ವಿಶ್ವಕರ್ಮರ ಆರಾಧ್ಯ ದೇವತೆ ಕಾಳಿಕಾಮಾತೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಎಂಬ ಗ್ರಾಮದಲ್ಲಿ ಈ ದೇವಿಯ ದೇವಾಲಯವಿದೆ.
ಪುರಾಣ ಕಾಲದ ಇತಿಹಾಸ, ರಾಜರ ಕಾಲದ ಚರಿತ್ರೆ ಎರಡನ್ನೂ ಈ ಸ್ಥಳ ಹೊಂದಿದೆ.
ಶ್ರೀ ಮಾರ್ಕಂಡೇಯ ಪುರಾಣದಂತೆ ಸಾವರ್ಣಿಕ ಮನ್ವಂತರದ ಸಪ್ತಋಷಿಗಳಲ್ಲಿ ಓರ್ವರಾದ ಋಷ್ಯಶೃಂಗರಿಗೆ ಕಾಳಿಕಾದೇವಿ ಪ್ರತ್ಯಕ್ಷಳಾಗಿ ಆಶೀರ್ವದಿಸಿದ ಸ್ಥಳ ಇದು.
ಕಲ್ಯಾಣ ಚಾಲುಕ್ಯರ ಆಡಳಿತ ಅವಧಿಯಲ್ಲಿ ಮೊದಲನೆಯ ಜಗದೇಕಮಲ್ಲ-2 ಹಾಗೂ ಎರಡನೆಯ ವೀರಸೋಮೇಶ್ವರನ ಶಾಸನಗಳು ಇಲ್ಲಿ ದೊರೆತಿವೆ.
ಶಿರಸಂಗಿ ಕಾಳಿಯ ಆವರಣದಲ್ಲಿ ಹಬ್ಬೇಶ್ವರ, ಕಲ್ಮೇಶ್ವರ ಮತ್ತು ಬೈರವೇಶ್ವರ ದೇವಾಲಯಗಳು, ಗಣೇಶ, ಷಣ್ಮುಖ, ಉಮಾಮಹೇಶ್ವರ, ಕಾಳಭೈರವ, ಚನ್ನಭೈರವ, ಸಪ್ತಮಾತೃಕೆಯರು, ಸೂರ್ಯ ನಾರಾಯಣ ಶಿಲ್ಪಗಳು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ವೈಭವಕ್ಕೆ ಹಿಡಿದ ಕನ್ನಡಿ. ಅಲ್ಲದೇ ಭೀಮರತಿ ಹೊಂಡ, ಮೌನೇಶ್ವರ ದೇವಾಲಯ, ಖಡ್ಗತೀರ್ಥ, ರಾಮಲಕ್ಷ್ಮಣರ ದೇವಾಲಯಗಳು ಕೂಡ ಇಲ್ಲಿನ ಪ್ರಮುಖ ಆಕರ್ಷಣೆ.
ವಿಶ್ವಕರ್ಮ ವಂಶಜ, ಕಾಶ್ಯಪ ಗೋತ್ರಜ ವಿಭಾಂಡಕ ಮುನಿಯ ಮಗನೇ ಋಷ್ಯಶೃಂಗ ಮುನಿ. ನಲುಂದಾಸುರ, ಬೆಟ್ಟಾಸುರ, ಹಿರಿಕುಂಬಾಸುರ, ಚಿಕ್ಕುಂಬಾಸುರ, ನರುಂದಾಸುರ ಎಂಬ ಪಂಚ ರಾಕ್ಷಸರು ಈ ಮುನಿಯ ತಪಸ್ಸಿಗೆ ಭಂಗವನ್ನುಂಟು ಮಾಡಲು ಬರುತ್ತಾರೆ.
ಆಗ ಋಷಿಯ ಪ್ರಾರ್ಥನೆಯಂತೆ ಕಾಳಿಕಾದೇವಿ ಅವತಾರದಲ್ಲಿ ಜಗನ್ಮಾತೆ ಪ್ರತ್ಯಕ್ಷಳಾಗಿ ಐದೂ ರಾಕ್ಷಸರನ್ನು ಕೊಂದು ರುಂಡಗಳನ್ನು ಮಾಲೆಯಾಗಿ ಕೊರಳಲ್ಲಿ ಧರಿಸಿ ಇಲ್ಲಿ ನೆಲೆಸಿದಳು ಎಂಬುದು ಪುರಾಣ ಐತಿಹ್ಯ. ರಾಮನು ಇಲ್ಲಿ ಕಾಳಿಕಾ ಮಾತೆಯನ್ನು ಪೂಜಿಸಿ ಋಷ್ಯಶೃಂಗ ಮುನಿಗಳ ಆಶೀರ್ವಾದ ಪಡೆದ ಬಗ್ಗೆ ಕೂಡ ಪುರಾಣದಲ್ಲಿ ಉಲ್ಲೆೀಖಗಳಿವೆ.
ದೇವಾಲಯದ ಗರ್ಭಗೃಹದಲ್ಲಿನ ದೇವಿ ಕಾಳಿಕಾಮಾತೆಯ ವಿಗ್ರಹವು 9 ಅಡಿ ಎತ್ತರವಿದ್ದು ಸ್ವರ್ಣ ರೇಖಾಂಕಿತ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಬಲಗೈಯಲ್ಲಿ ಖಡ್ಗ, ತ್ರಿಶೂಲ, ಬಾಕು, ಎಡಗೈಯಲ್ಲಿ ಡಮರು, ಸರ್ಪ, ಖೇಟಕ ಮತ್ತು ಪಾನ ಪಾತ್ರೆ ಹೊಂದ್ದ್ದಿದಾಳೆ.
ಪೂಜಾ ಸಮಯದಲ್ಲಿ ದೇವಿ ಆಭರಣಗಳ ಮೂಲಕ ಶೋಭಿಸುತ್ತಾಳೆ. ಪ್ರತಿ ವರ್ಷ ಯುಗಾದಿಗೆ ನಡೆಯುವ ದೇವಿಯ ಪಲ್ಲಕ್ಕಿ ಉತ್ಸವ ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಈ ಸಂದರ್ಭದಲ್ಲಿ ದೇವಿಗೆ ಹೊಸ ಗೋಧಿಯ ನಿಧಿ ಅರ್ಪಣೆ ಹಾಗೂ ಬುತ್ತಿ ಹಾರಿಸುವುದೇ ವಿಶೇಷ. ದೇವಿಯು ದುಷ್ಟ ರಾಕ್ಷಸರನ್ನು ಸಂಹಾರ ಮಾಡುವಾಗ ಅವರ ರುಂಡಗಳನ್ನು ಚೆಂಡಾಡಿದ ದ್ಯೋತಕವಾಗಿ ಅನ್ನದ ಬುತ್ತಿಯ ಗೋಲಾಕಾರದ ಗುಂಡುಗಳನ್ನು ಮಾಡಿ ಹಾರಿಸುವುದು ಸಂಪ್ರದಾಯ.
ಚೈತ್ರ ಶುದ್ಧ ಪ್ರತಿಪದೆಯಂದು ರಾಕ್ಷಸರ ಸಂಹಾರಕ್ಕೆ ಹೋದ ದೇವಿ ಜೇಷ್ಠ ಶುದ್ಧ ಪಂಚಮಿ (ಐದನೇ ಪಂಚಮಿ)ಯಂದು ಮರಳಿ ದೇವಸ್ಥಾನಕ್ಕೆ ಬರುತ್ತಾಳೆ ಎಂಬುದು ಭಕ್ತರ ನಂಬಿಕೆ. ದೇವಾಲಯಕ್ಕೆ ಬರುವಾಗ ಮಾರ್ಗ ಮಧ್ಯದಲ್ಲಿ ಸಿರಸಂಗಿ ಲಿಂಗರಾಜರ ಕೋಟೆ ಇದೆ. ಇದೂ ಕೂಡ ಪ್ರವಾಸಿ ತಾಣ.
ಸೇವಾ ವಿವರ
ಅಭಿಷೇಕ ಪೂಜೆ 251 ರೂ
ಜವುಳ, ಮುಂಜಿ 201 ರೂ
ಕುಂಕುಮಾರ್ಚನೆ 101 ರೂ
ಕಾಯಿ ಕಟ್ಟುವುದು 51 ರೂ
ಈ ದೇವಾಲಯದಲ್ಲಿ ಭಕ್ತಾದಿಗಳು ಕಾಯಿ ಕಟ್ಟುವುದು ವಿಶೇಷ. ಅಂದರೆ ಹರಕೆ ಹೊತ್ತು ಬರುವ ಭಕ್ತರು ಅರ್ಚಕರಿಂದ ಕಾಯಿ ಪಡೆದು ದೇವಾಲಯ ಆವರಣದಲ್ಲಿ ಕಟ್ಟುತ್ತಾರೆ. ತಾವು ಹೇಳಿಕೊಂಡದ್ದು ಈಡೇರಿದ ನಂತರ ಬಂದು ಕಾಯಿ ಬಿಚ್ಚಿ ಅಭಿಷೇಕ ಮಾಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.