗೆ ಮೂರು ಬಗೆಯ ಬ್ರೆಡ್‌ ಹಾಗೂ ಜೊತೆಗೆ ನಾಲ್ಕು ಬಗೆಯ ಟೊಮೆಟೊ, ಹಸಿರು ಸೊಪ್ಪು, ಚೀಸ್‌ ಹಾಕಿ ಮಾಡಿದ ‘ಟ್ರೈಸ್‌ ಡಿ ಪೊಮೊದೊರಿ ಇ ಕ್ಯಾಪ್ರಿನೊ’ ತಂದಿಟ್ಟರು. ಸ್ಟಾರ್ಟರ್‌ ಖಾಲಿಯಾಗುವಷ್ಟರಲ್ಲೇ ಬಟಾಣಿ ರುಬ್ಬಿ ಮಾಡಿದ ಪುದೀನಾ ಫ್ಲೇವರ್‌ನ ಸೂಪ್‌ ತಂದಿಟ್ಟರು. ನಂತರ ಮೇನ್‌ ಕೋರ್ಸ್‌ನಲ್ಲಿ ‘ಫಿಲೆಟ್ಟೊ ಡಿ ಬ್ರ್ಯಾನ್‌ಜಿನೊ’ ಫಿಶ್‌ ಖಾದ್ಯವನ್ನು ಬಡಿಸಿದರು.

‘‘ಪಾನ್‌ ಗ್ರಿಲ್ಡ್‌ ಸ್ಕ್ಯಾಲಪ್ಸ್‌’ ಮೂರು ದಿನದಲ್ಲಿ ಹೊಳೆದ ನೂತನ ಖಾದ್ಯ. ಇಟಾಲಿಯನ್ ಹಾಗೂ ಫ್ರೆಂಚ್‌ ರುಚಿ ಬರುವಂತೆ ಮಾಡಿದ್ದೇನೆ. ವಿನೆಗರ್‌ ಜಾಗದಲ್ಲಿ ವೈನ್‌ ಹಾಕಿದ್ದೇನೆ. ಆದರೆ ಸ್ವಲ್ಪ ಮಸಾಲೆಯನ್ನು ಬಳಸಿದ್ದೇನೆ. ಇದು ಭಾರತೀಯರಿಗೂ ಇಷ್ಟವಾಗಲಿದೆ’ ಎನ್ನುತ್ತಾರೆ ಬಾಣಸಿಗ ಮೈಕೆಲ್‌ ಸ್ವಾಮಿ.

ಮುಂಬೈ ಮೂಲದ ಮೈಕೆಲ್‌ ಅವರು ‘ದಿ ಈಸ್ಟ್‌ ಇಂಡಿಯನ್‌ ಕಿಚನ್‌’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದರಲ್ಲಿ ಈಸ್ಟ್‌ ಇಂಡಿಯನ್‌ ಸಮುದಾಯದ ಖಾದ್ಯ ವೈವಿಧ್ಯಗಳ ಪರಿಚಯವಿದೆ. 

‘ಭಾರತದಲ್ಲಿ ಇತರೆ ಆಲ್ಕೋಹಾಲ್‌ ಉದ್ಯಮಕ್ಕಿಂತ ವೈನ್‌ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ನಾಸಿಕ್‌ನಲ್ಲಿ ನಮ್ಮ  ನೈನ್ ಹಿಲ್ಸ್ ವೈನ್ ಉತ್ಪಾದನಾ ಘಟಕವಿದೆ. ಶೇ 70 ಮಂದಿ ರೆಡ್‌ ವೈನ್‌ ಕುಡಿಯುತ್ತಾರೆ. ನಮ್ಮಲ್ಲಿ ಎಂಟು ಬಗೆಯ ವೈನ್‌ಗಳಿವೆ. ಕರ್ನಾಟಕದಲ್ಲೂ ವೈನ್‌ ಮಾರುಕಟ್ಟೆ ಉತ್ತಮವಾಗಿದೆ’ ಎನ್ನುತ್ತಾರೆ ಸೀಗ್ರಾಮ್ಸ್ ನೈನ್ ಹಿಲ್ಸ್ ವೈನ್ ಕಂಪೆನಿ ಬಿಸಿನೆಸ್‌ ಡೆವಲಪ್‌ಮೆಂಟ್‌ ವ್ಯವಸ್ಥಾಪಕ ಅಡ್ರೈನ್‌ ಪಿಂಟೊ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.