ADVERTISEMENT

ಅಕ್ಷರ ದೇವತೆ

ಘನಶ್ಯಾಮ ಡಿ.ಎಂ.
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST

ವರ್ಷವಿಡೀ ತುಂಗೆಯ ಜುಳುಜುಳು ನಾದ ಕೇಳಿ ಬರುವ ಶೃಂಗೇರಿ ಪರಿಸರ ಸದಾ ತಂಪು. ಇಲ್ಲಿನ ವಿದ್ಯಾಶಂಕರ ದೇಗುಲಕ್ಕೆ ಭೇಟಿ ನೀಡಿ, ಶಾರದಾಂಬೆಯ ದರ್ಶನ ಮಾಡಿದವರ ಮನಸ್ಸಿಗೆ ಏನೋ ನೆಮ್ಮದಿ, ಸಾರ್ಥಕತೆಯ ಭಾವ. ಅದ್ವೈತ ಸಿದ್ಧಾಂತದ ಕೇಂದ್ರ ಇಲ್ಲಿನ ಶಂಕರ ಗುರುಪೀಠ, ಕ್ಷೇತ್ರಕ್ಕೆ ಬರುವವರನ್ನು ಹರಸಿ ಕಳಿಸುವ ವಿದ್ಯಾಶಂಕರ, ಮಂದಮತಿಗೂ ಒಲಿಯುವ ಶಾರದಾಂಬೆಯ ಸಾನ್ನಿಧ್ಯ ಶೃಂಗೇರಿಯ ವೈಶಿಷ್ಟ್ಯ.

ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ ವಿಂಧ್ಯ ಪರ್ವತ ದಾಟಿ ದಕ್ಷಿಣಕ್ಕೆ ಬಂದಾಗ ತುಂಗಾ ತೀರದಲ್ಲಿ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಸರ್ಪವೊಂದು ಪ್ರಸವ ವೇದನೆಯಿಂದ ಬಳಲುತ್ತಿದ್ದ ಕಪ್ಪೆಯೊಂದಕ್ಕೆ ತನ್ನ ಹೆಡೆಯನ್ನು ಬಿಚ್ಚಿ ನೆರಳನ್ನು ನೀಡುತ್ತಿರುವುದನ್ನು ಕಂಡರಂತೆ.ಬದ್ಧವೈರಿಗಳು ಪರಸ್ಪರ ಸಹಕಾರಿಯಾಗಿರುವ ಈ ಸ್ಥಳವೇ ಧರ್ಮಪೀಠ ಸ್ಥಾಪನೆಗೆ ಸೂಕ್ತ ಎಂದು ನಿರ್ಧರಿಸಿದರು ಎಂಬುದು ಈ ಭಾಗದಲ್ಲಿ ಜನಪ್ರಿಯವಾಗಿರುವ ದಂತಕಥೆ.

ಸುಮಾರು 1200 ವರ್ಷಗಳ ಹಿಂದೆ ಶಂಕರಾಚಾರ್ಯರು ಶೃಂಗೇರಿಯಲ್ಲಿ ಅದ್ವೈತ ಪೀಠ ಸ್ಥಾಪನೆ ಮಾಡಿದರು. ಶೃಂಗೇರಿ ಮಠ ಮತ್ತು ದೇಗುಲಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಈ ಸಂಸ್ಥಾನದ ಅಧಿದೇವತೆ ಶಾರದೆ. ಪ್ರಚಲಿತ ನಂಬಿಕೆಯ ಪ್ರಕಾರ ಕಾಶ್ಮೀರದ ಈ ದೇವಿಯನ್ನು ಸ್ವಯಂ ಆದಿಶಂಕರರೇ ಕರೆತಂದು ತಾವೇ ರಚಿಸಿದ ಶ್ರೀಚಕ್ರದ ಮೇಲೆ ಶಾರದಾಂಬೆಯನ್ನು ಪ್ರತಿಷ್ಠಾಪಿಸಿದರು.

ಶೃಂಗೇರಿ ಪರಿಸರದಲ್ಲಿ ಒಟ್ಟು 80 ದೇವಸ್ಥಾನಗಳಿವೆ. ಅವುಗಳಲ್ಲಿ ಮುಖ್ಯವಾದುದು ವಿದ್ಯಾಶಂಕರ ಹಾಗೂ ಶಾರದಾ ದೇವಸ್ಥಾನ. ಚಾಲುಕ್ಯ, ಹೊಯ್ಸಳ, ದ್ರಾವಿಡ ಮತ್ತು ಇಂಡೋ ಆರ್ಯನ್ ಶೈಲಿಯ ಸಮ್ಮಿಶ್ರಣದಂತಿರುವ ಈ ದೇವಸ್ಥಾನ ವಾಸ್ತುಶಿಲ್ಪ ತನ್ನ ಸಂಯೋಜನೆಯಿಂದ ಕಲಾಸಕ್ತರ ಮನ ಸೆಳೆಯುತ್ತದೆ. ಗರ್ಭಗುಡಿಯಲ್ಲಿರುವ ಐದು ಕೊಠಡಿಗಳಲ್ಲಿ ವಿದ್ಯಾಗಣಪತಿ, ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ದುರ್ಗಾ ಮಾತೆಯ ವಿಗ್ರಹಗಳಿವೆ.

ವಿದ್ಯಾಶಂಕರ ದೇವಸ್ಥಾನದ ಉತ್ತರಕ್ಕೆ ಶಾರದಾ ಮಾತೆಯ ಸನ್ನಿಧಾನವಿದೆ. ಶಾರದೆ ಕುಳಿತ ಭಂಗಿಯಲ್ಲಿದ್ದು  ಕೈಗಳಲ್ಲಿ ಪುಷ್ಪ, ಅಮೃತಪಾತ್ರೆ ಮತ್ತು ಪುಸ್ತಕ ಹಿಡಿದಿದ್ದಾಳೆ.ಮಠದ ಆವರಣದಲ್ಲಿ ನೂತನವಾಗಿ ಶಂಕರಾಚಾರ್ಯ ದೇವಸ್ಥಾನ ನಿರ್ಮಿಸಲಾಗಿದೆ. 18 ಟನ್ ತೂಕವಿರುವ ಶಿಬಿರ ಗೋಪುರವನ್ನು ಒಂದೇ ಕಲ್ಲಿನಲ್ಲಿ ಕೆತ್ತಿ ಕೂರಿಸಿರುವುದು ಆಧುನಿಕ ವಾಸ್ತುಶಿಲ್ಪದ ಅಚ್ಚರಿಗಳಲ್ಲಿ ಒಂದು. ಈ ದೇವಸ್ಥಾನದಲ್ಲಿ 280 ಕೆಜಿ ತೂಕದ ಪಂಚಲೋಹದ ಶಂಕರಾಚಾರ್ಯರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

ಶೃಂಗೇರಿಯಲ್ಲಿರುವ ಕಾಲಭೈರವ, ಆಂಜನೇಯ, ದುರ್ಗಾಂಬಾ, ಕಾಳಿಕಾಂಬಾ, ವಿದ್ಯಾಶಂಕರ, ಶಕ್ತಿಗಣಪತಿ, ರತ್ನಗರ್ಭ ಗಣಪತಿ, ಸುಬ್ರಹ್ಮಣ್ಯ ಸ್ವಾಮಿ, ಬ್ರಹ್ಮಲಿಂಗೇಶ್ವರ, ಸೂರ್ಯನಾರಾಯಣ ಹಾಗೂ ಜನಾರ್ದನಸ್ವಾಮಿ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡುತ್ತಾರೆ.

ವಸತಿ ಸೌಕರ್ಯ: ಕ್ಷೇತ್ರಕ್ಕೆ ಬರುವ ಭಕ್ತರಿಗೆ ಉಚಿತ ಊಟ ಮತ್ತು ರಿಯಾಯ್ತಿ ದರದಲ್ಲಿ ವಸತಿ ಸೌಕರ್ಯವನ್ನು ಮಠ ಕಲ್ಪಿಸಿದೆ. ಶೃಂಗೇರಿಯಲ್ಲಿ ಸಾಕಷ್ಟು ಖಾಸಗಿ ಲಾಡ್ಜ್ ಮತ್ತು ಹೊಟೇಲ್‌ಗಳು ಇವೆ. ನವರಾತ್ರಿ ಸಂದರ್ಭದಲ್ಲಿ ಶೃಂಗೇರಿಯಲ್ಲಿ ವಸತಿ ಸೌಲಭ್ಯ ಸಿಗದಿದ್ದರೆ ಜನರು ಸಮೀಪದ ಕೊಪ್ಪ ಪಟ್ಟಣದಲ್ಲಿ ಉಳಿದುಕೊಂಡು ಅಲ್ಲಿಂದ ಶೃಂಗೇರಿಗೆ ಬಂದು ಉತ್ಸವವನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ.

ಶೃಂಗೇರಿಗೆ ಬರುವುದು ಹೇಗೆ?
ಶೃಂಗೇರಿ ಚಿಕ್ಕಮಗಳೂರಿನಿಂದ 95 ಮತ್ತು ಶಿವಮೊಗ್ಗದಿಂದ 105 ಕಿಮೀ ದೂರದಲ್ಲಿದೆ. ಬೆಂಗಳೂರು- ಮೈಸೂರು ಭಾಗದಿಂದ ಬರುವವರು ಚಿಕ್ಕಮಗಳೂರು- ಬಾಳೆಹೊನ್ನೂರು ಮಾರ್ಗವಾಗಿ ಶೃಂಗೇರಿ ತಲುಪಬಹುದು. ಉತ್ತರ ಕರ್ನಾಟಕದಿಂದ ಬರುವವರು ಶಿವಮೊಗ್ಗಕ್ಕೆ ಬಂದು ಅಲ್ಲಿಂದ ನರಸಿಂಹರಾಜಪುರ- ಕೊಪ್ಪ ಅಥವಾ ತೀರ್ಥಹಳ್ಳಿ- ಕೊಪ್ಪ ಮಾರ್ಗವಾಗಿ ಶೃಂಗೇರಿ ತಲುಪಬಹುದು. ಸಮೀಪದ ರೈಲು ನಿಲ್ದಾಣ ಕಡೂರು 140 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಬಂದು ಅಲ್ಲಿಂದ ಶೃಂಗೇರಿಗೆ ಬಸ್‌ನಲ್ಲಿ ಬರಬಹುದು.

ಸೇವಾ ವಿವರ
* ಅಷ್ಟೋತ್ತರ - 5ರೂ
* ತ್ರಿಶತಿ - 10ರೂ
* ಸಹಸ್ರನಾಮಾವಳಿ - 20ರೂ
* ನೈವೇದ್ಯ ಸಹಿತ ಸಹಸ್ರನಾಮ - 40ರೂ
* ಅಕ್ಷರಾಭ್ಯಾಸ - 100ರೂ
* ಸಪ್ತಶತಿ ಪಾರಾಯಣ- (1 ದಿನ ಮೊದಲು ತಿಳಿಸಬೇಕು)  -150ರೂ
* ಬೆಳ್ಳಿ ದಿಂಡಿ ಉತ್ಸವ - 750ರೂ
* ಉದಯಾಸ್ತಮಾನ ಪೂಜೆ - 1000ರೂ
* ಲಕ್ಷಾರ್ಚನೆ - 2500ರೂ
* ಸುಪ್ರಭಾತ - 1000ರೂ
* ಸುವರ್ಣ ಪುಷ್ಪ - 1000ರೂ
* ಸಹಸ್ರನಾಮ ವಿಶೇಷ ನೈವೇದ್ಯ- 100ರೂ
* ಚಿನ್ನದ ದಿಂಡಿ ಉತ್ಸವ (ಶುಕ್ರವಾರ ಮಾತ್ರ) - 5000 ರೂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.