ಸಿಟ್ಟು ನೆತ್ತಿಗೇರಿದ ಸಮಯದಲ್ಲಿ ಮಾಡಿದ ತಪ್ಪು, ತಪ್ಪೆಂದು ತಿಳಿಯುವ ಹೊತ್ತಿಗೆ ಕೈಗೆ ಬೇಡಿ ಬಿದ್ದಿತ್ತು... ಕುಡಿದ ಅಮಲಿನಲ್ಲಿ ನಡೆಸಿದ ಅಪರಾಧ, ಅಮಲು ಇಳಿಯುವ ಹೊತ್ತಿಗೆ ಕಂಬಿಯ ಹಿಂದೆ ನಿಲ್ಲಿಸಿತ್ತು... ತಪ್ಪು ಮಾಡದಿದ್ದರೂ ಸಾಕ್ಷಿಯ ಕೊರತೆಯಿಂದ ಜೀವನ ಜೈಲಿನಲ್ಲಿಯೇ ಕೊಳೆಯುವಂತಾಗಿತ್ತು...
‘ಸಾಕಪ್ಪ ಸಾಕು ಈ ಜೀವನ...’ ಎನ್ನುತ್ತಿರುವ ನೂರಾರು ಜೀವಗಳಿಗೆ ಈಗ ಮರುಜೀವ ಸಿಕ್ಕಿದಂತಾಗಿದೆ. ದುಃಖ ದುಮ್ಮಾನಗಳನ್ನು ಮರೆಯುವ ಅವಕಾಶ ದೊರೆತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸುಪ್ತವಾಗಿ ಸತ್ತು ಹೋಗುತ್ತಿದ್ದ ಪ್ರತಿಭಾ ಅನಾವರಣಕ್ಕೆ ಅವಕಾಶ ದೊರೆತಿದೆ. ಇಂಥ ಒಂದು ಚಮತ್ಕಾರ ನಡೆಸಿರುವ ಹಿಂದಿನ ಶಕ್ತಿ ‘ರಂಗಾಯಣ’ ಕಲಾವಿದ ಹುಲಗಪ್ಪ ಕಟ್ಟಿಮನಿ ಅವರದ್ದು.
16 ವರ್ಷಗಳಿಂದ ಕೈದಿಗಳಿಗೆ ನಾಟಕ ಆಡಿಸಿ ಅವರ ಬಾಳಲ್ಲಿ ಭರವಸೆಯ ಬೆಳಕು ಮೂಡಿಸುತ್ತಿದ್ದಾರೆ ಇವರು. ಮೈಸೂರಿನ ಕೈದಿಗಳಿಗೆ ಮೀಸಲು ಇದ್ದ ಈ ಪ್ರಯೋಗ 2012ರಿಂದ ‘ಜೈಲಿನಿಂದ ಜೈಲಿಗೆ ರಂಗಯಾತ್ರೆ’ ಎಂಬ ವಿನೂತನ ಯೋಜನೆಯೊಂದಿಗೆ ತನ್ನ ವ್ಯಾಪ್ತಿ ವಿಸ್ತರಿಸಿದೆ.
ಹುಲಗಪ್ಪ ಕಟ್ಟಿಮನಿ ಅವರಿಗೆ ಸ್ಫೂರ್ತಿ ಅವರ ಗುರುಗಳಾದ ಬಿ.ವಿ. ಕಾರಂತರು. ‘ವಿಭಾ ಮಿಶ್ರಾ’ ಪ್ರಕರಣದಲ್ಲಿ ಕೆಲ ತಿಂಗಳವರೆಗೆ ಬಿ.ವಿ. ಕಾರಂತರು ಭೋಪಾಲ ಜೈಲಿನಲ್ಲಿದ್ದರು. ಆ ಸಮಯದಲ್ಲಿ ಅಲ್ಲಿಯೇ ಕೈದಿಗಳಿಗೆ ಹಾಡು, ಸಂಗೀತ, ಹೇಳಿಕೊಟ್ಟರು. ಇದರಿಂದ ಪ್ರೇರೇಪಿತರಾದ ಕಟ್ಟಿಮನಿ ಅವರು ಬಳ್ಳಾರಿ ಜೈಲಿನಿಂದಲೇ ರಂಗ ತಾಲೀಮು ಶುರು ಮಾಡಿದರು. ಇದಕ್ಕಾಗಿ ಅವರು ಸಂಕಲ್ಪ ಸಂಸ್ಥೆ ಕಟ್ಟಿಕೊಂಡರು. ಕಟ್ಟಿಮನಿಯವರು ರಂಗಾಯಣದ ಕಲಾವಿದರೂ ಆಗಿರುವುದರಿಂದ ಬಿಡುವಾದಾಗ ಮೈಸೂರಿನ ಕೈದಿಗಳಿಗೆ ನಾಟಕ ಮಾಡಿಸಿದರು.
ಎರಡು ವರ್ಷಗಳಿಂದ ಮೈಸೂರು, ಧಾರವಾಡ, ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ರಂಗ ತಾಲೀಮು ಶುರುವಾಗಿದೆ. ವಿವಿಧ ನಿರ್ದೇಶಕರು ನಾಟಕಗಳನ್ನು ಸಜ್ಜುಗೊಳಿಸುತ್ತಾರೆ. ನಂತರ ರಂಗಯಾತ್ರೆ ಶುರುವಾಗುತ್ತದೆ. ಹೀಗೆ ಜೈಲಿನಿಂದ ಜೈಲಿಗೆ ರಂಗಯಾತ್ರೆ ಆರು ತಿಂಗಳಿನ ಪ್ರಕ್ರಿಯೆ. ವಿವಿಧ ಜೈಲುಗಳಲ್ಲಿರುವ ಕೈದಿಗಳು ಪರಸ್ಪರ ಪರಿಚಯವಾಗುತ್ತಾರೆ. ನಾಟಕ ಆಡಿ ಎಲ್ಲರ ಮನಗೆದ್ದು ಮತ್ತೆ ತಮ್ಮ ಜೈಲು ಸೇರುತ್ತಾರೆ.
ಹಲವು ತರಬೇತಿಗಳ ನಂತರ ನಾಟಕದ ಆಯ್ಕೆ, ಪಾತ್ರಗಳ ಹಂಚಿಕೆ ನಡೆಯುತ್ತದೆ. ಇದರಲ್ಲೂ ಪೈಪೋಟಿ. ಮುಖ್ಯ ಪಾತ್ರ ತಾವೇ ಮಾಡಬೇಕು ಎನ್ನುವ ಛಲ. ಮುಖ್ಯ ಪಾತ್ರ ಕೈ ಬಿಟ್ಟು ಹೋಯಿತೆಂಬ ಕಾರಣಕ್ಕೆ ಕೈದಿಯೊಬ್ಬ ಆಸ್ಪತ್ರೆ ಸೇರಿದ ಘಟನೆ ಮೈಸೂರಿನ ಕಾರಾಗೃಹದಲ್ಲಿ ನಡೆದಿದೆ!
ಕೈದಿಗಳ ಹರ್ಷ
‘ಬೇಜಾರು ಕಳೆಯುತ್ತೆ. ಮನೆಯ ಕಡೆ ಚಿಂತೆ ಕಡಿಮೆ ಆಗ್ತದೆ’ ಎನ್ನುವ ಖುಷಿ ಗೋವಿಂದಪ್ಪ ಅವರದ್ದು. ‘ಚಿಂತೆ ಇರಲ್ಲ. ಮನೆಯವರು ಬರದೆ ಇದ್ರೂ ಯೋಚನೆ ಇಲ್ಲ. ಪಾತ್ರದಲ್ಲಿ ಲೀನ ಆಗಿಬಿಡ್ತೀನಿ’ ಎನ್ನುತ್ತಾರೆ ರಾಮಣ್ಣ. ‘13 ವರ್ಷಗಳಿಂದ ನಾಲ್ಕು ಗೋಡೆಗಳ ಮಧ್ಯೆ ಇದ್ದು ಬೇಜಾರೆನಿಸಿತ್ತು. ನಾಟಕದಲ್ಲಿ ತೊಡಗಿಕೊಂಡರೆ ಒತ್ತಡ ಇರಲ್ಲ’ ಎನ್ನುತ್ತಾರೆ ಸಿದ್ದರಾಜು, ಉಜಿರೆಯ ಗಣೇಶ್.
‘ಜೈಲಿನಿಂದ ಬಿಡುಗಡೆಗೊಂಡರೂ ಅವರು ಸಂಪರ್ಕದಲ್ಲಿರುತ್ತಾರೆ. ರಂಗದ ನಂಟು ಬಿಡುವುದಿಲ್ಲ. ಹೀಗೆ ಬಿಡುಗಡೆಗೊಂಡವರಿಗಾಗಿ ರೆಪರ್ಟರಿ ಶುರು ಮಾಡುವ ಯೋಜನೆಯಿದೆ. ಅನೇಕರು ತಮ್ಮ ಮನೆಗೆ, ಊರಿಗೆ ಹೋಗಲು ಇಷ್ಟಪಡುವುದಿಲ್ಲ. ಅಂಥವರ ಜತೆಗೆ ಹವ್ಯಾಸಿ ಕಲಾವಿದರನ್ನು ಸೇರಿಸಿ ಆರು ತಿಂಗಳವರೆಗೆ ನಾಟಕ ಆಡಿಸುವ ಉದ್ದೇಶವಿದೆ’ ಎನ್ನುತ್ತಾರೆ ಕಟ್ಟಿಮನಿ.
ಈ ಬಾರಿ ರಂಗಯಾತ್ರೆಯಲ್ಲಿ ಕಳೆದ ಬಾರಿಯ ನಾಟಕಗಳ ಛಾಯಾಚಿತ್ರಗಳು, ಕೈದಿಗಳು ಬಿಡಿಸಿದ ಚಿತ್ರಕಲೆ, ಟೆರಾಕೋಟ ಕಲಾಕೃತಿಗಳ ಪ್ರದರ್ಶನವೂ ಇರುತ್ತದೆ. ‘ಈ ರಂಗಯಾತ್ರೆಗೆ ನಮ್ಮ ಸಂಕಲ್ಪ ಸಂಸ್ಥೆಯೊಂದಿಗೆ ಕಾರಾಗೃಹ ಇಲಾಖೆಯ ಎಡಿಜಿಪಿ ಕೆ.ವಿ. ಗಗನ್‌ದೀಪ್, ವಿ.ಎಸ್. ರಾಜಾ, ಮೈಸೂರು ಜೈಲಿನ ಅಧೀಕ್ಷಕ ಜಯಸಿಂಹ ಸಹಕಾರ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗವಿದೆ’ ಎಂದು ಮಾಹಿತಿ ನೀಡಿದರು ಕಟ್ಟಿಮನಿ.
ನಾಳೆಯಿಂದ ರಂಗಯಾತ್ರೆ
ನಾಳೆ ಮೈಸೂರಿನ ರಂಗಾಯಣದ ವನರಂಗದಲ್ಲಿ ಸಂಜೆ ಆರು ಗಂಟೆಗೆ ಮೈಸೂರು ಹಾಗೂ ಬೆಂಗಳೂರಿನ ಕೈದಿಗಳಿಂದ ‘ಭಗವದ್ದುಜ್ಜುಕಿಯಂ’, 13ರಂದು ಧಾರವಾಡ ಜೈಲಿನ ಕೈದಿಗಳಿಂದ ‘ಚೋರ ಚರಣದಾಸ’, 14ರಂದು ಬೆಳಗಾವಿಯ ಜೈಲಿನ ಕೈದಿಗಳಿಂದ ‘ಹುಲಿಯ ನೆರಳು’.. 15ರಂದು ಮೈಸೂರಿನ ಕೈದಿಗಳಿಂದ ‘ಜತೆಗಿರುವನು ಚಂದಿರ’ ನಾಟಕ.
ಇದೇ ನಾಟಕಗಳು ಫೆ. 22ರಿಂದ 25ರವರೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ, ಮಾರ್ಚ್ ಒಂದರಿಂದ ನಾಲ್ಕರವರೆಗೆ ಹೆಗ್ಗೋಡಿನ ನೀನಾಸಂನಲ್ಲಿ, ಮಾರ್ಚ್ 17ರಿಂದ 20ರವರೆಗೆ ಸಾಣೇಹಳ್ಳಿಯಲ್ಲಿ. ಮಾರ್ಚ್ 27ರಿಂದ 30ರವರೆಗೆ ಬೆಂಗಳೂರಿನ ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಪ್ರದರ್ಶನಗೊಳ್ಳಲಿವೆ. ಕಟ್ಟಿಮನೆ ಅವರ ಸಂಪರ್ಕಕ್ಕೆ 9743912770.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.