ಉಡುಪಿಯ ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ನಾಡಿನ ಪ್ರಮುಖ ದೇವಳಗಳಲ್ಲಿ ಒಂದು. ಉಡುಪಿಯ ಶ್ರೀಕೃಷ್ಣಮಠಕ್ಕೆ ಬಂದವರು ಅಲ್ಲಿಂದ ಒಂದೂವರೆ ಕಿಮೀ ದೂರದಲ್ಲಿರುವ (ಉಡುಪಿ-ಮಂಗಳೂರಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ -17ರಲ್ಲಿ) ಅಂಬಲಪಾಡಿ ದೇವಸ್ಥಾನಕ್ಕೆ ಹೋಗದೆ ಹಿಂದಿರುಗುವುದಿಲ್ಲ.
ಚೋಳರ ಕಾಲದ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದ ಕಟ್ಟಡದಲ್ಲಿ ಅಲ್ಲಲ್ಲಿ ಇರುವ ಕೆತ್ತನೆಗಳು ಜೈನ ಧರ್ಮದ ಸಂಕೇತಗಳನ್ನು ಪ್ರತಿನಿಧಿಸುತ್ತವೆ. ಶಂಖ,ಚಕ್ರ, ಗಧಾ ಪದ್ಮಧಾರಿ ಜನಾರ್ದನ ವಿಗ್ರಹ ಅತ್ಯಂತ ಸುಂದರವಾಗಿದೆ.
ದಕ್ಷಿಣ ಕನ್ನಡದ ಆಗಮೋಕ್ತ ದೇವಸ್ಥಾನಗಳ ಲಕ್ಷಣಗಳಾದ ಗರ್ಭಗುಡಿ, ತೀರ್ಥ ಮಂಟಪ, ಪ್ರದಕ್ಷಿಣಾ ಪಥ, ದೊಡ್ಡ ಬಲಿಕಲ್ಲು, ಧ್ವಜ ಸ್ತಂಭ, ವಿಸ್ತಾರವಾದ ಹೊರ ಪ್ರಾಂಗಣ, ಮುಖಮಂಟಪ, ಗೋಪುರಗಳನ್ನು ಒಳಗೊಂಡಿವೆ. ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಒಂದೇ ಆವರಣದಲ್ಲಿರುವುದು ಇಲ್ಲಿನ ವಿಶೇಷ. ದೇವಸ್ಥಾನದ ಆಡಳಿತವನ್ನು ‘ಬಲಾಳ’ ವಂಶದವರು ನೋಡಿಕೊಳ್ಳುತ್ತಾರೆ.
ಮಾಘ ಶುದ್ಧ ದ್ವಾದಶಿಯಿಂದ ಕೃಷ್ಣ ಪಕ್ಷದ ಪಂಚಮಿಯವರೆಗೆ ವರ್ಷಾವಧಿ ಇಲ್ಲಿ ಉತ್ಸವವಿರುತ್ತದೆ. ಮಾಘ ಪೌರ್ಣಮಿ ದಿನ ಧ್ವಜಾರೋಹಣ, ಕೃಷ್ಣ ತದಿಗೆ ದಿನ ರಥೋತ್ಸವ ಇಲ್ಲಿನ ಮುಖ್ಯಹಬ್ಬ. ರಥೋತ್ಸವದ ದಿನ ರಥಾರೂಢನಾಗಿ ಬರುವ ಜನಾರ್ದನನನ್ನು ತಾಯಿ ಮಹಾ ಕಾಳಿ ಸ್ವಾಗತಿಸಿ ಒಳಕ್ಕೆ ಕರೆದುಕೊಂಡು ಬಂದು, ಜನಾರ್ದನ ಉತ್ಸವ ಮೂರ್ತಿಯನ್ನು ಹೊತ್ತವರ ಸಮ್ಮುಖದಲ್ಲಿ ಮಹಾಕಾಳಿಯ ಆವೇಶ ಪಡೆದ ಪಾತ್ರಿಯು ಸಂಭ್ರಮದಿಂದ ನರ್ತಿಸುವುದು ಈ ಉತ್ಸವದ ದೊಡ್ಡ ಆಕರ್ಷಣೆ. ಇನ್ನುಳಿದಂತೆ ನವರಾತ್ರಿ ಇಲ್ಲಿನ ದೊಡ್ಡ ಹಬ್ಬ.
ದೇವತಾ ವಿಗ್ರಹಗಳು ಸಾಮಾನ್ಯವಾಗಿ ಪೂರ್ವಾಭಿಮುಖವಾಗಿ ಇರುತ್ತವೆ. ಅಂಬಲಪಾಡಿಯಲ್ಲಿ ಮಹಾಕಾಳಿ ಪಶ್ಚಿಮಾಭಿಮುಖವಾಗಿ ನಿಂತಿದ್ದಾಳೆ. ಶಂಖ, ಚಕ್ರ, ಖಡ್ಗ, ಪಾನಪಾತ್ರೆ ಹಿಡಿದು ರಾಕ್ಷಸರ ರುಂಡಮಾಲೆ ಧರಿಸಿ ರಕ್ತಬೀಜಾಸುರನ ನೆತ್ತರಿಗೆ ನಾಲಿಗೆ ಚಾಚಿ ನಿಂತಿರುವ ಆರು ಅಡಿ ಎತ್ತರದ ವಿಗ್ರಹ ಆಕರ್ಷಕವಾಗಿದೆ. ಕಾಳಿ ಅಮ್ಮನ ಗುಡಿ ಇಪ್ಪತ್ತೆರಡು ಕಂಬಗಳ ವೈಭವದ ಮಂದಿರ. ಮಹಾಕಾಳಿ ಗುಡಿಯ ವಠಾರದಲ್ಲಿ ಶಾಸ್ತಾವು, ಪಂಜುರ್ಲಿ, ಕಲ್ಕುಟಿಗ ಇತ್ಯಾದಿ ದೈವ ದೇವತೆಗಳು, ನವಗ್ರಹಗಳು ಹಾಗೂ ನವಗ್ರಹ ವೃಕ್ಷಗಳಿವೆ.
‘ದರ್ಶನ’ ಸೇವಾ ವಿಶೇಷ: ಪ್ರತಿ ಶುಕ್ರವಾರ ದೇವಿಯ ಆವೇಶ ಪಡೆದ ‘ಪಾತ್ರಿ’ಯ ಮೂಲಕ ನಡೆಯುವ ‘ಪ್ರಶ್ನೋತ್ತರ’ ಇಲ್ಲಿ ಶತಮಾನಗಳಿಂದ ಬಂದ ‘ದರ್ಶನ’ ಪದ್ಧತಿ. ಶುಕ್ರವಾರ ಸಂಜೆ 5.30ಕ್ಕೆ ಪ್ರಾರಂಭವಾಗುವ ದರ್ಶನ ರಾತ್ರಿ 8 ಗಂಟೆಯವರೆಗೆ ನಡೆಯುತ್ತದೆ. ಭಕ್ತರು ತಮ್ಮ ಸಂದೇಹ, ಭಯ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಈ ಸಂದರ್ಭದಲ್ಲಿ ಬಗೆ ಹರಿಸಿಕೊಳ್ಳಬಹುದು. ಶುಕ್ರವಾರ ಬೆಳಿಗ್ಗೆ 7.30ರಿಂದ 9 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ದಿನಕ್ಕೆ 30 ಜನರಿಗೆ ಮಾತ್ರ ಅವಕಾಶವಿದೆ. ಸಂಜೆ ಪ್ರಶ್ನೋತ್ತರ ನಡೆಯುತ್ತದೆ.
ಇಷ್ಟಾರ್ಥ ಸಿದ್ಧಿಗೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ‘ಮಹಾ ಚಂಡಿಕಾಯಾಗ’ ಇಲ್ಲಿ ನಡೆಯುವ ನಿರಂತರ ಧಾರ್ಮಿಕ ಕಾರ್ಯಕ್ರಮ. ಯಾಗಕ್ಕೆ ನಿಗದಿಯಾದ ಹಣ ಪಾವತಿ ಮಾಡಿದರೆ ಅದರ ಸಿದ್ಧತೆಗಳನ್ನು ಇಲ್ಲಿನ ಅರ್ಚಕರೇ ನಿರ್ವಹಿಸುತ್ತಾರೆ. (ಶುಕ್ರವಾರ ಹಾಗೂ ಏಕಾದಶಿ ದಿನ ಚಂಡಿಕಾಯಾಗ ಮಾಡಿಸುವುದಿಲ್ಲ)
ಬೆಳಿಗ್ಗೆ 5 ಗಂಟೆಗೆ ದೇವಳದ ಬಾಗಿಲು ತೆರೆಯುತ್ತದೆ. ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಬಾಗಿಲು ಮುಚ್ಚುತ್ತಾರೆ. ನಂತರ ರಾತ್ರಿ 8 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ಸವಾಹನಗಳಿಗೆ ಪೂಜೆ, ಸಮಾರಾಧನೆ, ಸರ್ವಸೇವೆ,‘ಹೂವಿನ ಪೂಜೆ’ ಹಾಗೂ ಉತ್ತಮ ಕಲ್ಪ ‘ಹೂವಿನ ಪೂಜೆ’ ಇತ್ಯಾದಿ 28ಕ್ಕೂ ಹೆಚ್ಚು ಸೇವೆಗಳು ಈ ದೇವಸ್ಥಾನದಲ್ಲಿ ನಡೆಯುತ್ತವೆ.
ಭಕ್ತರು ತಮ್ಮ ಹೆಸರು, ವಿಳಾಸವನ್ನು ದೇವಸ್ಥಾನದ ಪುಸ್ತಕದಲ್ಲಿ ಒಮ್ಮೆ ನೋಂದಾಯಿಸಿದರೆ ಅವರಿಗೆ ನಿರಂತರವಾಗಿ ವರ್ಷಕ್ಕೊಮ್ಮೆ ಪ್ರಸಾದ ಕಳುಹಿಸುವ ವ್ಯವಸ್ಥೆ ಇಲ್ಲಿದೆ. ಸೇವಾ ವಿವರಗಳಿಗೆ ದೇವಸ್ಥಾನದ ಕಚೇರಿ ದೂರವಾಣಿ 0820-2520871 ಸಂಪರ್ಕಿಸಬಹುದು.
ಪ್ರತಿ ಶುಕ್ರವಾರ ಮಾತ್ರ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಇದೆ. ಅಲ್ಲದೇ ಸ್ಥಳೀಯ ಎರಡು ಸಾವಿರ ಶಾಲಾ ಮಕ್ಕಳಿಗೆ ಆ ದಿನ ಊಟದ ಪ್ರಸಾದ ನೀಡಲಾಗುತ್ತದೆ. ಈ ದೇವಸ್ಥಾನದ ಆವರಣದಲ್ಲಿ ಯಾವುದೇ ಖಾಸಗಿ ಶುಭ ಸಮಾರಂಭ (ಮದುವೆ, ಮುಂಜಿ ಇತ್ಯಾದಿ)ಗಳಿಗೆ ಅವಕಾಶವಿಲ್ಲ.
ಭಕ್ತರಿಂದ ಪತ್ರ: ಪ್ರತಿ ವರ್ಷ ಅಂಚೆ ಮೂಲಕ 10ರಿಂದ 15 ಸಾವಿರ ಮನಿಯಾರ್ಡರ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಪತ್ರಗಳು ದೇವಸ್ಥಾನಕ್ಕೆ ಬರುತ್ತವೆ. ತಮ್ಮ ಕಷ್ಟಗಳನ್ನು ಯಾರಲ್ಲೂ ಹೇಳಿಕೊಳ್ಳಲಾಗದವರು ಇಲ್ಲಿಗೆ ಪತ್ರ ಬರೆದುಕೊಳ್ಳುತ್ತಾರೆ. ಈ ಎಲ್ಲ ಪತ್ರಗಳಿಗೆ ದೇವಸ್ಥಾನದಿಂದ ಉತ್ತರ ಬರೆದು ಪ್ರಸಾದವನ್ನು ಭಕ್ತರಿಗೆ ಕಳುಹಿಸಿ ಕೊಡುವ ಸಂಪ್ರದಾಯವಿದೆ.
ವಿಶ್ರಾಂತಿ ಗೃಹ: ಇಲ್ಲಿಗೆ ಬರುವ ಭಕ್ತರು ಉಳಿದುಕೊಳ್ಳಲು ವಿಶ್ರಾಂತಿ ಗೃಹಗಳಿವೆ. ದೇವಸ್ಥಾನಕ್ಕೆ ಬರುವ ಭಕ್ತರು ಉಡುಪಿಯಲ್ಲಿ ಉಳಿದುಕೊಳ್ಳಬಹುದು ರಥಬೀದಿಯಲ್ಲಿ ಛತ್ರಗಳಿವೆ.
ಉಡುಪಿಯಿಂದ ಆರು ಕಿಮೀ ದೂರದ ಮಲ್ಪೆ ಬೀಚ್, ಸೇಂಟ್ ಮೇರಿಸ್ ದ್ವೀಪಕ್ಕೆ ಹೋಗಿಬರಬಹುದು. 6 ಕಿಮೀ ದೂರದ ಮಣಿಪಾಲ ಎಂಡ್ ಪಾಯಿಂಟ್ ವೀಕ್ಷಣೆ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿಗೆ ಇಲ್ಲಿಂದ ಹೋಗಬಹುದು.
ಸೇವಾ ವಿವರ
-ಕೈ ಪೂಜೆ, ಕಣಿ ಕಾಣಿಕೆ - 5 ರೂ
-ಪ್ರಶ್ನೋತ್ತರ .................70 ರೂ
-ಹೂವಿನ ಪೂಜೆ..............70 ರೂ
-ಉತ್ತಮ ಕಲ್ಪ ಹೂವಿನ ಪೂಜೆ.. 140 ರೂ
-ಸರ್ವ ಸೇವೆ ...... 250 ರೂ
-ಹನ್ನೆರಡು ಜನರಿಗೆ ಸಮಾರಾಧನೆ .. 1000ರೂ
-ಮಹಾ ಚಂಡಿ ಯಾಗ .........8000 ರೂ
-ನಂದಾದೀಪ ಸೇವೆ (ವರ್ಷಕ್ಕೆ).... 600ರೂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.