ADVERTISEMENT

ಈ ಪರ್ವತ ಏರಲು ಅದೃಷ್ಟ ಇರಬೇಕು!

ಪದ್ಮರಾಜ ದಂಡಾವತಿ
Published 6 ಜನವರಿ 2011, 11:00 IST
Last Updated 6 ಜನವರಿ 2011, 11:00 IST

ಹೋಟೆಲ್‌ನ ಕೊಠಡಿಯ ಕಿಟಕಿ ಪರದೆ ಸರಿಸಿ ಬಾಲ್ಕನಿಗೆ ಬಂದು ನಿಂತೆ. ಎದುರು ಒಂದು ಸ್ವಪ್ನಲೋಕ ತೆರೆದುಕೊಂಡಿತ್ತು. ಸೂರ್ಯ ಇನ್ನೂ ಬಾನಂಚಿನಲ್ಲಿ ಇಣುಕಿ ನೋಡುತ್ತಿದ್ದ. ಸ್ವಲ್ಪ ದೂರದಲ್ಲಿ ಟೇಬಲ್ ಟಾಪ್ ಪರ್ವತ ಆಕಾಶದ ಎತ್ತರಕ್ಕೆ ಸವಾಲು ಒಡ್ಡಿ ನಿಂತಿತ್ತು. ಮೋಡಗಳು ಅದನ್ನು ದಾಟಿಕೊಂಡು ಬರಲು ಹೆಣಗುತ್ತಿದ್ದುವು. ಕೆಲವು ಸೋತು ಪರ್ವತದ ತುದಿಯನ್ನು ತಪ್ಪಿಸಿಕೊಂಡು ಅರಳೆಯ ಹಂಜಿಯಂತೆ ನಮ್ಮ ಕಡೆಗೆ ತೇಲಿಕೊಂಡು ಬರುತ್ತಿದ್ದುವು.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ನಗರದಲ್ಲಿ ನಾವು ಇದ್ದುದು ಟೇಬಲ್ ಬೇ ಹೋಟೆಲ್. ಅದು ಆ ದೇಶದ ಪ್ರತಿಷ್ಠಿತ ಸನ್ ಸಿಟಿ ಸಮೂಹಕ್ಕೆ ಸೇರಿದ ಹೋಟೆಲ್.ಟೇಬಲ್ ಟಾಪ್ ಪರ್ವತಕ್ಕೆ ಮುಖ ಮಾಡಿದ ಬಾಲ್ಕನಿ. ಬಾಲ್ಕನಿಗೆ ನೂರು ಅಡಿ ಆಚೆ ಶಾಂತ ಸಮುದ್ರ. ದಂಡೆಯಲ್ಲಿ ಲಂಗರು ಹಾಕಿ ನಿಂತ ಹಡಗುಗಳು. ಅವು ಸಾಕಷ್ಟು ದೊಡ್ಡವೇ ಇದ್ದುವು. ಹತ್ತಾರು ಹಡಗು, ಬೋಟುಗಳ ಆಚೆ ಮನೆಗಳು. ಮನೆಗಳಿಗೆ ಹೊಂದಿಕೊಂಡಂತೆ ಪರ್ವತ. ಕಾಣುವ ಕಣ್ಣಿಗೆ ಇನ್ನೆಂಥ ಸಮೃದ್ಧಿ ಬೇಕು? ಹಗಲು ಒಂದು ವೈಭವ, ರಾತ್ರಿಯದು ಮತ್ತೊಂದು.

ಟೇಬಲ್ ಟಾಪ್ ಪರ್ವತಕ್ಕೆ ಹೆಸರು ಬಂದುದು ಅದರ ಸಪಾಟಾದ ಮೇಲುಮೈಯಿಂದ. ಕೊಠಡಿಯಿಂದ ನೋಡಿದರೆ ಬೃಹಾದಾಕಾರದ ಒಂದು ಟೇಬಲ್ ಇಟ್ಟರೆ ಹೇಗೆ ಕಾಣುತ್ತಿತ್ತೋ ಹಾಗೆಯೇ ಕಾಣುತ್ತಿತ್ತು. 1,806 ಮೀಟರ್ (5,418 ಅಡಿ) ಎತ್ತರದ ಈ ಪರ್ವತದ ಮೇಲುಭಾಗವೂ ಹೆಚ್ಚೂ ಕಡಿಮೆ ಸಪಾಟಾಗಿಯೇ ಇದೆ.

ಸಮುದ್ರದ ಆಳದಿಂದ ಎದ್ದ ಈ ಪರ್ವತದ ಮೈತುಂಬ ಕಲ್ಲು. ಇದು ಬೇಗ ಸವಕಲು ಆಗದ ಸ್ಯಾಂಡ್‌ಸ್ಟೋನ್ ಕಲ್ಲು. ತುಂಬ ಗಟ್ಟಿ. ನೀರಿನ ಆಳದಿಂದ ಎದ್ದ ಕಲ್ಲಿನ ಬಣ್ಣ ಹೇಗೋ ಹಾಗೆಯೇ ಇದರ ಬಣ್ಣವೂ ಕಪ್ಪು ಮಿಶ್ರಿತ ಬಿಳಿ. ಅಥವಾ ಬಿಳಿ ಮಿಶ್ರಿತ ಕಪ್ಪು. ಸಹಸ್ರಾರು ವರ್ಷಗಳು ಕಳೆದರೂ ಈ ಕಲ್ಲು ಸವಕಳಿ ಆಗದು.ಪರ್ವತದ ಮೇಲೆ ಅಲ್ಲಲ್ಲಿ ಕುರುಚಲು ಗಿಡಗಳು ಮಾತ್ರ ಬೆಳೆದಿವೆ. ಅವುಗಳಿಗೆ ಪೈನ್ಬೋಸ್ ಸಸ್ಯಗಳು ಎಂದು ಹೆಸರು. ಅಲ್ಲಲ್ಲಿ ಕೆಲವು ವಿಚಿತ್ರ ಹೂಗಳೂ ಅರಳಿ ನಿಂತಿರುತ್ತವೆ. ಪರ್ವತದ ಒಂದು ಕೊನೆಗೆ ಡೆವಿಲ್ಸ್ ಪೀಕ್ ಎಂದು ಹೆಸರು. ಇನ್ನೊಂದು ತುದಿಯ ಹೆಸರು ಲಯನ್ಸ್ ಹೆಡ್. ಅದು ನಿಜಕ್ಕೂ ಸಿಂಹದ ಮುಖವೇ.

 ಸಮುದ್ರದ ಒಡಲಲ್ಲಿಯೇ ಮೂರು ಕಿ.ಮೀ.ನಷ್ಟು ಉದ್ದ ಬೆಳೆದು ನಿಂತಿರುವ ಈ ಪರ್ವತದ ಅರ್ಧ ದಾರಿಯವರೆಗೆ ನಮ್ಮ ವಾಹನದಲ್ಲಿಯೇ ಹೋಗಬಹುದು.\ಉಳಿದ ದಾರಿ ಕೇಬಲ್ ಕಾರ್ ಮೂಲಕ. 65 ಮಂದಿ ನಿಲ್ಲಬಹುದಾದ ಕೇಬಲ್ ಕಾರ್, ಮೇಲೆ ಏರುತ್ತ  ಹಾಗೂ ಕೆಳಗೆ ಇಳಿಯುತ್ತ ತನ್ನ ಮೈಸುತ್ತಲೇ 360 ಡಿಗ್ರಿ ತಿರುಗುತ್ತದೆ. ಆ ಮೂಲಕ ಅದರಲ್ಲಿ ಪ್ರಯಾಣಿಸುವವರು ಸುತ್ತಲಿನ ದೃಶ್ಯಗಳನ್ನು ನೋಡಲು ಅನುವು ಮಾಡಿಕೊಡುತ್ತದೆ. ಸೋಜಿಗ ಎಂದರೆ 1926ರಷ್ಟು ಹಿಂದೆಯೇ ಈ ಪರ್ವತಕ್ಕೆ ಕೇಬಲ್ ಕಾರ್ ಸಂಪರ್ಕ ಕಲ್ಪಿಸಲಾಗಿತ್ತು.

ವರ್ಷಗಳು ಉರುಳಿದಂತೆ ಅದರ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು. 1997ರಲ್ಲಿ ಈಗಿನ ಕೇಬಲ್ ಕಾರ್ ಚಾಲ್ತಿಗೆ ಬಂತು. 1998ರಲ್ಲಿ ಈ ಪರ್ವತಕ್ಕೆ ಭೇಟಿ ನೀಡಿದ್ದ ನೆಲ್ಸನ್ ಮಂಡೇಲಾ ಅವರು ಪರ್ವತದ ಮೇಲುಭಾಗವನ್ನು ಸಂರಕ್ಷಿತ ಅರಣ್ಯ ಎಂದು ಘೋಷಿಸಿದರು. ಈಗ ಈ ಪರ್ವತ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದೆ.

ಈ ಪರ್ವತವನ್ನು ಅಡಿಯಿಂದ ಮುಡಿಯವರೆಗೆ ಚಾರಣದ ಹಾಗೆ ಏರುವ ಸಾಹಸಿಗಳಿಗೇನೂ ಕೊರತೆಯಿಲ್ಲ. ಮೇಲಿನ ತುದಿಯಿಂದ ಬೆಟ್ಟಕ್ಕೆ ಅಲ್ಲಲ್ಲಿ ಕಬ್ಬಿಣದ ಕೊಕ್ಕೆ ಹಾಕಿ ದೇಹಕ್ಕೆ ಹಗ್ಗ ಕಟ್ಟಿಕೊಂಡು ಅನಾಮತ್ತಾಗಿ ಕೆಳಗೆ ಇಳಿಯುವ ದುಸ್ಸಾಹಸಿಗಳಿಗೂ ಕೊರತೆಯಿಲ್ಲ. ನಾವು ಅಲ್ಲಿಗೆ ಹೋಗಿದ್ದಾಗ ಕೆಳಗಿನಿಂದ ಮೇಲೆ ಹತ್ತುವವರೂ ಇದ್ದರು. ಮೇಲಿನಿಂದ ಕೆಳಗೆ ಇಳಿಯುತ್ತಿದ್ದ ಒಬ್ಬ ಭೂಪನೂ ಕಾಣಿಸಿದ. ಜನರೇ ಹಾಗೆ. ಬಲು ವಿಚಿತ್ರ!

ಒಂದು ಸಾರಿ ನೀವು ಪರ್ವತದ ಮೇಲೆ ಹತ್ತಿ ನಿಂತರೆ ಸಾಕು ತಣ್ಣನೆಯ ಗಾಳಿ ಹಿತವಾಗಿ ನಿಮ್ಮ ಮೈ ಸೋಕುತ್ತದೆ. ಬೆಟ್ಟದ ಮೇಲಿನ ಕಾಲು ಹಾದಿಯಲ್ಲಿ ಸಾಗುತ್ತ ಅಲ್ಲಲ್ಲಿ ಇರುವ ವಿವ್ ಪಾಯಿಂಟ್‌ಗಳಲ್ಲಿ ನಿಂತರೆ ಕೇಪ್‌ಟೌನ್ ನಗರ ಮೈಚೆಲ್ಲಿ ಬಿದ್ದುದು ಕಾಣುತ್ತದೆ. ಇನ್ನೊಂದು ಬದಿಗೆ ಕಣ್ಣು ಹಾಯಿಸಿದಷ್ಟು ದೂರ ಅಟ್ಲಾಂಟಿಕ್ ಮಹಾ ಸಾಗರ. ಇಲ್ಲಿನ ಸಾಗರದ ವೈಶಿಷ್ಟ್ಯ ಎಂದರೆ ಅದರ ಅಬ್ಬರ ಕಡಿಮೆ. ಒಂದು ಸಾರಿ ನೀಲಿ, ಒಂದು ಸಾರಿ ತಿಳಿ ಹಸಿರು ಕಾಣುವ ಸಮುದ್ರ ಶಾಂತವಾಗಿ ಬೆಳ್ನೊರೆಗಳ ಜತೆಗೆ ಭೂಮಿಯನ್ನು ಚುಂಬಿಸಿ ಮತ್ತೆ ವಾಪಸು ಹೋಗುವುದು ಮನೋಹರ.

ಟೇಬಲ್ ಟಾಪ್ ಪರ್ವತದ ಮೇಲೆ ಹೋಗಲು ಅದೃಷ್ಟ ಇರಬೇಕು. ಕೇಪ್‌ಟೌನ್ ನಗರ, ಜಗತ್ತಿನ ಗಾಳಿನಗರ (ವಿಂಡ್‌ಸಿಟಿ)ಗಳಲ್ಲಿ ಒಂದು. ನಾವು ಅಲ್ಲಿ ಇದ್ದ ಒಂದು ದಿನ ರಾತ್ರಿ ಭಾರಿ ಬಿರುಗಾಳಿ ಬೀಸತೊಡಗಿತು. ನಮ್ಮ ಬಾಲ್ಕನಿಯ ಬಾಗಿಲು ಇನ್ನೇನು ಕಿತ್ತುಕೊಂಡು ಹೋಗುತ್ತದೆ ಎಂದು ಭಯವಾಯಿತು. ಬಾಲ್ಕನಿಯ ಬಾಗಿಲನ್ನು ಒಂದು ಇಂಚಿನಷ್ಟು ತೆಗೆಯಲು ಪ್ರಯತ್ನ ಮಾಡಿದೆ. ಭಾರೀ ಸದ್ದಿನೊಂದಿಗೆ ಗಾಳಿ ಒಳಗೆ ನುಗ್ಗತೊಡಗಿತು.

ರೂಮಿನಲ್ಲಿ ಏನೋ ಅವಾಂತರ ಆಯಿತು ಎಂದು ಗಾಬರಿಬಿದ್ದು ತಕ್ಷಣ ಅದನ್ನು ತಳ್ಳಿಬಿಟ್ಟೆ. ಇಂಥ ಗಾಳಿ ಹಗಲಿನಲ್ಲೂ ಬೀಸಬಹುದು. ಅಂಥ ಸಮಯದಲ್ಲಿ ಬೆಟ್ಟದ ಮೇಲೆ ಹೋಗಿ ನಿಲ್ಲಲು ಸಾಧ್ಯವಿಲ್ಲ. ಚಳಿಗಾಲದಲ್ಲಿ ಈ ನಗರದಲ್ಲಿ ಮಳೆ ಯಾವಾಗ ಬೀಳುತ್ತದೆ, ಮಂಜು ಯಾವಾಗ ಆವರಿಸುತ್ತದೆ ಎಂದು ಹೇಳುವುದೂ ಕಷ್ಟ. ನಾವು ಪರ್ವತದ ಮೇಲೆ ಹೋಗಿ ಬಂದ ಮರುದಿನ ಅದೇ ಬೆಟ್ಟದ ಪಕ್ಕದ ರಸ್ತೆಯಲ್ಲಿ ಕೇಪ್ ಆಫ್ ಗುಡ್ ಹೋಪ್ ಕಡೆಗೆ ಹೊರಟಿದ್ದೆವು.

ಇಡೀ ದಿನ ಮಳೆ ಸುರಿಯಿತು. ಮಳೆ ಇಲ್ಲದ ಸಮಯದಲ್ಲಿ ಮಂಜಿನ ತೆರೆಗಳು ಬೆಟ್ಟವನ್ನು ಆವರಿಸಿದ್ದುವು. ‘ನೀವು ನಿನ್ನೆ ಬಿಟ್ಟು ಇಂದು ಪರ್ವತಕ್ಕೆ ಹೋಗುವ ಕಾರ್ಯಕ್ರಮ ಇದ್ದರೆ ನಿಮಗೆ ಮೇಲೆ ಹೋಗಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದು ನಮ್ಮ ಟೂರ್ ಗೈಡ್ ಮ್ಯಾನಿ ಹೇಳಿದ್ದು ನಮಗೆ ಆ ಅದೃಷ್ಟ ಇತ್ತು ಎಂಬ ಕಾರಣಕ್ಕಾಗಿಯೇ ಇರಬೇಕು. ಟೇಬಲ್ ಟಾಪ್ ಪರ್ವತದ ಮೇಲೆ ಮಂಜು ಮುಸುಕಿದಾಗ ಮೇಜಿನ ಮೇಲೆ ಟೇಬಲ್ ಕ್ಲಾತ್ ಹಾಕಿದಂತೆ ಕಾಣುತ್ತದೆ. ದಕ್ಷಿಣ ಆಫ್ರಿಕಾ ದೇಶಕ್ಕೆ ಇರುವ ನಿಸರ್ಗದ ಕೃಪೆ ಅಸಾಧಾರಣವಾದುದು.

(ದಕ್ಷಿಣ ಆಫ್ರಿಕಾ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಆಹ್ವಾನದ ಮೇರೆಗೆ ಲೇಖಕರು ಆ ದೇಶಕ್ಕೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT