ADVERTISEMENT

ಹೊಂದಾಣಿಕೆ ಎಂಬ ಕಾಣಿಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST

ಹೊಂದಾಣಿಕೆಯು ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಸಂಬಂಧವನ್ನು ಬೆಸೆಯುತ್ತದೆ. ಇದನ್ನು ಮಾತಿನಲ್ಲಿ ಅಥವಾ ಮೌನದ ಮೂಲಕ ವ್ಯಕ್ತಪಡಿಸಬಹುದು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಹೊಂದಾಣಿಕೆ ಎಂಬುದು ಎದುರಿಗೆ ಇರುವವರ ಭಾವನೆ ಹಾಗೂ ಯೋಚನೆಗಳನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ, ಅವರ ಸ್ಥಾನದಲ್ಲಿ ನಿಂತು ಅವರ ಸ್ಥಿತಿಗತಿಗಳನ್ನು ಅವಲೋಕಿಸಲು ಸಹಕರಿಸುತ್ತದೆ. ಸಂಬಂಧಗಳಲ್ಲಿ ಅತಿ ಮಹತ್ವದ ತಳಹದಿ ಹೊಂದಾಣಿಕೆ.

ಹೊಂದಾಣಿಕೆ ಸಂಸಾರದಲ್ಲಿ ಗಂಡಹೆಂಡತಿಯ ನಡುವೆ ಇರಬಹುದು, ಅತ್ತೆ-ಸೊಸೆ, ಅಕ್ಕ- ತಂಗಿ, ಅಣ್ಣ-ತಮ್ಮಂದಿರ ನಡುವೆ ಇರಬಹುದು ಅಥವಾ ಇನ್ಯಾವುದೇ ಸಂಬಂಧಗಳಲ್ಲಿ ಇರಬಹುದು. ಹೊಂದಾಣಿಕೆ ಗುಣ ಇರುವವರು ಮಾತ್ರ  ಬೇರೆಯವರಿಗೂ ಅದರ ಬಗ್ಗೆ ಅರಿವು ಮೂಡಿಸಲು ಸಾಧ್ಯ.

ಮನೋಶಾಸ್ತ್ರದ ಪ್ರಕಾರ, ಹೊಂದಾಣಿಕೆಯ ಗುಣ ಇಲ್ಲದವರು ಮನೋವಿಕಾರಕ್ಕೆ ಒಳಗಾದವರು. ಇದರಲ್ಲಿ  ಸುಮಾರು ಐದು ಘಟ್ಟಗಳಿವೆ. ಒಳ ಅರಿವು- ಇದು ಹೊಂದಾಣಿಕೆಯ ಮೊದಲ ಘಟ್ಟ. ಒಬ್ಬರಿಗೆ ಇತರರ ಭಾವನೆಗಳನ್ನು ಗ್ರಹಿಸುವ ಶಕ್ತಿ ಹೆಚ್ಚಿದ್ದರೆ, ಇನ್ನೊಬ್ಬರಿಗೆ ಅದರ ಅರಿವೇ ಇರುವುದಿಲ್ಲ. ಇದು ನನಗೆ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
 
ಏಕೆಂದರೆ, ನನ್ನ ಅನುಭವದ ಪ್ರಕಾರ ಹೊಂದಾಣಿಕೆಯು ಒಳ ಅರಿವಿನೊಂದಿಗೆ ಹತ್ತಿರವಾದ ಸಂಬಂಧವನ್ನು ಹೊಂದಿದೆ. ಒಳಅರಿವು ಎಂಬುದು ಇನ್ನೊಬ್ಬರ ಮನಃಸ್ಥಿತಿ, ಭಾವ ಹಾಗೂ ಯೋಚನೆಗಳನ್ನು ತಿಳಿದುಕೊಳ್ಳುವ ಶಕ್ತಿಯನ್ನು ಸೂಚಿಸುವುದರೊಂದಿಗೆ ಮುಂದಿನವರ ಭಾವನೆಗಳನ್ನು ಗ್ರಹಿಸಲು ಹಾಗೂ ಗುರುತಿಸಲು ನೆರವಾಗುತ್ತದೆ. ಇದರ ನಂತರದ ಘಟ್ಟ ಸಂಪರ್ಕ.
 
ಹೊಂದಾಣಿಕೆಯು ಕುಟುಂಬ ವರ್ಗದವರ ನಡುವೆ ನಿರಂತರ ಭಾವನಾತ್ಮಕ ಸಂಪರ್ಕವನ್ನು ನಿರ್ಮಿಸುತ್ತದೆ. ಸಂಪರ್ಕ ನಿರ್ವಹಣೆಯ ನಂತರ ಬರುವ ಘಟ್ಟ ಪರಿಗಣಿಸುವಿಕೆ. ಮುಂದಿನವರ ಭಾವನೆಗಳನ್ನು ಪರಿಗಣಿಸುವ ವಿವೇಕತನ ಪ್ರತಿಯೊಬ್ಬರಲ್ಲೂ ಬರಬೇಕು.
 
ಅಲ್ಲದೇ ಅವರ ಭಿನ್ನವಾದ ಯೊಚನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದರ ನಂತರ ಬರುವ ನಾಲ್ಕನೆಯ ಘಟ್ಟ ಮುನ್ಸೂಚನೆ. ನಿಮ್ಮ ಸಂಗಾತಿಯ ಮೇಲೆ ಪ್ರಭಾವ ಬೀರಲು ಹಾಗೂ ಅವರನ್ನು ಬದಲಾಯಿಸಲು ಉತ್ಸುಕರಾಗಿದ್ದಲ್ಲಿ ಅವರ ಯೋಚನೆ, ಭಾವನೆಗಳನ್ನು ಗುರುತಿಸುವ ಶಕ್ತಿ ಮತ್ತು ಪ್ರತ್ಯುತ್ತರದ ಮುನ್ಸೂಚನೆ ನಿಮ್ಮಲ್ಲಿರಬೇಕು. ಹಾಗಿದ್ದಲ್ಲಿ ಮಾತ್ರ ಕೊಂಚ ಮುನ್ನವೇ ಪ್ರತ್ಯುತ್ತರಕ್ಕೆ ಸಿದ್ಧರಾಗಲು ನಿಮಗೆ ಸುಲಭವಾಗುತ್ತದೆ.

ಹೊಂದಾಣಿಕೆಯ ಕೊನೆಯ ಘಟ್ಟ ಪ್ರೇರಣೆ. ನಿಮ್ಮ ಸಂಗಾತಿಯ ಗುರಿ ತಲುಪಲು ಅಥವಾ ಸಾಧನೆಯನ್ನು ತೋರಲು ನಿಮ್ಮ ಪ್ರೇರಣೆ ಅವರಿಗೆ ಅತ್ಯವಶ್ಯಕ. 

 ನಿಮಗೆ ತಿಳಿದ ಹಾಗೆ ಮದುವೆಯ ಮುನ್ನ ಗಂಡು ಹಾಗೂ ಹೆಣ್ಣು ಬೇರೆ ಬೇರೆ ಮನೆತನದಿಂದ ಬಂದಿರುತ್ತಾರೆ. ಇಬ್ಬರ ನಡೆ, ನುಡಿ, ಸಂಸ್ಕೃತಿ, ಆಚಾರ ವಿಚಾರಗಳು ಬೇರೆ ಬೇರೆ. ಬಹುಪಾಲು ಗಂಡಸರು ಮದುವೆಯಾದರೂ ಹುಟ್ಟಿನಿಂದಲೇ ಬೆಳೆದ ಮನೆಯಲ್ಲೇ ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ.

ಹೆಂಡತಿಯೊಂದಿಗೆ ಹೊಸಜೀವನ ಎನ್ನುವುದನ್ನು ಬಿಟ್ಟರೆ ಉಳಿದೆಲ್ಲಾ ಹಳೆಯದೇ. ಆದರೆ ಹೆಣ್ಣು ತನ್ನ ಹೆತ್ತವರು ಹಾಗೂ ಕುಟುಂಬದ ಇತರರನ್ನು ಬಿಟ್ಟು ಗಂಡನ ಮನೆಗೆ ಬಂದಾಗ ಅವಳಿಗೆ ಪ್ರತಿಯೊಂದೂ ಹೊಸದೇ. ಹೊಸ ಜೀವನ, ಹೊಸ ಸಂಸ್ಕೃತಿ, ಹೊಸ ಆಚಾರ-ವಿಚಾರಗಳು, ಹೊಸ ವ್ಯಕ್ತಿಗಳ ಪರಿಚಯ, ಇದೆಲ್ಲಕ್ಕಿಂತ ಹೆಚ್ಚಾಗಿ ಬಾಳ ಸಂಗಾತಿಯಾಗಿ ಬಂದವರೂ ಹೊಸಬರೇ.

 ಮದುವೆಯ ನಂತರ ನಮ್ಮ ಜೀವನ ನಾವು ಯೋಚಿಸಿದ ಅಥವಾ ನಿರ್ಧರಿಸಿದ ಹಾಗೇ ನಡೆಯುತ್ತದೆ ಎಂದು ಭಾವಿಸುವುದು ತಪ್ಪಾಗುತ್ತದೆ. ವಾಸ್ತವವಾಗಿ ಅಲ್ಲಿ ನಡೆಯುವುದೇ ಮತ್ತೊಂದಾಗಿರಬಹುದು. ನಾವು ಅಂದುಕೊಂಡಂತೆ ಎಲ್ಲವೂ ವ್ಯವಸ್ಥಿತವಾಗಿಯೇ ಇರುವುದಿಲ್ಲ. ತಾಳ್ಮೆ, ಬುದ್ದಿವಂತಿಕೆಯಿಂದ ಬದುಕನ್ನು ವ್ಯವಸ್ಥಿತವಾಗಿಡಲು ಪ್ರಯತ್ನಿಸಬೇಕು.

ಹೊಂದಾಣಿಕೆಯನ್ನು ದಾಂಪತ್ಯ ಜೀವನದಲ್ಲಿ ಬೆಳೆಸಿಕೊಂಡರೆ ಸಂಗಾತಿಯನ್ನು ಖಂಡಿಸುವುದು ಕಡಿಮೆಯಾಗುತ್ತದೆ.  ನಿಂದಿಸುವುದು ಹಾಗೂ ದೂರುವಿಕೆಗಳು ದೂರಾಗುತ್ತವೆ, ಭಿನ್ನಾಭಿಪ್ರಾಯಗಳು ಕಡಿಮೆಯಾಗುತ್ತವೆ. ಸಂಬಂಧ ಹಾಗೂ ಒಪ್ಪಂದಗಳನ್ನು ಬಲಪಡಿಸುತ್ತವೆ. ದಾಂಪತ್ಯ ಜೀವನದಲ್ಲಿ ರಮ್ಯತೆಯನ್ನು ತರುವುದರೊಂದಿಗೆ ಕನಸುಗಳು ಗರಿಗೆದರಿ ನಿಲ್ಲುತ್ತವೆ.

 ಅನೇಕ ದಂಪತಿಗಳಿಗೆ ತಮ್ಮ ಭಾವನೆಗಳನ್ನು ಆರೋಗ್ಯಕರ ರೀತಿಯಲ್ಲಿ ಹೇಗೆ ವ್ಯಕ್ತಪಡಿಸಬೇಕು ಎಂಬುದೇ ತಿಳಿದಿರುವುದಿಲ್ಲ. ಕೆಲವರು ನಿರಂತರ ಪ್ರತಿಪಾದಿಸುವುದರಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ. ಇನ್ನು ಕೆಲವರು ತಮ್ಮ ಭಾವನೆಗಳನ್ನು ತಮ್ಮಲ್ಲೇ ಅದುಮಿಕೊಂಡು ಮನಸ್ಸಿನ ಭಾರವನ್ನು ಹೆಚ್ಚಿಸಿಕೊಳ್ಳುತ್ತಾರೆ.
 
ವಾಸ್ತವವಾಗಿ ದಂಪತಿಗಳು ಒಬ್ಬರು ಇನ್ನೊಬ್ಬರ ತಪ್ಪುಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿರುತ್ತಾರೆ ಹೊರತು ಮುಂದಿರುವ ಸಮಸ್ಯೆಗಳನ್ನು ಅಥವಾ ತಪ್ಪುಗಳನ್ನು ಹೇಗೆ ಚರ್ಚಿಸಿ ಸರಿಪಡಿಸಿಕೊಳ್ಳಬೇಕು ಎಂದು ಯೋಚನೆ ಸಹ ಮಾಡುವುದಿಲ್ಲ. ಅದಕ್ಕೆ ಹುಚ್ಚೆದ್ದು ಕುಣಿಯುವ ಸ್ವಾಭಿಮಾನ ಕಾರಣ. ಪರಸ್ಪರ ವಿಚಾರ, ಕಲ್ಪನೆ, ಯೋಜನೆ ಮತ್ತು ಭಾವನೆಗಳನ್ನು ಗೌರವಿಸಿದರೆ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನೂ ಬುಡಸಮೇತ ಕಿತ್ತು ಎಸೆಯಬಹುದು. 

ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಮೂರನೇ ವ್ಯಕ್ತಿ ಇದರಲ್ಲಿ ಮೂಗು ತೂರಿಸಿದಾಗ ಚಿಕ್ಕ ಸಮಸ್ಯೆಗಳೂ ದೊಡ್ಡದಾಗಿ ವಿಚ್ಛೇದನದವರೆಗೂ ಹೋಗುವುದರಲ್ಲಿ ಅನುಮಾನ ಇಲ್ಲ.
 
ಇದಕ್ಕೆ ದಾರಿ ಮಾಡಿಕೊಡದೆ ನಿಮ್ಮ ನಡುವಿನ ಸಮಸ್ಯೆಗಳನ್ನು ನೀವೇ ಕೂತು ಬಗೆಹರಿಸಿಕೊಳ್ಳಿ. ನೆನಪಿರಲಿ, ನಿಮ್ಮ ಸಮಸ್ಯೆಗಳಿಗೆ ಸೂರ್ಯ ಹುಟ್ಟುವುದರ ಒಳಗಾಗಿ ಪರಿಹಾರ ಕಂಡುಕೊಳ್ಳಿ. ಮರುದಿನಕ್ಕೆ ತೆಗೆದುಕೊಂಡು ಹೋದಲ್ಲಿ ನಿಮ್ಮ ನಡುವಿನ ಸಂಬಂಧದ ಕೆಡುಕಿಗೆ ನೀವೇ ದಾರಿ ಮಾಡಿಕೊಟ್ಟಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.