ADVERTISEMENT

ಸರ್ವರೂ ಪೂಜಿಸುವ ಸಂತ ಅಂತೋಣಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST
ಸರ್ವರೂ ಪೂಜಿಸುವ ಸಂತ ಅಂತೋಣಿ
ಸರ್ವರೂ ಪೂಜಿಸುವ ಸಂತ ಅಂತೋಣಿ   

ಮೈಸೂರು-ಕೆ.ಆರ್.ನಗರ ಮಾರ್ಗಮಧ್ಯೆ  ದೊಡ್ಡೆಕೊಪ್ಪಲುನಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಡೋರ‌್ನಹಳ್ಳಿ ಎಂಬ ಗ್ರಾಮದಲ್ಲಿದೆ ಸಂತ ಅಂತೋಣಿ ದೇವಾಲಯ.

ಎರಡು ಶತಮಾನಗಳಷ್ಟು ಹಳೆಯ ದೇವಾಲಯ ಇದು. ಕ್ರೈಸ್ತ ದೇವಾಲಯವಾದರೂ ಹಿಂದು, ಮುಸ್ಲಿಂ ಧರ್ಮದವರೂ ಇಲ್ಲಿ ಪೂಜೆ ಸಲ್ಲಿಸುವುದು ವಿಶೇಷ. ಕರ್ನಾಟಕ  ಮಾತ್ರವಲ್ಲದೇ ತಮಿಳುನಾಡು, ಪುದುಚೇರಿ ಮುಂತಾದ ಕಡೆಗಳಿಂದ ಸರ್ವಧರ್ಮೀಯರು ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರತಿ ಮಂಗಳವಾರ ಹಾಗೂ ಭಾನುವಾರ ವಿಶೇಷ ಪ್ರಾರ್ಥನೆ ನಡೆಯುತ್ತದೆ.


ಮೈಸೂರು ದಿವಾನರಾಗಿದ್ದ ತಂಬುಚೆಟ್ಟಿಯವರ ಸಹೋದರ ಧನರಾಜ್ ಚೆಟ್ಟಿಯವರು 1920ರಲ್ಲಿ ಧನ ಸಹಾಯ ಮಾಡಿದ ಕಾರಣ ದೇವಾಲಯವನ್ನು ಮತ್ತಷ್ಟು ವಿಸ್ತರಿಸಿ ನಿರ್ಮಾಣ ಮಾಡಲಾಯಿತು. ಇದರ ತರುವಾಯ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ 1977ರಲ್ಲಿ ಮಂಗಳೂರಿನ ಚಂಗಪ್ಪಚೆಟ್ಟಿ ಎಂಬುವರು ಧನ ಸಹಾಯ ಮಾಡಿ ಈಗಿರುವ ದೇವಾಲಯವನ್ನು ಮತ್ತಷ್ಟು ನವೀಕರಣಗೊಳಿಸಿದರು.

ಇಲ್ಲಿ ಬರುವ ಭಕ್ತರು ತಮ್ಮ ಕೋರಿಕೆಯನ್ನು ಇಟ್ಟು ಅದು ನೇರವೇರಿದ ನಂತರ ಬಂದು ತಾವು ಒಪ್ಪಿಕೊಂಡಿರುವ ಕಾಣಿಕೆಯನ್ನು ಸಲ್ಲಿಸುತ್ತಾರೆ. ಇಲ್ಲಿ ಪ್ರತಿ ವರ್ಷ ಜೂನ್ 13 ರಂದು ವಿಜೃಂಭಣೆಯಿಂದ ರಥೋತ್ಸವ ನಡೆದು ಅಂದು ಹರಕೆಯನ್ನು ಕಟ್ಟಿಕೊಂಡ ಭಕ್ತರು ದೇವರಿಗೆ ಕಾಣಿಕೆ ಅರ್ಪಿಸುತ್ತಾರೆ. 

 ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ, ಅಂತೋಣಿ ಅವರ  ಜೀವನ ಚರಿತ್ರೆ ತೆರೆದುಕೊಳ್ಳುವುದು ಹೀಗೆ- ಪೋರ್ಚುಗಲ್ ದೇಶದ  ಲಿಸ್ಬನ್ ನಗರದಲ್ಲಿ ಉನ್ನತಾಧಿಕಾರಿಯಾಗಿದ್ದ ಮಾರ್ಟಿನ್ ತೀಯೊಬ್ ಮತ್ತು ಡೋನ್ ಮರಿಯಾ ದಂಪತಿಯ ಪುತ್ರ ಅಂತೋಣಿ. ಕ್ರಿ.ಸ್ತ. 1195 ಆಗಸ್ಟ್ 15ರಂದು ಜನಿಸಿದ ಇವರ ಮೂಲ ಹೆಸರು ಫರ್ದಿನಾಂದೆ. ಸನ್ಯಾಸ ಸ್ವೀಕರಿಸಿದ ನಂತರ ಅವರು ಅಂತೋಣಿ ಎಂದು ಪ್ರಸಿದ್ಧರಾದರು ಎಂಬ ಇತಿಹಾಸವಿದೆ.
 
ಇವರು ತಮ್ಮ ಜೀವಮಾನವಿಡಿ ಲಕ್ಷಾಂತರ ಮಂದಿಗೆ ಸನ್ಮಾರ್ಗವನ್ನು ತೋರಿದವರು. 1231 ಜೂನ್ 13ರಂದು ಮೃತಪಟ್ಟರು. ಇವರು ಮೃತಪಟ್ಟ ದಿನದಂದು ರಥೋತ್ಸವ ನಡೆಸಲಾಗುತ್ತದೆ. 1232ರಲ್ಲಿ ಗ್ರೆಗೊರಿ ಎಂಬ ಗುರುಗಳು ಇವರನ್ನು ಸಂತರ ಶ್ರೇಣಿಗೆ ಸೇರಿಸಿದ್ದರು.

ಈ ದೇವಾಲಯಕ್ಕೆ ಕುತೂಹಲಕರವಾದ ಐತಿಹಾಸಿಕ ಹಿನ್ನೆಲೆಯೂ ಇದೆ. ಡೋರ‌್ನಹಳ್ಳಿ ಯಲ್ಲಿ  ಹಿಂದು ಧರ್ಮದ ರೈತನೊಬ್ಬ ರಾಗಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ನೇಗಿಲಿಗೆ ಮರದ ಕೊರಡೊಂದು ಸಿಕ್ಕಿದಂತಾಗಿ ಎತ್ತುಗಳನ್ನು ನಿಲ್ಲಿಸಿ, ನೋಡಿದಾಗ ಅದೊಂದು ಮನುಷ್ಯಾಕೃತಿಯ ಮರದ ಪ್ರತಿಮೆಯಾಗಿತ್ತು. ಇದು ಆಟದ ವಸ್ತು ಇರಬಹುದು ಎಂದು ಅದನ್ನು ಮನೆಗೆ ತಂದು ಮಕ್ಕಳಿಗೆ ಆಟವಾಡಲು ನೀಡಿದ.
 
ಒಂದು ರಾತ್ರಿ ಅವನಿಗೆ ಕನಸಿನಲ್ಲಿ ಸಂತನೊಬ್ಬ ಕಾಣಿಸಿಕೊಂಡು `ಇದು ಎಲ್ಲರೂ ಗೌರವಿಸುವ ಸಂತನ ಪ್ರತಿಮೆ. ಅದು ಸಿಕ್ಕಿದ ಸ್ಥಳದಲ್ಲಿ ದೇವಾಲಯ ಕಟ್ಟಿಸಿ ಪೂಜಿಸು. ಹೀಗೆ ಮಾಡಿದರೆ ನಿನ್ನ ಕುಟುಂಬ ದೈವ ಕೃಪೆಗೆ ಪಾತ್ರವಾಗುತ್ತದೆ, ನಿರ್ಲಕ್ಷಿಸಿದರೆ ಕಷ್ಟಪಡಬೇಕಾಗುತ್ತದೆ~ ಎಂದು ಎಚ್ಚರಿಕೆ ನೀಡಿದ.
 
ರೈತ ಇದನ್ನು ಆರಂಭದಲ್ಲಿ ನಿರ್ಲಕ್ಷಿಸಿದ. ಪರಿಣಾಮ ಹಲವಾರು ತೊಂದರೆಗಳು ಕಾಣಿಸಿಕೊಂಡವು. ನಂತರ ಸಂತನ ಸಂದೇಶದಂತೆ ದೇವಾಲಯ ನಿರ್ಮಾಣಕ್ಕೆ ಮುಂದಾದ ಎನ್ನುವುದು ಕಥೆ.

ಹೋಗುವುದು ಹೇಗೆ... ಅಂತೋಣಿ  ಅವರ ದೇವಾಲಯಕ್ಕೆ ಬರಲು ಬಸ್ ಹಾಗೂ ರೈಲಿನ ವ್ಯವಸ್ಥೆ ಇದೆ. ಬಸ್‌ನಲ್ಲಿ ಆದರೆ ಮೈಸೂರು- ಕೆ.ಆರ್.ನಗರ ಪ್ರಯಾಣಿಸುವ ಬಸ್‌ಗೆ ಹತ್ತಿ ದೊಡ್ಡೆಕೊಪ್ಪಲು ಎಂಬಲ್ಲಿ ಇಳಿದು 2 ಕಿಲೋ.ಮೀಟರ್ ಆಟೊದಲ್ಲಿ ಪ್ರಯಾಣಿಸಬೇಕು. ರೈಲಿನಲ್ಲಿ ಆದರೆ ಮೈಸೂರಿನಿಂದ ಅರಸೀಕೆರೆ ಪ್ರಯಾಣಿಸುವ ರೈಲಿನಲ್ಲಿ ಹೋದರೆ ಮೈಸೂರಿನಿಂದ ನಾಲ್ಕನೇ ನಿಲ್ದಾಣದವೇ ಡೋರ‌್ನಹಳ್ಳಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT