‘ಮನಸು ಸ್ವಚ್ಛ ಇಟ್ಗೊರಿ, ಮನಸಿದ್ದಂಗ ಸಂಗೀತ ಹೊಮ್ಮತದ. ನಿಮ್ಮಾತ್ಮ ನಿಮ್ಮ ಗುರು ಇದ್ದಂಗ. ಅದನ್ನ ಪರಿಶುದ್ಧ ಇಟ್ಗೊರಿ’
‘ಸಿತಾರ್ ಬರೀ ವಾದ್ಯವಲ್ಲ. ಅದು ಧರ್ಮ. ನಮ್ಮನ್ನ ನಿಸರ್ಗದೊಂದಿಗೆ ಬೆಸೀತದ. ಸಿತಾರ್ ತಂತಿ ಮೀಟುವಾಗ ನಿಸರ್ಗದೊಂದಿಗೆ ಒಂದಾಗ್ರಿ. ಇಡೀ ವಿಶ್ವದ ನಾದ ನಿಮ್ಮ ಬೆರಳಿನಿಂದ ಹೊರ ಹೊಮ್ಮತದ. ಇದು ಕಲಿಯೂದಲ್ಲ, ಸಿದ್ಧಿ.’
ಸಿತಾರ್ ವಾದಕ ಬಾಲೆಖಾನ್ ಅವರು ತಮ್ಮ ಮಕ್ಕಳಿಗೆ, ತಮ್ಮ ಶಿಷ್ಯರೆಲ್ಲರಿಗೂ ಹೇಳುತ್ತಿದ್ದ ಮಾತುಗಳಿವು.
ಸಪ್ತಸಿತಾರ್ ವಾದನದ ಪರಿಕಲ್ಪನೆ ಬೆಳಕಿಗೆ ತಂದ ಸಂಗೀತ ಮಾಂತ್ರಿಕ ನಮ್ಮಿಂದ ದೂರ ಸರಿದು ಏಳು ವರ್ಷಗಳಾದವು. ಆದರೆ ಅವರ ಶಿಷ್ಯವೃಂದ ಅವರನ್ನು ಅವರಳಿದ ಮೇಲೆಯೂ ಉಳಿಯುವಂತೆ ಮಾಡಿವೆ.
ಮಿದುಮಾತಿನ, ಮಿತಭಾಷಿ ಉಸ್ತಾದ್ ಬಾಲೆಖಾನ್ ಅವರ ಬದುಕನ್ನು ನೆನಪಿಸಿಕೊಂಡಿದ್ದು ಅವರ ಮಗ, ಸಿತಾರ್ ಕಲಾವಿದ ಉಸ್ತಾದ್ ಹಫೀಜ್ ಖಾನ್. ಬೆಂಗಳೂರಿನಲ್ಲಿ ಉಸ್ತಾದ್ ಬಾಲೆಖಾನ್ ಟ್ರಸ್ಟ್ ಸಂಸ್ಥಾಪನಾ ಅಧ್ಯಕ್ಷ ಹಫೀಜ್ ಖಾನ್ ಅವರ ತಂದೆಯ ಸ್ಮರಣಾರ್ಥ 2010 ರಿಂದ ಪ್ರತಿ ವರ್ಷ ಎರಡು ಕಛೇರಿಗಳನ್ನು ಏರ್ಪಡಿಸುತ್ತಿದ್ದಾರೆ. ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಂದು ಕಛೇರಿ ಹಾಗೂ ಪುಣ್ಯ ಸ್ಮರಣೆಯ ಅಂಗವಾಗಿ ಧಾರವಾಡದಲ್ಲಿ ಮತ್ತೊಂದು ಕಛೇರಿ ನಡೆಯುತ್ತದೆ. ಇದು ಬಾಲೆಖಾನ್ ಅವರ ಕನಸಾಗಿತ್ತು. ದಕ್ಷಿಣ ಭಾರತದಲ್ಲಿ ಮಹಾರಾಷ್ಟ್ರ, ಉತ್ತರ ಕರ್ನಾಟಕ ಪ್ರದೇಶದಲ್ಲಿ ಸಿತಾರ್ ಅನ್ನು ಜನಪ್ರಿಯಗೊಳಿಸಿದ ಅವರು, ಯಾವತ್ತಿಗೂ ಬೆಂಗಳೂರಿನಲ್ಲಿ ಸಿತಾರ್ ಮೋಡಿ ಆವರಿಸಬೇಕು ಎಂದು ಬಯಸುತ್ತಿದ್ದರಂತೆ.
ದಕ್ಷಿಣದಲ್ಲಿಯೂ ಹಿಂದೂಸ್ತಾನಿ ಸಂಗೀತ ಬೆಳಗಬೇಕು, ಸಿತಾರ್ ನಾದ ಮೊಳಗಬೇಕು, ಆ ಕೆಲಸ ನಿಧಾನವಾಗಿ ಆಗಬೇಕು. ಧಾಮ್‌ಧೂಮಿನ ಆರಂಭ ಯಾವತ್ತಿಗೂ ನೆಲೆ ಕಾಣುವುದಿಲ್ಲ, ನೆಲೆಕಾಣಬೇಕೆಂದರೆ ಬೇರೂರಬೇಕು ಎನ್ನುತ್ತಿದ್ದರವರು. ಅದೇ ಆಶಯವನ್ನು ಅವರ ಮಗ ಹಫೀಜ್‌ಖಾನ್ ನೆರವೇರಿಸುತ್ತಿದ್ದಾರೆ, ಭಾರತೀಯ ಸಂಗೀತ ವಿದ್ಯಾಲಯದ ಮೂಲಕ.
ಆದರೆ ಈ ಟ್ರಸ್ಟ್ ಕಟ್ಟುವುದು ಸುಲಭದ ಕೆಲಸವಾಗಿರಲಿಲ್ಲ. ಧಾರವಾಡದಿಂದ ಬೆಂಗಳೂರಿಗೆ ಬಂದು ನೆಲೆಸಿದ ಕಲಾವಿದನಿಗಿದು ಸವಾಲಿನ ಕೆಲಸವೇ ಆಗಿತ್ತು. ದೃಢ ನಿರ್ಧಾರ, ಅಪ್ಪನ ಕನಸನ್ನು ನನಸಾಗಿಸುವ ಅದಮ್ಯ ಆಸೆಗೆ ಸಹೋದರ ಉಸ್ತಾದ್ ರಯೀಸ್ ಖಾನ್, ಸಹೋದರಿಯರು ಬೆನ್ನೆಲುಬಾಗಿ ನಿಂತರು. ಶಿಷ್ಯಕೋಟಿ ಗುರುವಿನ ಸ್ಮರಣೆಗೆ ಹೆಗಲುಕಟ್ಟಿ ನಿಂತಿತು.ಪಂಡಿತ್ ವಿಶ್ವಮೋಹನ್ ಭಟ್, ಪಂಡಿತ್ ವಿನಾಯಕ ತೊರವಿ, ಪೂರ್ಣಿಮಾ ಭಟ್ ಕುಲಕರ್ಣಿ, ಉಸ್ತಾದ್ ಶಾಹಿದ್ ಪರ್ವೇಜ್, ಶ್ರೀನಿವಾಸ ಜೋಷಿ, ಪಂಡಿತ್ ವೆಂಕಟೇಶ್ ಕುಮಾರ್ ಮುಂತಾದವರೆಲ್ಲ ಸ್ಮರಣೆಯಲ್ಲಿ ಪಾಲ್ಗೊಂಡರು. ನಾದ ನದಿಯ ತರಂಗದಲೆಗಳು ಬೆಂಗಳೂರನ್ನು ಆವರಿಸಿಕೊಂಡಿದ್ದೇ ಹೀಗೆ.
ಆದರೆ ಅದಷ್ಟೇ ಸಾಕಿತ್ತೆ? ಟ್ರಸ್ಟ್‌ನಿಂದ ಎರಡು ಕಛೇರಿಗಳಾದರೆ ಸಮಾಧಾನವೆನಿಸೀತೆ?
ಇಲ್ಲ. ಬಾಲೆಖಾನ್ ಅವರ ದೊಡ್ಡ ಗುಣಗಳಿನ್ನೂ ಜನಮಾನಸದಲ್ಲಿ ಬೆಳೆಸಬೇಕಿತ್ತು. ಬಡತನದಿಂದಾಗಿ ವಿದ್ಯೆ ಅಥವಾ ಕಲೆಯಿಂದ ಯಾರೂ ವಂಚಿತರಾಗಬಾರದು. ಶ್ರದ್ಧೆ ಭಕ್ತಿ ಇದ್ದರೆ ಕಲಿತಿದ್ದನ್ನು ಧಾರಾಳವಾಗಿ ಧಾರೆ ಎರೆಯಿರಿ ಎನ್ನುತ್ತಿದ್ದರವರು. ಬಾಳಿನುದ್ದಕ್ಕೂ ಅದನ್ನೇ ಮಾಡಿದರು ಸಹ. ಈ ಪರಂಪರೆ ಜಾರಿಯಲ್ಲಿಡಲು, ಬಡ ವಿದ್ಯಾರ್ಥಿಗೆ, ಹಿಂದೂಸ್ತಾನಿ ಸಂಗೀತ ಪರಂಪರೆಯಲ್ಲಿ ಪರಿಶ್ರಮಿಸಲು ಸಿದ್ಧರಿರುವವಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯವನ್ನೂ ಟ್ರಸ್ಟ್ ಕೈಗೆತ್ತಿಕೊಂಡಿದೆ.
ಧಾರವಾಡದಲ್ಲಿ ಯಾವುದೇ ಕಛೇರಿ ಇರಲಿ, ಉಸ್ತಾದ್ ಬಾಲೆಖಾನ್ ಹಾಗೂ ಪುರಾಣಿಕ ಮಠ ಇಬ್ಬರೂ ಸಭಾಂಗಣದ ಮೊದಲ ಸಾಲಿನಲ್ಲಿರುತ್ತಿದ್ದರು. ಗಾಯಕ ಎಷ್ಟೇ ಹೊಸಬನಾಗಿದ್ದರೂ ತನ್ಮಯರಾಗಿ ಕೇಳುತ್ತಿದ್ದರು. ಈ ಕೇಳುವುದರಿಂದಲೇ ಗಾಯಕರಲ್ಲಿ ಹೊಸ ಹುಮ್ಮಸ್ಸು ಹುಟ್ಟುತ್ತಿತ್ತು. ಕಛೇರಿಗಳು ಗಾಯಕರನ್ನು ಬೆಳೆಸುತ್ತವೆ. ಜೊತೆಗೆ ಗಾಯಕರಲ್ಲಿ ತಾವೆಷ್ಟು ಬೆಳೆದಿದ್ದೇವೆ ಎನ್ನುವ ಮೌಲ್ಯಮಾಪನಕ್ಕೂ ತೊಡಗಿಸುತ್ತವೆ. ಪ್ರತಿ ಕಛೇರಿಯೂ ಅಹಂಕಾರವನ್ನು ಉಡುಗಿಸುತ್ತ, ಕಲಿಕೆ ಇನ್ನೂ ಬಾಕಿ ಇದೆ ಎನ್ನುವ ಅರಿವನ್ನು ಮೂಡಿಸುತ್ತದೆ. ಈ ಅರಿವು ಮಹಾಗುರು. ನಮ್ಮನ್ನು ಸದಾ ಶಿಷ್ಯರನ್ನಾಗಿಸುತ್ತದೆ. ಸದಾ ವಿನೀತರನ್ನಾಗಿಸುತ್ತದೆ. ಈ ನಿಟ್ಟಿನಲ್ಲಿ ಕಛೇರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇನ್ನೊಂದು ಹಿಂದೂಸ್ತಾನಿ ಸಂಗೀತದ ತಾರೆಗಳನ್ನು ಸನ್ಮಾನಿಸುವುದೂ ಟ್ರಸ್ಟ್‌ನ ಕೆಲಸಗಳಲ್ಲಿ ಒಂದಾಗಿದೆ.
ಸಿತಾರ್ ವೇದಕಾಲಗಳಿಂದಲೂ ಸಂಗೀತವಾದ್ಯ ಗಳಲ್ಲಿ ಪ್ರಮುಖ ಪಾತ್ರವಹಿಸಿರುವ ವಾದ್ಯವಾಗಿದೆ. ಸಿತಾರ್ ಇಲ್ಲದ ಹಿಂದೂಸ್ತಾನಿ ಸಂಗೀತವನ್ನು ಊಹಿಸುವುದೂ ಅಸಾಧ್ಯ. ಬಾಲೆಖಾನ್ ಅವರು ಸಿತಾರ್ ನುಡಿಸುತ್ತಿದ್ದರೆ ಸಂಗೀತ ಕೃತಿಯ ಶಬ್ದಗಳು ನಾದ ರೂಪ ಪಡೆಯುತ್ತಿದ್ದವು. ಶಬ್ದಗಳಿಗೆ ಜೀವ ತುಂಬುವ ಕೆಲಸ ಅವರ ಬೆರಳುಗಳಿಂದಾಗುತ್ತಿತ್ತು. ಅಂಥದ್ದೇ ಪ್ರಯತ್ನ ಅವರ ಮಕ್ಕಳಾದ ಹಫೀಜ್ ಮತ್ತು ರಯೀಸ್ ಖಾನ್ ಅವರದ್ದಾಗಿದೆ.
‘ಇದು ಕೇವಲ ಅಭ್ಯಾಸ ಬಲದಿಂದ ಸಾಧಿಸುವುದಲ್ಲ. ಇದು ದೈವೀಕವಾದುದು. ನಮ್ಮೊಳಗಿನಿಂದ ಜೀವ ಪ್ರವಹಿಸುವಂತಾಗಬೇಕು. ನಾವು ಪ್ರಕೃತಿಯಿಂದ ದೂರವಾದಷ್ಟೂ ಕಲೆ ನಮ್ಮಿಂದ ದೂರವಾಗುತ್ತದೆ. ಕಲೆಯನ್ನು ಉದ್ಯೋಗ ಮಾಡಿಕೊಳ್ಳಬಹುದು. ಆದರೆ ಕಲೆಯನ್ನು ಸಿದ್ಧಿ ಮಾಡಿಕೊಳ್ಳಲು ಸಾಕಷ್ಟು ಬದ್ಧತೆ ಬೇಕು. ಆಯ್ಕೆ ಕಲಿಯುವವರಿಗೆ ಬಿಟ್ಟಿದ್ದು’ ಎನ್ನುವುದು ಬಾಲೆಖಾನ್ ಅವರ ನಿಲುವು ಆಗಿತ್ತು. ಬಾಲೇಖಾನ್ 2007ರಲ್ಲಿ ಹೃದಯಾಘಾತದಿಂದ ಬದುಕಿಗೆ ವಿದಾಯ ಹೇಳಿದರು. ಅವರ ನಾದ ನದಿ, ನಿಧಿ ಎರಡೂ ಹೆಚ್ಚಿಸುವ ಕೆಲಸ ಅವರ ಹೆಸರಿನ ಟ್ರಸ್ಟ್ ಮೂಲಕ ಆಗುತ್ತಿದೆ. ಮಾಹಿತಿಗೆ ಹಫೀಜ್ ಖಾನ್:98861 55663.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.