ADVERTISEMENT

ಹೊಯ್ಸಳ ಕಾಲದ ಗುಡಿ ಆನೆಕನ್ನಂಬಾಡಿ

ಡಾ.ಎಚ್.ಎಸ್.ಗೋಪಾಲ ರಾವ್
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಇದು 16 ಮೂಲೆಗಳನ್ನು ಹೊಂದಿರುವ ನಕ್ಷತ್ರಾಕಾರದ ಅಪೂರ್ವ ದೇಗುಲ. ಹೊಯ್ಸಳ ಕಾಲದ ವಾಸ್ತು ಶಿಲ್ಪವನ್ನು ಅನಾವರಣಗೊಳಿಸುತ್ತ ಆ ಕಾಲದ ಕಲೆಯನ್ನು ಮೈದಳೆದು ನಿಂತಿರುವ ದೇವಾಲಯ.

ಇದೇ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿನ ಆನೆಕನ್ನಂಬಾಡಿ ದೇವಾಲಯ. ಹೊಯ್ಸಳ ಸೈನ್ಯದ ಆನೆಗಳನ್ನು ಸಾಕುತ್ತಿದ್ದ ಅಪರೂಪದ ಈ ಮಂದಿರ ಇರುವುದು ಹಾಸನ-ಮೈಸೂರು ರಸ್ತೆಯಲ್ಲಿ ಹೊಳೆನರಸೀಪುರದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ ಆನೆಕನ್ನಂಬಾಡಿಯಲ್ಲಿ.

ಕನ್ನಂಬಾಡಿ ಎಂದೊಡನೆ ನೆನಪಾಗುವುದು ಈಗ ಕೆ.ಆರ್.ಎಸ್. ಎಂದೇ ಪ್ರಖ್ಯಾತವಾದ ಹಿಂದಿನ ಕನ್ನಂಬಾಡಿ ಅಣೆಕಟ್ಟು. ಮೊದಲು ಕನ್ನಂಬಾಡಿ ಎಂಬ ಗ್ರಾಮವಿದ್ದ ಪ್ರದೇಶದಲ್ಲಿ ಕಾವೇರಿ ನದಿಗೆ ಅಡ್ಡಗಟ್ಟೆ ಕಟ್ಟಿ ಕೃಷ್ಣರಾಜ ಸಾಗರ (ಕೆ.ಆರ್.ಎಸ್.) ಎಂದು ಕರೆದರು. ಕನ್ನಮ ಅಥವಾ ಕಣ್ಣಮ ವಾಡಿಯು ಕನ್ನಂಬಾಡಿ ಆಗಿರುವ ಸಾಧ್ಯತೆ ಹೆಚ್ಚು. ಆದರೆ ಇಲ್ಲಿ ಪ್ರಸ್ತಾಪಿಸುತ್ತಿರುವುದು ಆನೆಕನ್ನಂಬಾಡಿ ಬಗ್ಗೆ.

ಇತಿಹಾಸಕಾರರ ಗಮನ ಸೆಳೆದಿರುವುದು ಆನೆಕನ್ನಂಬಾಡಿಯು ಪ್ರಾಚೀನ ನಾರಾಯಣಸ್ವಾಮಿ ದೇವಾಲಯ  ಮತ್ತು ಸುಮಾರು 35 ವರ್ಷಗಳ ಹಿಂದೆ ದೊರೆತ ಎರಡು ತಾಮ್ರ ಶಾಸನಗಳು. ಇಲ್ಲಿಯ ನಾರಾಯಣಸ್ವಾಮಿ ದೇವಾಲಯದ ವಾಸ್ತುಶೈಲಿಯು ಹೊಯ್ಸಳರ ಆರಂಭಕಾಲದ್ದಾಗಿದೆ.

ನಡುವಿನ ಪ್ರಧಾನ ಗರ್ಭಗೃಹದ ಹೊರಭಾಗವು ನಕ್ಷತ್ರಾಕಾರ ಹೊಂದಿದೆ. ಎರಡೂ ಪಾರ್ಶ್ವಗಳಲ್ಲಿನ ಗರ್ಭಗೃಹಗಳ ಹೊರವಿನ್ಯಾಸವು ಆಯತಾಕಾರ ಎನಿಸಿದರೂ, ಸೂಕ್ಷ್ಮವಾಗಿ ಗಮನಿಸಿದಾಗ ಹೊರಭಾಗದ ಭಿತ್ತಿಯು ನಕ್ಷತ್ರಾಕಾರಕ್ಕೆ ತಿರುಗುತ್ತಿರುವುದನ್ನು ಕಾಣಬಹುದು.

ADVERTISEMENT

ಆನೆಕನ್ನಂಬಾಡಿಯ ದೇವಾಲಯದ ಒಳಗೆ ಕೇಶವ (ನಾರಾಯಣ), ನರಸಿಂಹ ಮತ್ತು ಗೋಪಾಲಕೃಷ್ಣ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಈ ಮೂರೂ ವಿಗ್ರಹಗಳು ಹೊಯ್ಸಳರ ಕಾಲದ ಶಿಲ್ಪಗಳ ನೆನಪು ಮಾಡಿಸುತ್ತವೆ. ಕೇಶವನಿರುವ ಪ್ರಧಾನ ಗರ್ಭಗುಡಿಯಲ್ಲಿ ಮಾತ್ರ ಸುಖನಾಸಿ ಇದೆ. ಅದರ ಮುಂದಿನ ನವರಂಗದಲ್ಲಿ ಗಣಪತಿ ಮತ್ತು ಮಹಿಷಾಸುರ ಮರ್ದಿನಿಯ ಶಿಲ್ಪಗಳಿವೆ. ಇಂದಿಗೂ ಈ ಶಿಲ್ಪಗಳಿಗೆ ಪೂಜೆ ಸಲ್ಲುತ್ತಿದೆ.

ಐತಿಹಾಸಿಕ ಮಹತ್ವ
ಕ್ರಿ.ಶ 1244ರ ಶಾಸನವು ಆನೆಕನ್ನಂಬಾಡಿ ಗ್ರಾಮವನ್ನು ಅಗ್ರಹಾರವನ್ನಾಗಿ ಪರಿವರ್ತಿಸಿ ದಾನ ನೀಡಲಾದ ವಿಷಯವನ್ನು ದಾಖಲಿಸಿದೆ. ಹೊಯ್ಸಳ ದೇವಾಲಯಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಪ್ರೊ. ಷ.ಶೆಟ್ಟರ್ ಅವರು ನಾಗಲಾಪುರದ ಚೆನ್ನಕೇಶವ ಮತ್ತು ಆನೆಕನ್ನಂಬಾಡಿಯ ನಾರಾಯಣಸ್ವಾಮಿ (ಕೇಶವ) ದೇವಾಲಯಗಳ ಗರ್ಭಗೃಹಗಳ ವಿನ್ಯಾಸವು ಡಂಬಳದ ದೇವಾಲಯ (ದೊಡ್ಡಬಸಪ್ಪ)ದ ಗರ್ಭಗೃಹದ ವಿನ್ಯಾಸದಿಂದ ಪ್ರೇರಿತಗೊಂಡಿರಬೇಕೆಂಬ ಸೂಚನೆ ನೀಡಿದ್ದಾರೆ.

ದೇವಾಲಯದ ಹೊರಭಿತ್ತಿಯಲ್ಲಿ ಹೆಚ್ಚು ಅಲಂಕರಣಗೊಳ್ಳದಿರುವ ಕಾರಣದಿಂದಲೂ ಆನೆಕನ್ನಂಬಾಡಿಯ ದೇವಾಲಯವನ್ನು ಹೊಯ್ಸಳರ ಆರಂಭಿಕ ಕಾಲದ ದೇವಾಲಯಗಳಲ್ಲೊಂದು ಎಂದು ತಿಳಿಯಬಹುದಾಗಿದೆ.

ದಿನಿತ್ಯವೂ ಪೂಜೆ ನಡೆಯುತ್ತಿರುವ ನಾರಾಯಣ ದೇವಾಲಯವನ್ನು ಸ್ಥಳೀಯರು ಚೆನ್ನಾಗಿಯೇ ಕಾಪಾಡಿದ್ದಾರೆ. ಆದರೆ, ಕಾಲವು ದೇವಾಲಯವನ್ನು ಹಾಳುಮಾಡುತ್ತಿದೆ. ದೇವಾಲಯದ ಭಿತ್ತಿ (ಗೋಡೆ) ಸರಿದು, ಕೆಲವೆಡೆ ಬಿರುಕು ಕಾಣುತ್ತಿದೆ.

ಮಾಡು ಸೋರುತ್ತಿದೆ. ಇದರಿಂದ ಜನರ ಪ್ರೀತಿ, ಗೌರವ ಎಷ್ಟೇ ಇದ್ದರೂ, ಸೂಕ್ತ ರಕ್ಷಣೆ ಇಲ್ಲದಿದ್ದರೆ ಇಂತಹ ಅಮೂಲ್ಯ ದೇವಾಲಯಗಳು ವಿನಾಶದ ಅಂಚಿಗೆ ಹೋಗುತ್ತವೆ. ಇದನ್ನು ನಿವಾರಿಸಬೇಕಾದರೆ ಶೀಘ್ರವೇ ಈ ದೇವಾಲಯದ ಸಂರಕ್ಷಣೆಯ ಕಾರ್ಯ ಆಗಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.