‘ಮಗು’ ಎಂಬ ಶಬ್ದವೇ ಮನಸ್ಸಿನಲ್ಲಿ ಸಂತಸ ಮೂಡಿಸುತ್ತದೆ. ಇನ್ನು ‘ನಮ್ಮ ಮಕ್ಕಳು’ ಎಂದರೆ ಯಾವ ತಂದೆ-ತಾಯಿಗೆ ಪ್ರೀತಿ-ಹೆಮ್ಮೆ ಇಲ್ಲ? ಒಂಬತ್ತು ತಿಂಗಳ ಕಾಲ ಹೊತ್ತು, ಹೆತ್ತು, ಹಾಲೂಣಿಸಿ ತಾಯಿಗಂತೂ ಮಗು ತನ್ನದೇ ದೇಹದ ಒಂದು ಭಾಗದಂತೆ ಅನ್ನಿಸತೊಡಗುತ್ತದೆ.
‘ನಾನು ಓದಬೇಕಿತ್ತು, ನಾನು ಸಂಗೀತ ಕಲಿಯಬೇಕಿತ್ತು, ನನ್ನಂತೆ ನನ್ನ ಮಕ್ಕಳಾಗಬಾರದು, ಒಳ್ಳೆಯ ಉದ್ಯೋಗದಲ್ಲಿರಬೇಕು’ ಎಂದು ಹಂಬಲಿಸುವ ತಂದೆ-ತಾಯಿಯರು, ಶಾಲೆ-ಕಲಿಕೆ-ಉದ್ಯೋಗ ಎಂದು ಮಕ್ಕಳಿಗೆ ಒತ್ತಡ ಹಾಕುತ್ತಾರೆ. ಮುಂದಿರುವ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ತಯಾರಿಯಲ್ಲಿ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಕಲಿಸುವಲ್ಲಿ ವಿಫಲರಾಗುತ್ತಾರೆ. ಎಷ್ಟೋ ಸಲ, ತಮ್ಮ ಜೀವನದ ಮೌಲ್ಯಗಳನ್ನೂ ಕಳೆದುಕೊಳ್ಳುತ್ತಾರೆ.
ರಾಧಾ ಎಂಟು ವರ್ಷದ ಬಾಲಕಿ. ಮೂರನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಮೊನ್ನೆ ರಾಧಾಳ ಸ್ನೇಹಿತೆ ಮನೆಗೆ ಬಂದು ಅಂದು ತಾನು ಶಾಲೆಗೆ ಬಂದಿಲ್ಲದ ಕಾರಣ, ಸ್ವಲ್ಪ ನೋಟ್ಸ್ ಕೊಡೆಂದು ವಿನಂತಿಸಿದಳು. ರಾಧಾ ಒಳರೂಮಿಗೆ ಹೋಗಿ ನೋಟ್ಸ್ ತರಬೇಕೆನ್ನುವಾಗ ರಾಧಾಳ ತಾಯಿ, ‘ರಾಧಾ, ನಿನಗೇನೂ ತಿಳಿಯೋದಿಲ್ಲ. ಅವಳಿಗೆ ನೋಟ್ಸ್ ಕೊಡಬೇಡ. ಕೊಟ್ಟರೆ ಅವಳಿಗೇ ನಿನಗಿಂತ ಹೆಚ್ಚು ಮಾರ್ಕ್ಸ್ ಬರುತ್ತೆ. ನೋಟ್ಸ್ ಎಲ್ಲೋ ಇಟ್ಟು ಮರೆತಿದ್ದೇನೆಂದು ಹೇಳಿಬಿಡು’ ಎಂದರು. ರಾಧಾ ಅರ್ಧಮನಸ್ಸಿನಿಂದ ಸ್ನೇಹಿತೆಗೆ ನೋಟ್ಸ್ ಇಲ್ಲ ಎಂದು ಹೇಳಿಕಳಿಸಿದಳು.
ಮೇಲೆ ಹೇಳಿದ ಉದಾಹರಣೆಯಲ್ಲಿ ರಾಧಾಳ ತಾಯಿಯು ಜ್ಞಾನ ಹಂಚಿಕೊಳ್ಳುವುದೇ ಅಪರಾಧದ ರೀತಿ ಬಿಂಬಿಸುತ್ತಿದ್ದಾಳೆ. ಸುಳ್ಳು ಹೇಳುವುದಕ್ಕೂ ಪ್ರಚೋದಿಸುತ್ತಿದ್ದಾಳೆ.ಹಾಗೆಯೇ ಸಕಾರಾತ್ಮಕವಾದ ಉದಾಹರಣೆಯನ್ನೂ ನೋಡೋಣ. ಅನ್ವಿತ್ ಐದು ವರ್ಷದ ಪುಟ್ಟ ಬಾಲಕ. ಅವನ ತಾಯಿ ಯಾರೇ ಹಿರಿಯರು ಮನೆಗೆ ಬಂದಾಗ, ಬಹುವಚನದಲ್ಲಿ, ಅವರ ಸ್ಥಾನಕ್ಕೆ ತಕ್ಕಂತೆ ಸಂಬೋಧಿಸಿ ಮಾತನಾಡುತ್ತಾಳೆ.
ಸಂದರ್ಭಕ್ಕೆ ತಕ್ಕಂತೆ ನಮಸ್ತೇ /ಥ್ಯಾಂಕ್ಯೂ ಹೇರಳವಾಗಿ ಹೇಳುತ್ತಾಳೆ. ಅನ್ವಿತ್ ಇದನ್ನು ನೋಡಿ, ಎಲ್ಲ ಹಿರಿಯರನ್ನೂ ಅಂಕಲ್/ಆಂಟಿ ಎಂದು ಕರೆಯಲು ಪ್ರಾರಂಭಿಸಿದ್ದಾನೆ.
ಯಾರಾದರೂ ಏನಾದರೂ ಕೊಟ್ಟರೆ ತಕ್ಷಣ ‘ಥ್ಯಾಂಕ್ಯೂ’ ಎನ್ನುತ್ತಾನೆ. ಇದನ್ನು ಕೇಳಿದ ಎದುರಿನವರ ಮುಖದಲ್ಲಂತೂ ಖುಷಿ, ಅನ್ವಿತ್‌ನೆಡೆಗೆ ಏನೋ ಆದರ.ಇಂದಿನ ಪೋಷಕರು ‘ಈಗಿನವರಿಗೆ ಜೀವನದಲ್ಲಿ ಮೌಲ್ಯಗಳೇ ಇಲ್ಲ’ ಎಂದು ಚಿಂತಿಸುತ್ತಾರೆ. ಆದರೆ ಈಗಿನವರು ಎಂದರೆ ಯಾರು?. ತಂದೆ-ತಾಯಿ/ಅತ್ತೆ-ಮಾವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪೋಷಕರೇ? ಮಗು ಫಸ್ಟ್ ರ‍್ಯಾಂಕ್ ಬರಬೇಕೆಂದು, ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ ಬಂದಾಗ, ಮಗುವಿನ ಸಾಮರ್ಥ್ಯ/ಸಮಸ್ಯೆ ಅರಿಯದೇ ಮಗುವಿಗೆ ಹೊಡೆಯುವ ತಂದೆಯೇ? ಬಡತನದಲ್ಲಿರುವ ಮಕ್ಕಳ ಜೊತೆ ಸೇರಿದರೆ ಎಲ್ಲಿ ನನ್ನ ಮಗುವಿನ ಪ್ರತಿಷ್ಠೆಗೆ ಕುಂದಾಗುತ್ತದೆ ಎಂದು ಹೆದರುವ ತಂದೆ-ತಾಯಿಯರೇ? ಹೌದು.
ಮೌಲ್ಯ ಕಳೆದುಕೊಳ್ಳುತ್ತಿರುವವರು ಇಂದಿನ ಪೋಷಕರೇ ಹೊರತು ಇಂದಿನ ಮಕ್ಕಳಲ್ಲ! ಇಂದಿನ ಮಕ್ಕಳಿಗೆ ಜೀವನದಲ್ಲಿ ಮೌಲ್ಯಗಳ ಬಗ್ಗೆ ಅರಿಯಲು ಸರಿಯಾದ‘Role model’ – ಆದರ್ಶ ವ್ಯಕ್ತಿಗಳೇ ಇಲ್ಲ ಎಂದರೆ ತಪ್ಪಲ್ಲ. ಪೋಷಕರಾಗಿ ನಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳಿರಬೇಕು. ನಾವು ನಮ್ಮ ಬದುಕಿನಲ್ಲಿ ಪ್ರಾಮಾಣಿಕತೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಮನೆಯಲ್ಲಿ ವೃದ್ಧರ ಆರೈಕೆ, ಇರುವ ಜ್ಞಾನದ ಹಂಚಿಕೆ, ಸುಳ್ಳು ಹೇಳದಿರುವುದು, ತಪ್ಪು ಮಾಡಿದಾಗ ಪಶ್ಚಾತ್ತಾಪ, ಕೃತಜ್ಞತೆ, ಉಡುಗೆ-ತೊಡುಗೆಯಲ್ಲಿ ಶಿಸ್ತು/ಸ್ವಚ್ಛತೆ, ಸಮಯಪ್ರಜ್ಞೆಗಳನ್ನು ಪಾಲಿಸಿದರೆ, ನಮ್ಮ ಮಕ್ಕಳೂ ಅವುಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವುದು ಅಸಾಧ್ಯವಲ್ಲ.
25 ವರ್ಷದ ಎಂಜಿನಿಯರ್ ಯುವಕನೊಬ್ಬ ತನ್ನ ತಂದೆಯ ಬಗ್ಗೆ ಹೀಗೆ ಹೇಳುತ್ತಾನೆ: ‘ನನ್ನ ತಂದೆ ಬಹಳ ಗಟ್ಟಿಗರಾಗಿದ್ದರು. ಅವರು ನನ್ನನ್ನು ಬೆಳೆಸಿದ ರೀತಿಗಳೆಲ್ಲವೂ ಸರಿ ಎನ್ನಲಾರೆ. ಆದರೆ ನನ್ನ ತಂದೆಗೆ ಜೀವನದಲ್ಲಿ ನೈತಿಕ ಮೌಲ್ಯಗಳಿದ್ದವು.
ನಮಗೆ ಅಂದರೆ ಮಕ್ಕಳಿಗೆ ಏನಾದರೂ ಮಾಡಬೇಡವೆಂದು ಹೇಳಿದರೆ, ತಾವೂ ಯಾವತ್ತೂ ಅದನ್ನು ಮಾಡುತ್ತಲಿರಲಿಲ್ಲ. ಅವರ ನಡೆ-ನುಡಿಯ ಬಗ್ಗೆ ಇಂದಿಗೂ ನನಗೆ ಗೌರವ’. ನಮ್ಮ ಇಳಿವಯಸ್ಸಿನಲ್ಲಿ ನಮ್ಮ ಮಕ್ಕಳು, ನಮ್ಮ ಬಗ್ಗೆ ಹೀಗೆ ಹೇಳುವಂತಾದರೆ ನಮ್ಮ ಬದುಕು ಸಾರ್ಥಕ. ನೆನಪಿಡಿ! ನಿಮ್ಮ ಮಗುವಿನ ಪುಟ್ಟ ಕಣ್ಣುಗಳು ನಿಮ್ಮನ್ನು ಹಗಲೂ ರಾತ್ರಿ ಗಮನಿಸುತ್ತಿವೆ. ಅದರ ಕಿವಿಗಳು ನಿಮ್ಮ ಪ್ರತಿ ಶಬ್ದವನ್ನೂ ಆಲಿಸುತ್ತಿವೆ.
ಆ ಪುಟ್ಟ ಕೈಗಳು ನೀವು ಮಾಡುವ ಪ್ರತಿ ಕೆಲಸವನ್ನು ಮಾಡಲು ಸಿದ್ಧವಾಗಿದೆ. ನಾಳೆ ನಿಮ್ಮಂತೆಯೇ ಆಗುವ ಕನಸನ್ನು ನಿಮ್ಮ ಮಗು ಕಾಣುತ್ತಿದೆ. ಪೋಷಕರಾಗಿ ನಿಮ್ಮ ಜೀವನದಲ್ಲಿ ಮೌಲ್ಯಗಳಿರಲಿ, ನಿಮ್ಮ ನಡೆ-ನುಡಿ ಅದರಂತೆ ಆಗಲಿ.
(ಮನೋವೈದ್ಯೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.