ADVERTISEMENT

ಬಾಯಾರಿದ ಬಂಡೀಪುರಕೆ ಬಾವಿಯ ನೀರು...

ಆರ್.ಕೆ.ಮಧು
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST
ಕೆರೆಗಳಿಗೆ ಬಾವಿ ನೀರು ಪೂರೈಕೆ
ಕೆರೆಗಳಿಗೆ ಬಾವಿ ನೀರು ಪೂರೈಕೆ   

ಭೀಕರ ಬರದ ಬೇಗೆಗೆ ಬಳಲಿ ಬಾಯಾರಿದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಣಗಿ ಬಾಯ್ಬಿರಿದಿದ್ದ ಕೆರೆಗೆ ಈಗ ನೀರಿನ ಸೆಲೆ!
ಹೌದು. ಈ ಕೆರೆಗಳಿಗೆ ಮರುಜೀವ ನೀಡಲು ಬಾವಿಯ ನೀರು ಸರಬರಾಜು ಮಾಡುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿ ಯಶಸ್ವೀ ಪ್ರಯೋಗ ನಡೆಸುತ್ತಿದೆ. ಕೆರೆಕಟ್ಟೆಗಳು ಈಗ ಪುನರ್ಜೀವಗೊಳ್ಳುತ್ತಿವೆ. ವನ್ಯಜೀವಿಗಳ ದಾಹ ತಣಿಸುತ್ತಿವೆ. ಮಳೆ ಕಾಣದೆ ಕೊಳೆವ ಹಂತ ತಲುಪಿದ್ದ ಹಲವು ಕೆರೆಕಟ್ಟೆಗಳು ಈಗ ಹೊಸನೀರಿನಿಂದ ಕಳೆಗೊಂಡಿದೆ, ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದ ವನ್ಯಜೀವಿಗಳು ನೆಮ್ಮದಿಗೊಂಡಿವೆ.

ಒಣಗಿದ್ದ ಕೆರೆಕುಂಟೆ
20 ವರ್ಷಗಳಿಂದ ಈ ರೀತಿಯ ಕೆರೆಕಟ್ಟೆಗಳು ಒಣಗಿದ ಉದಾಹರಣೆ ಇರಲಿಲ್ಲ. ಹತ್ತು ಹಲವು ಕೆರೆಕಟ್ಟೆಗಳು ಒಣಗಿ ವನ್ಯಜೀವಿಗಳು ನೀರಿಗಾಗಿ ಮೂಕ ರೋದನ ಅನುಭವಿಸುತ್ತಿದ್ದ ಕ್ಷಣಗಳು ಕರುಳು ಹಿಂಡುತ್ತಿತ್ತು. ವನ್ಯಜೀವಿಗಳಿಗೆ ಜೀವ ಜಲದ ಸೆಲೆಯಾಗಿದ್ದ ಹಲವು ಕೆರೆಗಳು ಎಂದೂ ಕಾಣದಂತೆ ನಿರ್ನಾಮವಾಗಿದ್ದವು. ಆನೆ, ಕಾಟಿಗಳೇನೋ ಕಬಿನಿಗೆ ವಲಸೆ ಹೋಗುತ್ತವೆ. ಜಿಂಕೆ, ಸಾಂಬಾರ್,  ಕಾಡುನಾಯಿ, ಹುಲಿ, ಚಿರತೆ, ಕರಡಿ ಮುಂತಾದವು ವಲಸೆ ಹೋಗಲಾರದವುಗಳು. ಅವು ತಮ್ಮ ಸೀಮಿತ ಪರಿಧಿಯಲ್ಲಿಯೇ ನೆಲೆನಿಲ್ಲುವ ಪ್ರಾಣಿಗಳು. ಅವುಗಳು ನೀರಿಲ್ಲದೆ ಬಳಲಿ ಬೆಂಡಾಗಿದ್ದವು (ಈ ಕುರಿತು ಕರ್ನಾಟಕ ದರ್ಶನದ ಜನವರಿ 29ರ ಸಂಚಿಕೆಯಲ್ಲಿ ಲೇಖನ ಪ್ರಕಟಗೊಂಡಿತ್ತು).

ಅವುಗಳಿಗೆ ನೀರುಣಿಸಲು ಕೃತಕ ನೀರ ತೊಟ್ಟಿಗಳನ್ನು ತಂದು ಇಟ್ಟಿದ್ದಾಯಿತು. ಅದು ನಿರೀಕ್ಷಿತ ಪರಿಣಾಮ ಬೀರದ್ದನ್ನು ಕಂಡು ಅರಣ್ಯ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಯಿತು. ಒಣಗುತ್ತಿರುವ ಹಲವು ಕೆರೆಗಳನ್ನು ಇಲಾಖೆ ಗುರುತಿಸಿ ಅವುಗಳಿಗೆ ಕೊಳವೆ ಬಾವಿಯಿಂದ ನೀರು ತಂದು ತುಂಬಿಸುವ ಯೋಚನೆ ಬಂದೊಡನೆ ಕಾರ್ಯರೂಪಕ್ಕೆ ತಂದಿತು.

ಇದರ ಫಲವಾಗಿ, ಈಗ 17ಸಾವಿರ ಲೀಟರ್ ಸಾಮರ್ಥ್ಯದ 2 ಟ್ಯಾಂಕರ್‌ಗಳನ್ನು ಬಾಡಿಗೆಗೆ ತಂದು ಸಮೀಪದ ಕೊಳವೆ ಬಾವಿಯಿಂದ ನೀರು ತುಂಬಿಸಿ ಗುರುತಿಸಿದ ಕೆರೆಗಳಿಗೆ ನೀರನ್ನು ತುಂಬಿಸಲಾಗಿದೆ.

ಆಯ್ದ ಸ್ಥಳದಲ್ಲಿ ಇರುವ 2 ಕೆರೆಗಳಲ್ಲಿ ಒಂದಕ್ಕೆ ನೀರುಣಿಸುವುದಾಗಿ ತೀರ್ಮಾನಿಸಿ ಅದರಲ್ಲಿ ಯಶಸ್ವಿಯೂ ಆಗಿದೆ. ಈಗ ಪ್ರತಿ ದಿನ 17 ಸಾವಿರ ಲೀಟರ್ ಸಾಮರ್ಥ್ಯದ ಲಾರಿಯಿಂದ 8 ಬಾರಿ ಹಾಗೂ 6ಸಾವಿರ ಲೀಟರ್ ಸಾಮರ್ಥ್ಯದ ಟ್ರ್ಯಾಕ್ಟರ್‌ನಿಂದ 6 ಬಾರಿ ನೀರು ಪ್ರತಿ ದಿನ ತಾವರಘಟ್ಟ, ವೆಂಕಟಪ್ಪನ ಪಾಲ, ಆನೆಕಟ್ಟೆ, ಸೋಮಯ್ಯನಕಟ್ಟೆ, ಅಥನಿಕಟ್ಟೆ, ಸೊಳ್ಳಿಕಟ್ಟೆ, ಕಿರುಬನಕೊಳಚಿ, ಕರಿಗೌಡನಕಟ್ಟೆ, ಶೆಟ್ಟಿಕೆರೆ ಮುಂತಾದ ಕೆರೆಗಳ ಒಡಲಿಗೆ ನೀರು ಹರಿಸುವ ಪ್ರಯೋಗ ಯಶಸ್ವಿಯಾಗುತ್ತಿದೆ.

ಕೆರೆಗಳು ತಮ್ಮ ಒಡಲ ತುಂಬಿ ನಳನಳಿಸುತ್ತಿವೆ. ವನ್ಯಜೀವಿಗಳ ದಾಹತಣಿಸಲು ಯಶಸ್ವಿಯಾಗುತ್ತಿವೆ. ನೀರವಾಸಿಗಳಾದ ಆಮೆ, ಕಪ್ಪೆ, ಮೀನುಗಳಿಗೂ ಆಸರೆಯಾಗಿವೆ. ಅವುಗಳ ಅವಲಂಬಿಸಿರುವ ಹಲವು ಪಕ್ಷಿಗಳು, ಇತರ ಜೀವಿಗಳಿಗೂ ಈಗ ತುಸು ನೆಮ್ಮದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.