ADVERTISEMENT

ಅಳಿಯಲಿ ವಿಷಾದ...

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ವಿಷಾದ... ವಿಷಾದ... ಓ... ವಿಷಾದ ನಮ್ಮ ನೆಮ್ಮದಿಯನ್ನು ಹಾಳುಗೆಡವುತ್ತದೆ. ಶಾಂತಿ, ಸ್ಥಿರತೆ, ಆರೋಗ್ಯ ಎಲ್ಲವನ್ನೂ ನಾಶಪಡಿಸುತ್ತದೆ. ನೋವಿನ ಸಾಗರದಲ್ಲಿ ಮುಳುಗಿಸುತ್ತದೆ. ಜನ ನಮ್ಮಿಂದ ದೂರ ಸರಿಯುತ್ತಾರೆ. ಹಳೆಯ ನೆನಪುಗಳಲ್ಲಿ ಮುಳುಗಿರುವ, ವರ್ತಮಾನದ ಅಪೂರ್ವ ಗಳಿಗೆಗಳನ್ನು ಹಾಳುಮಾಡುವ ಜನರ ಜತೆ ಯಾರು ತಾನೇ ಇರಲು ಬಯಸುತ್ತಾರೆ?

ಕೊಂಚ ಬುದ್ಧಿವಂತರಾಗೋಣ. ವಿಷಾದವನ್ನು ನಾವೇ ಆಯ್ದುಕೊಳ್ಳುತ್ತೇವೆ ಎಂಬುದನ್ನು ಅರಿಯೋಣ. ಈಗ ಈ ವಿಷಾದವನ್ನು ನಮ್ಮ ಏಳಿಗೆಗಾಗಿ ಬಳಸಿಕೊಳ್ಳೋಣ. ವಿಷಾದದಿಂದಾಗಿ ಖಿನ್ನತೆ, ಅನಾರೋಗ್ಯದತ್ತ ಜಾರುವ ಬದಲು ಹೃದಯದಾಳದಿಂದ ಪ್ರತಿ ಗಾಯವನ್ನು ಗುಣಪಡಿಸಿಕೊಳ್ಳಲು, ಮುಂದಕ್ಕೆ ಸಾಗಲು ಈ ವಿಷಾದವನ್ನು ಬಳಸಿಕೊಳ್ಳೋಣ.

ವಿಷಾದವೆಂದರೆ ನಮ್ಮ ಮೌಢ್ಯ ಮತ್ತು ಅಪರಿಪೂರ್ಣತೆ ಮೇಲೆ ಬೆಳಕು ಚೆಲ್ಲುವ ಕಿರಣ. ನಮ್ಮ ಮನಸ್ಸು, ಸ್ವಯಂಪ್ರತಿಷ್ಠೆ ಮತ್ತು ಅಹಂಕಾರವನ್ನು ಶುದ್ಧೀಕರಣಗೊಳಿಸಿಕೊಳ್ಳಲು ಒಂದು ಸಾಧನ.

ವಿಷಾದಿಸುವುದು ಅಂದರೆ ನಿಮ್ಮನ್ನು ನೀವು ಪರಿವರ್ತಿಸಿಕೊಳ್ಳುವ ಪ್ರಕ್ರಿಯೆ. ನೀವಾಗ ಬೇರೆ ರೀತಿ ಬದುಕಲು ಆರಂಭಿಸುತ್ತೀರಿ. ಯಾರಾದರೂ ನಿಮಗೆ ನೋವುಂಟು ಮಾಡಿದಲ್ಲಿ ನೀವು ಅವರ ಮೇಲೆ ದ್ವೇಷ ಕಾರುವುದಿಲ್ಲ. `ಬೇರೆಯವರು ನೋವುಂಟು ಮಾಡಿದಲ್ಲಿ ಹೇಗೆ ಅನಿಸುತ್ತದೆ' ಎಂದು ನನಗೆ ತಿಳಿದಂತಾಯಿತು ಎಂದುಕೊಳ್ಳುತ್ತೀರಿ. ನೀವು ಅವರ ಮಾತುಗಳನ್ನು ಒಪ್ಪಿಕೊಳ್ಳುತ್ತೀರಿ ಹಾಗೂ ಅದು ನಿಮಗೆ ಅಷ್ಟೇನೂ ನೋವು ನೀಡುವುದಿಲ್ಲ. ಒಪ್ಪಿಕೊಳ್ಳುವುದರಿಂದ ಅಂತಹ ಬಲ ಬರುತ್ತದೆ. ವಿಷಾದ ಸ್ವೀಕರಿಸುವುದನ್ನು, ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ. ಸಹಿಸುವ ಶಕ್ತಿ ಹೆಚ್ಚಾಗುತ್ತದೆ.

ಆದರೂ ನಿಮ್ಮ ಮನಸ್ಸಿನಲ್ಲಿ ವಿಷಾದ ಕಟ್ಟಿಕೊಳ್ಳಬೇಡಿ. ವಿಷಾದವನ್ನು ಬಿಡಲು ಸಾಧ್ಯವಾಗದಿದ್ದಲ್ಲಿ ನೀವು ವಿಷಾದಿಸುವ ಸಂಗತಿಗಳ ಪಟ್ಟಿ ಮಾಡಿ. `ನನಗೆ ಇದು ಇಷ್ಟವಿಲ್ಲ..., ಓ ಅದು ಹಾಗಾಗಬಾರದಿತ್ತು...' ಮನಸ್ಸಿನಲ್ಲಿ ಹುದುಗಿರುವ ಬೇಸರ, ನೋವು, ಕಿರಿಕಿರಿ ಹೊರಗೆ ತೆಗೆಯಲು ಇದು ಅತ್ಯುತ್ತಮ ವಿಧಾನ. ತಲೆಯಲ್ಲಿ ಇರುವುದಕ್ಕಿಂತ ಕಾಗದದ ಮೇಲೆ ಅವು ಸರಳವಾಗಿ ಕಾಣುತ್ತವೆ. ಭಯ ಹುಟ್ಟಿಸುವುದಿಲ್ಲ. ಅಲ್ಲದೇ ಬರೆಯುವುದರಿಂದ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಬೇಸರ, ನೋವಿನ ಕರಾಳ ಭಾವನೆ ತುಂಬಿದ ಮನಸ್ಸಿನಿಂದ ನೀವು ಬೆಳ್ಳನೆಯ ಬೆಳಕಿನಂತಹ ಮನಃಸ್ಥಿತಿ ತಲುಪುತ್ತೀರಿ. ಕತ್ತಲೆಯಿಂದ ಬೆಳಕಿನತ್ತ ನಡೆಯುವುದೇ ನಮ್ಮ ನೈಜ ಸ್ಥಿತಿ. ನಿಜವಾದ ಗುರಿ.

ಇಲ್ಲಿ ಒಂದೇ ಒಂದು ನಿಯಮಾವಳಿ ಇದೆ. ಯಾವುದಕ್ಕೂ ಕೊರಗಬಾರದು. ಕೊರಗಿದಲ್ಲಿ ನೀವು ಮತ್ತೆ ಭೂತಕಾಲಕ್ಕೆ ಜಾರುತ್ತೀರಿ. ವರ್ತಮಾನಕ್ಕೆ ಮರಳಿರಿ... ವರ್ತಮಾನಕ್ಕೆ ಬನ್ನಿ. ನಾನು ವರ್ತಮಾನದಲ್ಲಿ ಜೀವಿಸಲು ಮಾತ್ರ ಬದುಕಿದ್ದೇನೆ ಎಂದು ಹೇಳಿಕೊಳ್ಳಿ. ಆನಂತರ 30 ಸಲ ಶ್ವಾಸೋಚ್ಛಾಸ ಮಾಡಿ. `ನಾನು ಈ ಕ್ಷಣವಾಗಿದ್ದೇನೆ' ಎಂದು ಅಂದುಕೊಳ್ಳುತ್ತಾ ಉಸಿರು ಎಳೆದುಕೊಳ್ಳಿ. `ನಾನು ಈ ಕ್ಷಣದತ್ತ ನೋಡಿ ನಗುತ್ತೇನೆ' ಎಂದು ಹೇಳಿಕೊಳ್ಳುತ್ತಾ ಉಸಿರು ಹೊರಗೆ ಬಿಡಿ. ನಿಮ್ಮ ಮನಸ್ಸು, ಉದ್ವೇಗಗೊಂಡ ಹೃದಯ ಎಲ್ಲವೂ ತಣ್ಣಗಾಗುತ್ತವೆ. ಈಗ ಮೌನವಾಗಿ ಕುಳಿತುಕೊಳ್ಳಿ. ನಿಮ್ಮ ಉಸಿರಿನ ಏರಿಳಿತವನ್ನು ಗಮನಿಸುತ್ತಾ ಹೋಗಿ. ಮೌನದಲ್ಲಿ, ನಿಶ್ಶಬ್ದದಲ್ಲಿ ಹೊಸ ವಿಚಾರಗಳು ಹೊಳೆಯುತ್ತವೆ. ಹೊಸ ಹಾಡು ಹೊಮ್ಮುತ್ತದೆ. ನಿಟ್ಟುಸಿರು ಮಾಯವಾಗುತ್ತದೆ.

ನಿಮ್ಮತನವನ್ನು ಕಳೆದುಕೊಂಡಿದ್ದಕ್ಕಾಗಿ ಈ ವಿಷಾದ ಹುಟ್ಟಿದೆ ಎಂಬುದರ ಅರಿವು ನಿಮಗಾಗುತ್ತದೆ. ಸೃಜನಶೀಲವಾದ, ಪ್ರಾಮಾಣಿಕವಾದ, ಕರುಣೆ ತುಂಬಿದ, ಕಾಳಜಿ ತುಂಬಿದ ನಿಮ್ಮತನವನ್ನು ನೀವು ಕಳೆದುಕೊಂಡಿರುತ್ತೀರಿ. ಅದು ನಿಮ್ಮ ಹೃದಯದ ಭಾಗವಾಗಿರುತ್ತದೆ. ಚೈತನ್ಯದ ಭಾಗವಾಗಿರುತ್ತದೆ. ಅದರ ಬಗ್ಗೆ ಅರಿಯುವ ಮೂಲಕ ನಿಮ್ಮತನವನ್ನು ನೀವು ಗಳಿಸಿಕೊಳ್ಳುತ್ತೀರಿ. ಆ ಅರಿವು ಮಿಂಚಿನಂತೆ, ಮೆದುಳಿನೊಳಗಿನ ಕಂಪನದಂತೆ ಮೂಡುತ್ತದೆ. ನಿಮ್ಮಳಗಿನ ದೈವತ್ವದ ಅರಿವು ಮರಳಿದಾಗ ನೀವು ಸಂತಸದ ಹೊಳೆಯಲ್ಲಿ ಮೀಯುತ್ತಿರಿ. ನೀವು ಕ್ಷಮಿಸುತ್ತೀರಿ. ಮತ್ತೊಬ್ಬರು ನಿಮ್ಮನ್ನು ಕ್ಷಮಿಸಿದಂತೆ ಅನಿಸುತ್ತದೆ. ಪರಿಪೂರ್ಣತೆಯ ಭಾವ ಮೂಡುತ್ತದೆ.

ಈ ವಿಷಾದ ಒಂದೇ ರಾತ್ರಿಯಲ್ಲಿ ಮಾಯವಾಗುವುದಿಲ್ಲ. ಆದರೆ, ಅದು ಅಳಿಯುತ್ತದೆ. ಅಳಿಯುತ್ತಾ ಹೋಗುತ್ತದೆ. ಪಾತರಗಿತ್ತಿಯ ರೆಕ್ಕೆಯಷ್ಟು ಹಗುರವಾದ ನೆನಪಾಗಿ ಉಳಿಯುತ್ತದೆ. ಆ ನೆನಪು ನೀವು ಅಂತಹ ತಪ್ಪು ಮಾಡದಂತೆ, ಮತ್ತೊಮ್ಮೆ ವಿಷಾದ ಅನುಭವಿಸದಂತೆ ಹಿತವಾಗಿ ಕಾಡುತ್ತದೆ.
ಎಂತಹದ್ದೇ ನೋವು ನೀಡುವ ಘಟನೆಯಾದರೂ ಖುಷಿಯಾಗಿರಿ, ಸಂತೃಪ್ತಿಯಿಂದ ಇರಿ. ಶಾಂತಿಯಿಂದ, ಆರಾಮದಾಯಕವಾಗಿ, ಆರೋಗ್ಯಕರವಾಗಿ ಇರಿ. ನೋವು ಮರೆಯಲು ಅತಿಯಾಗಿ ತಿನ್ನುವುದು, ಕುಡಿಯುವುದು, ಸಿಗರೇಟು ಸೇದುವುದು ಅಥವಾ ಮಾದಕ ದ್ರವ್ಯಕ್ಕೆ ದಾಸರಾಗುವುದು ಬೇಡ.

ನಿಯಮಿತವಾಗಿ ವ್ಯಾಯಾಮ ಮಾಡಿ, ಧ್ಯಾನ ಮಾಡಿ, ಗಾರ್ಡನಿಂಗ್ ಮಾಡಿ, ಕವಿತೆ ಓದಿ, ಡೈರಿ ಬರೆಯಿರಿ, ಸಾಕುಪ್ರಾಣಿಗಳನ್ನು ಪೋಷಿಸಿ, ಹೊಸ ಭಾಷೆ ಕಲಿಯಿರಿ, ಆಧ್ಯಾತ್ಮಿಕ ಪ್ರವಚನ ಕೇಳಿ... ವಿಷಾದ ಮತ್ತೊಮ್ಮೆ ನಿಮ್ಮನ್ನು ಆವರಿಸಿದರೆ `ಹೊರಟುಹೋಗು' ಎಂದು ಕೂಗಿ ಆ ಭಾವವನ್ನು ಹೊರಹಾಕಿ. ಕೊರಗಬೇಡಿ, ಉಸಿರಾಡಿ. ಹೊಸ ವರ್ಷದಲ್ಲಿ ಇದು ನಿಮ್ಮ ಗಟ್ಟಿ ನಿರ್ಧಾರವಾಗಲಿ. ಸ್ವಾತಂತ್ರ್ಯದ, ಆರೋಗ್ಯದ ಹೊಸತನದ ಗಾಳಿಯನ್ನು ಉಸಿರಾಡಿ. ಬೆಳಕಿನ ಹೊಸ ಜಗತ್ತಿಗೆ ಇದೋ ಸ್ವಾಗತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.