ADVERTISEMENT

ರಸ್ತೆಯುದ್ದಕ್ಕೂ ಜಲರಾಶಿ

ಸುಕುಮಾರ್ ಮುನಿಯಾಲ್
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ರಸ್ತೆ ಉದ್ದಕ್ಕೂ ಜುಳು ಜುಳು ನಿನಾದ... ಭೋರ್ಗರೆವ ಸದ್ದಿನಿಂದ ಎಲ್ಲರ ಗಮನ ಸೆಳೆಯುವ ಜಲಪಾತಗಳ ರಾಶಿ ಕಾಣಸಿಗುವುದು ಉಡುಪಿ ಜಿಲ್ಲೆಯ ಕಾರ್ಕಳದ ಹೆಬ್ರಿ ಸಮೀಪ.

ಕಾರ್ಕಳದ ಕನ್ಯಾಕುಮಾರಿ ಎಂದೇ ಬಿಂಬಿತವಾಗಿರುವ ಕಬ್ಬಿನಾಲೆಯ ರಸ್ತೆಯುದ್ದಕ್ಕೂ ಇಂಥ ಹಲವಾರು ಮನಸೂರೆಗೊಳ್ಳುವ ಜಲಪಾತಗಳಿವೆ. ದಟ್ಟಾರಣ್ಯದ ಹಸಿರು ವನಸಿರಿಯ ನಡುವೆ ರಸ್ತೆಗಳು. ರಸ್ತೆಯ ಪಕ್ಕದಲ್ಲೆಲ್ಲ ಗುಡ್ಡಬೆಟ್ಟಗಳಿಂದ ಹರಿಯುವ ನದಿ, ಹೊಳೆ, ತೋಡು, ಮೋರಿಯ ನೀರು, ಕಾಲುವೆಯ ನೀರು, ಹಳ್ಳ ಝರಿಗಳೆಲ್ಲವೂ ಕಬ್ಬಿನಾಲೆಯಲ್ಲಿ ಜಲಪಾತಗಳ ರೂಪ ತಾಳುತ್ತವೆ. ಎಲ್ಲಿ ಕಣ್ಣು ಹಾಯಿಸಿದರೂ ಹಾಲ್ನೊರೆಯಂತೆ ಹರಿಯುವ ಜಲಪಾತಗಳು ಕಣ್ಮನ ತಣಿಸುತ್ತವೆ. ರಸ್ತೆಗೆ ಸಣ್ಣ ನೀರಿನ ಗುಂಡಿಯಲ್ಲಿ ನೀರು ನಿಂತಂತೆ ಕಾಣುವ ಹೊನ್ನುಗುಂಡಿ ಜಲಪಾತ ನೂರು ಅಡಿಯಷ್ಟು ಕಂದಕಕ್ಕೆ ಇಳಿದು ನೋಡಿದರೆ ಮನ ತಣಿಸುತ್ತದೆ.

ಅರ್ಭಿ ಜಲಪಾತ, ತಿಂಗಳಮಕ್ಕಿ ಹೀಗೆ ಕಬ್ಬಿನಾಲೆಯಲ್ಲಿ ಸ್ಥಳೀಯರು ಅಲ್ಲಿನ ಪ್ರದೇಶಕ್ಕೆ ಅನುಗುಣವಾಗಿ ಕರೆವ ಹತ್ತಾರು ಜಲಪಾತಗಳ ರಾಶಿಯೇ ಇದೆ. ಪ್ರಕೃತಿ ಪ್ರೇಮಿ ನಿವೃತ್ತ ಮುಖ್ಯ ಶಿಕ್ಷಕ ಪಡುಕುಡೂರು ಭುಜಂಗ ಶೆಟ್ಟಿ ಈ ದಾರಿಯಲ್ಲಿ ತೆರಳುವಾಗ ಪ್ರಕೃತಿ ಸೃಷ್ಟಿಯ ಈ ಜಲರಾಶಿಗೆ ಮನಸೋತು ಕಬ್ಬಿನಾಲೆಯ ಆಕರ್ಷಕ ಜಲಪಾಲಗಳಲ್ಲಿ ಬೃಹತ್ ಆಗಿರುವ ಹೊನ್ನಗುಂಡಿ ಜಲಪಾತವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಪರಿವರ್ತಿಸಲು ಮುದ್ರಾಡಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಹೆಬ್ರಿಯಿಂದ ಬಚ್ಚಪ್ಪು, ಮುದ್ರಾಡಿಯಿಂದ ಬಚ್ಚಪ್ಪು ಮಾರ್ಗವಾಗಿ 15 ಕಿ.ಮೀ ಮುನಿಯಾಲಿನಿಂದ ಸುಮಾರು 10 ಕಿ.ಮಿ ದೂರದಲ್ಲಿ ಕಬ್ಬಿನಾಲೆ ತಲುಪಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.