ADVERTISEMENT

ರಟ್ಟೀಹಳ್ಳಿಯ ಓಂ ಬೆಟ್ಟ

ವಿನಾಯಕ ಭೀಮಪ್ಪನವರ
Published 10 ಸೆಪ್ಟೆಂಬರ್ 2012, 19:30 IST
Last Updated 10 ಸೆಪ್ಟೆಂಬರ್ 2012, 19:30 IST

ಈ ಗ್ರಾಮ ಶ್ರೀ ಸಿದ್ದೇಶ್ವರ ದೇವಸ್ಥಾನ ಮತ್ತು ಓಂ ಬೆಟ್ಟದಿಂದ ಖ್ಯಾತಿ ಪಡೆದಿದೆ. ಇಲ್ಲಿನ ಎರಡು ಬೆಟ್ಟಗಳ ಮಧ್ಯೆ ದೇವಸ್ಥಾನ ಇದ್ದು, ಕಣವಿ ಸಿದ್ದೇಶ್ವರ ಎಂದೇ ಕರೆಯುತ್ತಾರೆ. ಸಮೀಪದ ಒಂದು ಬೆಟ್ಟದ ಬಂಡೆಗಲ್ಲಿನ ಮೇಲೆ ಓಂ ಎಂದು ಬರೆದಿರುವುದರಿಂದ ಓಂ ಬೆಟ್ಟ ಎಂದು ಗುರುತಿಸಲಾಗುತ್ತದೆ. ಇದರ ತುದಿಯ ಮೇಲೆ ದೀಪ ಮಾಲೆ ಕಂಬವಿದೆ. ಚಾರಣ ಪ್ರಿಯರಿಗೆ ಬಹು ಇಷ್ಟವಾದ ಸ್ಥಳವಿದು.

 ಲಭ್ಯ ಶಿಲಾಶಾಸನಗಳ ಪ್ರಕಾರ ದೇವಸ್ಥಾನ ನಿರ್ಮಾಣವಾಗಿದ್ದು ಕ್ರಿಶ 11-12 ನೇ ಶತಮಾನದಲ್ಲಿ. ಮೂಲ ದೇವಸ್ಥಾನ ಗುಹೆಯ ಒಳಗಿದ್ದು, ಶಿವಲಿಂಗದ ಎದುರಿಗೆ ನಂದಿಯನ್ನು  ಪ್ರತಿಷ್ಠಾಪಿಸಲಾಗಿದೆ, ಎಡ-ಬಲಕ್ಕೆ ಗಣೇಶ ಮತ್ತು ರೇವಣಸಿದ್ದೇಶ್ವರರು ಇದ್ದಾರೆ.

ಗರ್ಭಗುಡಿಯ ಪ್ರದಕ್ಷಿಣೆಗೆ ಹೊರಟರೆ ಬಾವಲಿಗಳ ಹಿಂಡು ನಿಮ್ಮನ್ನು ಸ್ವಾಗತಿಸಿ ಭಯ ಮೂಡಿಸುತ್ತವೆ. ಹೀಗಾಗಿ ಮಕ್ಕಳು ಪ್ರದಕ್ಷಿಣೆ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಬಾವಲಿಗಳ ಪ್ರಪಂಚ ನಿಮ್ಮನ್ನು ಏನೂ ಮಾಡುವುದಿಲ್ಲ. ಸಾವಿರಾರು ಬಾವಲಿಗಳು ಒಂದೇ ಕಡೆ ಬಂಡೆಗಲ್ಲಿಗೆ ನೇತಾಡುತ್ತಿರುತ್ತವೆ. ಆದ್ದರಿಂದ ಪ್ರದಕ್ಷಿಣೆ ಮಾಡಲು ಬಾಗಿ ನಡೆಯಲೇಬೇಕು.

ಇಲ್ಲಿಂದ 3 ಕಿ ಮೀ ದೂರದಲ್ಲಿನ ಮತ್ತೊಂದು ಐತಿಹಾಸಿಕ ಪ್ರದೇಶವೇ ಭಗವತಿ ಘಟ್ಟ. ಹಿಂದೊಮ್ಮೆ ವಿದೇಶಿಯರಿಗೆ ಬಹು ಪ್ರಿಯವಾದ ಸ್ಥಳವಿದು. ಇಲ್ಲೊಂದು ಸಣ್ಣ ನೀರಿನ ಝರಿ ಇದ್ದು ಭಗವತಿ ಕೆರೆ ಎಂದು ಕರೆಯುತ್ತಾರೆ. ಇದು ಯಾವ ಕಾಲಕ್ಕೂ ಬತ್ತುವುದಿಲ್ಲ. ಹೊರ ಜಗತ್ತಿಗೆ ಅಪರಿಚಿತವಾದ ಕಾರಣ ಭಗವತಿ ನಿರ್ಮಲ ಪ್ರಶಾಂತ ತಾಣವಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಣೆಯಿಲ್ಲದ್ದು.

ಕಣವಿ ಸಿದ್ದೇಶ್ವರ ದೇವಸ್ಥಾನದ ಪಕ್ಕದ ಅಡುಗೆ ಮನೆ ಮುಖಾಂತರ ಮುಂದೆ ಹೋದರೆ ಅಕ್ಕಮಹಾದೇವಿಯ ಗುಹಾಂತರ ದೇವಾಲಯವಿದೆ. ರಟ್ಟೀಹಳ್ಳಿಯ ಕಬ್ಬಿಣಕಂತಿ ಮಠದ ಸ್ಥಾಪಕರು ಇಲ್ಲಿಯೇ ತಪಸ್ಸನ್ನು ಆಚರಿಸಿ ಇಲ್ಲಿಯೇ ಲಿಂಗೈಕ್ಯರಾದರೆಂದು ಮಠದ ಇತಿಹಾಸ ತಿಳಿಸುತ್ತದೆ.  ದೇವಸ್ಥಾನದ ಕೆಳಗೆ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲಾಗಿದೆ.

ಅಲ್ಲಿಂದ 50 ಹೆಜ್ಜೆ ಮುಂದೆ ಬೆಟ್ಟದ ಮೇಲೆ ಸಾಗಿದರೆ `ಅಂತರಗಂಗೆ~ ಸಿಗುತ್ತದೆ. ಬೆಟ್ಟ ಕೊರೆದು ಮಾಡಿರುವ ಸ್ಥಳವಿದು. ಕೈ ಮಾತ್ರ ಒಳಗೆ ಹೋಗುತ್ತದೆ. ಹಿಂದೆಲ್ಲ ಕೈ ತೂರಿಸಿದರೆ ಪವಿತ್ರ ಜಲ, ಬಾಳೆಹಣ್ಣು, ಎಲೆ ಅಡಿಕೆ, ಮುಂತಾದವುಗಳು ಪ್ರಸಾದ ರೂಪದಲ್ಲಿ ದೊರೆಯುತ್ತಿತ್ತು ಎನ್ನುತ್ತಾರೆ ಗ್ರಾಮದ ಹಿರಿಯರು. ಆದರೆ ಇಂದು ಏನೂ ದೊರೆಯುವುದಿಲ್ಲ.

ಈ ಬೆಟ್ಟದ ರಸ್ತೆಯ ಬದಿಗೆ 25 ಅಡಿ ಆಳದಲ್ಲಿ ನೀರಿನ ಜಲಧಾರೆಯೊಂದು ಇದೆ. ಇದೇ `ಭಜನೆ ಬಾವಿ~. ಪ್ರತಿ ಅಮಾವಾಸ್ಯೆಯ ಮಧ್ಯರಾತ್ರಿ ದೇವತೆಯರು ಇಲ್ಲಿಗೆ ಬಂದು ಮಿಂದು ದೇವರ ಭಜನೆ ಮಾಡುತ್ತಾರೆ ಎಂಬ ಪ್ರತೀತಿ ಇದೆ. ಅಲ್ಲದೇ ಅಂದು ಮಧ್ಯ ರಾತ್ರಿ ಭಜನೆ ಸದ್ದು ಕೇಳಿ ಬರುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಬೆಟ್ಟದ ರಸ್ತೆ ಬಹಳ ಕಡಿದಾದ ಕಾರಣ ಪ್ರಯಾಣ ಪ್ರಯಾಸಕರವಾಗಿದೆ. ಎಚ್ಚರಿಕೆಯಿಂದ ಸಾಗಬೇಕು. ರಸ್ತೆ ಬದಿಗೆ ತಡೆ ಗೋಡೆಗಳು ಇಲ್ಲ. ಸ್ವಲ್ಪ ಲಯ ತಪ್ಪಿದರೂ ಪ್ರಪಾತಕ್ಕೆ ಬೀಳುವುದು ನಿಶ್ಚಿತ.

ಈ ಬೆಟ್ಟದ ಎದುರಿಗೆ ಇರುವುದೇ ಓಂ ಬೆಟ್ಟ. ಇದೇ ಚಾರಣಪ್ರಿಯರನ್ನು ಮುದಗೊಳಿಸುವ ಸುಂದರ ತಾಣ. ಬೆಟ್ಟವನ್ನು ಹತ್ತಲು ಎರಡು ಮಾರ್ಗಗಳಿವೆ. ಬೆಟ್ಟದ ತುದಿಗೆ ದೀಪ ಮಾಲೆ ಕಂಬವಿದೆ. ಹಿಂದಿನ ಕಾಲದಲ್ಲಿ ಈ ಕಂಬದ ಮೇಲೆ ದೀಪವನ್ನು ಉರಿಸುತ್ತಿದ್ದರು ಎನ್ನುತ್ತಾರೆ. ಇಲ್ಲಿಂದ ಸುತ್ತಮುತ್ತಲಿನ ದೃಶ್ಯ ವೀಕ್ಷಿಸಿದರೆ ರೋಮಾಂಚನವಾಗುತ್ತದೆ.

ಸಮೀಪದ ಜೋಕನಹಳ್ಳಿ ಕೆರೆ ಒಂದು ಕಪ್‌ನಲ್ಲಿರುವ ಚಹಾದಂತೆ ಗೋಚರಿಸುತ್ತದೆ. ತಡಕನಹಳ್ಳಿ ಡಾಂಬರು ರಸ್ತೆ ಪ್ರಕೃತಿಯ ಮಡಿಲಿನಲ್ಲಿ ಮಲಗಿದ ಹೆಬ್ಬಾವಿನಂತೆ ಗೋಚರಿಸುತ್ತದೆ. ದೂರದ ಕುಮಾರಪಟ್ಟಣದ ಪಾಲಿಫೈಭರ್ ಕಾರ್ಖಾನೆ ಗೋಚರಿಸಿ ವಿಸ್ಮಯವನ್ನು ಉಂಟುಮಾಡುತ್ತದೆ. ಅನೇಕ ಗ್ರಾಮಗಳು ಚಿಕ್ಕ ಚಿಕ್ಕ ಪೆಟ್ಟಿಗೆಯಂತೆ ಕಾಣಿಸುತ್ತವೆ. ಮೋಡಗಳು ಬೆಟ್ಟಕ್ಕೆ ಮುತ್ತಿಕ್ಕುವ ಚಿತ್ರಗಳು ಮನಸೆಳೆಯುತ್ತವೆ. ಕೆಳಗೆ ಇಳಿದು ಬರಲು ಮನಸ್ಸಾಗುವುದೇ ಇಲ್ಲ.
 
ದಶಕಗಳ ಹಿಂದೆ ಕರಡಿಗಳ ಆವಾಸ ಸ್ಥಾನವಾಗಿದ್ದ ಬೆಟ್ಟದಲ್ಲಿ  ಇಂದು ಒಂದೇ ಒಂದು ಕರಡಿಯೂ ಕಂಡು ಬರುವುದಿಲ್ಲ.ದೇವಸ್ಥಾನದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸುಂದರ ಧಾರ್ಮಿಕ, ಪ್ರವಾಸಿ ತಾಣವಾಗಿರುವ ಈ ಪ್ರದೇಶಕ್ಕೆ ನೀವೂ ಬನ್ನಿ, ನಿಮ್ಮ ಕುಟುಂಬವನ್ನು ಕರೆತನ್ನಿ. ಪ್ರಕೃತಿ ಹಚ್ಚಹಸಿರು ಹೊದ್ದು ಮಲಗಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.