ADVERTISEMENT

ಗಮನವಿಟ್ಟು ಕೇಳಿ

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 27 ಸೆಪ್ಟೆಂಬರ್ 2013, 19:59 IST
Last Updated 27 ಸೆಪ್ಟೆಂಬರ್ 2013, 19:59 IST
ಗಮನವಿಟ್ಟು ಕೇಳಿ
ಗಮನವಿಟ್ಟು ಕೇಳಿ   

ಸುಂದರವಾದ ಕಥೆಯೊಂದು ಹೀಗಿದೆ. 'ನಿಮ್ಮ ತರಹ ಸಂತೃಪ್ತಿ, ಸಂಯಮ ಮತ್ತು ಶಾಂತಚಿತ್ತ­ದಿಂದ ಇರುವುದು ಹೇಗೆ' ಎಂದು ಶಿಷ್ಯನೊಬ್ಬ ಗುರುವನ್ನು ಪ್ರಶ್ನಿ­ಸಿದ. 'ಆಳವಾಗಿ ಆಲಿಸುವುದರ ಮೂಲಕ' ಎಂದು ಗುರು ಉತ್ತರಿಸಿದ. 'ಅದು ಹೇಗೆ' ಎಂದು ಶಿಷ್ಯ ಮತ್ತೆ ಪ್ರಶ್ನಿಸಿದ. 'ಈ ಬೃಹತ್ ವಿಶ್ವಶಕ್ತಿ ಕಳುಹಿಸುವ ಎಲ್ಲ ಸಂದೇಶಗಳನ್ನೂ ಗಮನವಿಟ್ಟು ಕೇಳು' ಎಂದು ಗುರು ತಿಳಿಸಿ ಹೇಳಿದ. 'ವಿಶ್ವ ನಿಮಗೆ ಯಾವುದೋ ಸಂದೇಶ ಕಳುಹಿಸಿರುತ್ತದೆ. ಅದು ಕೇಳಿದ ತಕ್ಷಣ, ನಿಲ್ಲಿಸು ಎಂದು ನೀವೇ ಹೇಳಿಬಿಡುತ್ತೀರಿ' ಎಂದು ಗುರು ಮೃದು ದನಿಯಲ್ಲಿ ಶಿಷ್ಯನಿಗೆ ಉತ್ತರಿಸಿದ.

ಎಚ್ಚೆತ್ತುಕೊಳ್ಳಿ, ಎಚ್ಚೆತ್ತುಕೊಳ್ಳಿ, ಎಚ್ಚೆತ್ತುಕೊಳ್ಳಿ ಎಂದು ಸಂತರು ಹೇಳುತ್ತಲೇ ಇರುತ್ತಾರೆ. ವಿಶ್ವಶಕ್ತಿ ಯಾವಾಗಲೂ ನಮಗೆ ಸಂದೇಶ ಕಳುಹಿಸುತ್ತಲೇ ಇರುತ್ತದೆ. ನಮ್ಮ ಸ್ನೇಹಿತರು ನಮಗೆ ಕರೆ ಮಾಡಿದಾಗ ನಾವು ಹೇಗೆ ಇರುತ್ತೇವೆ? ಎಲ್ಲವನ್ನೂ ಗಮನವಿಟ್ಟು ಆಲಿಸುತ್ತೇವೆ ಅಲ್ಲವೇ? ಎಚ್ಚೆತ್ತುಕೊಳ್ಳುವುದು ಅಂದರೆ ಹೀಗೆ ಮುಕ್ತ ಮನಸ್ಸಿನಿಂದ ಇರುವುದು. ಎಲ್ಲ ಕೆಲಸಗಳನ್ನೂ ಗಮನವಿಟ್ಟು ಮಾಡುವುದು. ಆಗ ನಮಗೆ ವಿಶ್ವಶಕ್ತಿಯ ಸಂದೇಶ ಆಲಿಸಲು ಸಾಧ್ಯವಾಗುತ್ತದೆ.

   ನಮ್ಮ ಆಲೋಚನೆಗಳು, ಮನದೊಳಗೆ ನಡೆಯುವ ಸಂಭಾಷಣೆಗಳೆಲ್ಲ ಉದ್ವಿಗ್ನತೆಯಿಂದ ಕೂಡಿರುತ್ತವೆ. ಒಂದು ಕೇಂದ್ರವಿಲ್ಲದೇ ಸುತ್ತುತ್ತಿರುತ್ತವೆ. ವಿಷಾದಮಯ­ವಾಗಿ, ಪ್ರತಿರೋಧ ಒಡ್ಡುವಂತೆ ಅಥವಾ ಅತಿಯಾಗಿ ಪ್ರತಿಕ್ರಿಯಿಸುವಂತೆ ಇರುತ್ತವೆ. ಅದಕ್ಕಾಗಿ ನಮಗೆ ಥಟ್ಟನೇ ಸಿಟ್ಟು ಬರುತ್ತದೆ. ಆರೋಪ ಹೊರಿಸು­ತ್ತೇವೆ. ನಾಟಕೀ­ಯತೆ­ಯಿಂದ ವರ್ತಿಸುತ್ತೇವೆ. ಅನು­ಮಾನಾ­ಸ್ಪದವಾಗಿ ವರ್ತಿಸುತ್ತೇವೆ.

ಎಲ್ಲದರಿಂದ ತಪ್ಪಿಸಿಕೊಂಡು ಹೋಗಲು ಬಯಸುತ್ತೇವೆ ಅಥವಾ ಸಾವನ್ನು ಬಯಸುತ್ತೇವೆ. ಇವೆಲ್ಲ ಸಹಜ ಭಾವನೆಗಳು. ಕೆಲ ನಿಮಿಷಗಳ ನಂತರ ಅವು ಕರಗಿಹೋಗುತ್ತವೆ. ಆದರೆ, ಉದ್ವಿಗ್ನತೆ, ಸಿಟ್ಟಿನ ಪರಿಣಾಮ ಮಾತ್ರ ಬಹುಕಾಲ ಇರುತ್ತದೆ. ಭಾರವಾದ ಮನಸ್ಸು, ಏನನ್ನೂ ಮಾಡಲಾಗದೇ ಇರುವುದು, ಭಯ ಎಲ್ಲವೂ ನಮ್ಮಲ್ಲಿ ಉಳಿದುಕೊಳ್ಳುತ್ತವೆ.

ಸಮಸ್ಯೆ ಎದುರಾದಾಗ ಸಂಯಮದಿಂದ, ಎಚ್ಚರಿಕೆ­ಯಿಂದ ಇರಿ. ವಿಶ್ವಶಕ್ತಿ ನಿಮಗಾಗಿ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಿ. ನಿಮಗೆಲ್ಲವೂ ತಿಳಿದಿದೆ ಎಂಬಂತೆ ಶಾಂತಚಿತ್ತ­ರಾಗಿರಿ. ಸುಂದರವಾದ ಪರಿಹಾರ ದೊರಕುತ್ತದೆ. ಹೊಳೆಯುವ ಮಾರ್ಗ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ ಅಂದುಕೊಳ್ಳಿ. ನಮ್ಮ ಮನಸ್ಸು ಮೌನವಾಗಿದ್ದಾಗ ಹೊಸ, ಹೊಸ ವಿಚಾರಗಳು ಹೊಳೆಯುತ್ತವೆ.

ನಾವು ಕೇಳಲು ಸಿದ್ಧರಿಲ್ಲದ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ವಿಶ್ವ ಎಂದರೆ ಬೃಹತ್ ಜಾಲವನ್ನು ಹೊಂದಿರುವ ಇಂಟರ್‌ನೆಟ್‌ನಂತೆ. ಇಲ್ಲಿ ಜ್ಞಾನದ ಭಂಡಾರವೇ ಇದೆ. ಅದು ನಮ್ಮನ್ನು ಅಪರಿಚಿತರ ಜತೆ ಭೇಟಿ ಮಾಡಿಸು­ತ್ತದೆ. ವಿಚಿತ್ರ ವಿಚಾರ, ಹೊಸ  ಪರಿಕಲ್ಪನೆಗಳನ್ನು ನಾವು ಅರಿತು­ಕೊಳ್ಳುವಂತೆ ಮಾಡುತ್ತದೆ.

ಕೆಲವೊಮ್ಮೆ ನಾವು ಅಂದುಕೊಂಡ ಕೆಲಸಗಳು, ಗುರಿಗಳು ಸರಳರೇಖೆಯ ತರಹ ನೇರವಾಗಿ ಆಗುತ್ತವೆ. ಮತ್ತೆ ಕೆಲ ಸಂದರ್ಭಗಳಲ್ಲಿ ಫುಟ್ಬಾಲ್ ಆಟಗಾರರ ಕಾಲಲ್ಲಿ ಸಿಕ್ಕ ಚೆಂಡಿನಂತೆ ಅತ್ತಿಂದ ಇತ್ತ ನಾವು ತೊನೆದಾಡುತ್ತೇವೆ. ಆದರೆ, ಅಂತಿಮವಾಗಿ ನಮ್ಮ ಗುರಿ ಮುಟ್ಟಿರುತ್ತೇವೆ.

ಹಾಗಾದರೆ ನಾವು ಏನನ್ನೂ ಮಾಡದೆ ಸುಮ್ಮನೆ ಇರಬೇಕೇ ಎಂಬ ಪ್ರಶ್ನೆ ಏಳುತ್ತದೆ. ಸಮಸ್ಯೆಯಲ್ಲಿ ಸಿಲುಕಿ­ಕೊಂಡಾಗ ಕೆಲ ನಿಮಿಷ ಅದರ ಬಗ್ಗೆ ಚಿಂತಿಸದೇ ಶಾಂತ­ಚಿತ್ತರಾಗಿ ಕುಳಿತು­ಕೊಳ್ಳಿ. ಬೃಹತ್ ವಿಶ್ವ­ದಲ್ಲಿ ನಾನಿದ್ದೇನೆ, ನನ್ನ ಸುತ್ತಲೂ ಸಾಧ್ಯತೆಗಳು, ಸುಂದರ ಪರಿಹಾರಗಳು ತುಂಬಿಕೊಂಡಿವೆ ಎಂದುಕೊಳ್ಳಿ. ನಿಮ್ಮ ಸಮಸ್ಯೆ ಪರಿಹರಿ­ಸಬೇಕಾದರೆ ಸಣ್ಣದೊಂದು ಹೆಜ್ಜೆ ಇಡಬೇಕು ಎಂದು ನಿಮಗೆ ಅನಿಸುತ್ತದೆ. ಆ ಭಾವನೆ­ಯನ್ನು ಪ್ರಶ್ನಿಸಲು ಹೋಗದೆ ನಿಮಗೆ ಅನಿಸಿದ್ದನ್ನು ಮಾಡಿ. ಕೆಲಸ ಆದ ಮೇಲೆ ಸರಿಯಾದ ದಿಕ್ಕಿನಲ್ಲಿ ಸಾಗಿದ್ದಕ್ಕೆ ನಿಮ್ಮನ್ನು ನೀವು ಅಭಿನಂದಿಸಿಕೊಳ್ಳಿ. ನೀವು ಅಂದುಕೊಂಡ ವೇಗದಲ್ಲಿ ಕೆಲಸ ಆಗಿಲ್ಲ ಎಂದು ಹತಾಶರಾಗಬೇಡಿ.

ಇದರ ಜತೆ ಸಮತೋಲಿತ ಜೀವನ ನಡೆಸಿ. ನಿಮ್ಮ ಗುರಿ ಮುಟ್ಟಲು ಇತರ ಸಂತಸಗಳನ್ನು ಬಲಿ ಕೊಡಬೇಡಿ. ಕುಟುಂಬದವರು, ಸ್ನೇಹಿತರ ಜತೆ ಕಾಲ ಕಳೆಯಿರಿ. ಪ್ರೀತಿಸಲು ಸಮಯ ತೆಗೆದುಕೊಳ್ಳಿ. ಪ್ರೀತಿ ಯಾವಾ­ಗಲೂ ನಿಮಗೆ ಬಲ ಹಾಗೂ ನಂಬಿಕೆ ತಂದುಕೊಡುತ್ತದೆ. ಅನಿಶ್ಚಿತತೆಯ ಮೋಡದಲ್ಲಿ ಏಣಿಯ ಮೆಟ್ಟಿಲುಗಳು ಮರೆಯಾದಾಗಲೂ ಪ್ರೀತಿ ನಮಗೆ ನಂಬಿಕೆ ನೀಡುತ್ತದೆ.

ವ್ಯಾಯಾಮ, ಖುಷಿಗಾಗಿ ಆಟ ಆಡುವುದನ್ನು ಬಿಡಬೇಡಿ. ನಿಮ್ಮ ದೇಹದೊಳಗೆ ರಕ್ತ ಸಂಚಾರವಾಗು­ತ್ತಿದ್ದಾಗ ಲವಲವಿಕೆ, ಉತ್ಸಾಹ ಮೂಡುತ್ತದೆ. ನಿಮಗೆ ಹೊಳೆದ ವಿಚಾರಗಳನ್ನು ಬರೆದಿಟ್ಟುಕೊಳ್ಳಲು, ಇತರ­ರೊಂದಿಗೆ ಪರಿಕಲ್ಪನೆಗಳನ್ನು ಹಂಚಿಕೊಳ್ಳಲು ಸದಾ ನೋಟ್‌ಪ್ಯಾಡ್ ಜತೆಗಿಟ್ಟುಕೊಳ್ಳಿ. ಇವು ಬದುಕಿನ ಗುಣಮಟ್ಟ ಹೆಚ್ಚಿಸುತ್ತವೆ.

ದೊಡ್ಡದಾದ ಟ್ರಕ್ಕೊಂದು ರೈಲ್ವೆ ಕೆಳಸೇತುವೆಯ ಕೆಳಗೆ ಸಿಕ್ಕಿಹಾಕಿಕೊಂಡಿತು. ಎಂಜಿನಿಯರುಗಳು ಎಷ್ಟೇ ಯತ್ನಿಸಿದರೂ ಅದನ್ನು ಕದಲಿಸಲು ಸಾಧ್ಯವಾಗಲಿಲ್ಲ. ಟ್ರಾಫಿಕ್ ಜಾಮ್ ಆಯಿತು. ಅಲ್ಲೇ ಓಡಾಡುತ್ತಿದ್ದ ಪುಟ್ಟ ಬಾಲಕ, ನೀವ್ಯಾಕೆ ಟ್ರಕ್‌  ಟೈರ್‌ನ ಗಾಳಿ ತೆಗೆಯಬಾ­ರದು ಎಂದು ಪ್ರಶ್ನಿಸಿದ. ಈ ಸುಲಭ ಉಪಾಯ ಅವರಿಗೆ ಹೊಳೆದಿರಲಿಲ್ಲ. ಹೀಗೆ ನಮ್ಮ ಅಹಂಕಾರದ ಗಾಳಿಯನ್ನೇಕೆ ತೆಗೆಯಬಾರದು. ಇದರಿಂದ ಆ ಕ್ಷಣದಲ್ಲಿ ಯಾವುದೇ ಕೆಲಸ ಆಗದೇ ಇರಬಹುದು. ಆದರೆ, ಜೀವನದಲ್ಲಿ ನಾವು ಮುಂದೆ ಬಂದಿರುತ್ತೇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT