ADVERTISEMENT

ಈ ವಿಚಿತ್ರ ಕಾಯಿಲೆಗೂ ಚಿಕಿತ್ಸೆ ಇದೆ

ಸತೀಶ ಬೆಳ್ಳಕ್ಕಿ
Published 5 ಆಗಸ್ಟ್ 2011, 19:30 IST
Last Updated 5 ಆಗಸ್ಟ್ 2011, 19:30 IST
ಈ ವಿಚಿತ್ರ ಕಾಯಿಲೆಗೂ ಚಿಕಿತ್ಸೆ ಇದೆ
ಈ ವಿಚಿತ್ರ ಕಾಯಿಲೆಗೂ ಚಿಕಿತ್ಸೆ ಇದೆ   

ಬಾಲಾಜಿಗೆ ಈಗಷ್ಟೇ 13 ತುಂಬಿದೆ. ಈತ ಮೂಲತ: ಬೆಂಗಳೂರಿನ ಹುಡುಗ. ಇಲ್ಲಿವರೆಗೆ ಈತನ ಬಾಲ್ಯವನ್ನು ಕಿತ್ತು ತಿಂದದ್ದು ಎಕ್ಸ್ಟ್ರೋಫಿ-ಇಪಿಸ್ಪಾಡಿಯಾಸ್ ಕಾಂಪ್ಲೆಕ್ಸ್ ಎಂಬ ಮಹಾಮಾರಿ. ಈ ಕಾಯಿಲೆ ಈತನಿಗೆ ಹುಟ್ಟಿನಿಂದಲೇ ಬಂದ ಬಳುವಳಿ. ಇದರಿಂದಾಗಿ ಈತ ಪ್ರತಿದಿನ ಶಾಲೆಯಲ್ಲಿ ತನ್ನ ಸಹಪಾಠಿಗಳಿಂದ ಗೇಲಿಗೊಳಗಾಗುತ್ತಿದ್ದ.

ಆದರೆ, ಈಗ ಬಾಲಾಜಿ ಸಂಪೂರ್ಣ ಹಸನ್ಮುಖಿಯಾಗಿದ್ದಾನೆ. ಈತನ ಮನಸ್ಸು ಮತ್ತೆ ತನ್ನ ವಯೋಸಹಜ ತುಂಟಾಟಗಳತ್ತ ತಿರುಗಿದೆ. ಹೌದು. ಅವನಲ್ಲಿ ಮತ್ತೆ ಜೀವನೋತ್ಸಾಹ ತುಂಬಿದ್ದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ವೈದ್ಯರು. ಬಾಲಾಜಿಯ ಅಪ್ಪ-ಅಮ್ಮ, ಮಗ ಮರಳಿ ಕೈಸೇರಿದ ಎಂಬ ಖುಷಿಯಲ್ಲಿದ್ದಾರೆ.
 
`ಈಗ ನನ್ನ ಮಗನ ಸಮಸ್ಯೆ ಸಂಪೂರ್ಣವಾಗಿ ಪರಿಹಾರಗೊಂಡಿದೆ. ಅವನು ಇನ್ನು ಮುಂದೆ ಸಮ ವಯಸ್ಕ ಮಕ್ಕಳಂತೆ ಬದುಕು ಸಾಗಿಸಬಹುದು. ಬಾಲಾಜಿ ಗುಣಮುಖನಾಗಿರುವುದರಿಂದ ನಮ್ಮ ಮನೆಯಲ್ಲಿ ಮತ್ತೆ ಸಂತೋಷ ತುಂಬಿಕೊಂಡಿದೆ~ ಎಂದು ಬಾಲಾಜಿ ಅಮ್ಮ ಆನಂದಬಾಷ್ಪ ಸುರಿಸುತ್ತಾರೆ. 

13 ವರ್ಷಗಳಿಂದ ಬಾಲಾಜಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಆತನನ್ನು ದೈಹಿಕವಾಗಿ, ಮಾನಸಿಕವಾಗಿ ಹಿಂಡಿಹಿಪ್ಪೆ ಮಾಡಿದ್ದು ಎಕ್ಸ್ಟ್ರೋಫಿ-ಇಪಿಸ್ಪಾಡಿಯಾಸ್ ಕಾಂಪ್ಲೆಕ್ಸ್. ಅಂದರೆ, ಈತನಿಗೆ ತನ್ನ ಮೂತ್ರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗುತ್ತಿರಲಿಲ್ಲ. ಯಾವಾಗಲೂ ಸೋರುತ್ತಿತ್ತು. ಏಕೆಂದರೆ ಈತನ ದೇಹದಲ್ಲಿ ಮೂತ್ರವನ್ನು ತಡೆದು ಹಿಡಿದಿಡುವ ವ್ಯವಸ್ಥೆ ಇರಲಿಲ್ಲ.
ದೊಡ್ಡವನಾದರೂ ಸಹ ಡೈಪರ್ ಹಾಕಿಕೊಂಡೇ ಶಾಲೆಗೆ ಹೋಗುತ್ತಿದ್ದ. ನಿರಂತರವಾಗಿ ಸೋರುತ್ತಿದ್ದ ಮೂತ್ರದಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದರಿಂದಾಗಿ ಈತ ತನ್ನ ಸಹಪಾಠಿಗಳಿಂದ ಗೇಲಿಗೊಳಗಾಗುತ್ತಿದ್ದ. ಮನೆಗೆ ಬಂದು ಅಮ್ಮನ ಬಳಿ ತನ್ನ ಅಳಲು ತೋಡಿಕೊಂಡು ಇನ್ನೆಂದಿಗೂ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಿದ್ದ. ಜೊತೆಗೆ ಈತನ ಜನನಾಂಗವು ಪೂರ್ಣವಾಗಿ ಬೆಳೆದಿರಲಿಲ್ಲ.

ಇಂತಹ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಾಜಿಯನ್ನು ಹಲವು ವೈದ್ಯರಿಗೆ ತೋರಿಸಿದ್ದರು ಆತನ ಪೋಷಕರು. ಆದರೆ ಅವರ ಪ್ರಯತ್ನವೆಲ್ಲಾ ವ್ಯರ್ಥವಾಗಿತ್ತು. ಅಂತಿಮ ಪ್ರಯತ್ನ ಎಂಬಂತೆ ಬಾಲಾಜಿಯ ಪೋಷಕರು ಬೆಂಗಳೂರಿನ ರಾಜಾಜಿನಗರದಲ್ಲಿರುವ ಫೋರ್ಟಿಸ್ ಹಾಸ್ಪಿಟಲ್‌ನ ಕನ್ಸಲ್ಟಂಟ್ಸ್ ಯುರಾಲಜಿಸ್ಟ್‌ಗಳಾದ ಡಾ. ಮೋಹನ್ ಕೇಶವಮೂರ್ತಿ ಮತ್ತು ಡಾ. ಝಡ್. ಶಕೀರ್ ತಬ್ರೇಜ್ ಹಾಗೂ ಕನ್ಸಲ್ಟಂಟ್ ಅರ್ಥೋಪೆಡಿಕ್ ಮತ್ತು ಕೀಲು ಬದಲಾವಣೆ ಸರ್ಜನ್ ಡಾ. ಜೆ.ವಿ.ಶ್ರೀನಿವಾಸ್ ಅವರನ್ನು ಭೇಟಿಮಾಡಿದರು.

ವೈದ್ಯರ ತಂಡ ಬಾಲಾಜಿಗೆ ಪ್ರತ್ಯೇಕ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಮಾಡಿತು.  ಬಾಲಾಜಿ ಅದೃಷ್ಟ ಸಹ ಚೆನ್ನಾಗಿತ್ತು. ಆತ ಗುಣಮುಖನಾದ. ಈ ಮೂಲಕ ಬಾಲಾಜಿಯ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದರು.

ಬಾಲಾಜಿ ಪ್ರಕರಣ ಗಮನಿಸಿದ ಡಾ. ಮೋಹನ್ ಅವರು, ಈ ಸಮಸ್ಯೆಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡರು. ಶಸ್ತ್ರಚಿಕಿತ್ಸೆಗೂ ಮೊದಲು ಫೋರ್ಟಿಸ್ ಹಾಸ್ಪಿಟಲ್‌ನ ವೈದ್ಯರು ಶಸ್ತ್ರಚಿಕಿತ್ಸೆಗಾಗಿ ಯೋಜನೆ ರೂಪಿಸಿಕೊಂಡರು.

ಸಮಸ್ಯೆ ಪರಿಹರಿಸಲು ಮೂತ್ರಕೋಶದ ಮೇಲೆ ಉತ್ತಮ ಹೊದಿಕೆ ಕೊಡುವುದು ಅಥವಾ ದೈವದತ್ತವಾದ ಮೂತ್ರ ನಿಯಂತ್ರಣ ವ್ಯವಸ್ಥೆಯನ್ನು ಮರು ಸ್ಥಾಪಿಸುವುದು ಅಥವಾ ಮೂಳೆರೋಗ ತಜ್ಞರ ನೆರವು ಪಡೆದು ಪ್ಯೂಬಿಕ್ ಮೂಳೆಯನ್ನು ಸೇರಿಸುವುದು ಎಂಬ ಆಯ್ಕೆ ಹೊಂದಿದ್ದರು.

ಈ ಮೂರು ಹಂತಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಬಳಿಕ ಮೂತ್ರ ನಿಯಂತ್ರಣ ವ್ಯವಸ್ಥೆಯನ್ನು ಮರುಸ್ಥಾಪಿಸಲು ಅನುವಾಗುವಂತೆ ಶಸ್ತ್ರಚಿಕಿತ್ಸೆ ಮಾಡಿದರು. ಮೂತ್ರಕೋಶದ ಗಾತ್ರ ಚಿಕ್ಕದಿದ್ದರೆ, ವ್ಯವಸ್ಥೆಯನ್ನು ವಿಸ್ತರಿಸುವ ಮೂಲಕ ಮೂತ್ರಕೋಶವನ್ನು ವಿಸ್ತಾರಗೊಳಿಸಲು ತಜ್ಞರು ಸಿದ್ದರಿದ್ದರು. ಈ ಎಲ್ಲ ಪ್ರಕ್ರಿಯೆಯನ್ನು ಶಸ್ತ್ರಚಿಕಿತ್ಸೆಯ ಬಳಿಕ ನೋವು ಕಡಿಮೆ ಇರುವಂತೆ ಜನರಲ್ ಪ್ಲಸ್ ಅರವಳಿಕೆಯ ಮೂಲಕ ನಾಲ್ಕು ಗಂಟೆಗಳ ಕಾಲ ನಡೆಸಲಾಯಿತು.

ನಾಲ್ಕು ದಿನಗಳ ತರುವಾಯ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಆ ವೇಳೆಗೆ ಬಾಲಾಜಿ ತನ್ನ ಮೂತ್ರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಶಕ್ತನಾಗಿದ್ದ. ಎರಡನೇ ಹಂತದ ಪ್ರಕ್ರಿಯೆಯನ್ನು ಆರು ವಾರಗಳ ನಂತರ ಕೈಗೊಳ್ಳಲಾಯಿತು. ಮತ್ತೆ ಅದೇ ರೀತಿಯ ಅರವಳಿಕೆ ನೀಡಿ, ಮೂತ್ರಕೋಶವನ್ನು ಮರುಸ್ಥಾಪಿಸುವ (ಕಾಂಡ್‌ವೆಲ್ ರಾನ್‌ಸ್ಲೆ ರಿಪೇರ್) ಕಾರ್ಯ ನಡೆಯಿತು. ಇದು, ಜನನಾಂಗ ಸಹಜ ಸ್ಥಿತಿಗೆ ಬರಲು ನೆರವಾಯಿತು.

ತರುವಾಯ ಬಾಲಾಜಿ ಸಹಜವಾಗಿ ಮರು ಹೊಂದಾಣಿಸಿದ ಮೂತ್ರನಾಳದ ಮೂಲಕ ಮೂತ್ರ ವಿಸರ್ಜನೆ ಮಾಡಲು ಶಕ್ತನಾದ. ಹೊಂದಿಸಿದ ಚರ್ಮದ ಬೆಳವಣಿಗೆಗೆ,  ಜನನಾಂಗ ದೊಡ್ಡದಾಗಲು ವೈದ್ಯರು ಅಗತ್ಯ ಚಿಕಿತ್ಸೆ ನೀಡಿದ್ದಾರೆ. ಈಗ ಬಾಲಾಜಿ ಸಂಪೂರ್ಣ ಗುಣಮುಖನಾಗುವುದರ ಜೊತೆಗೆ ಪರಿಪೂರ್ಣ ಮನುಷ್ಯನಾಗಿದ್ದಾರೆ.

ಮುಂದೆ ಆತ ತನ್ನ ವೈವಾಹಿಕ ಜೀವನವನ್ನು ಸಹ ನೆಮ್ಮದಿಯಿಂದ ನಡೆಸಬಹುದು. ಬಾಲಾಜಿಗೆ ನೀಡಿದ ಚಿಕಿತ್ಸೆ, ಇಂಥದೇ ಸಮಸ್ಯೆಯಿಂದ ಬಳಲುತ್ತಿರುವ ಇತರರಿಗೂ ಒಂದು ಆಶಾಕಿರಣವಾಗಿದೆ.

`ಎಕ್ಸ್ಟ್ರೋಫಿ-ಇಪಿಸ್ಪಾಡಿಯಾಸ್ ಕಾಂಪ್ಲೆಕ್ಸ್ ಅನ್ನು ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಸರಿಪಡಿಸಬಹುದು. ಇಂಥ ಸಮಸ್ಯೆಗಳನ್ನು ಸರಿ ಪಡಿಸಲು ಉನ್ನತ ಮಟ್ಟದ ತಜ್ಞರ ನೆರವು ಮತ್ತು ವೈದ್ಯಕೀಯ ನೆರವು ಕೂಡಾ ಅಗತ್ಯ~ ಎನ್ನುತ್ತಾರೆ ಡಾ. ಮೋಹನ್. ಅಂದಹಾಗೆ, ಪ್ರತಿ 30 ಸಾವಿರದಲ್ಲಿ ಒಬ್ಬರಲ್ಲಿ ಮಾತ್ರ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.