ADVERTISEMENT

ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು

ಪ್ರವೀಣ ಸಿ.ಪೂಜಾರ
Published 16 ಜನವರಿ 2018, 11:03 IST
Last Updated 16 ಜನವರಿ 2018, 11:03 IST
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು   

ಸಣ್ಣಗೆ ಬೆಳಕು ಹರಿಸುತ್ತಿದ್ದ ಸುಂದರ ಲ್ಯಾಂಪನ್ನು ಕಂಡು, ಪ್ಲಾಸ್ಟಿಕ್‌ನಲ್ಲಿ ಮಾಡಿದ್ದಾರೆ ಎಂದುಕೊಂಡು ಅದನ್ನು ಮುಟ್ಟುತ್ತಿದ್ದಂತೆಯೇ ಅಚ್ಚರಿಗೊಂಡೆ. ಮಣ್ಣಿನಲ್ಲಿ ಅರಳಿದ ಕಲಾಕೃತಿಯದು ಎಂಬುದನ್ನು ನಂಬಲೇ ಅಸಾಧ್ಯವೆನಿಸಿತ್ತು. ಈ ಆಶ್ಚರ್ಯ ಇಲ್ಲಿಗೇ ಕೊನೆಯಾಗಲಿಲ್ಲ. ಟೇಬಲ್‌ ಲ್ಯಾಂಪ್, ಪೆನ್‌ ಸ್ಟ್ಯಾಂಡ್, ನೇತು ಹಾಕಿದ್ದ ಉಬ್ಬು ಶಿಲ್ಪ ಇವೆಲ್ಲವೂ ಮೃಣ್ಮಯಿಯಾಗಿ ನಗುತ್ತಿದ್ದಂತೆ ಭಾಸವಾಯಿತು. ಕಾಲಕ್ಕೆ ತಕ್ಕಂತೆ ಒಗ್ಗಿಕೊಳ್ಳುತ್ತ ಕುಂಬಾರಿಕೆ ಬೆಳೆಯುತ್ತಿರುವ ಪ್ರತೀಕವಾಗಿಯೂ ಕಂಡಿತು.

ಲೋಹ–ಪ್ಲಾಸ್ಟಿಕ್‌ ಸಾಮಗ್ರಿಗಳ ಭರಾಟೆಯಿಂದ ಕಂಗೆಟ್ಟು ಕುಂಬಾರಿಕೆ ವೃತ್ತಿಯನ್ನೇ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸನ್ನಿವೇಶದಲ್ಲಿ ಇಂತಹ ಸಂದಿಗ್ಧ ಸ್ಥಿತಿಯನ್ನೇ ಸವಾಲಾಗಿ ಸ್ವೀಕರಿಸಿ ಕುಂಬಾರಿಕೆಯಲ್ಲಿ ಹೊಸಹಾದಿ ಯನ್ನು ಹುಡುಕುವ ಯತ್ನಗಳೂ ನಡೆದಿವೆ. ಹೌದು, ‘ಕುಂಬಾರಿಕೆ ನಶಿಸುತ್ತಿದೆ’ ಎಂಬ ಕೂಗಿನ ನಡುವೆಯೇ ಅದರ ಇರುವನ್ನು ಮತ್ತೊಂದು ರೂಪದಲ್ಲಿ ತೋರಿಸಿಕೊಡಲು ಹೊರಟವರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಹಂಸಭಾವಿ ಗ್ರಾಮದ ನಾಗರಾಜ ಚಕ್ರಸಾಲಿ.

ಈಗಾಗಲೇ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಪುದುಚೇರಿಯ ವಿಲ್ಲಿಯನೂರ್‌ ಟೆರ್‍ರಕೋಟ, ಛತ್ತೀಸ್‌ಗಡದ ಬಸ್ತಾರ್‌ ಕಲೆ, ಅರುಣಾಚಲದ ಮೋನ್ಪಾ ಶೈಲಿಯ ಮರದ ಮುಖವಾಡ, ರಾಜಸ್ಥಾನದ ಪೋಖ್ರಾನ್‌ ಪಾತ್ರೆ, ಕೇರಳದ ಉಬ್ಬು ಕಲಾಕೃತಿ ಹಾಗೂ ನಮ್ಮದೇ ಆದ ಚನ್ನಪಟ್ಟಣದ ಗೊಂಬೆಗಳನ್ನೂ ಮಣ್ಣಿನಿಂದಲೇ ಮೂಡಿಸಬಲ್ಲರು.

ADVERTISEMENT

ಹೀಗೆ ಇವರ ಮನಸ್ಸು ಆಧುನೀಕರಣದೆಡೆ ಹೊರಳಲೂ ಕಾರಣವಿದೆ. ಕುಂಬಾರರು ತಯಾರಿಸುತ್ತಿದ್ದ ಮಣ್ಣಿನ ಗಡಿಗೆ, ಮಡಿಕೆ, ತಟ್ಟೆ, ದೀಪ, ತತ್ರಾಣಿ, ಬಿಂದಿಗೆ ಹಾಗೂ ರಂಜಣಗಿಯಂತಹ ವಸ್ತುಗಳು ಬೇಡಿಕೆ ಕುಗ್ಗಿಸಿಕೊಂಡವು. ದುಡಿಮೆಯು ಸಾಲದ ಕಂತು ತುಂಬುವುದಕ್ಕೂ ಸಾಲದೇ, ಸಂಸಾರ ನಡೆಸುವುದೇ ಕಷ್ಟವಾಯಿತು. ಕೊನೆಗೆ ಹುಟ್ಟಿದೂರನ್ನು ತೊರೆದು ಬೆಂಗಳೂರಿನ ಮೊರೆಹೋದರು. ಕುಂಬಾರಿಕೆಯನ್ನೇ ನೆಚ್ಚಿಕೊಂಡ ಇವರಿಗೆ ಅಲ್ಲೂ ಸೋಲೇ ಕೈ ಹಿಡಿಯಿತು. ಮತ್ತೆ ಊರು ಕರೆಯಿತು.

ಬಳುವಳಿಯಾಗಿ ಬಂದ ಈ ಕಲೆಯನ್ನು ದೂರುವ ಬದಲು ಅದನ್ನೇ ಮೆಟ್ಟಿಲಾಗಿಸಿ ಎಲ್ಲ ಕಷ್ಟವನ್ನೂ ಮೆಟ್ಟಿನಿಲ್ಲಲೇಬೇಕೆಂದು ಯೋಚಿಸುತ್ತಿದ್ದ ಇವರಲ್ಲಿ ವರವೆಂಬಂತೆ ಹೊಸ ಆಲೋಚನೆಯೂ ಮೊಳಕೆಯೊಡೆದಿತ್ತು. ವೃತ್ತಿ ಬದಲಾಯಿಸುವುದಕ್ಕಿಂತ ವೃತ್ತಿಯ ದಿಕ್ಕನ್ನೇ ಬದಲಿಸಿದರೆ ಹೇಗೆ?

ಕುಂಬಾರಿಕೆಯನ್ನೇ ಈ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಬೇಕು  ಎಂಬ ಆ ಆಲೋಚನೆ ಕಾರ್ಯರೂಪಕ್ಕೂ ಇಳಿಯಿತು. ಕಾಲ ಸರಿದಂತೆ ಇನ್ನಷ್ಟು, ಮತ್ತಷ್ಟು ಹೊಸತುಗಳು ಹುಟ್ಟಿ ಕೊಂಡವು. ಕಲೆಯ ಬಗ್ಗೆ ತನಗೆ ಗೊತ್ತಿರುವ, ಕಂಡಿರುವ, ಕೇಳಿರುವ, ನೋಡಿರುವ ಎಲ್ಲಾ ಅನುಭವ ಗಳನ್ನೂ ಮಣ್ಣಿನಲ್ಲಿ ಒಟ್ಟಾಗಿಸಲು ಮುಂದಾದರು.

ಕೆಲವು ಕೈಬಿಟ್ಟವು. ಕೆಲವು ಕೈ ಸೇರಿದವು. ವಾಟರ್ ಫಿಲ್ಟರ್, ಕೋಲ್ಡ್‌ ಸ್ಟೋರೇಜ್, ಬೆಡ್ ಲ್ಯಾಂಪ್, ಟೆಲಿಫೋನ್ ಸ್ಟ್ಯಾಂಡ್, ಬೆಲ್ ಸೆಟ್, ಮ್ಯಾಜಿಕ್ ಲ್ಯಾಂಪ್, ವಾಟರ್ ಬಾಟಲ್, ವಾಲ್ ಪೋಸ್ಟರ್‌, ಪೆನ್ ಸ್ಟ್ಯಾಂಡ್‌, ಮಿನಿ ಚಟಗಿ ಸೆಟ್ ಸೇರಿದಂತೆ ಮೂವತ್ತೈದಕ್ಕೂ ಹೆಚ್ಚು ವಿಧದ ಆಲಂಕಾರಿಕ ವಸ್ತುಗಳು ಮಣ್ಣಿಗೆ ಒಗ್ಗಿಕೊಂಡವು. ಈಗ ಹೆಬ್ಬೆಟ್ಟಿನ ಗಾತ್ರದಿಂದ ಹಿಡಿದು ಆರೇಳು ಅಡಿಯಷ್ಟು ಎತ್ತರದ ಮೂರ್ತಿ ಹಾಗೂ ಆಲಂಕಾರಿಕ ವಸ್ತುಗಳನ್ನು ತಯಾರಿಸುವಷ್ಟು ಕರಗತ ಮಾಡಿಕೊಂಡಿದ್ದಾರೆ. ದುರ್ಗಾ ದೇವಿ, ಸರ್ವಜ್ಞ, ಬಸವಣ್ಣನವರೂ ಈ ಮಣ್ಣಿನ ಕಲೆಯಲ್ಲಿ ರಾರಾಜಿಸುತ್ತಿದ್ದಾರೆ.

ಕುಂಬಾರಿಕೆಯನ್ನಷ್ಟೇ ಆಧುನಿಕ ಮಾಡಿದರೆ ಸಾಲದು, ಮಾರಾಟದ ಪ್ರಕ್ರಿಯೆಯೂ ಬದಲಾಗಬೇಕು ಎಂದು ನಿರ್ಧರಿಸಿ, ಸಾಮಾಜಿಕ ಜಾಲತಾಣಗಳನ್ನು ಬಳಸಲು ಮುಂದಾದರು. ಯಾವುದೇ ಸಾಮಗ್ರಿ ಸಿದ್ಧಗೊಂಡರೂ ಮೊದಲು ಪ್ರಚಾರ ಕೊಡುವುದು ಜಾಲತಾಣಗಳ ಮೂಲಕವೇ. ಐಟಿಐ ಕಲಿತು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಅಕ್ಕನ ಮಗ ಸತೀಶ ಕೂಡ ಇವರ ವ್ಯಾಪಾರ ವಹಿವಾಟಿಗೆ ಸಹಾಯ ಮಾಡಲು ಇಲ್ಲಿಗೇ ಬಂದು ಜೊತೆಯಾದರು.

ಗ್ರಾಮದ ಬಿದರಿಕಟ್ಟೆಯ ಬಿಳಿ ಮಣ್ಣು ಹಾಗೂ ನಿಂಬೆಹಣ್ಣಿನ ಕೆರೆ ಮತ್ತು ಹುಚಗೊಂಡನ ಕೆರೆಯ ಕಪ್ಪು ಮಣ್ಣನ್ನೇ ಇವರು ಬಳಸುವುದು. ತಂದ ಮಣ್ಣನ್ನು ಸಮನಾಗಿ ಮಿಶ್ರಣಮಾಡಿ, ಒಂದು ವಾರ ನೀರು ಹಾಕಿ ನೆನೆಸುತ್ತಾರೆ. ಬಳಿಕ, ನಾಲ್ಕಾರು ಜನ ಕಾಲಿನಿಂದ ತುಳಿದು ಹದಗೊಳಿಸುತ್ತಾರೆ. ವಾರಗಟ್ಟಲೆ ತಂಪು ವಾತಾವರಣದಲ್ಲಿ ಸಂಗ್ರಹಿಸಿಟ್ಟು ಕೊಂಡು, ಪ್ರತಿನಿತ್ಯ ಅಗತ್ಯವಿದಷ್ಟನ್ನು ಮಾತ್ರ ಉಪಯೋಗಿಸಿಕೊಳ್ಳುತ್ತಾರೆ. ಸಿದ್ಧಪಡಿಸಿದ ಮಣ್ಣಿನ ವಸ್ತುಗಳನ್ನು 18– 20ಗಂಟೆ ಸುಡುತ್ತಾರೆ. ಅವುಗಳಿಗೆ ಶೈನಿಂಗ್ ಬರುವ ರೀತಿ ಬಣ್ಣ ಬಳಿಯಲಾಗುತ್ತದೆ.

ಮರಳಿ ಮಣ್ಣಿಗೆ: ಹಿಂದಿನ ಕಾಲದವರ ಆಹಾರ ಪದ್ಧತಿ ಹಾಗೂ ಜೀವನಶೈಲಿ ಅನುಸರಿಸುವ ಉದ್ದೇಶ ದಿಂದ ಹಲವು ಕಡೆ ಮಣ್ಣಿನ ದಿನ ಬಳಕೆ ವಸ್ತುಗಳಿಗೆ ಪ್ರಾಮುಖ್ಯ ನೀಡಿರುವುದು ಇವರಿಗೆ ಲಾಭ ಮಾಡಿಕೊಟ್ಟಿದೆ. ವಿನ್ಯಾಸಗಳು ಸಮಕಾಲೀನವಾಗಿರುವುದು ಆ ಬೇಡಿಕೆ ಇನ್ನಷ್ಟು ಹೆಚ್ಚಲು ಕಾರಣ. ಕೆಲವರು ಶುಭ ಸಮಾರಂಭಗಳಲ್ಲಿ ಉಡುಗೊರೆಯಾಗಿ ನೀಡಲು ತಮಗೆ ಬೇಕಾದ ವಸ್ತುಗಳಿಗೆ ಆರ್ಡರ್ ನೀಡುತ್ತಿದ್ದಾರೆ.

ಈ ಬಗ್ಗೆ ತರಬೇತಿ ನೀಡುವಂತೆ ಹೊರ ರಾಜ್ಯಗಳಿಂದ ಬೇಡಿಕೆಯೂ ಬಂದಿದೆ. ಒಂದುವೇಳೆ ಸರ್ಕಾರವೇ ಕುಂಬಾರಿಕೆ ಬಗ್ಗೆ ಆಸಕ್ತ ಕಲೆಗಾರರಿಗೆ ತರಬೇತಿ ನೀಡಲು ಮುಂದಾದರೆ, ತಮಗೂ, ಸಾವಿರಾರು ಬಡ ಕುಂಬಾರ ರಿಗೂ ಬದುಕಿನ ದಾರಿ ಸಿಕ್ಕಂತಾಗುತ್ತದೆ ಎಂಬ ಆಶಾವಾದ ಇವರದ್ದು.
ಸಂಪರ್ಕಕ್ಕೆ: 9900668970, 9972851711.
⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.