ಗದಗ ಜಿಲ್ಲೆ ರೋಣ ತಾಲೂಕಿನ ಇಟಗಿಯ ಭೀಮಾಂಬಿಕೆ (ಭೀಮವ್ವ) ಸನ್ನಿಧಿ ಪ್ರಮುಖ ಕಾರಣಿಕ ಕ್ಷೇತ್ರ. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಇಲ್ಲಿಗೆ ಬರುವ ಭಕ್ತರೇ ಹೆಚ್ಚು. ಆಂಧ್ರ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲೂ ಈ ದೇವಿಗೆ ಸಾಕಷ್ಟು ಭಕ್ತರಿದ್ದಾರೆ. ನಿತ್ಯ ದೇವಸ್ಥಾನ ತೆರೆದಿದ್ದರೂ, ಅಮಾವಾಸ್ಯೆ ದಿನ ದಟ್ಟಣೆ ಜಾಸ್ತಿ.
ಪ್ರಚಲಿತದಲ್ಲಿ ಇರುವ ಕಥೆಗಳ ಪ್ರಕಾರ ಸುಮಾರು 200 ವರ್ಷಗಳ ಹಿಂದೆ ತನ್ನ ಪವಾಡವನ್ನು ಮೆರೆದವಳು ಭೀಮಾಂಬಿಕೆ. ಧರ್ಮರ ವಂಶಕ್ಕೆ ಸೇರಿದ ಸೋಮಣ್ಣ ಹಾಗೂ ಹನುಮವ್ವ ಎಂಬ ದಂಪತಿಯ ಮೂರನೆ ಮಗಳು. ಬಾದಾಮಿಯ ಬನಶಂಕರಿಯ ಕೃಪೆಯಿಂದ ಜನಿಸಿದವಳು. ಮೂಲ ಹೆಸರು ಭೀಮೆ.
ಬಾಲ್ಯದಿಂದಲೇ ಅಧ್ಯಾತ್ಮದತ್ತ ಒಲವು ಬೆಳೆಸಿಕೊಂಡು ಸಂಸಾರದ ಸೆಳೆತದಿಂದ ದೂರವಿದ್ದಳಂತೆ. ಸೋದರ ಮಾವನ ಮಗ ಒಗೆದಾಡಪ್ಪನೊಂದಿಗೆ ಮದುವೆಯ ಪ್ರಸ್ತಾಪ ಬಂದಾಗ ನಿರಾಸಕ್ತಿ ತಳೆದರೂ, ಹಿರಿಯರ ಒತ್ತಾಯಕ್ಕೆ ಮಣಿದು ಮದುವೆಯಾಗಿ ರೋಣ ತಾಲೂಕಿನಲ್ಲಿಯೇ ಇರುವ ಕೊಪ್ಪ ಗ್ರಾಮಕ್ಕೆ ಬಂದಳಂತೆ.
ಮುಂದೆ ಸಂಸಾರ, ಮಕ್ಕಳು ಹೀಗೆ ಲೌಕಿಕ ಜಂಜಾಟದಲ್ಲಿದ್ದರೂ ಪರಮಾರ್ಥ ಚಿಂತನೆಯಲ್ಲೆೀ ಮುಳುಗಿರುವಾಗ ಪತಿ ಪ್ಲೇಗ್‌ಗೆ ಬಲಿಯಾಗುತ್ತಾನೆ. ಹೀಗಾಗಿ ಪೂರ್ಣ ವಿರಕ್ತಳಾಗಿ ದೇವರ ಆರಾಧನೆಯಲ್ಲೇ ತೊಡಗಿಸಿಕೊಳ್ಳುತ್ತಾಳೆ.
ಈಕೆ ಬದುಕಿದ್ದಾಗ ರೋಗಿಗಳ ರೋಗಗಳನ್ನು ನಿವಾರಿಸಿದ್ದಳು, ಬರಗಾಲ ಬಂದಾಗ ಜನರನ್ನು ರಕ್ಷಿಸಿದ್ದಳು, ಬಡವರ ಮನೆಯಿಂದ ಸಾಲ ಕೇಳಿ ಅವರನ್ನು ಶ್ರೀಮಂತರನ್ನಾಗಿ ಮಾಡಿದ್ದಳು ಎಂಬುದು ಜನರ ನಂಬಿಕೆ. ಇಂಥ ಜನೋಪಕಾರಿ ಕಾರ್ಯಗಳಿಂದ ಪ್ರಭಾವಿತರಾದ ಭಕ್ತರು ಅವಳನ್ನು ಭೀಮವ್ವ, ಭೀಮಾಂಬಿಕೆ ಎಂದು ಕರೆದು ದೈವತ್ವಕ್ಕೆ ಏರಿಸಿದ್ದಾರೆ.
ಈಗಲೂ ಈಕೆ ಅಗೋಚರವಾಗಿ ಇದ್ದುಕೊಂಡು ತಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆಯಿದೆ. ಹಿಂದೂ- ಮುಸ್ಲಿಂ ಭೇದ ಭಾವ ಇಲ್ಲದೆ ಈಕೆಗೆ ಭಕ್ತರಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಪ್ರಾರ್ಥಿಸಿ ದೇವಸ್ಥಾನದ ಆವರಣದಲ್ಲಿ ತೆಂಗಿನಕಾಯಿ ಕಟ್ಟುತ್ತಾರೆ. ಇದೇ `ಕಾಯಿಕಟ್ಟುವ~ ಆಚರಣೆ. ಅಂದುಕೊಂಡದ್ದು ನಡೆದರೆ ಕಟ್ಟಿದ ಕಾಯಿ ಬಿಚ್ಚಿ ನೈವೇದ್ಯ ಮಾಡಿ ಹರಕೆ ತೀರಿಸುತ್ತಾರೆ.
ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಭಾರೀ ಜಾತ್ರೆ ನಡೆಯುತ್ತದೆ. ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೂ ಜೋಳದ ಅಂಬಲಿಯನ್ನು ಪ್ರಸಾದ ರೂಪದಲ್ಲಿ ವಿತರಿಸುತ್ತಾರೆ. ಕಳೆದ ಕೆಲ ವರ್ಷಗಳಿಂದ ಸಾಮೂಹಿಕ ವಿವಾಹಗಳೂ ನಡೆಯುತ್ತಿವೆ. ಇಲ್ಲಿ ನಿರ್ದಿಷ್ಟ ಸೇವೆಗಳಿಲ್ಲ. ಭಕ್ತರು ಇಷ್ಟಾನುಸಾರ ಪೂಜೆ ಮಾಡಿಸಬಹುದು.
ರೋಣ- ಗಜೇಂದ್ರಗಡ ರಸ್ತೆಯಿಂದ ನಾಲ್ಕು ಕಿಮಿ ದೂರದಲ್ಲಿನ ಇಟಗಿ ಕ್ಷೇತ್ರದಲ್ಲಿ ಯಾತ್ರಿಕರಿಗೆ ಮೂಲಸೌಕರ್ಯಗಳಿಲ್ಲ. ಆದರೆ ಚಾಲುಕ್ಯರ ಕಾಲದ ಶಂಭುಲಿಂಗ ದೇವಾಲಯ, ಹಾಳಕೇರಿ ಅನ್ನದಾನ ಸ್ವಾಮಿಗಳ ಮಠ, ಧರ್ಮರ ಮಠಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.