ADVERTISEMENT

ವೈವಿಧ್ಯಮಯ ಶಿಕ್ಷಣದ ವಿದ್ಯಾತಾಣ

ಡಿ.ಎಸ್.ನಾಯ್ಕ .
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

ಲೆನಾಡ ಸಿರಿ ಸೊಬಗಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪುಟ್ಟ ನಗರ. ಆದರೆ ತೆಂಗು ಕಂಗುಗಳ ಹಸಿರಿನ ಬನದಲ್ಲಿ, ಕಾಡು ಬೆಟ್ಟಗಳ, ಹಳ್ಳ-ಕೊಳ್ಳಗಳ, ಕಿರುತೊರೆ, ಜಲಪಾತಗಳ ತಾಣವಾಗಿ ನಿಸರ್ಗ ಪ್ರಿಯರನ್ನು ಆಕರ್ಷಿಸುತ್ತಿರುವುದು ಒಂದೆಡೆಯಾದರೆ, ವಿದ್ಯಾ ಕ್ಷೇತ್ರದಲ್ಲಿ ಸರಸ್ವತಿಯ ತಾಣವೂ ಹೌದು.

ಅಂಥದೊಂದು ವಿದ್ಯಾ ತಾಣ ಶಿರಸಿ ತಾಲ್ಲೂಕಿನ ಗೋಣೂರು ಎಂಬ ಪುಟ್ಟ ಗ್ರಾಮದಲ್ಲಿ ವಿವೇಕಾನಂದ ವಸತಿ ಶಾಲೆ ಹೆಸರಿನಲ್ಲಿ ತಲೆ ಎತ್ತಿ ನಿಂತಿದೆ. 2005ರಲ್ಲಿ ಗೋಣೂರು ಎಂಬ ಹೆಸರಿನ ಚಿಕ್ಕಗ್ರಾಮದಲ್ಲಿ ಗುರುಕುಲ ಮಾದರಿಯ ಕಿರಿಯ ಪ್ರಾಥಮಿಕ ಶಾಲೆಯೊಂದು ತೆರೆಯಲಾಗಿದೆ. 

ಸುಮಾರು ಏಳು ಎಕರೆಯಷ್ಟು ಜಾಗೆಯಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣಕ್ಕೆ ಒತ್ತುಕೊಟ್ಟು ವಸತಿ ನಿಲಯದೊಂದಿಗೆ ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ಉಚಿತ ಊಟೋಪಚಾರದೊಂದಿಗೆ ಅಕ್ಕರತೆಯಿಂದ ವಿದ್ಯಾದಾನ ಮಾಡುತ್ತಿರುವ ವಿವೇಕಾನಂದ ವಿಶ್ವ ಕಲ್ಯಾಣ ಹಾಗೂ ಸಾಧನ ಕೇಂದ್ರ ತೆರೆಮರೆಯಲ್ಲಿ ಸದ್ದು ಗದ್ದಲವಿಲ್ಲದೆ ಸೇವಾ ಕೈಂಕರ್ಯ ಕೈಗೊಂಡಿದೆ.

ಈ ವಿದ್ಯಾಕೇಂದ್ರದ ರೂವಾರಿ ರೇವಣ ದಂಪತಿ. ಸುರೇಂದ್ರ ಜಿ. ರೇವಣಕರ ಹಾಗೂ ಅವರ ಪತ್ನಿ ಮೀರಾ ರೇವಣಕರ ಅತ್ಯಂತ ಆಸಕ್ತಿಯಿಂದ, ನಿಸ್ಪ್ರಹತೆಯಿಂದ ಈ ವಿದ್ಯಾಕೇಂದ್ರವನ್ನು ಮೌಲ್ಯಾಧಾರಿತ ತಮ್ಮ ಆದರ್ಶದ ಕಲ್ಪನೆಯೊಂದಿಗೆ ಸಾಕಾರಗೊಳಿಸುತ್ತಿದ್ದಾರೆ. ಈ ದಂಪತಿಗಳು ಸರಕಾರಿ ಸೇವೆಯ ಉನ್ನತ ಹುದ್ದೆಯಿಂದ ನಿವೃತ್ತಿ ಪಡೆದು ಸ್ವಾಮಿ ವಿವೇಕಾನಂದರ ಆದರ್ಶ ಪ್ರಭಾವಳಿಗೊಳಗಾಗಿ ವಿಶ್ವಕಲ್ಯಾಣ ಹಾಗೂ ಸಾಧನ ಕೇಂದ್ರವನ್ನು ಸ್ಥಾಪಿಸಿ ಆಧ್ಯಾತ್ಮಿಕ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ.

ವೈವಿಧ್ಯಮಯ ಶಿಕ್ಷಣ
ಈ ವಿದ್ಯಾಕೇಂದ್ರದಲ್ಲಿ ವೈವಿಧ್ಯಮಯ ಶಿಕ್ಷಣವನ್ನು ನೀಡಲಾಗುತ್ತಿದೆ. ಮಹಾಪುರುಷರ ಜೀವನ ಪಾಠ, ಯೋಗ, ಕಂಪ್ಯೂಟರ್ ಮಾಹಿತಿ, ಸ್ವಾವಲಂಬನೆಯ ಪರಿಕಲ್ಪನೆ, ವ್ಯಕ್ತಿತ್ವ ವಿಕಸನದ ಬೋಧನೆ ಮಾಡಲಾಗುತ್ತಿದೆ. ಮಕ್ಕಳನ್ನು ಪ್ರತಿಭಾವಂತರನ್ನಾಗಿ, ದೇಶಾಭಿಮಾನಿಗಳನ್ನಾಗಿ ಮಾಡುವುದೇ ಈ ವಿದ್ಯಾಕೇಂದ್ರದ ಗುರಿಯಾಗಿದೆ. ಸ್ವತಃ ಈ ದಂಪತಿ ಈ ಕೇಂದ್ರದ ಉಸ್ತುವಾರಿ ಹೊತ್ತಿದ್ದಾರೆ.

`ಇಲ್ಲಿ 1ರಿಂದ 5ನೇ ತರಗತಿವರೆಗೆ ಅನೇಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಕೇವಲ ಅಭ್ಯಾಸದಲ್ಲಿ ಮುನ್ನಡೆಸಿದರೆ ಸಾಲದು. ಅವರನ್ನು ನೀತಿವಂತರು ಹಾಗೂ ದೇಶಾಭಿಮಾನಿಗಳನ್ನಾಗಿಯೂ ಮಾಡಬೇಕೆಂಬ ನಿಟ್ಟಿನಲ್ಲಿ ನಮ್ಮ ಕೇಂದ್ರ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದೆ.

ಶಿಕ್ಷಣದ ಜೊತೆ ಯೋಗ, ಚಿತ್ರಕಲೆಗಳನ್ನೂ ಹೇಳಿಕೊಡಲಾಗುತ್ತದೆ ಎನ್ನುತ್ತಾರೆ ದಂಪತಿ. ಸ್ವಾಮಿ ವಿವೇಕಾನಂದರ ಬಹು ಎತ್ತರದ ವಿಗ್ರಹ ಸ್ಥಾಪಿಸುವುದರೊಂದಿಗೆ ಪ್ರವಾಸೋದ್ಯಮದ ಕೇಂದ್ರವನ್ನಾಗಿ ಮಾಡುವ ಹಂಬಲದೊಂದಿಗೆ ಸರಕಾರದ ಅನುದಾನದ ಅವಶ್ಯಕತೆಯೂ ತಮಗಿದೆಯೆಂದು ಹೇಳುತ್ತಾರೆ.

ADVERTISEMENT

ಸದ್ಯ ದಂಪತಿಯೇ ವಿದ್ಯಾಕೇಂದ್ರದ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸುವ ವಿಚಾರವೂ ಇವರಿಗಿದೆ. ಈ ವಿದ್ಯಾಕೇಂದ್ರದ ಸಂಪರ್ಕಕ್ಕೆ 08384 247030, 247977.
-ಡಿ.ಎಸ್.ನಾಯ್ಕ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.