ಐದು ವರ್ಷದ ಬಾಲಕ ನಿದ್ದೆ ಮಾಡಲು ಸಿದ್ಧನಾಗುತ್ತಿದ್ದ. ಸ್ಟೂಲೊಂದರ ಮೇಲೆ ನಿಂತು ಸಿಂಕಿನ ಮುಂದೆ ಹಲ್ಲುಜ್ಜುತ್ತಿದ್ದ. ಕಾಲು ಜಾರಿ ನೆಲದ ಮೇಲೆ ಬಿದ್ದ. ಒಂದೆರಡು ನಿಮಿಷ ಅತ್ತು ಆಮೇಲೆ ಕಾಲು ತೊಳೆದು ಆಗಿದ್ದ ಗಾಯಕ್ಕೆ ತಾನೇ ಕಪಾಟಿನಲ್ಲಿದ್ದ ಬ್ಯಾಂಡ್ ಏಯಿಡ್ ಪಟ್ಟಿ ಹಾಕಿಕೊಂಡ! ಎಂದರೆ? ಇನ್ನೂ ತಾನೇ ಶೂ ಹಾಕಿಕೊಳ್ಳಲೂ ಬಾರದ, ಅಪ್ಪ-ಅಮ್ಮನ ಮೇಲೆ ತನ್ನ ಹಲವು ಆವಶ್ಯಕತೆಗಳಿಗೆ ಅವಲಂಬಿಸುವ ಐದು ವರ್ಷದ ಮಗುವಿಗೆ ಕಾಲಿಗೆ ಗಾಯವಾದರೆ ತತ್‌ಕ್ಷಣ ನೋವಿನ ಅರಿವಾಗುತ್ತದೆ, ಅದಕ್ಕೆ ಪ್ರಥಮ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕೆಂಬ ತಿಳಿವಳಿಕೆಯೂ ಇರುತ್ತದೆ.
ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕೆಂಬ ದಿನವೂ ಇರುತ್ತದೆ! ಇದು ನಮ್ಮೆಲ್ಲರ ವಿಷಯದಲ್ಲಿಯೂ ನಿಜ ತಾನೆ? ನಾವೆಲ್ಲರೂ ದೇಹದ ಆರೈಕೆಯ ಬಗೆಗೆ ಉಡುಗೆ–ತೊಡುಗೆಯ ಬಗ್ಗೆ, ಹಲ್ಲಿನ ಆರೋಗ್ಯದ ಕುರಿತು ಐದನೇ ವರ್ಷದಿಂದಲೇ ಕಲಿಯುತ್ತೇವೆ. ಕೊನೆಗೆ ಪರಿಪೂರ್ಣವಾಗಿ ಅಲ್ಲದಿದ್ದರೂ, ಕನಿಷ್ಠ ಅರಿವಂತೂ ಇದ್ದೇ ಇರುತ್ತದೆ.
ಅದೇ ಮನಸ್ಸಿನ ಬಗ್ಗೆ? ಹಲ್ಲಿನ ಬಗ್ಗೆ, ದೇಹದ ಬಗ್ಗೆ ಮಕ್ಕಳಿಗೆ ಕಲಿಸುವ, ನೀರಿನ ಬಗ್ಗೆ - ಆಹಾರದ ಬಗ್ಗೆ ಎಚ್ಚರ ವಹಿಸುವ ನಾವು ಮನಸ್ಸಿನ ಬಗ್ಗೆ ಅದೇ ಎಚ್ಚರ ವಹಿಸಬೇಕಾದ ಆವಶ್ಯಕತೆಯಿದೆಯೆ? ಮನಸ್ಸಿಗೆ ‘ಗಾಯವಾದರೆ’ ಮಾಡಬೇಕಾದ್ದೇನು? ದೇಹಕ್ಕೆ ಗಾಯವಾದರೆ ಸೋಂಕಾಗದಂತೆ ಪ್ರಥಮ ಚಿಕಿತ್ಸೆ ಮಾಡಿದಂತೆ ಮನಸಿಗೂ ‘ಗಾಯ’ವಾದಾಗ ಪ್ರಥಮ ಚಿಕಿತ್ಸೆ ಅಗತ್ಯವೆ, ಅಂಥ ಪ್ರಥಮ ಚಿಕಿತ್ಸೆ ಇದೆಯೆ?
ದೇಹಕ್ಕೆ ಗಾಯಗಳಾದಂತೆ ಮನಸ್ಸಿಗೂ ‘ಗಾಯ’ಗಳಾಗುತ್ತವೆ. ಹಾಗೆ ನೋಡಿದರೆ ದೇಹಕ್ಕಿಂತ ಮನಸ್ಸಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚೇ. ವೈಫಲ್ಯ, ತಿರಸ್ಕಾರ, ಒಂಟಿತನ ಇವು ನಾವೆಲ್ಲರೂ ಎದುರಿಸುವ ಸಾಮಾನ್ಯ ಗಾಯಗಳು. ದೇಹಕ್ಕೆ ಆಗುವ ತರಚುಗಾಯಗಳಂತೆ! ಸೋಂಕು ಉಂಟಾಗುವ ಸಾಧ್ಯತೆಯಿಂದ ಇವನ್ನು ನಾವು ಅಲಕ್ಷಿಸುವುದಿಲ್ಲವಷ್ಟೆ. ಹಾಗೆಯೇ ವೈಫಲ್ಯ, ತಿರಸ್ಕಾರ, ಒಂಟಿತನಗಳೂ ಅಷ್ಟೆ.
ಅವುಗಳನ್ನು ನಾವು ನಿರ್ಲಕ್ಷಿಸಿದರೆ ನಮ್ಮ ಜೀವನದ ಮೇಲೆ ಅವು ಗುರುತರ ಪರಿಣಾಮವನ್ನುಂಟುಮಾಡಬಲ್ಲವು. ವೈಜ್ಞಾನಿಕವಾಗಿ ಇವುಗಳಿಗೆ ಪ್ರಥಮ ಚಿಕಿತ್ಸೆ ನೀಡುವ, ಮಾಯುವಂತೆ ಮಾಡುವ ಹಲವು ವಿಧಾನಗಳನ್ನು ಸಂಶೋಧನೆಗಳೇನೋ ತೋರಿಸಿವೆ. ಆದರೆ ‘ಪಾಸಿಟಿವ್ ಥಿಂಕಿಂಗ್’ ಎನ್ನುವುದನ್ನು ಪಠಿಸುವುದನ್ನು ಬಿಟ್ಟರೆ, ನಾವು ಇಂತಹ ಗಾಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಅಂದರೆ ‘ಓ ನಿನಗೆ ಮನಸ್ಸಿಗೆ ಬೇಸರವೆ? ಅದೆಲ್ಲಾ ಬಿಡು, ಸ್ವಲ್ಪ ಧೈರ್ಯ ತೆಗೆದುಕೋ, ಎಲ್ಲಾ ಸರಿ ಹೋಗುತ್ತದೆ’ ಎನ್ನುತ್ತೇವೆ. ಅದೇ ಯಾರೋ ಒಬ್ಬರು ಕಾಲು ಮುರಿದುಕೊಂಡರೆ? ‘ಏ ಸುಮ್ಮನೇ ನಡೆ, ಸ್ವಲ್ಪ ಧೈರ್ಯ ತಂದುಕೋ, ಗಟ್ಟಿ ಮನಸ್ಸು ಮಾಡಿ ನಡೆದು ಬಿಡು’ ಎಂದರೆ? ಕಾಲು ಮುರಿದವನು ಇನ್ನೂ ಎದ್ದು ಬರುವಷ್ಟು ಶಕ್ತಿಯಿದ್ದರೆ ನಮ್ಮ ಕಾಲು ಮುರಿದುಕೊಳ್ಳುತ್ತಾನೆ, ಅಷ್ಟೆ.
ವೈಜ್ಞಾನಿಕ ಸಂಶೋಧನೆಗಳು ದೇಹ ಮತ್ತು ಮನಸ್ಸು ಅನ್ಯೋನ್ಯ, ದೇಹವನ್ನು ಮಾನಸಿಕವಾಗಿ, ಮನಸ್ಸನ್ನು ದೈಹಿಕವಾಗಿ ನೋಡಬೇಕಾದ ಅಗತ್ಯ ಇದೆ ಎಂಬ ಅಂಶಗಳನ್ನು ಇಂದಿನ ಜಗತ್ತಿಗೆ ವಿಶೇಷವಾಗಿ ಒತ್ತಿ ಹೇಳುತ್ತಿವೆ. ಅವುಗಳನ್ನು ಹಲವು ಸಂಶೋಧನೆಗಳಿಂದ ದೃಢಪಡಿಸಿಯೂ ಇವೆ. ಮನಸ್ಸಿನ ಗಾಯಗಳ ‘ಪ್ರಥಮ ಚಿಕಿತ್ಸೆ’ ಕೇವಲ ಮಾನಸಿಕ ರೋಗಗಳು ಬರದಿರುವಂತೆ ಅಷ್ಟೇ ಅಲ್ಲ, ದೈಹಿಕ ರೋಗಗಳು ಬರದಿರುವಂತೆ ಮಾಡುವುದಕ್ಕೂ ಉಪಯುಕ್ತ.
ಆತ್ಮೀಯರೊಬ್ಬರ ಫೋನ್‌ಗೆ ಕಾಯುತ್ತಿದ್ದೇವೆ, ಎಂದುಕೊಳ್ಳಿ, ಎಷ್ಟೊತ್ತಾದರೂ ಅವರು ಫೋನ್ ಮಾಡಲಿಲ್ಲ ಎಂದರೆ ಹೆಚ್ಚಿನವರ ಯೋಚನೆ ಏನು? ಅವರು ಏಕೆ ಮಾಡಲಿಲ್ಲ, ನಮ್ಮ ಫೋನ್ ಏಕೆ ತೆಗೆದುಕೊಳ್ಳಲಿಲ್ಲ, ಎಂದರೆ ಅವರಿಗೆ ನಮ್ಮ ಬಳಿ ಮಾತನಾಡುವುದೇ ಇಷ್ಟವಿಲ್ಲ ಇತ್ಯಾದಿ ಇತ್ಯಾದಿ. ಇವೆಲ್ಲವೂ ನಮ್ಮ ಬಗೆಗಿನ ಅವರ ‘ನಿರ್ಲಕ್ಷ್ಯ’, ‘ಇಷ್ಟವಿಲ್ಲದಿರುವುದರ’ ಸುತ್ತಲೇ ಗಿರಕಿ ಹೊಡೆಯುತ್ತವೆ.
ಈ ರೀತಿ ಯೋಚನೆ ಮಾಡುವವರೇ ಹೆಚ್ಚು. ಇದು ತೋರಿಸುವುದು ನಮ್ಮಲ್ಲಿನ ‘ಒಂಟಿತನ’ವನ್ನು. ‘ಅಯ್ಯೋ ನಾನು ತುಂಬ ಜನರ ಜೊತೆ ಕೆಲಸ ಮಾಡುತ್ತೇನೆ, ಮನೆಯಲ್ಲಿ ಐದು ಜನ ಇರುತ್ತೇವೆ ನಾನೆಂಥ ಒಂಟಿ’ ಎನ್ನುತ್ತೀರಾ? ‘ಒಂಟಿತನ’ ಭಾವನಾತ್ಮಕ ಆಯಾಮದಲ್ಲಿಯೂ ಸಾಧ್ಯವಿದೆ. ಅಂದರೆ ಬೇರೆಲ್ಲವನ್ನೂ ಮಾತನಾಡಿದರೂ, ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲಾಗದ ‘ಒಂಟಿತನ’.
‘ಒಂಟಿತನ’ದ ಬಗೆಗಿನ ಸಂಶೋಧನೆಗಳ ಫಲಿತಗಳನ್ನು ನೋಡಿದರೆ ತಲೆತಿರುಗಿ ಬೀಳುವಷ್ಟು ಭಯವಾಗುತ್ತದೆ! ಒಂಟಿತನ ನಮ್ಮನ್ನು ಕೊಲ್ಲಬಹುದು! ದೀರ್ಘಕಾಲದ ಒಂಟಿತನ ಸಾವಿನ ಸಾಧ್ಯತೆಯನ್ನು 14ರಷ್ಟು ಹೆಚ್ಚು ಮಾಡುತ್ತದೆ! ರಕ್ತದೊತ್ತಡ, ಕೊಲೆಸ್ಟರಾಲ್ ಎಲ್ಲವನ್ನೂ ಹೆಚ್ಚಿಸುತ್ತದೆ. ನಮ್ಮ ರೋಗನಿರೋಧಕತ್ವ ಶಕ್ತಿಯನ್ನೇ ಕ್ಷೀಣಗೊಳಿಸಿ, ಎಲ್ಲಾ ವಿಧದ ಕಾಯಿಲೆಗಳಿಗೆ ನಮ್ಮನ್ನು ತೆರೆಯಬಹುದು.
ಚುಟುಕಾಗಿ ಹೇಳಬೇಕೆಂದರೆ ಸಿಗರೇಟಿನ ದೀರ್ಘ ಕಾಲದ ಸೇವನೆಯಿಂದ ಏನೆಲ್ಲ ಪರಿಣಾಮಗಳು ಉಂಟಾಗಬಹುದೋ ಅವೆಲ್ಲವನ್ನೂ ‘ಒಂಟಿತನ’ವೂ ಉಂಟುಮಾಡಬಹುದು. ಸಿಗರೇಟು ಪ್ಯಾಕೆಟ್‌ಗಳ ಮೇಲೆ ‘ಇದರಿಂದ ಮಾರಕ ಪರಿಣಾಮಗಳುಂಟಾಗುತ್ತವೆ’ ಎಂಬುದು ಅಚ್ಚಾಗಿರುತ್ತದೆ. ಸ್ವಲ್ಪ ಮಟ್ಟಿಗಾದರೂ ನಮಗೆ ಗೊತ್ತಿರುತ್ತದೆ. ‘ಒಂಟಿತನ’ದ ಬಗ್ಗೆ?
ದೇಹದ ಸ್ವಚ್ಛತೆಯ ಬಗ್ಗೆ ನಾವು ಬಹಳ ಮಾತನಾಡುತ್ತೇವೆ. ಅದೇ ಭಾವನಾತ್ಮಕ ಸ್ವಚ್ಛತೆಯ ಬಗ್ಗೆ? Emotional hygiene - ಭಾವನಾತ್ಮಕ ಸ್ವಚ್ಛತೆಯ ಬಗೆಗೆ ಮಾತನಾಡುವುದು ಸಾಧ್ಯವಾಗುವುದು ಭಾವನಾತ್ಮಕ ‘ಗಾಯ’ ನಮಗೆ ಆಗುತ್ತದೆ ಎಂಬ ‘ಭಯ’ ನಮಗಿದ್ದರೆ, ಅಥವಾ ಗಾಯವಾದಾಗ ‘ನನಗೆ ಗಾಯವಾಗಿದೆ’ ಎಂಬುದನ್ನು ಗುರುತಿಸಲು ಬಂದರೆ. ಒಂಟಿತನ, ವೈಫಲ್ಯ, ತಿರಸ್ಕಾರಗಳು ನಮ್ಮ ಸ್ಪಷ್ಟ ಚಿಂತನೆಯನ್ನು ಮಸುಕು ಮಾಡುತ್ತವೆ. ನಮ್ಮ ಗ್ರಹಿಕೆಯ ಸಾಮರ್ಥ್ಯವೂ ದುರ್ಬಲತೆ-ತಪ್ಪುಗ್ರಹಿಕೆಗಳಿಗೆ ಗುರಿಯಾಗುತ್ತವೆ.
ವೈಫಲ್ಯದ ಬಗ್ಗೆಯೂ ಇದು ಸತ್ಯ. ವೈಫಲ್ಯಕ್ಕೆ ನಮ್ಮ ಮನಸ್ಸು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಅರಿವು ನಮಗಿರಬೇಕು. ಮನಸ್ಸು ‘ಈ ಕೆಲಸ ಸಾಧ್ಯವೇ ಇಲ್ಲ’ ಎಂದು ಒಪ್ಪಿಕೊಂಡು ಬಿಟ್ಟಿತೆನ್ನಿ. ಆ ರೀತಿಯ ಯಾವುದೇ ಕೆಲಸವನ್ನು ಮತ್ತೆ ಪ್ರಯತ್ನಿಸಲೂ ನೀವು ಕೈಹಾಕಲು ಹೆದರುತ್ತೀರಿ. ಹೆದರುವುದಷ್ಟೇ ಅಲ್ಲ, ದಿವ್ಯ ನಿರ್ಲಕ್ಷ್ಯ ತಾಳುತ್ತೀರಿ! ಜೊತೆಗೇ ಆ ಕೆಲಸದಲ್ಲಿ ಯಶಸ್ಸು ಸಾಧ್ಯವಾಗದೆಂಬ ದೃಢ ನಂಬಿಕೆಯೂ ನಿಮ್ಮದಾಗುತ್ತದೆ! ಹಾಗಾಗಿಯೇ ಎಷ್ಟೋ ಜನ ತಮ್ಮಲ್ಲಿರುವ ಸಾಮರ್ಥ್ಯಕ್ಕಿಂತ ಕಡಿಮೆ ಕ್ಷಮತೆಯ ಕೆಲಸಗಳನ್ನು ಮಾಡುವುದು ಸಾಮಾನ್ಯ ಎನಿಸುತ್ತದೆ.
ಎಂದೋ ಆದ ಒಂದು ವೈಫಲ್ಯ ಅವರ ‘ನನಗೆ ಈ ಕೆಲಸ ಬರುವುದಿಲ್ಲ’ ಎಂಬ ಭಾವನೆಯನ್ನು ಬೆಳೆಸಿರುತ್ತದೆ. ಅಂದರೆ ನಮ್ಮ ಮನಸ್ಸು ಮತ್ತು ಭಾವನೆಗಳನ್ನು ನಾವು ‘ವ್ಯಕ್ತಿ’ಗಳಂತೆ ಭಾವಿಸಿ ನೋಡಿದರೆ ಅವುಗಳು ಯಾವಾಗಲೂ ನಮ್ಮ ‘ಬೆಂಬಲ’ ಎನ್ನುವುದಕ್ಕಿಂತ ‘ಮೂಡಿ’ ಸ್ನೇಹಿತರು ಎಂಬುದು ಸ್ಪಷ್ಟವಾಗುತ್ತದೆ. ಒಂದು ಕ್ಷಣ ನಮಗೆ ಸಂಪೂರ್ಣ ಬೆಂಬಲ ನೀಡಿದರೆ, ಮರುಕ್ಷಣ ಕಿರಿಕಿರಿ ಮಾಡುವ ರೀತಿ. ನಮ್ಮ ‘ತಿರಸ್ಕಾರ’ದ ಭಾವನೆಗಳನ್ನು ಸ್ವಲ್ಪ ಹುಡುಕಿ ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಪಾರ್ಟಿಯೊಂದಕ್ಕೆ ಡ್ರೆಸ್ ಮಾಡಿಕೊಂಡು ಹೋಗಿದ್ದೇವೆ ಎನ್ನಿ. ಅಲ್ಲಿ ಯಾರೋ ನಮ್ಮೊಡನೆ ಮಾತನಾಡಲಿಲ್ಲ, ಅಥವಾ ವ್ಯಂಗ್ಯವಾಗಿ ‘ಒಂಥರಾ’ ನಕ್ಕರು. ಮನೆಗೆ ಬಂದ ಮೇಲೆ ಬೇಸರ. ಯಾರದ್ದೋ ‘ನಕ್ಕ’, ‘ಮಾತನಾಡಿದ’ ನಡವಳಿಕೆಗಿಂತ ನಮಗೇ ನಾವು ಅಂದುಕೊಳ್ಳುವ ‘ಈ ರೀತಿ ಡ್ರೆಸ್ ಮಾಡಿಕೊಂಡು ಹೋದರೆ ಇನ್ನೇನು ಮಾಡ್ತಾರೆ, ನಾನು ಚೆನ್ನಾಗಿಯೇ ಕಾಣ್ತಿರಲಿಲ್ಲ’, ಇತ್ಯಾದಿ ಇತ್ಯಾದಿ ನಮ್ಮದೇ ದೋಷಗಳ ಪಟ್ಟಿ ದೊಡ್ಡದಾಗುತ್ತದೆ.
ನಾವು ದೇಹಕ್ಕೆ ಆದ ಗಾಯವನ್ನು ಉದ್ದೇಶಪೂರ್ವಕವಾಗಿ ಮತ್ತಷ್ಟು ದೊಡ್ಡದು ಮಾಡಿಕೊಳ್ಳುವುದಿಲ್ಲ! ಆದರೆ ಮನಸ್ಸಿನ ಗಾಯದ ವಿಷಯದಲ್ಲಿ ನಾವಾಗಿಯೇ ಅದನ್ನು ಮತ್ತಷ್ಟು ಆಳವಾಗಿ, ದೊಡ್ಡದಾಗಿ ಮಾಡುತ್ತೇವೆ! ಕೈ ಮೇಲೆ ಗಾಯವಾದಾಗ ಒಂದು ಚಾಕು ತೆಗೆದುಕೊಂಡು ‘ನೋಡೋಣ ಇನ್ನೆಷ್ಟು ಆಳವಾಗಿ ಇರಿಯಲು ಸಾಧ್ಯವಿದೆ’ ಎಂದು ಪ್ರಯತ್ನ ಪಟ್ಟಂತೆ. ಇದಕ್ಕೆ ಕಾರಣ ‘ಭಾವನಾತ್ಮಕ ಸ್ವಚ್ಛತೆ’ - ಬಗೆಗಿನ ನಮ್ಮ ಅಜ್ಞಾನ.
ದನಗಳು ತಿಂದ ಆಹಾರವನ್ನು ವಿರಾಮದ ಸಮಯದಲ್ಲಿ ಮೆಲುಕು ಹಾಕಿ rumination ಮೂಲಕ ತಿನ್ನುವುದು ಗೊತ್ತಿದೆಯಷ್ಟೆ. ಅದೇ ರೀತಿ ಮೆಲುಕು ಹಾಕುತ್ತಾ ನಮ್ಮ ಮಾನಸಿಕ ಗಾಯಗಳನ್ನು ಆಳವಾಗಿಸಿಕೊಳ್ಳುವುದು ಒಂದು ಕೆಟ್ಟ ಅಭ್ಯಾಸ. ಪ್ರೊಫೆಸರ್ ತರಗತಿಯಲ್ಲಿ ಬೈದರು, ಅಪ್ಪ/ಅಮ್ಮ/ಗಂಡ/ಹೆಂಡತಿಯ ಜಗಳ, ಬಾಸ್ ಆಫೀಸಿನಲ್ಲಿ ನಿಮ್ಮ ಸಾಮರ್ಥ್ಯದ ಬಗ್ಗೆ ಹೇಳಿದ್ದು, ಒಂದೇ, ಎರಡೇ, ಯಾವುದನ್ನೂ ಮತ್ತೆ ಮತ್ತೆ ಮೆಲುಕು ಹಾಕಿ ಬೇಸರಪಡಲು, ಪಡುತ್ತಲೇ ಇರಲು ಸಾಧ್ಯವಿದೆ! ಈ ಅಭ್ಯಾಸ ದಾರಿ ಮಾಡುವುದು ಖಿನ್ನತೆ, ಮದ್ಯವ್ಯಸನ, ಇಂಥ ಕಾಯಿಲೆಗಳಿಗೆ, ದೈಹಿಕ ಕಾಯಿಲೆಗಳ ಉದ್ದ ಪಟ್ಟಿಗೆ.
ದೈಹಿಕ ಸ್ವಚ್ಛತೆಯ ಬಗೆಗಿನ ವೈಜ್ಞಾನಿಕ ಆಂದೋಲನ ಆರಂಭವಾಗಿದ್ದು ನೂರು ವರುಷಗಳ ಹಿಂದೆ. ಆಯುಷ್ಯ ದಶಕಗಳಲ್ಲಿ ಶೇಕಡ 50ರಷ್ಟು ಹೆಚ್ಚಾಗಿದೆ! ಮೊದಲು 60 ವರ್ಷಕ್ಕೆ ‘ವಯಸ್ಸಾ’ದವರು ಎಂದು ನಾವು ಹೇಳುತ್ತಿದ್ದ ರೂಢಿ ಈಗ 80 ವರ್ಷಕ್ಕೆ ಬದಲಾಗಿದೆ. ಆಯುಷ್ಯ ಹೆಚ್ಚಿದಂತೆ ಜೀವನದ ಗುಣಮಟ್ಟ ಹೆಚ್ಚಾಗಬೇಕೆಂದರೆ ‘ಭಾವನಾತ್ಮಕ ಸ್ವಚ್ಛತೆ’ಯ ಬಗೆಗೂ ನಾವು ಗಮನ ಹರಿಸಲೇಬೇಕು.
ಹೃದಯಾಘಾತದಿಂದ ಸಾಯುವವರ, ಪಾರ್ಶ್ವವಾಯುವಿನಿಂದ ಮರಣಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಬದುಕುಳಿದವರ ಜೀವನದ ಗುಣಮಟ್ಟ? ದುಬಾರಿಯಲ್ಲದ, ಖರ್ಚೇ ಆಗದ ಸುಲಭ ಜೀವನಶೈಲಿ, ಯೋಚನಾರೀತಿಗಳಿಂದ ಅದನ್ನು ಹೆಚ್ಚಿಸಬಹುದು. ಮೆಲುಕು ಹಾಕುವ ದುರಭ್ಯಾಸದಿಂದ ಹೊರಬನ್ನಿ. ಒಂದೆರಡು ನಿಮಿಷಗಳಾದರೂ ಬೇರೆ ಕೆಲಸದೆಡೆ ಮನಸ್ಸು ತಿರುಗಿಸಿ. ವೈಫಲ್ಯದಿಂದ ಮತ್ತೆ ಪ್ರಯತ್ನಿಸದಿರಬೇಡಿ. ಒಂಟಿತನವನ್ನು ದೂರತಳ್ಳಿ. ಮನಸ್ಸಿಗೆ ‘ಗಾಯ’ವಾದಾಗ ಆತ್ಮೀಯ ಸ್ನೇಹಿತನ ರೀತಿಯಲ್ಲಿ ಅದರ ಆರೈಕೆ ಮಾಡಿ ‘ಗಾಯ’ ಆಳವಾಗದಂತೆ, ‘ಸೋಂಕು’ ಬಾರದಂತೆ ಮನಸ್ಸನ್ನು ಸ್ವಚ್ಛವಾಗಿರಿಸಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.