ADVERTISEMENT

ಸುಲಭವಲ್ಲ, ಆದರೂ ಬದುಕಬಲ್ಲೆ...

ಮಂಜುಳಾ ರಾಜ್
Published 30 ನವೆಂಬರ್ 2012, 20:33 IST
Last Updated 30 ನವೆಂಬರ್ 2012, 20:33 IST

ನೋಡಲು ಸಣ್ಣ ದೇಹಾಕೃತಿ, ವಯಸ್ಸು 20ರ ಆಸುಪಾಸಿರಬಹುದು ಎಂದುಕೊಂಡೆ. ಆದರೆ ಅವಳಿಗೆ 33 ವರ್ಷ, ಮೂವರು ಮಕ್ಕಳು.

ಅವಳು ಹೇಳುತ್ತಾ ಹೋದಳು: `ಒಮ್ಮೆ ಜ್ವರ ಬಂದು ತುಂಬಾ ನಿಶ್ಶಕ್ತಿ ಆಯಿತು, ಕೂದಲು ಉದುರಿತು, ಇನ್ನೇನು ನಾನು ಸಾಯುವುದು ಖಚಿತ ಎನಿಸಿತು. ಆದರೆ ಗಂಡನಿಗೆ ನನ್ನನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಆಸೆ. ಯಾವ್ಯಾವುದೋ ಔಷಧಿ ತೆಗೆದುಕೊಂಡು ಆರು ತಿಂಗಳು ಕಾಲ ಕಳೆದೆ.

ಇದ್ದ ಹಣವೆಲ್ಲಾ ಖಾಲಿ. ಕೊನೆಗೆ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್.ಐ.ವಿ ಪಾಸಿಟಿವ್ ಎಂದು ಗೊತ್ತಾಯಿತು. ನಾನೇನೂ ತಪ್ಪು ಮಾಡಿಲ್ಲ, ಗಂಡನನ್ನು ಬಿಟ್ಟರೆ ಯಾರ ಸಂಪರ್ಕವನ್ನೂ ಮಾಡಿಲ್ಲ, ನನಗೇಕೆ ಇದು ಬಂದಿತೆನ್ನುವುದು ಗೊತ್ತಾಗಲಿಲ್ಲ. ಗಂಡನಿಗೆ ಪರೀಕ್ಷೆ ಮಾಡಿಸಿದರೆ ಅವರಿಗೂ ಪಾಸಿಟಿವ್ ಎಂದು ತಿಳಿದುಬಂತು. ಇಬ್ಬರೂ ನೇತ್ರಾವತಿ ನದಿಯಲ್ಲಿ ಮುಳುಗಿ ಸಾಯೋಣ ಎಂದುಕೊಂಡೆವು. ಆದರೆ ಮಕ್ಕಳ ಭವಿಷ್ಯ ಯೋಚಿಸಿ ಜೀವ ಹಿಡಿದುಕೊಂಡೆವು.

ನೆಂಟರಿಷ್ಟರ ಚುಚ್ಚು ಮಾತಿಗೆ ಹೆದರಿ ಹೊರಗೇ ಹೋಗುತ್ತಿರಲಿಲ್ಲ. ಮನೆಯಲ್ಲಿ ಪೇಪರ್ ಓದಿಕೊಂಡು ಕಾಲ ಕಳೆಯುತ್ತಿದ್ದೆ. ಟಿ.ವಿ ಕೊಳ್ಳಲು ನಮಗೆ ಹಣವಾದರೂ ಎಲ್ಲಿಂದ ಬರಬೇಕು. ಅಂತೂ ಇಂತೂ ಟಿ.ಬಿ ವಾಸಿಯಾಯಿತು. ಆಗ ಒಂದು ರೀತಿ ಧೈರ್ಯ ಬಂದು ಎಚ್.ಐ.ವಿ.ಗೂ ಚಿಕಿತ್ಸೆ ತೆಗೆದುಕೊಳ್ಳುವ ಮನಸ್ಸು ಬಂತು. ಮಕ್ಕಳಿಗೋಸ್ಕರ ಬದುಕಬೇಕೆನ್ನುವ ಆಸೆ. ಮಗಳು ವಯಸ್ಸಿಗೆ ಬಂದಿದ್ದಾಳೆ, ಮದುವೆ ಮಾಡಿ ಅವಳಿಗೊಂದು ದಾರಿ ತೋರಿಸುವಾ ಎಂದುಕೊಂಡೆ'

`ಆಸ್ಪತ್ರೆಗೆ ಹೋಗಿ ಬರಲು ಬಸ್ಸಿಗೆ, ಊಟಕ್ಕೂ ಹಣವಿರಲಿಲ್ಲ. ಕಷ್ಟಪಟ್ಟು ಅಲ್ಲಿಗೆ ಹೋದಾಗ ಕೌನ್ಸೆಲಿಂಗ್ ಮಾಡಿದರು. ನಾನು ಬದುಕಬೇಕು, ಔಷಧಿ ತೆಗೆದುಕೊಳ್ಳಬೇಕು, ನನಗೊಂದು ಕೆಲಸ ಕೊಡಿ ಎಂದು ಕೇಳಿದಾಗ ಅರುಣೋದಯದ ಮಾಲತಿಯವರು ಅಲ್ಲೊಂದು ಕೆಲಸ ಕೊಟ್ಟರು. ಮಕ್ಕಳ ವಿದ್ಯಾಭ್ಯಾಸ, ನನಗೊಂದು ಹೊಲಿಗೆ ಯಂತ್ರ, ಎಲ್ಲ ರೀತಿಯ ಸಹಾಯ ದೊರಕಿ, ನಾನೀಗ ಧೈರ್ಯದಿಂದ ಜೀವನ ನಡೆಸುತ್ತಿದ್ದೇನೆ. ನನ್ನ ಮಕ್ಕಳಿಗೆಲ್ಲಾ ನೆಗೆಟಿವ್.

ಸಂಸಾರದಲ್ಲಿ ಈಗ ಎಲ್ಲರೂ ಚೆನ್ನಾಗಿದ್ದಾರೆ. ಅನೇಕ ಬಾರಿ ಮಗಳು ಧೈರ್ಯ ತುಂಬುತ್ತಾಳೆ. ನನ್ನ ಗಂಡನಿಗೆ ಅನಾರೋಗ್ಯವಾದರೂ ನಾನೇ ಸಂಸಾರ ನಡೆಸುತ್ತೇನೆ. ಈಗ ನನಗೆ ಭಯವಿಲ್ಲ. ಸರಿಯಾದ ಮಾಹಿತಿ ಸಿಗದಿದ್ದಾಗ ಸಾಯಬೇಕು ಎನಿಸುತ್ತಿತ್ತು, ಈಗ ನನ್ನಂಥ ನಾಲ್ಕು ಜನರನ್ನು ಬದುಕಿಸ ಬೇಕೆನ್ನುವುದು ನನ್ನ ಆಸೆ' ಎನ್ನುತ್ತಾಳೆ ಕೃಶಕಾಯದ ದಿಟ್ಟ ಮನಸ್ಸಿನ ಆ ಹೆಣ್ಣು.

ಇಂಥ ಕಥೆಗಳು ನೂರಾರು. ಇಲ್ಲಿ ಗಂಡು ಹೆಣ್ಣೆಂಬ ಭೇದ ಭಾವ ಇಲ್ಲ. ಇಬ್ಬರಿಗೂ ಸೋಂಕು ತಗುಲುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಆದರೆ ಸೋಂಕಿನ ತೀವ್ರತೆ ಮತ್ತು ವ್ಯಾಪಕತೆ ಒಂದೇ ರೀತಿ ಇರುವುದಿಲ್ಲ. ಅದರಲ್ಲೂ ಸೋಂಕಿನೊಡನೆ ಬದುಕುತ್ತಿರುವ ಮಹಿಳೆಯರ ಅಗತ್ಯ ಮತ್ತು ಕಳವಳ ಬೇರೆಯ ರೀತಿಯೇ ಆಗಿರುತ್ತದೆ.

ಒಂದು ಸಮೀಕ್ಷೆಯ ಪ್ರಕಾರ ಎಚ್.ಐ.ವಿ ವ್ಯಾಪಕವಾಗಿ ಹರಡಿರುವ ರಾಜ್ಯಗಳಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದೆ. 10 ವರ್ಷಗಳಿಂದೀಚೆಗೆ ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂತೆಯೇ ಎಚ್.ಐ.ವಿ. ಪಾಸಿಟಿವ್ ಇರುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂಬುದು ನಮಗೆ ಅರ್ಥವಾಗುತ್ತದೆ. ಪ್ರಸವ ಪೂರ್ವ ವೈದ್ಯಕೀಯ ಪರೀಕ್ಷೆಗೆ ಹೋಗುವ ಮಹಿಳೆಯರಲ್ಲಿ ಶೇಕಡಾ 1- 6ರಷ್ಟು ಮಹಿಳೆಯರು ಸೋಂಕಿತರು.

ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ಗಂಡನ ಜೊತೆಗಷ್ಟೇ ಇರುವವರು, ಅರ್ಥಾತ್ ಒಬ್ಬನೇ ಸಂಗಾತಿಯೊಟ್ಟಿಗೆ ಲೈಂಗಿಕ ಸಂಪರ್ಕ ಹೊಂದಿರುವವರು. ಅಂದರೆ ಅವರಿಗೆ ಸೋಂಕು ತಮ್ಮ ಗಂಡಂದಿರಿಂದಲೇ ಬಂದಿದೆ ಎನ್ನುವುದು ಖಚಿತ.`ಈ ಅಂಕಿ ಅಂಶ ನಾವು ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿರುವುದನ್ನು ತೋರಿಸುತ್ತದೆ' ಎನ್ನುತ್ತಾರೆ ಡಾ. ಪದ್ಮಿನಿ ಪ್ರಸಾದ್.

ಮಹಿಳೆಯರಲ್ಲಿ ಸೋಂಕು ಶೀಘ್ರ ಮತ್ತು ತೀವ್ರವಾಗಿ ಹರಡಲು ಕಾರಣ ಸ್ತ್ರೀಯರು ಮತ್ತು ಪುರುಷರಲ್ಲಿನ ದೈಹಿಕ ವ್ಯತ್ಯಾಸಗಳು. ಹೆಣ್ಣಿನ ದೇಹ ರಚನೆ ಅವಳಿಗೆ ಬಹಳ ಬೇಗ ಸೋಂಕು ತಗುಲುವಂತಿದೆ. ಸೋಂಕು ಹೆಣ್ಣಿನಿಂದ ಗಂಡಿಗೆ ತಗಲುವುದಕ್ಕಿಂತ ಗಂಡಿನಿಂದ ಹೆಣ್ಣಿಗೆ ತಗುಲುವ ಸಾಧ್ಯತೆ ಹೆಚ್ಚು. ಅವಳ ಯೋನಿಯ ರಚನಾ ವಿನ್ಯಾಸದಿಂದ ಲೈಂಗಿಕ ಸಂಪರ್ಕದ ನಂತರ ಯಾವುದೇ ಉರಿ, ತುರಿಕೆ ಅಥವಾ ಸೋಂಕಿಗೆ ಅವಳು ಬಹು ಬೇಗ ತುತ್ತಾಗುತ್ತಾಳೆ.

ವಿಶ್ವದಾದ್ಯಂತ 40 ದಶಲಕ್ಷ ಮಂದಿ ಎಚ್.ಐ.ವಿ ಸೋಂಕು ಪೀಡಿತರಿದ್ದಾರೆ. ಅವರಲ್ಲಿ ಶೇಕಡಾ 50ರಷ್ಟು ಮಹಿಳೆಯರು. ಈ ಪ್ರಮಾಣ 1985ರಲ್ಲಿ ಇದ್ದುದಕ್ಕಿಂತ ಮೂರು ಪಟ್ಟು ಹೆಚ್ಚು. ಭಾರತದಲ್ಲಿ  ಎಚ್.ಐ.ವಿ ಸೋಂಕಿತರ ಶೇಕಡಾವಾರು ಲೆಕ್ಕ ಮಾಡಿದಾಗ ಅದರಲ್ಲಿ ಮಹಿಳೆಯರ ಪ್ರಮಾಣವೇ ಹೆಚ್ಚಾಗಿದೆ.

ಸೋಂಕು ತಗುಲಿದ್ದರೂ ಮನಸ್ಸು ಮಾಡಿದರೆ ಸಾರ್ಥಕ ಬದುಕು ಸಾಧ್ಯ ಎಂಬುದನ್ನು ಹಲವರು ಬದುಕಿ ತೋರಿಸುತ್ತಿದ್ದಾರೆ. ನಾಲ್ಕು ಜನರಲ್ಲಿ ನೋವನ್ನು ಹಂಚಿಕೊಂಡಾಗ ಯಾವುದಾದರೂ ಮಾರ್ಗ ದೊರೆಯುತ್ತದೆ. ಮಾಹಿತಿಗೆ, ಸಹಾಯಕ್ಕೆ ಕೊರತೆಯಿಲ್ಲ. ಮಾಧ್ಯಮಗಳಿವೆ, ಬಹಳಷ್ಟು ಸಂಸ್ಥೆಗಳಿವೆ. ಹುಡುಕಿಕೊಂಡು ಹೋದಾಗ ಖಂಡಿತಾ ಸಹಕಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಮಾಜದ ಬಾಧ್ಯತೆಯೂ ಸಾಕಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.