ADVERTISEMENT

ಅನಾರೋಗ್ಯವಿದ್ದಾಗ ಶಾಲೆ ಬೇಡ..

ಡಾ.ವಿನಯ ಶ್ರೀನಿವಾಸ್
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ನೆರೆಮನೆಯ ವೈಶಾಲಿ ಅವಸರದಲ್ಲಿ ಆಟೋ ಹತ್ತುತ್ತಿದ್ದರು. ಅವರ ಮುಖದಲ್ಲಿದ್ದ ಆತಂಕವನ್ನು ಗಮನಿಸಿದ ನಾನು ಕೇಳ್ದ್ದಿದೆ.
`ಯಾಕೋ ಗಾಬರಿಯಲ್ಲಿದ್ದೀರ?~ 
`ಮಗನ ಶಾಲೆಯಿಂದ ಫೋನ್ ಬಂದಿತ್ತು. ಜ್ವರ ಜಾಸ್ತಿಯಾಗಿ ಸುಸ್ತಾಗಿದ್ದಾನೆ. ಬೇಗ ಬಂದು ಕರೆದುಕೊಂಡು ಹೋಗಿ ಎಂಬುದಾಗಿ ಹೇಳಿದ್ರು.. ಅಲ್ಲಿಗೆ ಹೊರಟಿದ್ದೆ..~
`ಬೆಳಿಗ್ಗೆ ಆರಾಮಾಗಿದ್ದನಲ್ಲ?..~ 
`ಬೆಳಿಗ್ಗೆನೇ ಸ್ವಲ್ಪ ಜ್ವರ ಇತ್ತು. ಆದರೆ ನಾನೇ,  ಇವತ್ತು ಮ್ಯೋಥ್ಸ್ ರಿವಿಜನ್ ಇದೆ ಹೋಗು ಎಂದು ಕಳುಹಿಸಿದ್ದೆ~ ಎನ್ನುತ್ತಾ ಆಟೋ ಹತ್ತಿದ್ದರು. ಹೌದು, ಎಷ್ಟೋ ಬಾರಿ ಅನೇಕ ಪೋಷಕರು, ಮಕ್ಕಳಿಗೆ ಜ್ವರ, ಶೀತ, ಕೆಮ್ಮು ಮುಂತಾದ ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೂ ಶಾಲೆಗೆ ಕಳುಹಿಸಿಬಿಡುತ್ತಾರೆ.

ಶಾಲೆಗೆ ಕಳುಹಿಸಲು ಕಾರಣಗಳು ಅನೇಕ...
* ಆರೋಗ್ಯ ಸಮಸ್ಯೆ ಉಲ್ಬಣಗೊಂಡು ಆಗುವ ಅಪಾಯದ ಬಗ್ಗೆ ಅರಿವಿಲ್ಲದಿರುವುದು.

* ವಿಭಕ್ತ ಕುಟುಂಬದ ಕೆಲಸಕ್ಕೆ ಹೋಗುವ ತಾಯಂದಿರು, ಮನೆಯಲ್ಲಿಯೇ ಇದ್ದು ಮಗುವನ್ನು ನೋಡಿಕೊಳ್ಳಲಾಗದಂತಹ ಪರಿಸ್ಥಿತಿ ಇರಬಹುದು.

* ಮಗು ಮನೆಯಲ್ಲಿದ್ದು ಗಲಾಟೆ ಮಾಡಬಹುದು ಅಥವಾ ಮಗುವಿನ  ತಮ್ಮ , ತಂಗಿಗೆ ಕಿರುಕುಳ ಕೊಡಬಹುದೆಂಬ ವಿಚಾರವಿರಬಹುದು.

* ಮಗುವು ಶಾಲೆ ತಪ್ಪಿಸಿದರೆ, ತರಗತಿಯಲ್ಲಿ ಮಾಡುವ ಪಾಠಗಳು ಮತ್ತು ಹೋಂ-ವರ್ಕ್‌ನಲ್ಲಿ ಹಿಂದೆ ಬೀಳಬಹುದು ಎಂಬ ಯೋಚನೆ ಇರಬಹುದು. ಆದರೆ, ಅನಾರೋಗ್ಯದಿಂದ ಬಳಲುವ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಷ್ಟರ ಮಟ್ಟಿಗೆ ಸರಿ? ಹಾಗೆ ಕಳುಹಿಸುವುದರಿಂದ ಆಗಬಹುದಾದ ಅನಾಹುತಗಳೇನು? ಎಂಬುದರ ಬಗ್ಗೆ  ನಾವು ಎಂದಾದರೂ ಯೋಚಿಸ್ದ್ದಿದೇವೆಯೇ?

ಮಕ್ಕಳು ಕೆಮ್ಮು, ಶೀತ ಮುಂತಾದ ಸೋಂಕಿನ ಕಾಯಿಲೆಗಳಿಂದ ಬಳಲುತ್ತಿರುವಾಗ ಶಾಲೆಗೆ ಕಳುಹಿಸುವುದನ್ನು ವೈದ್ಯರು ಹಾಗೂ ಶಾಲಾ ಶಿಕ್ಷಕರು ಕಡ್ಡಾಯವಾಗಿ ನಿಷೇಧಿಸಿದ್ದಾರೆ. ಅದು ಅನೇಕ ಅಪಾಯಗಳಿಗೆ ಹಾಗೂ ತೊಂದರೆಗಳಿಗೆ ಹಾದಿ ಮಾಡಿಕೊಡಬಹುದು.

* ಮಕ್ಕಳು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ರೋಗಾಣುವು ಅಕ್ಕಪಕ್ಕದ ಸಹಪಾಠಿಗೆ ತಲುಪಿ, ಆ ಮಗುವಿಗೂ ಸೋಂಕನ್ನು ಉಂಟುಮಾಡಬಹುದು.

* ಮಕ್ಕಳು ಹೊಟ್ಟೆನೋವು ಮತ್ತು ಅತಿಸಾರದಿಂದ ಬಳಲುತ್ತಿದ್ದರೆ,  ಖಂಡಿತಾ ಶಾಲೆಗೆ ಕಳುಹಿಸಬೇಡಿ. ಏಕೆಂದರೆ ಅಕಸ್ಮಾತ್ ತರಗತಿಯಲ್ಲಿ, ಮಗುವು ನಿಯಂತ್ರಿಸಲಾಗದೆ ಒಳ ಉಡುಪಿನಲ್ಲಿಯೇ ಮಲವಿಸರ್ಜನೆ ಮಾಡಿಕೊಂಡರೆ,  ಮಗುವಿಗೆ ಒಂದು ಬಗೆಯ ಮುಜುಗರ ಮತ್ತು ಅವಮಾನವಾದಂತಾಗಬಹುದು. ಸಹಪಾಠಿಗಳೇನಾದರೂ ಈ ಬಗ್ಗೆ ಛೇಡಿಸಿದರೆ ಮಗುವಿಗೆ ಸಹಪಾಠಿ, ಶಿಕ್ಷಕರು ಹಾಗೂ ಶಾಲೆಯ ಬಗ್ಗೆಯೇ ತಿರಸ್ಕಾರದ ಮನೋಭಾವ ಬೆಳೆಯಬಹುದು.

* ದಡಾರದಿಂದ( ಚಿಕನ್ ಪಾಕ್ಸ್) ಬಳಲುವ ಮಕ್ಕಳು ಕನಿಷ್ಠ 7 ರಿಂದ 10 ದಿನಗಳ ಕಾಲ ಶಾಲೆಗೆ ಕಳುಹಿಸಲು ಅನರ್ಹರು. ಏಕೆಂದರೆ ಮೊದಲ 7 ದಿನಗಳೂ ಮಗುವಿನಲ್ಲಿರುವ ವೈರಾಣು ಇತರರಿಗೆ ಸೋಂಕನ್ನು ಹರಡಬಲ್ಲದು. ಹಾಗಾಗಿ ಜೊತೆಯಲ್ಲಿರುವ ಸಹಪಾಠಿಗಳು ತಕ್ಷಣವೇ ಸೋಂಕಿಗೆ ತುತ್ತಾಗುತ್ತಾರೆ.

* ಕಣ್ಣಿನ ಸೋಂಕಿದ್ದಾಗ, ಅದು ಪೂರ್ತಿ ನಿಯಂತ್ರಣಕ್ಕೆ ಬರುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಕಣ್ಣಿನ ಪಿಸಿರಿನಲ್ಲಿರಬಹುದಾದ ರೋಗಾಣು ಅಕ್ಕಪಕ್ಕದ ಸಹಪಾಠಿಗಳಿಗೂ ತಕ್ಷಣವೇ ಸೋಂಕನ್ನು ಅಂಟಿಸಬಲ್ಲದು.

ಇಂತಹ ಸಂದರ್ಭಗಳಲ್ಲಿ ಶಾಲೆ ಹಾಗೂ ಶಿಕ್ಷಕರ ಬಗ್ಗೆಯೂ ನಾವು ಕೊಂಚ ಯೋಚಿಸಬೇಕಾಗುತ್ತದೆ. ಶಾಲೆಗಳಲ್ಲಿ ಸಾಮಾನ್ಯವಾಗಿ, ಕೆಲವೇ ತುರ್ತು ಔಷಧಗಳು ಹಾಗೂ ಪ್ರಥಮ ಚಿಕಿತ್ಸೆಯ ಸೌಲಭ್ಯಗಳಿರುತ್ತವೆ.
 
ಅಂತಹ ಪರಿಸ್ಥಿತಿಯಲ್ಲಿ ಅಕಸ್ಮಾತ್ ಮಕ್ಕಳಿಗೆ ಜ್ವರ ಹೆಚ್ಚಾಗಿ ಅವರ ವರ್ತನೆಯಲ್ಲೇನಾದರೂ ವ್ಯತ್ಯಾಸವಾದರೆ ಅಥವಾ ಮಕ್ಕಳು ನಿರ್ಜಲೀಕರಣಕ್ಕೊಳಗಾದರೆ ಶಿಕ್ಷಕ ವೃಂದದವರು ಬಹಳವೇ ಆತಂಕಕ್ಕೊಳಗಾಗುತ್ತಾರೆ. ಏನು ಮಾಡಬೇಕೆಂಬುದು ತಿಳಿಯದಂತಾಗಿ ಶಾಲೆಯಲ್ಲಿ ಎಲ್ಲರೂ ಗಾಬರಿಗೊಳ್ಳುತ್ತಾರೆ.

ಅಲ್ಲದೆ, ಶಾಲೆಯು ಊರಹೊರವಲಯದಲ್ಲಿದ್ದರೆ, ಅಲ್ಲಿಂದ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ  ಕರೆತಂದು ಚಿಕಿತ್ಸೆಕೊಡಿಸಲು ಸಾಧ್ಯವಾಗದಿರಬಹುದು. ವೈದ್ಯೋಪಚಾರ ವಿಳಂಬವಾಗಿ, ಒಮ್ಮಮ್ಮೆ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗಬಹುದು.

ಹಾಗಾಗಿ, ಅನಾರೋಗ್ಯದಿಂದ ಬಳಲುವ  ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ, ಶಿಕ್ಷಕರು ಹಾಗೂ ಇತರ ಮಕ್ಕಳಿಗೂ ತೊಂದರೆ ಕೊಟ್ಟಂತಾಗುವುದಿಲ್ಲವೆ? ಆದ್ದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ, ಅವರನ್ನು ಮನೆಯಲ್ಲಿಯೇ ಇರಿಸಿಕೊಂಡು, ಗಮನಿಸೋಣ.

ಅಗತ್ಯವಿದ್ದಲ್ಲಿ, ವೈದ್ಯರ ಬಳಿ ಕರೆದೊಯ್ದು ಸೂಕ್ತ ಚಿಕಿತ್ಸೆಯನ್ನು ಕೊಡಿಸೋಣ. ಶಾಲೆಯ ಪಾಠಗಳು ಹಾಗೂ ಹೋಂ ವರ್ಕ್ ಬಗ್ಗೆ ನಂತರ ಯೋಚಿಸೋಣ, ಏಕೆಂದರೆ ಮೊದಲು ಆರೋಗ್ಯ, ನಂತರವೇ ಉಳಿದದ್ದು. ಅಲ್ಲದೆ ಆರೋಗ್ಯವಂತ ಮಗುವೇ ಕುಟುಂಬದ ನಗು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.