ADVERTISEMENT

ಕೊರೊನಾ ಸಾಂತ್ವನ | ವ್ಯಸನ ಬಿಡಲು ಇದು ಸಕಾಲ

ಡಾ.ಅರುಣ್ ಕಂದಸ್ವಾಮಿ
Published 30 ಏಪ್ರಿಲ್ 2020, 20:00 IST
Last Updated 30 ಏಪ್ರಿಲ್ 2020, 20:00 IST
   

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಡಲಾಗಿರುವ ಲಾಕ್‌ಡೌನ್‌ನಿಂದಾಗಿ ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಲಭ್ಯತೆಯಲ್ಲಿ ದಿಢೀರ್ ಕುಸಿತ ಉಂಟಾಯಿತು. ಮದ್ಯವಂತೂ ಸದ್ಯಕ್ಕೆ ಎಲ್ಲಿಯೂ ಸಿಗುತ್ತಿಲ್ಲ. ಇದು ಮದ್ಯ ವ್ಯಸನಿಗಳಲ್ಲಿ ಹಾಗೂ ಧೂಮಪಾನ ಮಾಡುವವರಲ್ಲಿ ಹಲವಾರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ತಂದೊಡ್ಡಿದೆ.

ದೀರ್ಘಕಾಲದಿಂದ ಮದ್ಯಪಾನ ಮತ್ತು ತಂಬಾಕು ಸೇವನೆ ಮಾಡುವವರು ದಿಢೀರ್ ನಿಲ್ಲಿಸಿದಾಗ ಕಂಡುಬರುವ ‘ಹಿಂದೆಗೆತ’ (ವಿದ್‌ಡ್ರಾವಲ್)ದ ಸಮಸ್ಯೆಗಳೆಂದರೆ ನಿದ್ರಾಹೀನತೆ, ಮೈ-ಕೈ ನಡುಗುವುದು, ಹೃದಯದ ಬಡಿತ ಜಾಸ್ತಿಯಾಗುವುದು, ಡೆಲಿರಿಯಂ (ಗೊಂದಲ, ಭ್ರಮೆ) ಸ್ಥಿತಿಗೆ ಹೋಗುವುದು ಮೊದಲಾದವು. ಇಂತಹ ತೊಂದರೆಗಳು ವಿಪರೀತವಾದಾಗ, ತಕ್ಷಣ ವೈದ್ಯರನ್ನು ಭೇಟಿ ಮಾಡಿ, ಔಷಧೋಪಚಾರ ಮಾಡಿಸಿಕೊಳ್ಳಬೇಕು. ಕೆಲವು ಜನರಲ್ಲಿ ಈ ಹಿಂದೆಗೆತದ ತೊಂದರೆಗಳು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳನ್ನು ತಾವೇ ಪರಿಹರಿಸಿಕೊಳ್ಳಬಹುದು.

ವ್ಯಸನ ಬಿಡಲು ಸರಳೋಪಾಯಗಳು

ADVERTISEMENT

* ಅತಿಯಾದ ಬಯಕೆ (ಕ್ರೇವಿಂಗ್): ಇದು ಅಲೆಯ ಹಾಗೆ ತೀವ್ರತೆ ಹೆಚ್ಚಾಗಿ ಕಡೆಗೆ ತನ್ನಿಂದ ತಾನೆ ಕಡಿಮೆಯಾಗುತ್ತದೆ. ಹೀಗಾಗಿ ಮದ್ಯಪಾನ ಮಾಡುವ ಬಯಕೆಯಾದಾಗ ಬಳಕೆಯನ್ನು ಮುಂದೂಡುವುದು, ತನ್ನಷ್ಟಕ್ಕೆ ಮಾತಾಡುವುದು ಅಥವಾ ತಾವೇ ತಯಾರು ಮಾಡಿದಂಥ ಕಾರ್ಡ್‌ (ಮದ್ಯಪಾನ ಮಾಡುವುದರಿಂದ ಆಗುವ ಹಾನಿ, ಅದೇ ರೀತಿ ಮದ್ಯಪಾನವನ್ನು ನಿಲ್ಲಿಸುವುದರಿಂದ ಆಗುವ ಉಪಯೋಗ)ಗಳನ್ನು ಓದುವುದರಿಂದ ಸ್ವಲ್ಪ ಹೊತ್ತಿನ ನಂತರ ಬಯಕೆ ತನ್ನಿಂದ ತಾನೇ ಕಡಿಮೆಯಾಗುತ್ತದೆ.

*ಗಮನವನ್ನು ಬೇರೆಡೆಗೆ ಹರಿಸಿ (ಡಿಸ್ಟ್ರಾಕ್ಷನ್): ಉದಾಹರಣೆಗೆ ಸಂಖ್ಯೆಗಳನ್ನು ಹಿಂಬದಿಯಿಂದ ಎಣಿಸಿ ಅಥವಾ ನಿಮ್ಮಿಷ್ಟದ ಚಟುವಟಿಕೆಯಲ್ಲಿ ಭಾಗವಹಿಸಿ.

*ಮದ್ಯಪಾನದ ಬಯಕೆ ತೀವ್ರವಾದಾಗ ನೀರು ಕುಡಿಯಿರಿ.

*ನಿಯಮಿತವಾಗಿ ಹಾಗೂ ಪೌಷ್ಟಿಕ ಆಹಾರ ಸೇವಿಸಿ. ಹಸಿವು ಆಗದಂತೆ ಜಾಗ್ರತೆ ವಹಿಸಿ.

*ದೀರ್ಘ ಉಸಿರಾಟ: ಕುರ್ಚಿಯ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ಒಂದು ಕೈಯನ್ನು ಎದೆಯ ಮೇಲೆ ಇಟ್ಟುಕೊಳ್ಳಿ, ಇನ್ನೊಂದು ಕೈಯನ್ನು ಪಕ್ಕೆಲುಬಿನ ಕೆಳಗಡೆ ಇಟ್ಟುಕೊಳ್ಳಿ. ನಂತರ ಮೂಗಿನ ಮೂಲಕ ಧೀರ್ಘವಾಗಿ ಉಸಿರು ಒಳಗೆಳೆದುಕೊಳ್ಳಿ. ತೆಗೆದುಕೊಂಡ ಉಸಿರನ್ನು ಬಾಯಿಯ ಮೂಲಕ ನಿಧಾನವಾಗಿ ಹೊರಗೆ ಬಿಡಿ. ಈ ಪ್ರಕ್ರಿಯೆಯನ್ನು ದಿನಕ್ಕೆ 3– 4 ಬಾರಿ ಮಾಡಿ (ಪ್ರತಿ ಬಾರಿ 5- 10 ನಿಮಿಷಗಳವರೆಗೆ).

*ಮದ್ಯಪಾನ ಮಾಡುವ ಅಥವಾ ಧೂಮಪಾನ ಮಾಡುವ ಬಯಕೆ ಅತಿಯಾದಾಗ ನಿಮ್ಮ ಕುಟುಂಬದ ಸದಸ್ಯರ ಬಳಿ ಚರ್ಚೆ ಮಾಡಿ.

* ದಿನನಿತ್ಯ ಮಾಡಬೇಕಾದ ಕೆಲಸಗಳ ವೇಳಾಪಟ್ಟಿ ಸಿದ್ಧಪಡಿಸಿ. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ದೈಹಿಕ ವ್ಯಾಯಾಮ, ಮನೆಯವರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು, ಅದೇ ರೀತಿ ಓದುವ ಹಾಗೂ ಬರೆಯುವ ಹವ್ಯಾಸಗಳನ್ನು ಬೆಳಸಿಕೊಳ್ಳಬಹುದು. ಸರಳವಾದ ಯೋಗಾಭ್ಯಾಸವನ್ನು ಮಾಡುವುದರಿಂದ ದೈಹಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬಹುದು.

*ತಂಬಾಕು ಸೇವನೆ ನಿಲ್ಲಿಸಲು ಇಚ್ಛಿಸುವವರು, ಉಚಿತ ದೂರವಾಣಿ ಸಂಖ್ಯೆ 1800-11 -2356ಕ್ಕೆ ಕರೆ ಮಾಡಿ ಸಹಾಯ ಪಡೆಯಬಹುದು ಅಥವಾ 011 - 22901701ಕ್ಕೆ ಮಿಸ್ಡ್ ಕಾಲ್ ಕೊಟ್ಟರೆ ಮುಂದಿನ ಕೆಲವು ತಿಂಗಳುಗಳವರೆಗೆ ಸರಣಿ ಎಸ್‌ಎಂಎಸ್‌ ಸಂದೇಶಗಳನ್ನು ನಿಮ್ಮ ಫೋನ್‌ಗೆ ಕಳಿಸಲಾಗುವುದು.

ಮಾನಸಿಕ ಸಮಸ್ಯೆಗಳಿಗೆ 080- 46110007 ಸಂಪರ್ಕಿಸಬಹುದು.

ಲೇಖಕ: ಹೆಚ್ಚುವರಿ ಪ್ರಾಧ್ಯಾಪಕರು, ಮನೋವೈದ್ಯಕೀಯ ವಿಭಾಗ,ನಿಮ್ಹಾನ್ಸ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.