ಈ ಗ್ರಾಮದಲ್ಲಿ ಎಲ್ಲೆಲ್ಲೂ ‘ಅಂಬಾ’ ಎನ್ನುವ ನಿನಾದ. ಮನೆಮನೆಯಲ್ಲೂ ಕಾಮಧೇನುವಿನದ್ದೇ ಕಲರವ. ಇಲ್ಲಿ ಜಾನುವಾರುಗಳಿಲ್ಲದ ಮನೆಗಳಿಲ್ಲ, ಕೊಟ್ಟಿಗೆ ಇಲ್ಲದ ಕುಟುಂಬಗಳಿಲ್ಲ, ಜನಸಂಖ್ಯೆ ಸುಮಾರು ಐದು ಸಾವಿರ. ಆದರೆ ಒಟ್ಟು ಜಾನುವಾರಗಳ ಸಂಖ್ಯೆ ಹತ್ತು ಸಾವಿರ...!
ಜನಗಳಿಗಿಂತ ಜಾನುವಾರುಗಳೇ ಹೆಚ್ಚಾಗಿರುವ ಗ್ರಾಮ ಶಿವಮೊಗ್ಗ ಜಿಲ್ಲೆಯ ಹರಮಘಟ್ಟ. ಶಿವಮೊಗ್ಗದಿಂದ 17 ಕಿ.ಮೀ ಹೊಳಲೂರು ಮಾರ್ಗವಾಗಿ ಕ್ರಮಿಸಿ ಹರಮಘಟ್ಟ ತಲುಪಿದರೆ ಈ ಗ್ರಾಮ ಸಿಗುತ್ತದೆ. ವರ್ಷಕ್ಕೆ 6 ಲಕ್ಷ ಲೀಟರ್‌ಗೂ ಹೆಚ್ಚು ಹಾಲನ್ನು ಈ ಗ್ರಾಮಸ್ಥರು ಮಾರಾಟ ಮಾಡುತ್ತಾರೆ. ಕೇವಲ ಹಾಲಿನಿಂದಲೇ ವರ್ಷವೊಂದಕ್ಕೆ ಒಂದು ಕೋಟಿಗೂ ಹೆಚ್ಚಿನ ವಹಿವಾಟು! ಅಂದಮಾತ್ರಕ್ಕೆ ಹಾಲಿಗಾಗಿ ಮಾತ್ರ ಇವರು ಹೈನುಗಾರಿಕೆ ಮಾಡುತ್ತಿಲ್ಲ. ದೇಸೀ ತಳಿಯ ಆಕಳು ಮತ್ತು ಎಮ್ಮೆಗಳ ಸಂತತಿಯನ್ನು ಉಳಿಸಿಕೊಳ್ಳುವ ಸಲುವಾಗಿಯೂ ಇವರು ಅವುಗಳನ್ನು ಸಾಕುತ್ತಿದ್ದಾರೆ.
ಸೆಗಣಿ ಮತ್ತು ಗಂಜಲವನ್ನು ವ್ಯಯಮಾಡದೆ ಮನೆಗಳಲ್ಲಿ ಗೋಬರ್ ಗ್ಯಾಸ್ ಆಗಿ ಅಳವಡಿಸಿಕೊಂಡಿದ್ದಾರೆ. ಕೃಷಿ ಚಟುವಟಿಕೆಗೆ ಇವರು ಬಳಸುವುದು ಕೊಟ್ಟಿಗೆ ಗೊಬ್ಬರವನ್ನೇ. ಗೊಬ್ಬರ ಮಾರಾಟ ಮಾಡಿಯೂ ಸಂಪಾದನೆ ಮಾಡುತ್ತಾರೆ. ವಯಸ್ಸಾದ ಗೋವುಗಳನ್ನು ಕಸಾಯಿಖಾನೆಗೆ ಹಾಕುವುದು ಗ್ರಾಮದಲ್ಲಿ ನಿಷಿದ್ಧ.
100 ನಾಟಿ ಹಸುಗಳ ಚನ್ನಬಸಪ್ಪ
ಹಾಲಿಗಾಗಿ ಮಾತ್ರ ಆಕಳು ಸಾಕುವುದನ್ನು ನಾವು ನೋಡಿದ್ದೇವೆ. ಆದರೆ ಹರಮಘಟ್ಟದ ಚನ್ನಬಸಪ್ಪ ದೇಸೀ ತಳಿಯ ಗೋವು ಸಂರಕ್ಷಿಸುವ ದೃಷ್ಟಿಯಿಂದ 100 ನಾಟಿ ಆಕಳುಗಳನ್ನು ಮೂರು ದಶಕಗಳಿಂದಲೂ ಸಾಕುತ್ತಿದ್ದಾರೆ. ಇದುವರೆಗೂ ಒಂದೇ ಒಂದು ಆಕಳನ್ನು ಇವರು ಮಾರಾಟ ಮಾಡಿಲ್ಲ. ಪೂರ್ವಜರಿಂದ ಬಳುವಳಿಯಾಗಿ ಬಂದ ಗೋ ಸಂರಕ್ಷಣೆಯ ಕಾಯಕವನ್ನು ಇವರು ನಿಷ್ಠೆಯಿಂದ ಪಾಲಿಸುತ್ತಿದ್ದಾರೆ.
‘ದೇಸೀ ತಳಿಯ ಗೋವುಗಳನ್ನು ಸಾಕುವುದು ದುಬಾರಿಯಲ್ಲ. ಇವುಗಳ ಸಾಕಣೆಯಿಂದ ಹಾಲು ಮತ್ತು ಗೊಬ್ಬರಕ್ಕೆ ಬೇಡಿಕೆ ಇದ್ದೇ ಇದೆ. ನಷ್ಟ ಎಂದಿಗೂ ಇಲ್ಲ’ ಎನ್ನುತ್ತಾರೆ ಮಹೇಶಪ್ಪ. ಇನ್ನು ಪರಮೇಶಪ್ಪ ಎಂಬುವವರು ತಮ್ಮ ಅಂಗವೈಕಲ್ಯಕ್ಕೆ ಸಂಕಟ ಪಡುತ್ತಾ ಕೂರದೇ ಇಪ್ಪತ್ತು ದೇಸೀ ತಳಿಯ ಎಮ್ಮೆಗಳನ್ನು ಹತ್ತು ವರ್ಷಗಳಿಂದ ಸಾಕುತ್ತಿದ್ದಾರೆ. ದೇಸೀ ತಳಿಯ ಎಮ್ಮೆಗಳನ್ನು ಸಾಕುವವರು ವಿರಳವಾಗುತ್ತಿರುವ ಈ ಹೊತ್ತಲ್ಲಿ ಇವುಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ.
ಕುರಿ ಕಡೆಗಣನೆ
‘ಕುರಿ ಸಾಕಿದರೆ ಕುಬೇರರಾಗಬಹುದು’. ಇದು ಇಂದಿನ ಹಳ್ಳಿಗರು ಕಂಡುಕೊಂಡಿರುವ ಸತ್ಯ. ಆದರೆ ಹರಮಘಟ್ಟದಲ್ಲಿ ಕುರಿಗಳಿಗಿಂತ ಹೆಚ್ಚಾಗಿ ಗೋವುಗಳ ಮೇಲೆ ಆಸಕ್ತಿ. ‘ಕುರಿಗಳನ್ನು ಸಾಕಿದರೆ ಅವುಗಳನ್ನು ಮಾರಾಟ ಮಾಡಬೇಕು. ಮಾಂಸಕ್ಕಾಗಿ ಅವುಗಳನ್ನು ಕೊಲ್ಲುತ್ತಾರೆ. ಸಾಕಿರುವ ಜಾನುವಾರುಗಳನ್ನು ಹತ್ಯೆಗೈದರೆ ಪಾಪ ಎಂಬ ನಂಬಿಕೆ ನಮ್ಮ ಗ್ರಾಮದ್ದು. ಆದ್ದರಿಂದ ಇಲ್ಲಿ ಕುರಿ ಸಾಕುವುದು ಕಡಿಮೆ’ ಎನ್ನುತ್ತಾರೆ ಮಂಜುನಾಥ್.
ರಾಜ್ಯದ ಹಳ್ಳಿಗಳನ್ನು ಕಾಲುಬಾಯಿ ಜ್ವರ ಎಂಬ ಮಾರಿ ಬೆಂಬಿಡದೆ ಕಾಡಿತು. ಇದರಿಂದ ಸಾವಿರಾರು ಗೋವುಗಳು ಸಾವಿಗೀಡಾದವು. ಆದರೆ ಹರಮಘಟ್ಟ ಗ್ರಾಮಕ್ಕೆ ಈ ಮಾರಿ ಪ್ರವೇಶಿಸಲಾಗಲಿಲ್ಲ. ಮುಂಜಾಗ್ರತೆ ಕ್ರಮವನ್ನು ಕೈಗೊಂಡು ಗೋವುಗಳನ್ನು ಅತ್ಯಂತ ಜತನದಿಂದ ನೋಡಿಕೊಂಡರು ಗ್ರಾಮಸ್ಥರು. ಎಂಥ ಬೇಸಿಗೆ, ಬರಗಾಲ ಬಂದರೂ ಇದುವರೆಗೂ ಒಂದೇ ಒಂದು ಜಾನುವಾರು ಆಹಾರವಿಲ್ಲದೆ ಸತ್ತಿರುವ ಉದಾಹರಣೆಯಿಲ್ಲ ಇಲ್ಲಿ.
ಅದಕ್ಕಾಗಿ ಮೇವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳುತ್ತಾರೋ ಅದಕ್ಕಿಂತ ಹೆಚ್ಚಾಗಿ ಜಾನುವಾರುಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಜಾನುವಾರುಗಳ ಗೊಬ್ಬರವನ್ನು ಚಿನ್ನಕ್ಕೆ ಹೋಲಿಸುತ್ತಾರೆ ಈ ಗ್ರಾಮಸ್ಥರು. ಬಹುತೇಕ ರೈತರು ತಮ್ಮ ಜಮೀನುಗಳಿಗೆ ಗೊಬ್ಬರವನ್ನು ಉಪಯೋಗಿಸಿಕೊಂಡು ಸಾವಯವ ಕೃಷಿ ಮಾಡುತ್ತಿದ್ದಾರೆ. ಕೆಲವರು ಗೊಬ್ಬರ ಮಾರಾಟ ಮಾಡುವುದನ್ನೇ ವ್ಯಾಪಾರವಾಗಿಸಿಕೊಂಡಿದ್ದಾರೆ.
ಗ್ರಾಮದ ಆರ್ಥಿಕತೆ ಹೆಚ್ಚಳ
ಹಿಂದಿಗಿಂತ ಹರಮಘಟ್ಟ ಗ್ರಾಮದ ಆರ್ಥಿಕ ಪರಿಸ್ಥಿತಿ ಸುಧಾರಿಸತೊಡಗಿದೆ. ಮಳೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಇವರ ಕಾಯಕ ಗೋಸಾಕಾಣಿಕೆ ಒಂದೇ ಆಗಿತ್ತು. ಗೋಸಾಕಾಣಿಕೆ ಜೊತೆಗೆ ಆರ್ಥಿಕವಾಗಿ ಚಿಂತಿಸಲು ಆರಂಭಿಸಿದರು ಗ್ರಾಮದ ಯುವಕರು. ಇದರಿಂದ ಮಿಶ್ರತಳಿಯ ಆಕಳು ಗ್ರಾಮ ಪ್ರವೇಶಿಸಿದವು. ಹಣ ಗಳಿಕೆಗಾಗಿ ತಂದು ಸಾಕಿದ ಈ ತಳಿಯಿಂದ ಆದಾಯ ಬರಲಾರಂಭಿಸಿತು.
ಜೊತೆಗೆ ಹಾಲು ಉತ್ಪಾದಕರ ಸಂಘದ ಪ್ರೋತ್ಸಾಹದಿಂದ ನೂರಾರು ಕುಟುಂಬಗಳ ಬದುಕು ಹಸನಾಗಿದೆ. ಹೈನುಗಾರಿಕೆಯಿಂದ ಬಂದ ಹಣದಿಂದ ಜಮೀನುಗಳಲ್ಲಿ ಬೋರ್ ಕೊರೆಸಿಕೊಂಡು ಅಡಿಕೆ, ಬಾಳೆ ಜೊತೆಗೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ.
ಈ ಗ್ರಾಮದಲ್ಲಿ ಒಬ್ಬೊಬ್ಬರದ್ದು ಒಂದೊಂದು ಸಾಧನೆ. ಹರಮಘಟ್ಟದ ರುದ್ರಪ್ಪ 78 ವರ್ಷದ ಹಿರಿಯ ಜೀವ. ಇವರು 12 ಮಿಶ್ರತಳಿಯ ಆಕಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಇದರಿಂದ ಇವರು ವರ್ಷಕ್ಕೆ 12,600 ಲೀಟರ್ ಹಾಲನ್ನು ಡೈರಿಗೆ ಹಾಕುತ್ತಾರೆ. ಇದರಿಂದ ವರ್ಷಕ್ಕೆ 3 ಲಕ್ಷಕ್ಕೂ ಹೆಚ್ಚು ಆದಾಯ ಸಿಗುತ್ತದೆ. ಇದ್ಕಕಾಗಿ ಕೆ.ಎಂ.ಎಫ್. ನಿಂದ ಶಿವಮೊಗ್ಗ ತಾಲ್ಲೂಕಿನ ‘ಅತಿ ಹೆಚ್ಚು ಹಾಲು ಉತ್ಪಾದಕ’ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಮತ್ತೊಬ್ಬರು ಶಿವಶಂಕರ್. ಇವರು ಬಿ.ಕಾಂ. ಪದವೀಧರರು, ಅಪ್ಪನ ಆಸ್ತಿಯನ್ನು ತಿರಸ್ಕರಿಸಿ ಮನೆಯಿಂದ ಹೊರಬಂದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 5 ಮಿಶ್ರತಳಿಯ ಆಕಳನ್ನು ಸಾಕಿಕೊಂಡು ದಿನಕ್ಕೆ 20 ಲೀಟರ್ ಹಾಲನ್ನು ಡೈರಿಗೆ ಹಾಕುತ್ತಾರೆ. ಇದರಿಂದ ವರ್ಷಕ್ಕೆ 1.80 ಲಕ್ಷ ರೂಪಾಯಿಗಳನ್ನು ಇವರು ಗಳಿಸುತ್ತಿದ್ದಾರೆ. ರಾಜಪ್ಪ ಅವರ ಮನೆಯಲ್ಲಿ 3 ಜನ. ಇವರು ಸಾಕಿರುವ ಗೋವುಗಳ ಸಂಖ್ಯೆ 25ಕ್ಕೂ ಹೆಚ್ಚು...!
ಈ ಸಾಧನೆಯ ಹಾದಿಯಲ್ಲಿ ಹೆಣ್ಣು ಮಕ್ಕಳೂ ಹಿಂದೆ ಬಿದ್ದಿಲ್ಲ. ಪ್ರೇಮ ಎಂಬುವವರು ಮೊದಲಿಗೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಂತರ ಹೈನುಗಾರಿಕೆಯನ್ನು ಆರಂಭಿಸಿದರು. ಸದ್ಯ 13 ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅರ್ಧ ಎಕರೆ ಜಮೀನನ್ನು ಖರೀದಿಸಿ ವ್ಯವಸಾಯ ಆರಂಭಿಸಿದ್ದಾರೆ. ಇವರಿಷ್ಟೇ ಅಲ್ಲ ಗ್ರಾಮದ ಷಣ್ಮುಖಪ್ಪ, ಚಂದ್ರಶೇಖರ್, ರಾಜೇಶ್, ವೀರಣ್ಣ, ದೇವಮ್ಮ, ಪಾರ್ವತಿ... ಹೀಗೆ ನೂರಾರು ಮಂದಿ ಹೈನುಗಾರಿಕೆಯಿಂದ ತಮ್ಮದೇ ಆದ ಬದುಕನ್ನು ರೂಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ಮಾದರಿ ಗ್ರಾಮವಾಗಿದೆ. u
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.