ಹುಬ್ಬಳ್ಳಿಯ ಸಿದ್ಧಾರೂಢರ ಮಠ ಅತ್ಯಂತ ಪವಿತ್ರ ಕ್ಷೇತ್ರ ಎಂಬ ಭಾವನೆ ಜನರಲ್ಲಿದೆ. ಮಠವನ್ನು ಪ್ರೇಕ್ಷಣೀಯ ತಾಣವಾಗಿಸುವ ಪ್ರಯತ್ನ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಮಠದ ಪರಿಸರವನ್ನು ಆಧುನೀಕರಣಗೊಳಿಸುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಈಗ ಮಠ ಆಸ್ತಿಕರನ್ನೂ ಕೈಬೀಸಿ ಕರೆಯುತ್ತಿದೆ.
ಎಂಟು ತಿಂಗಳ ಹಿಂದೆ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್‌ಗೆ ಹೊಸ ಆಡಳಿತ ಮಂಡಳಿ ರಚನೆಯಾಯಿತು. ಜಿಲ್ಲಾ ಪ್ರಧಾನ ನ್ಯಾಯಾಧೀಶ ಕೆ.ನಟರಾಜನ್ ಮುಖ್ಯ ಆಡಳಿತಾಧಿಕಾರಿಯಾಗಿರುವ ಟ್ರಸ್ಟಿನ ಅಧ್ಯಕ್ಷರಾಗಿ ಉದ್ಯಮಿ ಮಹೇಂದ್ರ ಸಿಂಘಿ ಅವರು ಅಧಿಕಾರ ವಹಿಸಿಕೊಂಡರು.
ಮಲ್ಲಿಕಾರ್ಜುನ ಕಂಠಿ ಹಾಗೂ ರಂಗಾ ಬದ್ದಿ ಕ್ರಮವಾಗಿ ಉಪಾಧ್ಯಕ್ಷರಾಗಿ ಹಾಗೂ ಗೌರವ ಕಾರ್ಯದರ್ಶಿಗಳಾದರು. ಹೊಸ ಸಮಿತಿ ಮಠವನ್ನು ಅಧ್ಯಾತ್ಮ ತಾಣದ ಜತೆಗೆ ಪ್ರವಾಸಿ ತಾಣವನ್ನಾಗಿ ರೂಪಿಸುವ ಯೋಜನೆ ರೂಪಿಸಿತು.
ನೀವು ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿದ್ದರೆ ನಿಮಗೆ ಅಲ್ಲಿನ ಪುಷ್ಕರಣಿ ನೆನಪಿರಬಹುದು. ಅಲ್ಲಿನ ನೀರು ಎಷ್ಟು ಶುಚಿಯಾಗಿತ್ತು ಎಂಬುದನ್ನು ಒಮ್ಮೆ ನೆನಪುಮಾಡಿಕೊಳ್ಳಿ. ಅದೇ ಪುಷ್ಕರಣಿಯನ್ನು ಈಗ ಬಂದು ನೋಡಿ. ಈಗ ಪುಷ್ಕರಣಿಯಲ್ಲಿ ಸ್ಫಟಿಕದಂತಹ ನೀರಿದೆ. ಹೊಸ ಸಮಿತಿ ಪುಷ್ಕರಣಿ ಶುದ್ಧೀಕರಣವನ್ನು ಮೊದಲು ಕೈಗೆತ್ತಿಕೊಂಡಿತು. ನಂತರ ಉಳಿದ ಅಭಿವೃದ್ಧಿ ಕಾರ್ಯಗಳು ಆರಂಭವಾದವು.
ಆಧ್ಯಾತ್ಮ ಚಿಂತನೆ ಮತ್ತು ಶಿವತತ್ವ ಪ್ರಸಾರಕ್ಕೆ ಹೆಸರಾದ ಮಠವನ್ನು ಇನ್ನಷ್ಟು ಸುಂದರ ತಾಣವನ್ನಾಗಿ ಮಾಡಿ ಎಲ್ಲ ವರ್ಗಗಳ ಜನರನ್ನೂ ಸೆಳೆಯುವ ಕೆಲಸಗಳೆಲ್ಲ ಮುಗಿಯುತ್ತ ಬಂದಿವೆ. ಸಿದ್ಧಾರೂಢ ಮಠ ಈಗ ನಾಡಿನ ಪ್ರಮುಖ ಪ್ರೇಕ್ಷಣೀಯ ತಾಣವಾಗಿ ಹೊರಹೊಮ್ಮಿದೆ.
ಸಾಮಾನ್ಯ ಮಠದಂತೆ ಇದ್ದ ಸಿದ್ಧಾರೂಢ ಮಠದ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ. ಸಿದ್ಧಾರೂಢರ `ಕೈಲಾಸ ಮಂಟಪ~ದ ನೆಲಕ್ಕೆ ಮಾರ್ಬಲ್ ಕಲ್ಲುಗಳನ್ನು ಹೊದಿಸಲಾಗಿದೆ. ಹುಬ್ಬಳ್ಳಿಯ ಈಶ್ವರ ಮೋಟೇಕರ್ ಎಂಬ ದಾನಿ ಇದಕ್ಕೆ ಏಳು ಲಕ್ಷ ರೂ ನೀಡಿ ಸಹಕರಿಸಿದ್ದಾರೆ.
ಕೈಲಾಸ ಮಂಟಪದಲ್ಲಿಯ ಗದ್ದುಗೆಯ ಸುತ್ತಮುತ್ತ ಜೈಪುರ ಮಾದರಿಯ ಗ್ಲಾಸ್ ವರ್ಕ್ ಮಾಡಲಾಗಿದೆ. ಇದಕ್ಕೂ ಏಳು ಲಕ್ಷ ರೂ. ವೆಚ್ಚವಾಗಿದೆ. ಟ್ರಸ್ಟ್ ಅಧ್ಯಕ್ಷ ಮಹೇಂದ್ರ ಸಿಂಘಿ ಕುಟುಂಬದವರ ಸೇವೆ ಇದು. ರಾಜಸ್ತಾನದಿಂದ ಬಂದ ಸೋಹನಿ ಮತ್ತು ಅವರ ತಂಡದ ಕಲಾವಿದರು ಆರು ತಿಂಗಳು ಶ್ರಮವಹಿಸಿ ಸಿದ್ಧಾರೂಢರ ಗದ್ದುಗೆಯ ಸುತ್ತಲಿನ ಭಾಗವನ್ನು ಸಿಂಗರಿಸಿದ್ದಾರೆ. ಗ್ಲಾಸ್ ವರ್ಕ್‌ನ ಕುಸುರಿ ಕೆಲಸ ನಿಂತು ನೋಡುವಂತಿದೆ. ಅಲ್ಲಿ ಕುಳಿತು ಧ್ಯಾನ ಮಾಡುವುದು ಒಂದು ವಿಶಿಷ್ಟ ಅನುಭವ ನೀಡಲಿದೆ.
ಸಿದ್ಧಾರೂಢರ ಶಿಷ್ಯರಾಗಿದ್ದ ಮೌನಿ ಗುರುನಾಥಾರೂಢರ ಸಮಾಧಿ ಮಂದಿರದಲ್ಲಿ 57 ಕಿಲೋ ಗ್ರಾಂನಲ್ಲಿ ಮಾಡಿಸಿದ ಬೆಳ್ಳಿ ಮಂಟಪ ಇನ್ನೊಂದು ಹೈಲೈಟ್. ಇದಕ್ಕೆ 22 ಲಕ್ಷ ರೂಪಾಯಿ ವೆಚ್ಚವಾಗಿದೆ. ಕೈಲಾಸ ಮಂಟಪದಲ್ಲಿರುವ ಸಿದ್ಧಾರೂಢರ ಮೂರ್ತಿಯನ್ನು ಮಾರ್ಬಲ್ ಕಲ್ಲಿನಿಂದ ಆಕರ್ಷಣೀಯವಾಗಿ ಮರುಸೃಷ್ಟಿ ಮಾಡಲಾಗಿದೆ. ಇದು ಧಾರವಾಡದ ಅಶೋಕ ಮಾನೆ ಅವರ ಸೇವೆ.
ದೇಶದ ಹಲವು ರಾಜ್ಯಗಳಲ್ಲಿ ಸಿದ್ಧಾರೂಢರ ಲಕ್ಷಾಂತರ ಭಕ್ತರಿದ್ದಾರೆ. ಎಲ್ಲೆಡೆಯಿಂದ ಬರುವ ಭಕ್ತರು ತಂಗಲು ಯಾತ್ರಿ ನಿವಾಸ ನಿರ್ಮಿಸಲಾಗಿದೆ. ದಾಸೋಹ ಮನೆ ನವೀಕರಣಗೊಂಡಿದೆ. ಅಲ್ಲಿ ಈಗ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಮಠದ ಆವರಣದಲ್ಲಿ ಇನ್ನೊಂದು ಸುಂದರ ಉದ್ಯಾನ ತಲೆ ಎತ್ತಲಿದೆ. ಎಲ್ಲ ಮೂಲ ಸೌಕರ್ಯಗಳೂ ಈಗ ಮಠದ ಆವರಣದಲ್ಲಿ ಲಭ್ಯ.
ಭಕ್ತರು ನೀಡಿದ ಕಾಣಿಕೆ ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈಗ ಹುಬ್ಬಳ್ಳಿಯ ಆಯ್ದ ಪ್ರಮುಖ ರಸ್ತೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಶ್ರೀ ಗುರು ಸಿದ್ಧಾರೂಢರ ಹೆಸರಿನ ವಾಣಿಜ್ಯ ಮಳಿಗೆಗಳು ತಲೆ ಎತ್ತಲಿವೆ. ಅವುಗಳಿಂದ ಬರುವ ಆದಾಯ ಹುಬ್ಬಳ್ಳಿಯ ಸಿದ್ಧಾರೂಢ ಮಠವನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಲ್ಲದೇ ಹುಬ್ಬಳ್ಳಿ ನಗರಕ್ಕೂ ಮೆರಗು ನೀಡುವ ಉದ್ದೇಶವಿದೆ ಎನ್ನುತ್ತಾರೆ ಅಧ್ಯಕ್ಷ ಮಹೇಂದ್ರ ಸಿಂಘಿ.
ಈಗ ಶ್ರಾವಣ ಮಾಸ. ಮಠದಲ್ಲಿ ನಿತ್ಯ ರಥೋತ್ಸವ, ವಿಶೇಷ ಪೂಜೆ ನಡೆಯುತ್ತಿವೆ. ಆಗಸ್ಟ್ 14ರಂದು ಸಿದ್ಧಾರೂಢರ ಜಲ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.ಆಗಮಿಸಿದ್ದರು. ಕೊನೆಯ ಶ್ರಾವಣ ಸೋಮವಾರ ರಥೋತ್ಸವ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.