ADVERTISEMENT

ಲಕ್ಷ್ಮೀ ಹೋಟೆಲ್‌ಗೆ ಶತಮಾನದ ನಂಟು..!

ಸೋಮಶೇಖರ ಜತ್ತಿ
Published 30 ಮಾರ್ಚ್ 2019, 20:00 IST
Last Updated 30 ಮಾರ್ಚ್ 2019, 20:00 IST
ತಿಕೋಟಾದ ಲಕ್ಷ್ಮೀ ಹೋಟೆಲ್‌
ತಿಕೋಟಾದ ಲಕ್ಷ್ಮೀ ಹೋಟೆಲ್‌   

ತಿಕೋಟಾ:ತಿಕೋಟಾ ಇದೀಗ ತಾಲ್ಲೂಕು ಕೇಂದ್ರ. ಇದಕ್ಕೂ ಮುಂಚೆಯೇ ಪ್ರಮುಖ ವಾಣಿಜ್ಯ ಕೇಂದ್ರ. ಕೃಷಿ–ತೋಟಗಾರಿಕೆ ವಲಯದ ಪ್ರಮುಖ ತಾಣವಿದು. ನಿತ್ಯವೂ ಪರವೂರಿನ ಜನರ ಸಂಪರ್ಕ ಇಲ್ಲಿ ಸಹಜ.

ಗ್ರಾಮದ ಪ್ರಮುಖ ರಸ್ತೆ ಬದಿಯೇ ಲಕ್ಷ್ಮೀ ಹೋಟೆಲ್‌ ಇದೆ. ಇದಕ್ಕೆ ಶತಮಾನದ ನಂಟಿದೆ. ಬ್ರಿಟಿಷರ ಆಡಳಿತದ ಅವಧಿಯಲ್ಲೇ ಹೋಟೆಲ್‌ ಪರವಾನಗಿ ಪಡೆದಿದ್ದ ಹೆಗ್ಗಳಿಕೆಗೆ ಇದು ಭಾಜನವಾಗಿದೆ.

ಶುಚಿ–ರುಚಿಗೆ ಹೆಸರಾದ ಲಕ್ಷ್ಮೀ ಹೋಟೆಲ್‌ನ ಆರಂಭದ ಮಾಲೀಕ ಕಲ್ಲಪ್ಪ ಮಾಳಿ. ಇದೀಗ ಈ ಹೋಟೆಲ್‌ನ ನಿರ್ವಹಣೆಯನ್ನು ಕಲ್ಲಪ್ಪ ಪುತ್ರ ಸಿದ್ದಪ್ಪ ಮಾಳಿ ನಿರ್ವಹಿಸುತ್ತಿದ್ದಾರೆ. ಇವರಿಗೆ 71 ವರ್ಷ. ‘ನಾನು ಹುಟ್ಟುವ 30–40 ವರ್ಷ ಮುಂಚೆಯಿಂದಲೇ ನಮ್ಮ ಹೋಟೆಲ್‌ ಇತ್ತು’ ಎನ್ನುತ್ತಾರೆ ಸಿದ್ದಪ್ಪ.

ADVERTISEMENT

‘ಮೂರು ತಲೆಮಾರಿನಿಂದ ಈ ಹೋಟೆಲ್‌ ಉದ್ಯಮ ನಡೆದಿದೆ. ಗ್ರಾಹಕರ ತೃಪ್ತಿಯೇ ನಮ್ಮ ಉದ್ದೇಶ. ನಮ್ಮಲ್ಲಿ ನಿತ್ಯವೂ ಪೂರಿ ಜತೆ ಕೊಡುವ ಕಡಲೆ ಹಿಟ್ಟಿನ ಚಟ್ನಿ ಎಲ್ಲೆಡೆಯೂ ಹೆಸರುವಾಸಿಯಾಗಿದೆ’ ಎಂದು ಮಾಳಿ ಮಾಹಿತಿ ನೀಡಿದರು.

ವಿವಿಧ ಕೆಲಸಗಳ ನಿಮಿತ್ತ ತಿಕೋಟಾ ಗ್ರಾಮಕ್ಕೆ ಬರುವ ಪರವೂರಿಗರು, ಗ್ರಾಮದ ಜನರು ಮುಂಜಾನೆ ಇತ್ತ ಹಾಯ್ದರೆ ಪೂರಿ–ಕಡ್ಲೆಹಿಟ್ಟಿನ ಚಟ್ನಿ ಸವಿಯದೇ ಮುಂದೆ ಹೆಜ್ಜೆಯಿಡಲ್ಲ. ಈ ಚಟ್ನಿ ಸವಿಯುವುದಕ್ಕಾಗಿಯೇ ದೂರದ ಊರುಗಳಿಂದ ಬರುವವರು ಇದ್ದಾರೆ.

ನಸುಕಿನ ಆರು ಗಂಟೆಯಿಂದ ಬೆಳಿಗ್ಗೆ 11ರವರೆಗೆ ಉಪಾಹಾರಕ್ಕಾಗಿ 200ಕ್ಕೂ ಹೆಚ್ಚು ಮಂದಿ ಬರುತ್ತಾರೆ. ಇವರಲ್ಲಿ ಬಹುತೇಕರು ಕಡ್ಲೆಹಿಟ್ಟಿನ ಚಟ್ನಿಗಾಗಿ ಇಲ್ಲಿಗೆ ಬರುತ್ತಾರೆ. ತಮ್ಮ ಮನೆಗಳಿಗೂ ಪಾರ್ಸೆಲ್ ಕೊಂಡೊಯ್ಯುತ್ತಾರೆ. ಸಂಜೆ 4ರಿಂದ ರಾತ್ರಿ 8 ಗಂಟೆವರೆಗೂ ಚುರುಮುರಿ ಚೋಡಾ, ಅವಲಕ್ಕಿ ಚೋಡಾ, ಬಜಿಗಾಗಿ ಲಕ್ಷ್ಮೀ ಹೋಟೆಲ್‌ಗೆ ದಾಂಗುಡಿಯಿಡುವ ಜನರಿದ್ದಾರೆ.

ರೈಸ್‌ ಬಜಿ ₹ 30, ಪೂರಿ ₹ 25, ಅವಲಕ್ಕಿ ಚೋಡಾ ₹ 25, ಬಜಿ ₹ 20, ಇಡ್ಲಿ ₹ 20, ಚುರಮುರಿ ಚೋಡಾ ₹ 20, ಉಪ್ಪಿಟ್ಟು ₹ 15, ಚಹಾ ದರ ₹ 5 ಇದೆ. ಮನೆಯವರೇ ಹೋಟೆಲ್‌ನ ವಿವಿಧ ಕೆಲಸ ನಿರ್ವಹಿಸುತ್ತಾರೆ.

ಸಿದ್ದು ಮಾಳಿ ಸಂಪರ್ಕ ಸಂಖ್ಯೆ 9916768717

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.