ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಸಿ.ಎಸ್. ಪುರ ಹೋಬಳಿಯಲ್ಲಿ ನಿಸರ್ಗ ಚೆಲುವಿನ ನಡುವೆ ಕಂಗೊಳಿಸುವ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವೇ ಶ್ರೀ ಕ್ಷೇತ್ರ ವೀರಣ್ಣನಗುಡಿ. ಇದು ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವರ ಸನ್ನಿಧಿ. ಶಿವಗಂಗೆ ಬೆಟ್ಟದಲ್ಲಿ ಹುಟ್ಟಿ ಹರಿಯುವ ನಾಗಹೊಳೆಯ ದಂಡೆ ಮೇಲಿದೆ.
ವಿಜಯನಗರ ಅರಸರ ಕಾಲಕ್ಕೆ ಸೇರಿದ್ದ ಈ ದೇಗುಲ ಸೂಕ್ತ ರಕ್ಷಣೆ ಇಲ್ಲದೆ ಅವನತಿಯತ್ತ ಸಾಗಿತ್ತು. ಇದನ್ನು ಮನಗಂಡ ಭಕ್ತಾದಿಗಳು ಕೆಲ ವರ್ಷದ ಹಿಂದೆ ಸಮಿತಿ ರಚಿಸಿ ಜೀರ್ಣೋದ್ಧಾರ ಕೈಗೊಂಡರು.
ಹಿಂದೊಮ್ಮೆ ನಾಗಹೊಳೆಯಲ್ಲಿ ಪ್ರವಾಹ ಬಂದು ಶ್ರೀ ಕ್ಷೇತ್ರವೇ ಮುಳುಗಡೆ ಆದಾಗ ಜನರು ದೇವರ ಮೊರೆ ಹೋಗುತ್ತಾರೆ. ಆಗ ದೇವರು ಅಡಿಕೆ ಪಟ್ಟ ಮಾಡಿ ನದಿಯಲ್ಲಿ ತೇಲಿ ಬಿಟ್ಟಾಗ ಅದು ಸಿ.ಎಸ್. ಪುರ ಕೆರೆಗೆ ಹೋಗಿ ಹೊಂಡದ ರೂಪದಲ್ಲಿ ಪ್ರವಾಹದ ನೀರನ್ನು ಹೀರಿತಂತೆ. ಇದನ್ನು ವೀರಣ್ಣನ ಒಡವು ಎನ್ನುತ್ತಾರೆ. ಇದೇ ಹಿನ್ನೆಲೆಯಲ್ಲಿ ಇಲ್ಲಿ ಜಾತ್ರೆ ಸಂದರ್ಭದಲ್ಲಿ ಕರಡಿ ವಾದ್ಯ ಕೇಳಿಬರುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ದೇಗುಲ ಪೂರ್ವಕ್ಕೆ ಅಭಿಮುಖವಾಗಿದ್ದು, ಗರ್ಭಗುಡಿ, ಸುಖನಾಸಿ, ನವರಂಗ, ಮುಖಮಂಟಪ ಹಾಗೂ ಪ್ರದಕ್ಷಿಣ ಪಥ ಹೊಂದಿದೆ. ಪ್ರವೇಶದ್ವಾರದಲ್ಲಿ ಗೋಪುರ ಇದ್ದು ಹಲವು ದೇವಾನುದೇವತೆಗಳನ್ನು ಚಿತ್ರಿಸಲಾಗಿದೆ. ದೇಗುಲದ ಆವರಣದಲ್ಲಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಮರವಿದೆ. ಇದನ್ನು ಜನರು ಪೂಜೆ ಪುನಸ್ಕಾರಗಳಿಗೆ, ಕಾಯಿಲೆ ವಾಸಿಗೆ ಬಳಸುತ್ತಿದ್ದಾರೆ.
ದೇಗುಲದ ಆವರಣದಲ್ಲಿ ಭದ್ರಕಾಳಿ, ಗಣಪತಿ, ಈಶ್ವರ, ಲಕ್ಷ್ಮೀದೇವಿ, ನವಗ್ರಹವನ, ನಾಗಬನ, ಬಸವಣ್ಣನಗುಡಿ ಮತ್ತು ಹಲವು ವೀರಗಲ್ಲುಗಳಿವೆ, ಸಮುದಾಯ ಭವನವಿದೆ.
ಪ್ರತಿ ವರ್ಷ ದೊಡ್ಡಜಾತ್ರೆ, ಬ್ರಹ್ಮ ರಥೋತ್ಸವ ನಡೆಯುತ್ತದೆ. ಈ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎನ್ನುತ್ತಾರೆ ದೇಗುಲದ ಕಾರ್ಯಾಧ್ಯಕ್ಷ ಎಂ.ವಿ. ಬಸವರಾಜು.
ಭಕ್ತಾದಿಗಳು ತಂಗಲು ವಸತಿ ವ್ಯವಸ್ಥೆಯಿದ್ದು ನಿತ್ಯ ಅನ್ನ ದಾಸೋಹ ನಡೆಯುತ್ತಿದೆ.
ಮಾಹಿತಿಗೆ 94480 73784.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.