ಭಾರತದಲ್ಲಿ ಒಟ್ಟು 3.4ಕೋಟಿ ಮಂದಿ ವಿವಿಧ ರೀತಿಯ ಕಿಡ್ನಿ (ಮೂತ್ರಪಿಂಡ) ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸುಮಾರು 4.3ಕೋಟಿ ಜನರು ಮುಂದೆ ಕಾಯಿಲೆಗೆ ತುತ್ತಾಗುವ ಸಾಧ್ಯತೆಯ ಪಟ್ಟಿಯಲ್ಲಿ ಇದ್ದಾರೆ. ಸರಿಸುಮಾರು 26 ಲಕ್ಷ ಮಂದಿ ಹೊಸ ಕಿಡ್ನಿ ಪಡೆಯಲು ಕಾಯುತ್ತಿದ್ದಾರೆ. ಪ್ರತಿ ಎರಡು ಗಂಟೆಗೆ ಕನಿಷ್ಠ ಇಬ್ಬರು ಹೊಸ ಕಿಡ್ನಿ ಜೋಡಣೆಗೆ (ಟ್ರಾನ್ಸ್‌ಪ್ಲಾಂಟ್) ಅವಕಾಶ ಸಿಗದೆ ಸಾಯುತ್ತಿದ್ದಾರೆ. ಇದನ್ನು ಆರಂಭದಲ್ಲೆ ಪತ್ತೆ ಹಚ್ಚಿದರೆ ನಿವಾರಣೆ ಸುಲಭ ಸಾಧ್ಯ.
ಕಿಡ್ನಿ ದೇಹಕ್ಕೆ ಏಕೆ ಅವಶ್ಯಕ?
ಮಾನವನ ದೇಹಕ್ಕೆ ಪ್ರಕೃತಿ ಎರಡು ಕಿಡ್ನಿಗಳನ್ನು ಪಕ್ಕೆಲುಬಿನ ಕೆಳಗೆ ಅಕ್ಕಪಕ್ಕದಲ್ಲಿ ನೀಡಿದೆ. ದೇಹದಲ್ಲಿ ಸುಸೂತ್ರವಾಗಿ ಎಲ್ಲಾ ಕಾರ್ಯಗಳು ನಡೆಯಲು ಕಿಡ್ನಿ ಅತಿ ಅವಶ್ಯಕ. ಇದು ದೇಹದಲ್ಲಿ ಮುಖ್ಯವಾಗಿ ರಕ್ತದ ಶುದ್ಧೀಕರಣ, ವಿಷಯುಕ್ತ ವಸ್ತುಗಳನ್ನು ಬೇರ್ಪಡಿಸುವುದು, ರಕ್ತದ ಒತ್ತಡ ಕಾಪಾಡುವುದು, ಹಾರ್ಮೋನ್‌ಗಳ ಬಿಡುಗಡೆಯಂತಹ ಅತಿಮುಖ್ಯವಾದ ಕೆಲಸಗಳನ್ನು ಮಾಡುತ್ತದೆ. ಎರಡು ಕಿಡ್ನಿಗಳು ಸರಾಸರಿ ದಿನಕ್ಕೆ 50-60 ಲೀಟರ್ ರಕ್ತವನ್ನು ಶುದ್ಧೀಕರಿಸುತ್ತದೆ. ಕಿಡ್ನಿಯ ಕಾರ್ಯಕುಂಠಿತವಾದರೆ ಸಂಪೂರ್ಣ ಆರೋಗ್ಯ ಹದಗೆಡುತ್ತದೆ.
ದೀರ್ಫಕಾಲಿಕ ಕಿಡ್ನಿ ಕಾಯಿಲೆ (ಸಿಕೆಡಿ)
ಕಿಡ್ನಿ ಕಾಯಿಲೆ ನಿಧಾನವಾಗಿ ಸದ್ದಿಲ್ಲದೆ ದೇಹದಲ್ಲಿ ಆರಂಭವಾಗುತ್ತದೆ ಮತ್ತು ತಿಂಗಳುಗಳು ಕಳೆದಂತೆ ಹಾಗೂ ವರ್ಷಗಳು ಉರುಳಿದಂತೆ ಕಿಡ್ನಿಯ ಕಾರ್ಯ ಸಾಮರ್ಥ್ಯ ಕುಂಠಿತವಾಗಿ ಕೊನೆಗೆ ಕಿಡ್ನಿ ವೈಫಲ್ಯ ಉಂಟಾಗುತ್ತದೆ. ಇದನ್ನು ವೈದ್ಯಕೀಯವಾಗಿ 5 ಹಂತಗಳಲ್ಲಿ ಗುರುತಿಸಲಾಗುತ್ತದೆ. 5 ನೇ ಹಂತದಲ್ಲಿ ಹೊಸ ಕಿಡ್ನಿಯ ಜೋಡಣೆ ಅವಶ್ಯಕವಾಗಿ ಬೇಕಾಗುತ್ತದೆ. ಇಲ್ಲದಿದ್ದರೆ ರೋಗಿಯು ಸಾವಿಗೀಡಾಗುವ ಸಾಧ್ಯತೆ ಇರುತ್ತದೆ.
ಮುಖ್ಯ ಕಾರಣಗಳೇನು?
ನಿಯಂತ್ರಣದಲ್ಲಿರದ ದೀರ್ಘಕಾಲಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ
ಕಿಡ್ನಿಯಲ್ಲಿ ಕಲ್ಲುಗಳು
ಗೌಟ್ (ಅತಿ ಹೆಚ್ಚಿನ ಯುರಿಕ್ ಆಮ್ಲ)
ವಂಶವಾಹಿ ಸಮಸ್ಯೆ (ಜೆನೆಟಿಕ್ಸ್)
ಆಧುನಿಕ ಜೀವನಶೈಲಿ.
ಅತಿಯಾಗಿ ನೋವುನಿವಾರಕ ಮತ್ತು ಇತರೆ ಮಾತ್ರೆಗಳ ನಿರಂತರ ಸೇವನೆ
ಅತಿಹೆಚ್ಚು ಅಥವಾ ಕಡಿಮೆ ನೀರು ಕುಡಿಯುವುದು
ಇತರೆ ವೈದ್ಯಕೀಯ ಕಾರಣಗಳು, ಕಿಡ್ನಿ ಸಮಸ್ಯೆಯ ಲಕ್ಷಣಗಳಾವುವು?
ಕಿಡ್ನಿ ಸಮಸ್ಯೆಯ ಗುಣಲಕ್ಷಣಗಳನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇದು ರೋಗಿಯಿಂದ ರೋಗಿಗೆ ಭಿನ್ನವಾಗಿರುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ಕೆಳಕಂಡ ಲಕ್ಷಣಗಳು ಕಾಣಿಸುತ್ತವೆ.
ನಿರಂತರವಾಗಿ ವಾಂತಿಯಾಗುವಿಕೆ ಮತ್ತು ತೂಕ ಕಡಿಮೆಯಾಗುವುದು.
ಕಣ್ಣಿನ ಸುತ್ತ ಮತ್ತು ಪಾದದ ಮೂಳೆ ಯಲ್ಲಿ (ಆ್ಯಂಕಲ್)ಊತ.
ರಕ್ತಹೀನತೆ ಮತ್ತು ಸದಾ ಸುಸ್ತಾಗುವಿಕೆ
ಮೂತ್ರದಲ್ಲಿ ರಕ್ತ ಮತ್ತು ಪ್ರೊಟೀನ್ ಇರುವಿಕೆ
ಮೂಳೆಗಳ ನೋವು ಮತ್ತು ಅನಿಮಿಯತ ಹೃದಯ ಬಡಿತ
ರಕ್ತಸಹಿತ ಕಂದುಬಣ್ಣದ ನೊರೆಯುಕ್ತ ಮೂತ್ರ ವಿಸರ್ಜನೆ
ಮೂತ್ರದ ಪ್ರಮಾಣ ಕಡಿಮೆಯಾಗುವಿಕೆ ಮತ್ತು ರಾತ್ರಿವೇಳೆ ಅತಿ ಮೂತ್ರವಿಸರ್ಜನೆ.
ಮೇಲ್ಕಂಡ ಲಕ್ಷಣಗಳು ಕೇವಲ ಕಿಡ್ನಿ ಸಮಸ್ಯೆಗೆ ಮಾತ್ರ ಸಂಬಂಧಿಸಿದ್ದು ಎಂದರ್ಥವಲ್ಲ. ಇದು ಬೇರೆ ಕಾಯಿಲೆಗಳ ಲಕ್ಷಣಗಳು ಸಹ ಆಗಿರಬಹುದು.
ಸಾಮಾನ್ಯ ಕಿಡ್ನಿ ಕಾಯಿಲೆಗಳು
ಡಯಾಬಿಟಿಸ್ ನೆಫ್ರೋಪತಿ
ಹೈಪರ್‌ಟೆನ್‌ಸಿಟಿ ನೆಫ್ರೋಸ್ಕಿಲೋಸಿಸ್
ಗ್ಲಾಮಾರಿಲೊ ನೆಫ್ರೊಟಿಸ್
ಪಾಲಿಸ್ಥಿಕ್ ಕಿಡ್ನಿ ಕಾಯಿಲೆ
ಕಿಡ್ನಿ ಕಲ್ಲು
ಕಿಡ್ನಿ ಸಮಸ್ಯೆಗಳಿಗೆ ಪರಿಹಾರ ಇದೆಯೇ?
ಕೆಲವು ಹಂತದವರೆಗೆ ಕಿಡ್ನಿ ಕಾಯಿಲೆಗೆ ಪರಿಹಾರ ಇದೆ. ಗಂಭೀರ ಸಂಪೂರ್ಣ ಕಿಡ್ನಿ ವೈಫಲ್ಯ ಉಂಟಾದರೆ ಡಯಾಲಿಸಿಸ್ (ಕೃತಕ ಶುದ್ಧೀಕರಣ) ಅಥವಾ ಕೊನೆಯದಾಗಿ ದಾನಿಯಿಂದ ಹೊಸ ಕಿಡ್ನಿಯನ್ನು ಪಡೆಯುವುದೇ ಉಳಿದಿರುವ ಕೊನೆಯ ಮಾರ್ಗ. ಡಯಾಲಿಸಿಸ್‌ಗೆ ಒಂದು ತಿಂಗಳಿಗೆ 10-12 ಸಾವಿರ ಖರ್ಚಾಗುತ್ತದೆ. ಹೊಸ ಕಿಡ್ನಿ ಜೋಡಣೆಗೆ 5 ಲಕ್ಷದವರೆಗೂ ಖರ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಎಲ್ಲಾ ರೀತಿಯಲ್ಲೂ ಸರಿಹೊಂದುವ ದಾನಿಯ ಅವಶ್ಯಕತೆ ಇರುತ್ತದೆ. ಅಂಗಾಂಗಗಳ ದಾನದ ಬಗ್ಗೆ ಜನರಲ್ಲಿ ಇರುವ ಹಲವಾರು ಅಪನಂಬಿಕೆಗಳಿಂದ ಕಿಡ್ನಿ ರೋಗಿಗಳು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆರಂಭದಲ್ಲೆ ಪತ್ತೆ ಹಚ್ಚಿದರೆ ನಿವಾರಣೆ ಸಾಧ್ಯ.
ಕಿಡ್ನಿ ಸಮಸ್ಯೆ ಪತ್ತೆ ಹಚ್ಚುವುದು ಹೇಗೆ?
ರಕ್ತದ ಕ್ರಿಯಾಟಿನ್ ಪರೀಕ್ಷೆ
ರಕ್ತದಲ್ಲಿ ಯುರಿಯದ ಮಟ್ಟ
ಮೂತ್ರ ಪರೀಕ್ಷೆ
ಸ್ಕ್ಯಾನಿಂಗ್ ಪರೀಕ್ಷೆ
ಕಿಡ್ನಿ ಸಮಸ್ಯೆ ಇದ್ದರೆ ಏನು ಮಾಡಬೇಕು?
ತಕ್ಷಣ ನಿಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿ. ಗಾಬರಿಪಡಬೇಕಾಗಿಲ್ಲ.
ನಿಮ್ಮ ಜೀವನ ಶೈಲಿಯನ್ನು ಬದಲಿಸಿ. ಬೊಜ್ಜು ಇದ್ದರೆ ತೂಕ ಕಡಿಮೆ ಮಾಡಲು ಯತ್ನಿಸಿ.
ಆಹಾರದಲ್ಲಿ ಪ್ರೊಟೀನ್ ಅಂಶ ಮತ್ತು ಸೋಡಿಯಂ ಅಂಶವನ್ನು ಕಡಿಮೆಗೊಳಿಸಿ.
ಬಿಪಿ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರಲಿ.
ಕುಡಿತ ಮತ್ತು ಸಿಗರೇಟ್ ಸೇವನೆ ನಿಲ್ಲಿಸಿ.
ಪೊಟಾಶಿಯಂ, ಫಾಸ್ಫರಸ್‌ಯುಕ್ತ ಆಹಾರ ಸೇವನೆ ಕಡಿಮೆಗೊಳಿಸಬೇಕು.
ಆಧುನಿಕ ಜೀವನ ಶೈಲಿಯಿಂದ ಇಂದು ಕಿಡ್ನಿ ಸಮಸ್ಯೆ ನಿಧಾನವಾಗಿ ಸದ್ದಿಲ್ಲದೆ ಬೆಳೆಯುತ್ತಿದೆ. ಭಾರತದಲ್ಲಿ ಕೇವಲ ಶೇ 8.6 ಜನರಿಗೆ ಮಾತ್ರ ಕಿಡ್ನಿ ಕಾಯಿಲೆಯ ಬಗ್ಗೆ ತಿಳುವಳಿಕೆ ಇದೆ ಎಂದು ಇತ್ತೀಚಿನ ಸಮೀಕ್ಷೆಯಿಂದ ತಿಳಿದು ಬಂದಿದೆ. ಹೆಚ್ಚು ವೇಗದಲ್ಲಿ ಇಂದು ಹಲವಾರು ಕಿಡ್ನಿ ಸಮಸ್ಯೆಗಳು ಉಂಟಾಗುತ್ತಿವೆ. ಇದನ್ನು ಆರಂಭದಲ್ಲೆ ಪತ್ತೆ ಹಚ್ಚಿದರೆ ನಿವಾರಣೆ ಸುಲಭ ಸಾಧ್ಯ. ಹೆಚ್ಚಿನ ದ್ರವಯುಕ್ತ (ನೀರು) ಆಹಾರ ಸೇವನೆ ಸಮಸ್ಯೆಗೆ ಅರ್ಧ ಪರಿಹಾರ ಇದ್ದಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.