ಕೈಗಾರಿಕೆ ನಡೆಯಲು ವಿದ್ಯುತ್ ಬೇಕು. ಆದರೆ ಅವಕ್ಕೆ ಪೂರೈಸುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಜತೆಗೆ ಮಳೆ, ಕಲ್ಲಿದ್ದಲು ಕೊರತೆಯಿಂದ ಸಮಸ್ಯೆ ಬಿಗಡಾಯಿಸುತ್ತಿದೆ.
ಇದಕ್ಕೆಲ್ಲ ಪವನ ಶಕ್ತಿಯಂಥ ಪರ್ಯಾಯ ಇಂಧನ ಮೂಲಗಳೇ ಪರಿಹಾರ. ದೂರದ ಸ್ಥಳದಲ್ಲಿ ಗಾಳಿ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ತನ್ನ ಬೇಡಿಕೆಯ ಬಹುಭಾಗವನ್ನು ಪೂರೈಸಿಕೊಳ್ಳುತ್ತಿರುವ ಕ್ಯಾಂಪ್ಕೊ ಈ ವಿಷಯದಲ್ಲಿ ಉಳಿದವರಿಗೆ ಮಾದರಿ.
ಸಹಕಾರ ಕ್ಷೇತ್ರದ ಯಶಸ್ಸನ್ನು ಉಲ್ಲೇಖಿಸುವಾಗ ಕ್ಯಾಂಪ್ಕೊ (ಕೇಂದ್ರೀಯ ಅಡಿಕೆ ಮತ್ತು ಕೋಕೊ ಮಾರುಕಟ್ಟೆ ಹಾಗೂ ಸಂಸ್ಕರಣಾ ಸಹಕಾರ ಸಂಸ್ಥೆ) ಸಂಸ್ಥೆಯನ್ನು ಮರೆಯುವುದು ಸಾಧ್ಯವೇ ಇಲ್ಲ. ಖಾಸಗಿ ಕಂಪೆನಿಗಳ ಮಾತಿಗೆ ಮರುಳಾಗಿ ಕೋಕೊ ಬೆಳೆದು ಮೋಸಹೋಗಿದ್ದ ದಕ್ಷಿಣ ಕನ್ನಡ ಮತ್ತು ನೆರೆಯ ಕಾಸರಗೋಡು ಜಿಲ್ಲೆಯ ರೈತರನ್ನು ಕಾಪಾಡಿದ್ದೇ ಕ್ಯಾಂಪ್ಕೊ. ಅದೀಗ ಚಾಕೊಲೇಟ್ ತಯಾರಿಕೆಯಲ್ಲಿ ದೊಡ್ಡ ಹೆಸರು.
ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ ಸ್ಥಾಪನೆಯಾದಾಗಿನಿಂದಲೂ ವಿದ್ಯುತ್‌ಗಾಗಿ ರಾಜ್ಯ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸಂಸ್ಥೆಗಳನ್ನು (ಈಗ ಮೆಸ್ಕಾಂ) ಅವಲಂಬಿಸಿತ್ತು. ಜತೆಗೆ ಪದೇ ಪದೇ ವಿದ್ಯುತ್ ಕಡಿತ, ದರ ಏರಿಕೆಯಿಂದ ಸಾಕಷ್ಟು ತೊಂದರೆಯನ್ನೂ ಎದುರಿಸಿತ್ತು. ದುಬಾರಿ ವಿದ್ಯುತ್ ಶುಲ್ಕದಿಂದಾಗಿ ಕೆಲ ಕಾಲ ನಷ್ಟವನ್ನೂ ಅನುಭವಿಸಿತ್ತು.
ಇದರಿಂದ ಹೊರ ಬರಲು ಪವನ ಶಕ್ತಿ ವಿದ್ಯುತ್ ಘಟಕ (ಗಾಳಿ ವಿದ್ಯುತ್ ಯಂತ್ರ) ಸ್ಥಾಪನೆಗೆ ಏಕೆ ಕೈ ಹಾಕಬಾರದು ಎಂಬ ಆಲೋಚನೆ ಕೆಲ ವರ್ಷಗಳ ಹಿಂದೆ ಕ್ಯಾಂಪ್ಕೊದ ಆಗಿನ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಅವರಿಗೆ ಬಂತು. ಅದರ ಫಲವಾಗಿ 2009ರಲ್ಲಿ ಸುಮಾರು 6.57 ಕೋಟಿ ರೂಪಾಯಿ ವೆಚ್ಚದಲ್ಲಿ ಬಳ್ಳಾರಿಯ ಹೂವಿನಹಡಗಲಿಯ ಎರಡು ಎಕರೆ ಪ್ರದೇಶದಲ್ಲಿ 1.25 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಘಟಕ ಅಸಿತ್ವಕ್ಕೆ ಬಂತು.
ಹೂವಿನಹಡಗಲಿಯಲ್ಲಿ ಸ್ಥಾಪಿಸುವುದಕ್ಕೆ ಒಂದು ಬಲವಾದ ಕಾರಣವೂ ಇತ್ತು. ಕರಾವಳಿ ಪ್ರದೇಶದಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಸೂಕ್ತವಾದ ಸ್ಥಳ, ಗಾಳಿ ಇಲ್ಲದೇ ಇರುವುದರಿಂದ ಬಳ್ಳಾರಿಯತ್ತ ಗಮನ ಹರಿದಿತ್ತು. ಅಲ್ಲಿ ಗಾಳಿ ಯಂತ್ರ ಸ್ಥಾಪಿಸಿ ಸುಮಾರು 22 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.
ಅದನ್ನು ಕೆಪಿಟಿಸಿಎಲ್ ಜಾಲಕ್ಕೆ ಸೇರ್ಪಡೆ ಮಾಡಿ ಅಷ್ಟೇ ಪ್ರಮಾಣದ ವಿದ್ಯುತ್ತನ್ನು ಪುತ್ತೂರಿನಲ್ಲಿ ಪಡೆಯುತ್ತಿತ್ತು. ವಿದ್ಯುತ್ ಸಾಗಣೆಗಾಗಿ ಕೆಪಿಟಿಸಿಎಲ್‌ಗೆ ಶೇ 7ರ ದರದಲ್ಲಿ ಸಾಗಣೆ ಶುಲ್ಕ ನೀಡುತ್ತಿತ್ತು.
ಇಷ್ಟೆಲ್ಲ ಬಂಡವಾಳ ತೊಡಗಿಸಿ ಸಾಗಣೆ ಶುಲ್ಕ ನಿಡಿದ ನಂತರವೂ ಕ್ಯಾಂಪ್ಕೊಗೆ ವಿದ್ಯುತ್ ಬಳಕೆಯಲ್ಲಿ ಸಾಕಷ್ಟು ಹಣ ಉಳಿತಾಯವಾಗುತ್ತಿತ್ತು. ಇದರಿಂದ ಉತ್ತೇಜನಗೊಂಡ ಆಡಳಿತ ಮಂಡಲಿ ಗಾಳಿ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ವಿಸ್ತರಿಸಲು ತೀರ್ಮಾನಿಸಿತು. ಆರಂಭಿಕ ಬಂಡವಾಳ ಹೆಚ್ಚೆನಿಸಿದರೂ ದೀರ್ಘಾವಧಿಯಲ್ಲಿ ಇದು ಲಾಭದಾಯಕ ಎಂಬುದು ಸಂಸ್ಥೆಗೆ ಮನವರಿಕೆಯಾಗಿತ್ತು.
ಅದರ ಫಲವಾಗಿ 2011ರಲ್ಲಿ ಇನ್ನೊಂದು ಘಟಕವನ್ನು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮೇಜಿ ಗ್ರಾಮದಲ್ಲಿ ಸ್ಥಾಪಿಸಲಾಯಿತು. ಇದಕ್ಕೆ ವಿನಿಯೋಗಿಸಿದ ಹಣ 10.36 ಕೋಟಿ ರೂಪಾಯಿ. ಈ ಘಟಕದ ಉತ್ಪಾದನಾ ಸಾಮರ್ಥ್ಯ 1.70 ಮೆಗಾವಾಟ್. ಉತ್ಪಾದನಾ ಸ್ಥಳದಲ್ಲಿ ವಿದ್ಯುತ್ ಕಂಪೆನಿಗೆ ವಿದ್ಯುತ್ ನೀಡಿ, ಮತ್ತೊಂದೆಡೆ ವಿದ್ಯುತ್ ಕಂಪೆನಿಯಿಂದ ತಾನು ಕೊಟ್ಟಷ್ಟೇ ವಿದ್ಯುತ್ ಪಡೆಯುವ ಪರಿಕಲ್ಪನೆ ಕ್ಯಾಂಪ್ಕೊವನ್ನು ಆಕರ್ಷಿಸಿತ್ತು. ಸ್ವಂತ ಬಳಕೆಗಾಗಿ ಇಂತಹ ಯೋಜನೆ ಮಾಡಿಕೊಂಡರೆ ಅದರಿಂದ ಭಾರಿ ಪ್ರಯೋಜನ ಇರುವುದನ್ನು ಕ್ಯಾಂಪ್ಕೊ ಕಂಡುಕೊಂಡಿತ್ತು.
`ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಇಲ್ಲ; ಹೀಗಾಗಿ ನಷ್ಟವಾಗುತ್ತಿದೆ~ ಎಂದು ಅಲವತ್ತುಕೊಳ್ಳುವ ದೊಡ್ಡ ದೊಡ್ಡ ಕಂಪೆನಿಗಳಿಗೆ ಕ್ಯಾಂಪ್ಕೊ ಮಾದರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.