ಬೆಂಗಳೂರು ರಾಜ್ಯದ ರಾಜಧಾನಿ ಮಾತ್ರವಲ್ಲ ಮಧುಮೇಹಿಗಳ ರಾಜಧಾನಿಯೂ ಆಗಿಬಿಟ್ಟಿದೆ! ಶೇಕಡಾ 13ರಷ್ಟು ಬೆಂಗಳೂರಿಗರು ಮಧುಮೇಹಿಗಳು. ಈ ದಾಖಲೆ ಇಷ್ಟಕ್ಕೇ ನಿಂತಿಲ್ಲ, ಇನ್ನೊಂದು ದೊಡ್ಡ ದಾಖಲೆಯೂ ನಮ್ಮ ಹೆಸರಿನಲ್ಲಿ ಇದೆ. ಅದೆಂದರೆ ಭಾರತ ಇಡೀ ಜಗತ್ತಿಗೇ ಮಧುಮೇಹದ `ರಾಜಧಾನಿ~!
2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಮಧುಮೇಹ ಒಕ್ಕೂಟದ ಸಮ್ಮೇಳನದಲ್ಲಿ ದೇಶಕ್ಕೆ ಈ ಹಣೆಪಟ್ಟಿ ಅಂಟಿಕೊಂಡಿದೆ. 2025ರ ವೇಳೆಗೆ, ಜನಸಂಖ್ಯಾ ಏರಿಕೆ, ನಗರೀಕರಣ, ವ್ಯಾಯಾಮವಿಲ್ಲದ ಜೀವನಶೈಲಿ, ಸರಿಯಿಲ್ಲದ ಆಹಾರ ಕ್ರಮಗಳಿಂದ ನಮ್ಮ ದೇಶದ ಮಧುಮೇಹಿಗಳ ಅಂದಾಜು ಸಂಖ್ಯೆ 330 ದಶಲಕ್ಷ!
ಸರಿಯಾದ ಸಮಯಕ್ಕೆ ಆಹಾರ ಸೇವಿಸದ, ಕೊಬ್ಬು- ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳನ್ನೇ ಆಗಾಗ್ಗೆ ಸೇವಿಸುವ, ಯಾವುದೇ ವ್ಯಾಯಾಮ ಇಲ್ಲದ, ಒತ್ತಡಮಯ ಬದುಕಿನ ಯುವಕ- ಯುವತಿಯರಲ್ಲಿ ಮಧುಮೇಹದ ಪ್ರಮಾಣ ಹೆಚ್ಚುತ್ತಿದೆ. ದೊಡ್ಡ ಆಸ್ಪತ್ರೆಗಳಿಗೆ ದಿನನಿತ್ಯ ಬರುವ ಮಧುಮೇಹಿಗಳಲ್ಲಿ ಬಹುತೇಕರು 35 ವರ್ಷಕ್ಕಿಂತ ಕೆಳಗಿನವರು.
`ಅಯ್ಯೋ, ಈ ಅಂಕಿ-ಅಂಶಗಳೇನಾದರೂ ಇರಲಿ ಬಿಡಿ, ಬೇರೆ ಯಾರಿಗಾದ್ರೂ ಬರಬಹುದೇನೋ, ಆದ್ರೆ ನಮಗೆ ಮಾತ್ರ ಸಕ್ಕರೆ ಕಾಯಿಲೆ ಬರಲು ಸಾಧ್ಯವೇ ಇಲ್ಲ~ ಎಂದು ಈಗ ಯಾರೊಬ್ಬರೂ ಮೂಗೆಳೆಯುವಂತಿಲ್ಲ. ಆನುವಂಶಿಕವಾಗಿ ಮಧುಮೇಹ ನಿಮ್ಮ ಕುಟುಂಬದಲ್ಲಿ ಇರದಿದ್ದರೂ ಸಕ್ಕರೆ ಕಾಯಿಲೆ ಬರಬಹುದು. ನಾವು `ಮನುಷ್ಯರು~ ಮತ್ತು `ಬದುಕಿದ್ದೇವೆ~ ಎಂಬ ಎರಡು ಕಾರಣಗಳು ಯಾವುದೇ ಕಾಯಿಲೆ ಬರಲು ಸಾಕಷ್ಟೆ!
ಆದರೆ ಹಾಗೆಂದು ನಾವು ಗಾಬರಿ ಬೀಳಬೇಕಾದ ಪ್ರಮೇಯವೇನೂ ಇಲ್ಲ. ಮಧುಮೇಹದಿಂದ ಬರುವ ಕಣ್ಣು- ನರ- ಮೂತ್ರಪಿಂಡ- ಅಲ್ಸರ್‌ನಂತಹ ತೊಂದರೆಗಳು ತಲೆದೋರುವುದು ರೋಗ ನಿಯಂತ್ರಣದಲ್ಲಿ ಇಲ್ಲದಿದ್ದಾಗ ಮಾತ್ರ. ನನಗೆ ಮಧುಮೇಹ ಇರಬಹುದು, ಅದು ಗೊತ್ತಾಗಿಬಿಟ್ಟರೆ ಏನು ಮಾಡುವುದು ಎಂದು ರಕ್ತಪರೀಕ್ಷೆ ಮಾಡಿಸಿಕೊಳ್ಳಲು ಹೆದರುತ್ತಾ ವೈದ್ಯರ ಬಳಿಗೆ ತಲೆಹಾಕದ ಸಾಕಷ್ಟು ಜನರಿದ್ದಾರೆ. ಯಾವುದೇ ಕಾಯಿಲೆಯಂತೆ ಮಧುಮೇಹಕ್ಕೂ ಶೀಘ್ರ ಪತ್ತೆಹಚ್ಚುವಿಕೆ, ಸರಿಯಾದ ಚಿಕಿತ್ಸೆ ಪರಿಣಾಮಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.