ಇದು ಕೃಷಿ ಚಟುವಟಿಕೆಗಳು ಮುಗಿದು ರೈತರು ಫಸಲು ಕಟಾವು ಮಾಡಿ ಒಂದೆಡೆ ಸೇರಿಸುವ ಸಮಯ. ಇದಕ್ಕೆ ಸಾಕ್ಷಿಯಾಗಲಿದೆ ‘ಆಲದಮರದ ಜಾತ್ರೆ’.
ಹೌದು. ಇದು ಕಲ್ಪತರು ನಾಡೆಂದೇ ಕರೆಯಲಾಗುವ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ವಿಶೇಷತೆ. ಡಿ.1ರಿಂದ ಹತ್ತು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ದನಕರುಗಳದ್ದೇ ಕಾರುಬಾರು. ರೈತರು ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ರಾಗಿ, ಜೋಳ, ಹುರುಳಿ, ಹುಚ್ಚೆಳ್ಳು , ಮುಂತಾದ ದವಸಧಾನ್ಯಗಳನ್ನು ಒಕ್ಕಣೆಗಾಗಿ ಕಣದಲ್ಲಿ ಬಣವೆ ಮಾಡುತ್ತಾರೆ. ತಾವು ಸಾಕಿರುವ ರಾಸುಗಳನ್ನು ಜಾತ್ರೆಯಲ್ಲಿ ಮಾರಾಟಕ್ಕೆ ತರುತ್ತಾರೆ. ಇನ್ನು ಕೆಲವರು ಇವುಗಳನ್ನು ಕೊಳ್ಳುವ ಸಂಬಂಧ ದೂರದೂರದ ಊರುಗಳಿಂದ ಇಲ್ಲಿಗೆ ಬರುತ್ತಾರೆ.
ಕ್ಷೇತ್ರದ ಹಿನ್ನೆಲೆ
ಶ್ರೀಕ್ಷೇತ್ರದ ಮುನಿಯಪ್ಪ ದೇವರು ನೂರಾರು ವರ್ಷಗಳ ಹಿಂದೆ ಇಲ್ಲಿಯ ದೊಡ್ಡ ಆಲದ ಮರದ ಕೆಳಗೆ ಧ್ಯಾನ ಮಾಡುತ್ತಾ ಕುಳಿತು ಇಲ್ಲಿಗೆ ಬರುವ ಭಕ್ತರನ್ನು ಹರಸುತ್ತಿದ್ದರು. ಪವಾಡ ಪುರುಷರಾಗಿ ಈ ನಾಡಿನಾದ್ಯಂತ ಹೆಸರಾಗಿ ಇಲ್ಲಿಯೇ ನೆಲೆಸಿದ್ದಾರೆ ಎಂಬ ಪ್ರತೀತಿ ಇದೆ. ಅಂದಿನಿಂದ ಇಂದಿನವರೆವಿಗೂ ಭಕ್ತರು ಶ್ರೀ ಸ್ವಾಮಿಯ ಸನ್ನಿಧಿಗೆ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿಕೊಳ್ಳಲು, ಇಷ್ಟಾರ್ಥ ಸಿದ್ಧಿಗಾಗಿ ದೂರದೂರದಿಂದ ಬಂದು ದರ್ಶನ ಪಡೆದು ಸ್ವಾಮಿಯವರ ಕೃಪಾಶೀರ್ವಾದಕ್ಕಾಗಿ ನಿಲ್ಲುತ್ತಾರೆ.
ರೈತರು ತಮ್ಮ ಹೊಲದಲ್ಲಿ ಬೆಳೆದ ದವಸ ಧಾನ್ಯಗಳಲ್ಲಿ, ಜಾತ್ರೆಯ ದಾಸೋಹಕ್ಕಾಗಿ ಸ್ವಲ್ಪ ಭಾಗವನ್ನು ಕೊಡುತ್ತ ಸೇವೆ ಮಾಡುತ್ತಾ ಬಂದಿದ್ದಾರೆ. ತಮ್ಮ ಮನೆಗಳಲ್ಲಿನ ಹಸುಗಳು ಕರು ಹಾಕಿದರೆ ಆ ಹಸುವಿನ ಮೊದಲ ಗಿಣ್ಣು ಹಾಲನ್ನು ಸ್ವಾಮಿಗೆ ಅರ್ಪಿಸುತ್ತಾರೆ. ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ರಚನೆಗೊಂಡಿರುವ ಟ್ರಸ್ಟ್ ಉಸ್ತುವಾರಿ ವಹಿಸಿರುವ ಗುರುಪರದೇಶಿಕೇಂದ್ರ ಸ್ವಾಮೀಜಿಗಳ ಮಾರ್ಗ ದರ್ಶನದಲ್ಲಿ ಈ ಕ್ಷೇತ್ರ ಇಂದು ಬೆಳೆದು ನಿಂತಿದೆ.
ಜಾತ್ರಾ ರಥೋತ್ಸವ ಕಾಲದಲ್ಲಿ ಬರುವ ಸಹಸ್ರಾರು ಭಕ್ತಾದಿಗಳಿಗೆ ದಾಸೋಹ ನಡೆಯುತ್ತದೆ. ಇಲ್ಲಿಗೆ ಕರೆತರಲಾಗುವ ದನಕರುಗಳಿಗೆ ಮೇವು, ನೀರಿನ ವ್ಯವಸ್ಥೆ ಇದೆ. ಶ್ರೀ ಕ್ಷೇತ್ರಕ್ಕೆ ಬರಲು ನಾಲ್ಕೂ ದಿಕ್ಕಿನಿಂದ ರಸ್ತೆ ಸಂಪರ್ಕವಿದೆ.
ತಿಪಟೂರಿನಿಂದ ಗುಡಿಗೊಂಡನಹಳ್ಳಿ ಮಾರ್ಗವಾಗಿ ಹತ್ತು ಕಿ.ಮೀ ಮತ್ತು ತಿಪಟೂರು ಹಾಲ್ಕುರಿಕೆ ರಸ್ತೆಯಲ್ಲಿ ಆಲೂರು, ಪರುವಗೊಂಡನಹಳ್ಳಿ ಮಾರ್ಗವಾಗಿ ಹತ್ತು ಕಿಮೀ ದೂರವಿದೆ ಶ್ರೀಕ್ಷೇತ್ರ.
ಹಣತೆಯಲ್ಲಿ ಮೀಯುವ ಕಲ್ಲಿನಾಥ
ಧಾರ್ಮಿಕ ಕೇಂದ್ರವಾಗಿ, ಶಿಲ್ಪಕಲೆಗೆ ಬೀಡಾಗಿ ಪ್ರಸಿದ್ಧಿ ಹೊಂದಿದೆ ಕೊಪ್ಪಳ ಜಿಲ್ಲೆ. ಶಿಲ್ಪಾ ಕಲ ವೈಭವದ ದೇವಾಲಯಗಳು ಹಾಗೂ ವಿವಿಧ ಪುಣ್ಯಕ್ಷೇತ್ರಗಳಿಂದ ಇದು ಪ್ರವಾಸಿ ಕೇಂದ್ರವೇ ಆಗಿದೆ. ಜಿಲ್ಲೆಯ ಯಲಬುರ್ಗಾ ಕೂಡ ಇದರಲ್ಲಿ ಒಂದು. ಆರ್ಥಿಕವಾಗಿ ಹಿಂದುಳಿದರೂ ಶೈಕ್ಷಣಿಕವಾಗಿ, ಸಾಹಿತ್ಯವಾಗಿ, ಐತಿಹಾಸಿಕವಾಗಿ ಮುಂದಿದೆ ಯಲಬುರ್ಗಾ.
ಇಂಥ ಭವ್ಯ ನಾಡಿನಲ್ಲಿರುವ ಪುಣ್ಯಕ್ಷೇತ್ರ ಕಲ್ಲೂರು. ತಾಲ್ಲೂಕಾ ಕೇಂದ್ರದಿಂದ ಕೇವಲ ಏಳು ಕಿ. ಮೀ. ಅಂತರದಲ್ಲಿರುವ ಕಲ್ಲೂರು ಗ್ರಾಮದಲ್ಲಿನ ಶ್ರೀ ಕಲ್ಲಿನಾಥೇಶ್ವರ ದೇಗುಲದಲ್ಲೀಗ ದೀಪೋತ್ಸವದ ಸಂಭ್ರಮ. ಚಾಲುಕ್ಯ ಶೈಲಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಈ ದೇವಾಲಯದಲ್ಲಿ ದೀಪ ಬೆಳಗಲು ಸುತ್ತಮುತ್ತಲ ಗ್ರಾಮಸ್ಥರೂ ಸಜ್ಜಾಗಿದ್ದಾರೆ.
ಬರುವ ಸೋಮವಾರ (ಡಿ.2) ನಡೆಯಲಿರುವ ದೀಪೋತ್ಸವಕ್ಕೆ ಎಲ್ಲರೂ ಎದುರು ನೋಡುತ್ತಿದ್ದಾರೆ. ಅಂದು ಅಹೋ ರಾತ್ರಿ ಸಾವಿರಾರು ಹಣತೆಗಳ ಸಾಲಿನಲ್ಲಿ ಕಲ್ಲೂರು ಕಲ್ಲಿನಾಥೇಶ್ವರ ಭಕ್ತಾದಿಗಳನ್ನು ಆಕರ್ಷಿಸಲಿದ್ದಾನೆ. ಸಂಪೂರ್ಣ ಗ್ರಾಮ ಝಗಮಗಿಸುವ ಬೆಳಕಿನಲ್ಲಿ ನವವಧುವಿನಂತೆ ಕಂಗೊಳಿಸಲಿದೆ. ಇದೇ ದೀಪದ ಬೆಳಕಿನಲ್ಲಿ ಮಧ್ಯ ರಾತ್ರಿ ನಡೆಯುವ ಪಲ್ಲಕ್ಕಿ ಉತ್ಸವ ಹಾಗೂ ಮದ್ದು ಸುಡುವ ವೈಖರಿ ಇಲ್ಲಿ ವಿಶೇಷತೆ.
ಚಾರಿತ್ರಿಕ ಹಿನ್ನೆಲೆ
ಕಲ್ಲಿದೇವ, ಕಳೇಶ್ವರ, ಕಲ್ಲಯ್ಯ ಎಂದು ಕರೆಯಿಸಿಕೊಳ್ಳುವ ಕಲ್ಲಿನಾಥೇಶ್ವರ ದೇವಾಲಯವು ೧೨ ನೇ ಶತಮಾನದಲ್ಲಿ ಮಹಾ ಆಂದೋಲನದ ಕೇಂದ್ರವಾಗಿತ್ತು. ಸರ್ವ ಧರ್ಮ ಸಮಾನತೆಯನ್ನು ಸಾರುವ, ಈ ಕುರಿತು ಜನ ಜಾಗೃತಿಯನ್ನುಂಟು ಮಾಡುವ ಬೀಡಾಗಿತ್ತು. ಇದರ ಕೇಂದ್ರ ಬಿಂದುವಾಗಿ ನಿಂತವರು ಬಸವಣ್ಣನವರು.
ದೇಶದ ನಾನಾ ಭಾಗಗಳಿಂದ ಬಂದ ಅನುಭವಿಗಳು, ವೈಚಾರಿಕ ಕ್ರಾಂತಿಗೆ ಬೆಂಬಲವಾಗಿ ನಿಂತರು. ಅವರಲ್ಲಿ ಪ್ರಮುಖವಾಗಿ ಮೊಲ್ಲೆಬೋಮ್ಮನವರು ಕೂಡಾ ಒಬ್ಬರು. ಅವರ ಕಾರ್ಯಕ್ಷೇತ್ರ ಕಲ್ಲೂರು ಶ್ರೀ ಕಲ್ಲಿನಾಥೇಶ್ವರ ಸನ್ನಿಧಿಯಾಗಿತ್ತು. ಇಂಥ ಶರಣರನ್ನು ಪಡೆದ ನಾಡಲ್ಲೀಗ ಎಲ್ಲೆಲ್ಲೂ ಉತ್ಸವದ ಸಡಗರ, ಸಂಭ್ರಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.