ತಮ್ಮ ಮಕ್ಕಳು ಒಳ್ಳೆಯ ಶಾಲೆಯಲ್ಲೇ ಶಿಕ್ಷಣ ಪಡೆಯಬೇಕು, ಇಂಗ್ಲಿಷ್ ಮಾಧ್ಯಮವಾದರೆ ಇನ್ನೂ ಒಳ್ಳೆಯದು, ಸಮವಸ್ತ್ರ ಧರಿಸಿ ಶಿಸ್ತಿನಿಂದ ಹೆಗಲಿಗೆ ಬ್ಯಾಗು, ಕೈಯಲ್ಲೊಂದು ನೀರಿನ ಬಾಟಲ್ ಹಿಡಿದುಕೊಂಡು ಪಾಠಕ್ಕೆ ಹೋಗುವ ಮಕ್ಕಳನ್ನು ಕಣ್ತುಂಬ ನೋಡಿ ಸಂತಸ ಪಡಬೇಕು ಎಂಬೆಲ್ಲ ಆಸೆಗಳು ಎಲ್ಲ ಪಾಲಕರಿಗೂ ಸಾಮಾನ್ಯ.
ಮಧ್ಯಮ ವರ್ಗ, ಮೇಲ್ವರ್ಗದ ಕುಟುಂಬಗಳಿಗೆ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವುದು ಕಷ್ಟವೇನಲ್ಲ. ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದರೂ ಹತ್ತಿರದ ಪಟ್ಟಣದ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದು, ವಾಹನದ ವ್ಯವಸ್ಥೆ ಮಾಡಿ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ಆದರೆ ಈ ಸೌಭಾಗ್ಯ ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗೆ ಎಲ್ಲಿಂದ ಬರಬೇಕು?
ಆದರೆ ಇಂಥ ಬಡ ಮಕ್ಕಳಿಗೂ ಕೂಡ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ
ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕು ಕಲ್ಲೊಳ್ಳಿ ಗ್ರಾಮದ ಹೆಣ್ಣು ಮಕ್ಕಳ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 21 ವರ್ಷಗಳಿಂದ ಶಿಕ್ಷಕಿಯಾಗಿರುವ ಶಶಿಕಲಾ ಉಪ್ಪಾರ. ಮಕ್ಕಳಿಗೆಲ್ಲ ಇವರು ಅಚ್ಚುಮೆಚ್ಚಿನ ಶಶಿಕಲಾ ಟೀಚರ್. ಬೆಳಗಾಂ ಇಂಟಿಗ್ರೇಟೆಡ್ ರೂರಲ್ ಡೆವಲಪ್‌ಮೆಂಟ್ (ಬರ್ಡ್) ಸ್ವಯಂ ಸೇವಾ ಸಂಸ್ಥೆ ನಡೆಸುವ ಕ್ರೇಷ್‌ನಲ್ಲಿ (ಶಿಶುಪಾಲನಾ ಗೃಹ) ಕೆಲಸ ಮಾಡಿದ ಅನುಭವಿ.
ಪುಸ್ತಕದ ಮಾಹಿತಿಯೊಂದಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ಮಕ್ಕಳಿಗೆ ತಿಳಿ ಹೇಳುವಲ್ಲಿ ಶಶಿಕಲಾಗೆ ಹೆಚ್ಚು ನಂಬಿಕೆ. ಶಾಲೆಯ ಕಟ್ಟಡದ ಕೊನೆಯ ಭಾಗದಲ್ಲಿ ಇವರ ತರಗತಿಯ ಕೊಠಡಿ. ಅದರ ಪಕ್ಕದ ಜಾಗದಲ್ಲಿ ಒಂದು ಪುಟ್ಟ ತೋಟ. ಮಕ್ಕಳಿಗೆ ಸಸ್ಯಗಳ ಕುರಿತು ಪಾಠ ಹೇಳುವಾಗ ಈ ಪುಟ್ಟ ತೋಟವೇ ಪ್ರಯೋಗ ಶಾಲೆಯಾಗುತ್ತದೆ. ತೋಟದಲ್ಲಿರುವ ಹೂವು, ಹಣ್ಣು, ಕಾಂಡ, ಬೇರು ಎಲ್ಲವೂ ಪ್ರಯೋಗದ ವಸ್ತುಗಳು.
ಕಲಿಯುವ ಮಕ್ಕಳಿಗೆ ಗಿಡಮರಗಳ ಮಹತ್ವ ಗೊತ್ತಾಗಬೇಕು, ಪರಿಸರದ ಬಗ್ಗೆ ಕಾಳಜಿ ಇರಬೇಕು ಎಂಬ ಉದ್ದೇಶದಿಂದ ಸ್ವತಃ ಶ್ರಮಪಟ್ಟು ಈ ತೋಟವನ್ನು ಶಶಿಕಲಾ ಟೀಚರ್ ಬೆಳೆಸಿದ್ದಾರೆ. ತೋಟದಲ್ಲಿ ಹಣ್ಣು ಹೂವಿನ ಗಿಡಗಳು, ಔಷಧಿ ಸಸ್ಯಗಳೂ ಇವೆ. ಋತುಮಾನಕ್ಕೆ ಅನುಗುಣವಾಗಿ ತರಕಾರಿ ಬೆಳೆಯುತ್ತಾರೆ. ಶಾಲೆಯ ಬಿಸಿಯೂಟ ತಯಾರಿಕೆಗೆ ಈ ತೋಟದ್ದೇ ಕರಿಬೇವು ಹೋಗುತ್ತದೆ.
ತೋಟದ ನಿರ್ವಹಣೆಯಲ್ಲಿ ಮಕ್ಕಳ ಭಾಗವಹಿಸುವಿಕೆಯೂ ಇದೆ. ಹೊಸ ಹೊಸ ಗಿಡಗಳನ್ನು ಕಂಡರೆ ಅವನ್ನು ತಂದು ತಮ್ಮ ತೋಟದಲ್ಲಿ ನೆಡುವುದರೊಂದಿಗೆ ಅದರ ಆರೈಕೆಯ ಜವಾಬ್ದಾರಿಯೂ ಮಕ್ಕಳಿಗಿರುತ್ತದೆ. ಈ ವರ್ಷ ಗರಿಕೆಯಲ್ಲಿ 2012 ಸಂಖ್ಯೆಯನ್ನು ವಿನ್ಯಾಸಗೊಳಿಸಿ ಖುಷಿಪಟ್ಟಿದ್ದಾರೆ ಮಕ್ಕಳು. ಶಾಲೆಯ ಪ್ರವೇಶ ದ್ವಾರದ ಹತ್ತಿರವೇ ಗರಿಕೆಯಲ್ಲಿ ಮಕ್ಕಳೇ ಸೃಷ್ಟಿಸಿದ ಭಾರತದ ನಕಾಶೆಯೂ ಇದೆ.
ಶಾಲೆಯ ತೋಟದ ಅನುಭವದಿಂದಾಗಿ ಮಕ್ಕಳಲ್ಲಿ ಗಿಡಮರಗಳ ಬಗ್ಗೆ ವಿಶೇಷ ಕಾಳಜಿ ಹುಟ್ಟಿದೆ. ಅನೇಕ ಮಕ್ಕಳು ತಮ್ಮ ಮನೆಗಳಲ್ಲಿಯೂ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.
ಪರಿಸರ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ಮಕ್ಕಳ ಸೃಜನಶೀಲತೆಯನ್ನು ಬೆಳೆಸುವಲ್ಲಿಯೂ ಶಶಿಕಲಾ ಟೀಚರ್‌ಗೆ ವಿಶೇಷ ಕಾಳಜಿ. ಇವರ ಮಾರ್ಗದರ್ಶನದಲ್ಲಿ ಮಕ್ಕಳಿಂದಲೇ `ಹಸ್ತಪ್ರತಿ~ ಎಂಬ ಪತ್ರಿಕೆಯೂ ತಯಾರಾಗುತ್ತದೆ.
ಇದರಲ್ಲಿ ರಂಗೋಲಿ, ಬಣ್ಣ ಬಣ್ಣದ ಚಿತ್ರಗಳು, ಮಕ್ಕಳೇ ಸಂಗ್ರಹಿಸಿದ ಅಪರೂಪದ ಮಾಹಿತಿ, ಎಲ್ಲವೂ ಇವೆ.ಕಲಿಕೆಯಲ್ಲಿ ಮುಂದೆ ಬರಬೇಕಾದರೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಭಾವನೆ ಇರಬೇಕು ಎನ್ನುವ ಅವರು ಪ್ರತೀ ರಾಷ್ಟ್ರೀಯ ಹಬ್ಬಕ್ಕೂ ತಮ್ಮ ತರಗತಿಯ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಇದಲ್ಲದೆ ಪ್ರತಿ ವರ್ಷ ತಮ್ಮ ತಂದೆಯ ಪುಣ್ಯತಿಥಿಯಂದು ತಮ್ಮ ಶಾಲಾ ಮಕ್ಕಳಲ್ಲದೇ ಸುತ್ತಲಿನ ಶಾಲಾ ವಿದ್ಯಾರ್ಥಿಗಳಿಗೂ ಪ್ರತಿಭಾನ್ವೇಷಣಾ ಸ್ಪರ್ಧೆಯನ್ನು ಆಯೋಜಿಸುತ್ತಾರೆ.
`ಬೇರೆಶಾಲೆಯ ಮಕ್ಕಳೊಂದಿಗೆ ನಮ್ಮ ಮಕ್ಕಳು ಸ್ಪರ್ಧಿಸಿದಾಗ ಅವರಲ್ಲಿನ ಕುಂದುಕೊರತೆಗಳನ್ನು ಗುರುತಿಸಲು ಅನುಕೂಲವಾಗುತ್ತದೆ~ ಎನ್ನುತ್ತಾರೆ ಶಶಿಕಲಾ. ಈ ಎಲ್ಲ ಸ್ಪರ್ಧೆಗಳೂ ಇವರ ಸ್ವಂತ ಖರ್ಚಿನಲ್ಲಿ ನಡೆಯುತ್ತವೆ. ತಾವೇ ಸ್ವತಃ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ತಮ್ಮ ತರಗತಿಯ ಮಕ್ಕಳ ಮೌಲ್ಯಾಂಕನ ಮಾಡುತ್ತಾರೆ. ಈ ಮೂಲಕ ಓದಿನಲ್ಲಿ ಹಿಂದಿರುವ ಮಕ್ಕಳನ್ನು ಗುರುತಿಸಿ ರಜೆಯ ದಿನಗಳಂದು ಇವರಿಗಾಗಿ ತಮ್ಮ ಮನೆಯಲ್ಲಿಯೇ ವಿಶೇಷ ಪಾಠ ಮಾಡುತ್ತಾರೆ. ಯಾವುದೇ ರಜಾದಿನವಿರಲಿ ಇವರ ಮನೆಯಲ್ಲಿ ಒಂದಿಷ್ಟು ಮಕ್ಕಳಿಗೆ ಪಾಠ ನಡೆದೇ ಇರುತ್ತದೆ.
ಬಿಡುವಿಲ್ಲದ ದಿನಚರಿಯ ನಡುವೆಯೇ ಮಾನವೀಯ ಮೌಲ್ಯಗಳು, ಶಿಕ್ಷಕರ ಕರ್ತವ್ಯಗಳ ಕುರಿತ `ಸುವಿಚಾರ ಧಾರೆ, ಸುಶಿಕ್ಷಕ ಮತ್ತು ಸುಜ್ಞಾನ ದೀವಿಗೆ~ ಎಂಬ ಕಿರುಹೊತ್ತಿಗೆಗಳನ್ನೂ ಬರೆದಿದ್ದಾರೆ.
ಇವರ ಮಾರ್ಗದರ್ಶನದಲ್ಲಿ ಓದಿದ ಅನೇಕ ಮಕ್ಕಳು ಜಿಲ್ಲೆಯ ಡೆಪ್ಯುಟಿ ಚೆನ್ನಬಸಪ್ಪ ಶಿಷ್ಯವೇತನ ಪಡೆದಿದ್ದಾರೆ. `ನನ್ನ ಹತ್ತಿರ ಕಲಿತ ಮಕ್ಕಳು ಇಂದು ಎಂಜಿನಿಯರ್, ಎಂಬಿಎ ಪದವಿ ಪಡೆದು ಒಳ್ಳೆಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅನೇಕರು ಶಿಕ್ಷಕರಾಗಿದ್ದಾರೆ~ ಎಂದು ಹೇಳುವಾಗ ಅವರ ಮುಖದಲ್ಲಿ ಧನ್ಯತೆಯ ಭಾವ. ಮಕ್ಕಳ ಏಳಿಗೆಯಲ್ಲಿಯೇ ತನ್ನ ಏಳಿಗೆ, ಬದುಕಿನ ಸಾರ್ಥಕತೆ ಕಂಡುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.