ADVERTISEMENT

ಸಂಕದ ಮೇಲೆ ನಡೆವ ಸಾಹಸ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST
ಸಂಕದ ಮೇಲೆ ನಡೆವ ಸಾಹಸ
ಸಂಕದ ಮೇಲೆ ನಡೆವ ಸಾಹಸ   

ಮಲೆನಾಡು ನೋಡಲಷ್ಟೇ ಚೆಂದ. ಅಲ್ಲಿ ವಾಸ ಮಾಡುವ ಜನರ ಕಷ್ಟಗಳು ಅವರಿಗಷ್ಟೇ ಗೊತ್ತು. ಮಳೆಗಾಲದಲ್ಲಿ  ಅನೇಕ ಗ್ರಾಮಗಳು ದ್ವೀಪಗಳಾಗಿ ಬಿಡುತ್ತವೆ.
ಅಲ್ಲಲ್ಲಿ ಹರಿಯುವ ಸಣ್ಣ-ಪುಟ್ಟ ನದಿ, ಹಳ್ಳ, ಕೊಳ್ಳಗಳನ್ನು ದಾಟಿಕೊಂಡು ಇನ್ನೊಂದು ಸ್ಥಳಕ್ಕೆ ಹೋಗುವುದು ಮಲೆನಾಡಿನ ಜನರಿಗೆ ದೊಡ್ಡ ಸವಾಲು. ಅಂತಹ ಸವಾಲು ಎದುರಿಸಿ ಬದುಕುವ ಅನಿವಾರ್ಯತೆ ಅವರದ್ದು.

ಹಳ್ಳ-ಕೊಳ್ಳಗಳನ್ನು ದಾಟಲು ಸ್ಥಳೀಯರು ಕಾಲು ಸಂಕ ನಿರ್ಮಿಸಿಕೊಳ್ಳುವ ಪರಿಪಾಠ ನೂರಾರು ವರ್ಷಗಳಿಂದ ರೂಢಿಯಲ್ಲಿದೆ. ಸಂಕ ಎಂದರೆ ಪುಟ್ಟ ಸೇತುವೆ. ಅವು ಪಕ್ಕಾ ಸೇತುವೆಗಳಲ್ಲ.

ಅಡಿಕೆ, ಬಿದಿರಿನ ಕಾಂಡ, ಬೊಂಬು, ಮರದ ದಿಮ್ಮಿಗಳನ್ನು ಬಳಸಿಕೊಂಡು ಸಂಕ ಕಟ್ಟಿಕೊಂಡು ಹಳ್ಳ ದಾಟಿ ಮುಖ್ಯ ರಸ್ತೆವರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ಸು ಹತ್ತಿ ಬೇಕಾದ ಊರು, ತಾಲ್ಲೂಕು ಕೇಂದ್ರಗಳಿಗೆ ಹೋಗುತ್ತಾರೆ. ಇಂತಹ ನೂರಾರು ಸಂಕಗಳು ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿವೆ.

ಹಳ್ಳಿಗಾಡಿನ ಪ್ರತಿಯೊಬ್ಬರೂ ನಿತ್ಯ ಸಂಕದ ಮೇಲೆ ಓಡಾಡುತ್ತಾರೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ತರಲು ಪೇಟೆಗೆ ಹೋಗುವವರು, ಕೂಲಿಕಾರರು, ಆಸ್ಪತ್ರೆಗೆ ಹೋಗುವ ವೃದ್ಧರು, ಗರ್ಭಿಣಿಯರು, ಮಕ್ಕಳು ಹೀಗೆ ಎಲ್ಲರೂ ಮಳೆಗಾಲದ 3-4 ತಿಂಗಳು ಸಂಕದ ಮೇಲೆ ಓಡಾಡುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳ ಹಲವಾರು ಊರುಗಳಲ್ಲಿ ಕಾಲು ಸಂಕಗಳಿವೆ. ಯಲ್ಲಾಪುರ ತಾಲ್ಲೂಕಿನ ಸೂರೀಮನೆ ಹತ್ತಿರ ಶಾಲ್ಮಲಾ ನದಿಗೆ, ಶಿರಸಿ ತಾಲೂಕಿನ ಮಳ್ಳೇನಳ್ಳಿ ಸಮೀಪದ ಕೋಣನಗುಂಡಿ ನದಿಗೆ, ಮತ್ತಿಘಟ್ಟ ಸನಿಹದ ಇಸ್ಕನ ಹಳ್ಳಕ್ಕೆ, ಮತ್ತಿಘಟ್ಟದ ಕೆಳಗಿನ ಕೇರಿಯ ಹಸೇಹಳ್ಳಕ್ಕೆ ಹೀಗೆ ವಿವಿಧ ಊರುಗಳಲ್ಲಿ  ಜನರು  ದೊಡ್ಡ ಪ್ರಮಾಣದ ಸಂಕಗಳನ್ನು ಕಟ್ಟಿಕೊಂಡಿದ್ದಾರೆ.

ನದಿಗೆ ಕಟ್ಟಿದ ಸಂಕಗಳು ತೂಗು ಸೇತುವೆಯಂತಿವೆ. ಹತ್ತಾರು ಮಕ್ಕಳು ಈ ಸಂಕಗಳನ್ನು ದಾಟಿಕೊಂಡು ನಿತ್ಯ ಸಮೀಪದ ಶಾಲೆಗಳಿಗೆ ಹೋಗಿ ಓದುತ್ತಾರೆ. ಅದು ಅವರಿಗೆ ಅನಿವಾರ್ಯ.

ಅನೇಕರು ಗಂಟು ಮೂಟೆಗಳನ್ನು ಹೊತ್ತು ಸಂಕ ದಾಟುತ್ತಾರೆ. ಮಳೆಗಾಲದಲ್ಲಿ ಮಲೆನಾಡಿನ ಹಳ್ಳಿಗಳಿಗೆ ಹೋದ ಹೊಸಬರು ಸಂಕ ದಾಟಲು ಕಸರತ್ತು ಮಾಡಬೇಕಾಗುತ್ತದೆ. ಸದಾ ಸುರಿವ ಮಳೆಯಿಂದ ಸಂಕದ ಮೇಲೆ ಪಾಚಿ ಕಟ್ಟಿರುತ್ತದೆ.
ಜಾರುತ್ತಲೇ ಸಂಕ ದಾಟಬೇಕಾಗುತ್ತದೆ. ಆದರೆ ಮಲೆನಾಡಿನ ಜನರಿಗೆ ಸಂಕದ ಮೇಲೆ ನಡೆಯುವುದು ಅಭ್ಯಾಸವಾಗಿ ಹೋಗಿದೆ. ಕೆಲವು ಕಡೆ ದೇವರ ಮೇಲೆ ಭಾರ ಹಾಕಿ ಸಂಕ ದಾಟಬೇಕಾಗುತ್ತದೆ.  ನದಿಗಳು ಮತ್ತು ದೊಡ್ಡ ಹಳ್ಳಗಳಿಗೆ ಸೇತುವೆ ನಿರ್ಮಿಸಿಕೊಡುವಂತೆ ಜನರು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ.

ಆದರೆ ಸರ್ಕಾರಕ್ಕೆ ಅವರ ಕಷ್ಟಗಳು ಅರ್ಥವಾಗುತ್ತಿಲ್ಲ. ರಾಜ್ಯ ಸರ್ಕಾರ  ಶಾಲಾ ಮಕ್ಕಳಿಗೆ ಸೈಕಲ್ ನೀಡಿದೆ. ಬಯಲು ಸೀಮೆಯ ಮಕ್ಕಳು ಸರ್ಕಾರ ಕೊಟ್ಟ ಸೈಕಲ್ ತುಳಿದುಕೊಂಡು ಶಾಲೆಗೆ ಬರುತ್ತಾರೆ. ಆದರೆ ಮಲೆನಾಡಿನ ಗ್ರಾಮೀಣ ಮಕ್ಕಳಿಗೆ ಸೈಕಲ್ ಇದ್ದರೂ ಅದನ್ನು ಹತ್ತಿ ಶಾಲೆಗೆ ಬರಲು ಸಾಧ್ಯವಿಲ್ಲ. ಸೈಕಲ್ ಮೇಲೆ ಕುಳಿತು ಸಂಕ ದಾಟುವುದು ಹೇಗೆ?

ರಾಜ್ಯದ ಶಿಕ್ಷಣ ಸಚಿವರ ಸ್ವ ಕ್ಷೇತ್ರದಲ್ಲಿ ಹತ್ತಾರು ಹಳ್ಳಿಗಳ ವಿದ್ಯಾರ್ಥಿಗಳು ಇಂತಹ ಕಷ್ಟ ಅನುಭವಿಸುತ್ತಿದ್ದಾರೆ. ಅದು ಸಚಿವರಿಗೂ ಗೊತ್ತಿದೆ. ಆದರೆ ಪರಿಣಾಮ ಸೊನ್ನೆ.

ರಾಜ್ಯದ ನೂತನ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಮಲೆನಾಡಿನ ಹಳ್ಳಿಗಳ ಜನರ ಕಷ್ಟಗಳು ಗೊತ್ತಿವೆ. ಅವರ ಕಾಲದಲ್ಲಿ ಮಲೆನಾಡಿನ ಜನರು ಸಂಕದ ಮೇಲೆ ನಡೆಯುವ ಕಷ್ಟವನ್ನು ತಪ್ಪಿಸುತ್ತಾರೆ ಎಂದು ಜನರು ನಿರೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.