ADVERTISEMENT

ತೂಗು ಸೇತುವೆ ನಿರೀಕ್ಷೆಯಲ್ಲಿ...

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2016, 19:30 IST
Last Updated 1 ಆಗಸ್ಟ್ 2016, 19:30 IST
ತೂಗು ಸೇತುವೆ ನಿರೀಕ್ಷೆಯಲ್ಲಿ...
ತೂಗು ಸೇತುವೆ ನಿರೀಕ್ಷೆಯಲ್ಲಿ...   

ಆಕಾಶಕ್ಕೆ ಏಣಿಹಾಕುವ, ಆಕಾಶದಲ್ಲೇ ಅಟ್ಟಣಿಗೆ ನಿರ್ಮಿಸಿರುವ ಹಂತಕ್ಕೆ ತಂತ್ರಜ್ಞಾನ ಮುಂದುವರಿದರೂ ಮಲೆನಾಡಿನ ಕುಗ್ರಾಮಗಳಲ್ಲಿ, ಹಾಡಿಗಳಲ್ಲಿ ವಾಸವಿರುವ ಗಿರಿಜನರು, ಅರಣ್ಯವಾಸಿಗಳ ಬವಣೆ ಮಾತ್ರ ಬದಲಾಗಿಲ್ಲ.

ಹೊರ ಜಗತ್ತಿಗೆ ಸಂಪರ್ಕ ಸಾಧಿಸಲು ಮೊಬೈಲ್‌ ಸಿಗ್ನಲ್‌ ಇಲ್ಲ, ಹಾಡಿ ಬೆಳಗಲು ವಿದ್ಯುತ್‌ ದೀಪವಿಲ್ಲ, ಪಕ್ಕದ ಊರು, ಹತ್ತಿರದ ಪಟ್ಟಣದ ಜತೆಗೆ ಸಂಪರ್ಕ ಸಾಧಿಸಲು ಸೇತುವೆಗಳೂ ಇಲ್ಲ. ಹೊರ ಪ್ರಪಂಚದ ಜತೆಗಿನ ಸಂಪರ್ಕ ಸುಲಭವಾಗಿಸುವ ಭರವಸೆಯಾಗಿ ಕಾಣಿಸಿದ್ದ ‘ತೂಗುಸೇತುವೆ ಭಾಗ್ಯ’ ಮಲೆನಾಡಿನಲ್ಲಿ ಎಲ್ಲಾ ಭಾಗಕ್ಕೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ. ಕಾಲುಸಂಕ ನಿರ್ಮಿಸುವ ಸಾಹಸಿಗಳು ಕಡಿಮೆಯಾಗುತ್ತಾ, ಮಲೆನಾಡಿನ ಅರಣ್ಯವಾಸಿಗಳು ಇಂದಿಗೂ ನಡುಗಡ್ಡೆಯೊಳಗೆ ಬಂದಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಕಾಲುಸಂಕ ನಿರ್ಮಿಸುವುದು, ಕಾಲುಸಂಕ ಸರಾಗವಾಗಿ ದಾಟಿ ಹೋಗುವುದು ಅರಣ್ಯವಾಸಿಗಳಿಗೆ ಕರತಲಕಮಲಕ ವಿದ್ಯೆ. ಮಳೆಗಾಲದಲ್ಲಿ ಕಾಲುಸಂಕ ದಾಟುವಾಗ ಆಯತಪ್ಪಿ ಹೊಳೆಗೆ ಬಿದ್ದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈಜು ಬಲ್ಲವರು ಹೇಗೋ ದಡ ಸೇರಿಯಾರು. ಆದರೆ, ಶಾಲಾ ಮಕ್ಕಳು, ವೃದ್ಧರು, ರೋಗಿಗಳ ಪಾಡು ಹೇಳತೀರದು. ಕಾಲುಸಂಕ ದಾಟಲು ಮಳೆಗಾಲದಲ್ಲಂತೂ ಪರದಾಡಲೇಬೇಕು. ಕಾಲಚಕ್ರ ಉರುಳುತ್ತಲೇ ಇದೆ, ಆದರೆ, ಕಾಲುಸಂಕದ ಜಾಗದಲ್ಲಿ ತೂಗುಸೇತುವೆಯ ಕನಸು ಕಂಡಿದ್ದ ಜನರಿಗೆ ಮಾತ್ರ ಅದು ಸಿಗದೆ, ಆಕಾಶಬುಟ್ಟಿಯಾಗಿಯೇ ಕಾಣಿಸುತ್ತಿದೆ.

ಅರಣ್ಯವಾಸಿಗಳು, ಗಿರಿಜನರು ಹೆಚ್ಚು ವಾಸವಿರುವ ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ ಹಾಗೂ ಮೂಡಿಗೆರೆ ಪ್ರದೇಶಗಳಲ್ಲಿ ಈಗಲೂ ಅಲ್ಲೊಂದು, ಇಲ್ಲೊಂದು ಎನ್ನುವಂತೆ ಕಾಲುಸಂಕ ಬಳಕೆಯಲ್ಲಿವೆ. ಊರನ್ನು ನಡುಗಡ್ಡೆಯಾಗಿಸಿರುವ ಹಳ್ಳ, ತೊರೆಗಳನ್ನು ದಾಟಲು ಈಗಲೂ ಕಾಲುಸಂಕವೇ ಸಂಪರ್ಕ ಸೇತುವೆ.

ಹೇಮಾವತಿ, ಭದ್ರಾ, ತುಂಗಾ ನದಿಗಳಿಗೆ ಅಲ್ಲಲ್ಲಿ ತೂಗು ಸೇತುವೆಗಳು ನಿರ್ಮಾಣವಾಗಿರುವುದರಿಂದ ಕಾಲುಸಂಕದ ಅವಲಂಬನೆ ಕ್ರಮೇಣ ಕಡಿಮೆಯಾಗುತ್ತಿದೆ. ನಕ್ಸಲ್‌ಬಾಧಿತ ಪ್ರದೇಶದ ಅರಣ್ಯವಾಸಿಗಳಿಗೆ ಸುಳ್ಯ ಮೂಲದ ಸಿವಿಲ್‌ ಎಂಜಿನಿಯರ್‌ ಗಿರೀಶ್‌ ಭಾರದ್ವಾಜ್‌ ತೂಗುಸೇತುವೆ ಪರಿಚಯಿಸದಿದ್ದರೆ, ಜಯಪುರದ ಟರ್ಬೋ ರತ್ನಾಕರ್‌ ಟರ್ಬೋ ವಿದ್ಯುತ್‌ ಪರಿಚಯಿಸದಿದ್ದರೆ ಅರಣ್ಯವಾಸಿಗಳ ಬದುಕು ಇನ್ನಷ್ಟು ದುರ್ಬರವಾಗಿರುತ್ತಿತ್ತು ಎಂದು ನೆನೆಯುತ್ತಾರೆ.

ಶೃಂಗೇರಿ ತಾಲ್ಲೂಕಿನ ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕಡಿಬೈಲಿನ ಹೆಮ್ಮಿಗೆಯಲ್ಲಿ ದೊಡ್ಡ ಹಳ್ಳ ದಾಟಲು ಈಗಲೂ ಜನರು ಕಾಲುಸಂಕವನ್ನೇ ಅವಲಂಬಿಸಬೇಕಾಗಿದೆ.

ಕೆರೆಕಟ್ಟೆ ಮತ್ತು ಹಜರತ್‌ ಸಮೀಪ ದಶಕದ ಹಿಂದೆ ತುಂಗಾ ನದಿಗೆ ಸೇತುವೆ ಕಟ್ಟುವ ಮೊದಲು, ನದಿ ದಾಟಲು ಕಾಲುಸಂಕವೇ ಬಳಕೆಯಲ್ಲಿತ್ತು. ಹಜರತ್‌ ಮತ್ತು ಸುಂಕದಮಟ್ಟಿ, ಯಡದಾಳು ಸಮೀಪದ ಮೂಡ್ಲು, ಮಗೆಬೈಲು, ಸಿರಿಮನೆಯಲ್ಲಿ ತುಂಗಾ ನದಿ ಸೇರುವ ಹಳ್ಳಗಳನ್ನು ದಾಟಲು ಜನರು ಇತ್ತೀಚಿನವರೆಗೂ ಕಾಲುಸಂಕಗಳನ್ನೇ ಬಳಸುತ್ತಿದ್ದರು. ಇಲ್ಲೆಲ್ಲ ಈಗ ತೂಗು ಸೇತುವೆಗಳು ಬಂದಿವೆ. ಆದರೆ, ಹೆಮ್ಮಿಗೆಯ ಜನರು ಕನಸು ಮಾತ್ರ ನನಸಾಗಿಲ್ಲ. ಗ್ರಾಮಕ್ಕೆ ತೂಗುಸೇತುವೆ ಮಂಜೂರಾಗದೆ, ಪ್ರಸ್ತಾವದಲ್ಲೇ ಉಳಿದಿದೆ. ತೂಗುಸೇತುವೆಗಾಗಿ ದನಿಎತ್ತುವವರೂ ಇಲ್ಲ ಎನ್ನುವುದು ಹೆಮ್ಮಿಗೆಯ ನಿವಾಸಿಗಳ ಅಳಲು.

ಕೆರೆಕಟ್ಟೆ ಪಂಚಾಯಿತಿಯ ಹರೇಬಿಳಲು ಈಗಲೂ ರಸ್ತೆ, ಸೇತುವೆ ಸಂಪರ್ಕದಿಂದ ವಂಚಿತವಾಗಿರುವ ಗ್ರಾಮ. ಇಲ್ಲಿ 15ರಿಂದ 20 ಕುಟುಂಬಗಳಿದ್ದು, ಹತ್ತಿರದ ನೆಮ್ಮಾರಿಗೆ ಬರಲು 3.50 ಕಿ.ಮೀ. ಸುತ್ತಿ ಬಳಸಿ, ಗದ್ದೆ, ತೋಟ ಹಾದು ಬರಬೇಕು. ತುಂಗಾ ನದಿ ಈ ಗ್ರಾಮ ಮತ್ತು ನೆಮ್ಮಾರು ನಡುವೆ ಹರಿಯುತ್ತಿದ್ದು, ಗ್ರಾಮ ನಡುಗಡ್ಡೆಯಾಗಿದೆ.

ಈ ಗ್ರಾಮಕ್ಕೆ ಹತ್ತಿರದ ಗ್ರಾಮ ಪಂಚಾಯಿತಿ ನೆಮ್ಮಾರು. ಸಣ್ಣಪುಟ್ಟ ಕೆಲಸಕ್ಕೂ 17 ಕಿ.ಮೀ. ದೂರದ ನೆಮ್ಮಾರಿಗೆ ಕಾಲುಸಂಕ ದಾಟಿ ಹೋಗಬೇಕು. ಗ್ರಾಮದಲ್ಲಿದ್ದ ಶಾಲೆಯೂ ಮುಚ್ಚಿ ಹೋಗಿ, ಮಕ್ಕಳು ಗ್ರಾಮದಿಂದ 3 ಕಿ.ಮೀ. ದೂರದಲ್ಲಿರುವ ಸುಂಕದಮಟ್ಟಿ ತೂಗುಸೇತುವೆ ಮೂಲಕ ತುಂಗಾ ನದಿ ದಾಟಿ ನೆಮ್ಮಾರು ಸೇರಬೇಕು.

ಎನ್‌.ಆರ್‌.ಪುರ ತಾಲ್ಲೂಕಿನ ಬಾಳೆಹೊನ್ನೂರು ಸಮೀಪದ ಕರ್ಕೇಶ್ವರ ಗ್ರಾಮ ಪಂಚಾಯಿತಿಯ ಹಾರೆಕೊಪ್ಪದಲ್ಲಿ ಸ್ಥಳೀಯ ನಿವಾಸಿಗಳಿಗೆ ಹೊರ ಜಗತ್ತಿನ ನಡುವಿನ ಸಂಪರ್ಕಕ್ಕೆ ಕಾಲುಸಂಕವೇ ಸೇತುವೆ. 50ರಿಂದ 60 ಮನೆಗಳಿರುವ ಈ ಹಳ್ಳಿಯ ಜನರು ಬಾಳೆಹೊನ್ನೂರು, ಗಡಿಗೇಶ್ವರಕ್ಕೆ ಬರಲು ಇದೇ ಕಾಲುಸಂಕ ಹಾದುಬರಬೇಕು.

ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ ಇದೆ. ಮಾಧ್ಯಮಿಕ ಶಾಲೆ, ಪ್ರೌಢಶಾಲೆ, ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಕೈಯಲ್ಲಿ ಪಾಟಿಚೀಲ ಹಿಡಿದುಕೊಂಡು, ಸರ್ಕಸ್‌ ಮಾಡುತ್ತಾ ಇದೇ ಕಾಲು ಸಂಕವನ್ನು ಬೆಳಿಗ್ಗೆ, ಸಂಜೆ ದಾಟಬೇಕು. ರೋಗರುಜಿನ ಬಂದರೂ ರೋಗಿಗಳು ಆಸ್ಪತ್ರೆ ಕಾಣಲು ಜೀವ ಕೈಯಲ್ಲಿ ಹಿಡಿದುಕೊಂಡು ಇದೇ ಕಾಲುಸಂಕ ದಾಟಿ, ಬಾಳೆಹೊನ್ನೂರು ಸೇರಬೇಕು.

ಕಳಸ–ಹೊರನಾಡು ಮಾರ್ಗದಲ್ಲಿ ಸಿಗುವ ಮುಂಡುಗದ ಮನೆ ಬಳಿ 2 ಕಾಲು ಸಂಕಗಳು ಬಳಕೆಯಲ್ಲಿವೆ. ಕಳಸ ಸಮೀಪದ ಬೇಡಕ್ಕಿಹಳ್ಳದ ಕಾಲುಸಂಕ ಹೊರಜಗತ್ತಿನ ಸಂರ್ಪಕಕ್ಕೆ ಪ್ರಮುಖ ಸೇತುವೆ. ಕಾಲಚಕ್ರ ಉರುಳಿದಂತೆ ಸವಕಲಾಗುತ್ತಿರುವ ಕಾಲುಸಂಕದ ಬದಲು ತೂಗು ಸೇತುವೆ ಬರುವ ನಿರೀಕ್ಷೆಯೇ ಇಲ್ಲಿನ ಜನರಲ್ಲಿ ತುಂಬಿಕೊಂಡಿದೆ.

ಕಾಲುಸಂಕ ಹೇಗೆ ಕಟ್ಟುವುದು
ಕಾಲುಸಂಕ ಕಟ್ಟುವುದು ಒಂದು ಕಲೆ ಮತ್ತು ಸಾಹಸದ ಕೆಲಸ. ಕಾಲುಸಂಕ ಕಟ್ಟುವುದರಲ್ಲಿ ಗಿರಿಜನರು ಸಿದ್ಧಹಸ್ತರು. ಸಣ್ಣ ನದಿ, ದೊಡ್ಡ ಹಳ್ಳ, ಪುಟ್ಟ ತೊರೆಗಳ ಎರಡೂ ದಂಡೆಯಲ್ಲಿ ಮರಗಳು ಎದುರುಬದುರು ಸಿಗುವ ಜಾಗ ಗುರುತಿಸಿ, ಮರದ ರೆಂಬೆಗಳನ್ನು ಬಗಿನೆ ಬೀಳಿನಿಂದ ಎಳೆದು ಕಟ್ಟಲಾಗುತ್ತದೆ.

ಈ ಬಗಿನೆಬೀಳಿಗೆ ಒತ್ತಾಗಿ ಹಗ್ಗಕಟ್ಟಿ, ಅಡಿಕೆ ಅಥವಾ ಬಗಿನಿ ದಬ್ಬೆಗಳನ್ನು ಹಾಸಿ, ತೂಗು ಸೇತುವೆಯಂತೆ ಬಳಸುತ್ತಾರೆ. ಹಳ್ಳ, ತೊರೆಗಳ ಹರವು ಕಡಿಮೆ ಇದ್ದರೆ ಉದ್ದನೆಯ ಮರದ ದಿಮ್ಮಿಗಳನ್ನೇ ಅಡ್ಡಲಾಗಿ ಬೀಳಿಸಿ ಕಾಲುಸಂಕದಂತೆ ಬಳಸುವ ಪದ್ಧತಿ ಮಲೆನಾಡು ಮತ್ತು ಗಿರಿಜನ ಪ್ರದೇಶಗಳಲ್ಲಿ ಬಳಕೆಯಲ್ಲಿದೆ. ಕಾಲುಸಂಕ ನಿರ್ಮಿಸುವ ಕುಶಲಿಗಳೂ, ಸಾಹಸಿಗಳು ಈಗ ಮಲೆನಾಡಿನಲ್ಲಿ ಕಡಿಮೆಯಾಗುತ್ತಿದ್ದಾರೆ ಎನ್ನುತ್ತಾರೆ ಹೊಳೆಹದ್ದು ಕೃಷಿಕ ಕೃಷ್ಣಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.