ADVERTISEMENT

ದೊಡ್ಡಕಾಯಪ್ಪನ ಉತ್ಸವ

ನಾ.ಕಾರಂತ ಪೆರಾಜೆ
Published 30 ಜನವರಿ 2012, 19:30 IST
Last Updated 30 ಜನವರಿ 2012, 19:30 IST
ದೊಡ್ಡಕಾಯಪ್ಪನ ಉತ್ಸವ
ದೊಡ್ಡಕಾಯಪ್ಪನ ಉತ್ಸವ   

ತುಮಕೂರು ಜಿಲ್ಲೆಯ ಕೊರಟಗೆರೆ ಸನಿಹದ ಕುರಂಕೋಟೆ ಒಂದು ಪುಟ್ಟ ಹಳ್ಳಿ. ಇಲ್ಲಿದೆ, ಪ್ರಾಚೀನ ಆಂಜನೇಯ ಸ್ವಾಮಿ ದೇವಸ್ಥಾನ. ಈತ ಭಕ್ತರ ಪಾಲಿಗೆ  ದೊಡ್ಡಕಾಯಪ್ಪ. ಬಹುಶಃ ದೊಡ್ಡದಾದ ಕಾಯವಿರುವುದರಿಂದ ಈ ಹೆಸರು ಬಂದಿರಬಹುದು.

ಸನ್ನಿ, ಬುದ್ಧಿಮಾಂದ್ಯತೆ, ನಿಶ್ಶಕ್ತಿ, ವಾಸಿಯಾಗದೆ ಕಾಡಿಸುವ ಕಾಯಿಲೆಗಳನ್ನು ದೊಡ್ಡಕಾಯಪ್ಪ ವಾಸಿ ಮಾಡುತ್ತಾನೆಂಬ ನಂಬಿಕೆ. ನಿವಾರಣೆಗಾಗಿ ಹತ್ತೋ, ಹದಿನೈದು ದಿನ ದೇವ ಸನ್ನಿಧಿಯ ವಾತಾವರಣದಲ್ಲಿ ಬಿಡಾರ ಹೂಡುವುದು ಇಲ್ಲಿನ ದೊಡ್ಡ ಹರಕೆ!

ಬೇಸಿಗೆಯಲ್ಲೂ  ಬತ್ತದ ಮಜ್ಜಾನಬಾವಿ ಎಂಬ ಪುಷ್ಕರಿಣಿಯಿದೆ. ಇದರ ನೀರನ್ನು ಪ್ರೋಕ್ಷಿಸಿಕೊಂಡು, ದೇವ ದರ್ಶನ ಮಾಡಿ, ಅಲ್ಲೆೀ ಅಡುಗೆ ಮಾಡಿ ಉಂಡು ವಾಸ. ರಾತ್ರಿ ವಸತಿಗಾಗಿ ಭೋಜನ ಶಾಲೆಯಿದೆ. ತೀರಾ ಕಟ್ಟುನಿಟ್ಟಿನ ವ್ರತ ಪಾಲಿಸುವವರಿಗೆ ದೇವಳದ ವರಾಂಡದಲ್ಲೆೀ ವಸತಿ.  ದೊಡ್ಡಕಾಯಪ್ಪ ಯಾವಾಗ ಹೋಗು ಅಂತ ಅಪ್ಪಣೆ ಕೊಡ್ತಾನೋ ಆಗ  ಹೋಗ್ತೀವಿ  ಎನ್ನುತ್ತಾರೆ ಶಿರಾದ ಸವಿತಾ ಬಾಯಿ.

ಹಗಲೆಲ್ಲಾ ಕೂಲಿ ಮುಗಿಸಿ, ರಾತ್ರಿ ಭೋಜನ ಮಾಡಿ ದೇವಳದಲ್ಲಿ ಇಂತಿಷ್ಟು ದಿವಸ ನಿದ್ರಿಸುವುದೂ ಒಂದು ಹರಕೆ.  `ನೋಡಿ... ಒಂದು ತಿಂಗಳಿಂದ ವಿಪರೀತ ಮೈ ಕೈ ನೋವು. ನನ್ನ ವ್ರತಕ್ಕೆ ಹತ್ತು ದಿವಸವಾಯಿತು. ಈಗ ಪರವಾಗಿಲ್ಲ. ಇನ್ನೈದು ದಿವಸಕ್ಕೆ ಪೂರ್ಣ ಸರಿಹೋಗುತ್ತದೆ~ ಎನ್ನುತ್ತಾರೆ ಇನ್ನೋರ್ವ ಭಕ್ತ ಮಂಜಪ್ಪ.

ರಥಸಪ್ತಮಿಯಲ್ಲಿ ಇಲ್ಲಿ ವಾರ್ಷಿಕ ಜಾತ್ರೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಅಮಾವಾಸ್ಯೆ, ಹುಣ್ಣಿಮೆ ಪರ್ವಕಾಲ, ಶ್ರಾವಣ  ಮಾಸದಲ್ಲಂತೂ ವಿಪರೀತ ದಟ್ಟಣೆ. ಭಕ್ತರನ್ನು  ಸುಧಾರಿಸಲು ಪೂಜಾರಿಗಳಿಗೂ ಕಷ್ಟವಾಗುತ್ತದಂತೆ.

`ದೊಡ್ಡಕಾಯಪ್ಪನನ್ನು  ಕಾಣಲು ಭಕ್ತರು ಬರಿಗೈಯಲ್ಲಿ ಬರುವುದಿಲ್ಲ. ಅಕ್ಕಿ, ತೆಂಗಿನಕಾಯಿಯೊಂದಿಗೆ ದರ್ಶನ. ಈಗ ಪ್ರತೀ ಶನಿವಾರ ದಾಸೋಹವಿದೆ. ಏನಿಲ್ಲವೆಂದರೂ ಕನಿಷ್ಠ ಐನೂರು ಜನ ಭೋಜನ ಮಾಡುತ್ತಾರೆ. ಪುರುಷರಿಗಿಂತಲೂ ಮಹಿಳೆಯರಿಗೆ ದೊಡ್ಡಕಾಯಪ್ಪನಲ್ಲಿ ವಿಶ್ವಾಸ.

ಹೆಚ್ಚಾಗಿ ಶ್ರಮಿಕ ವರ್ಗದ ಕಷ್ಟಗಳನ್ನು ಈತ ಪರಿಹರಿಸುತ್ತಾನೆ. ಮೊದಲೆಲ್ಲಾ ಇಲ್ಲಿಗೆ ಜನವೇ ಬರುತ್ತಿರಲಿಲ್ಲ. ಈಚೆಗೆ ಹತ್ತು ವರ್ಷದಿಂದ ದೂರದ ಊರುಗಳಿಂದ ಜನ ಬರುತ್ತಾರೆ~ ಎನ್ನುತ್ತಾರೆ ಸ್ಥಳೀಯ ಹಿರಿಯರಾದ ದೊಡ್ಡೇಗೌಡರು.

`ಭೋಜನ ಹಾಕಿಸುವ, ಕಟ್ಟಡ ಕಟ್ಟಿಸುವ ಹರಕೆ ಹೇಳಿ ಯಶಸ್ವಿಯಾದವರು ಹರಕೆ ಸಲ್ಲಿಸಿದ್ದಾರೆ. ಜನರ ಕಷ್ಟ ದೂರವಾಗದಿದ್ರೆ ಯಾಕೆ ಸಾರ್ ಜನ ಇಷ್ಟೊಂದು ಸಂಖ್ಯೆಯಲ್ಲಿ ಬರ‌್ತಾರೆ~ ಎಂದು ತೋವಿನಕೆರೆಯ ಹಚ್.ಜೆ.ಪದ್ಮರಾಜು ಪ್ರಶ್ನಿಸುತ್ತಾರೆ. ಅವರ ಪ್ರಕಾರ, ಭಕ್ತರ ನಂಬಿಕೆಗೆ ದೊಡ್ಡಕಾಯಪ್ಪ ಸ್ಪಂದಿಸಿದ್ದಾನೆ. ಇಷ್ಟು ಚಿಕ್ಕ ಹಳ್ಳಿಯಲ್ಲಿ ಕಳೆದ ಒಂದು ವರ್ಷ ಹುಂಡಿಯಲ್ಲಿ ಸೇರಿದ ಕಾಣಿಕೆ ಒಂದು ಲಕ್ಷಕ್ಕೂ ಮಿಕ್ಕಿ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.