ADVERTISEMENT

ಚೆಲುವ ಕುರುವ

​ಪ್ರಜಾವಾಣಿ ವಾರ್ತೆ
Published 2 ಜೂನ್ 2012, 19:30 IST
Last Updated 2 ಜೂನ್ 2012, 19:30 IST

ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಕೇರಳದ ಮಾನಂತವಾಡಿಯಿಂದ 17 ಕಿ.ಮೀ. ದೂರದಲ್ಲಿ ಕುರುವ ದ್ವೀಪ ಸಿಗುತ್ತದೆ. ಕೇರಳದ ವೈನಾಡಿನಲ್ಲಿರುವ ಅತ್ಯಂತ ಆಕರ್ಷಕ ಪ್ರವಾಸಿ ತಾಣ ಇದು. ಕಬಿನಿಯ ನೀರು ಸುತ್ತಲೂ ಹರಿಯುವ ನದಿ ಮುಖಜ ಭೂಮಿ ಹಾಗೂ ವಿಶಿಷ್ಟವಾದ ಭೌಗೋಳಿಕ ಲಕ್ಷಣಗಳಿಗಾಗಿ ಕುರುವ ದ್ವೀಪ ಗಮನ ಸೆಳೆಯುತ್ತದೆ.

ನಿತ್ಯ ಹರಿದ್ವರ್ಣದ ಕಾಡುಗಳನ್ನು ಹೊಂದಿರುವ ದ್ವೀಪ ಮೌನದ ಬೀಡಾಗಬೇಕಾಗಿದ್ದರೂ, ಪ್ರವಾಸಿಗಳ ಕಿಲಕಿಲ ಧ್ವನಿ, ಹಕ್ಕಿಗಳ ಕಲರವದಿಂದ ತುಂಬಿರುತ್ತದೆ. ಮೊದಮೊದಲು ಸ್ಥಳೀಯರಷ್ಟೇ ಬರುತ್ತಿದ್ದ ಈ ದ್ವೀಪಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಈಚೆಗೆ ಹೆಚ್ಚುತ್ತಿದೆ. ವೈನಾಡಿಗೆ ಬರುವ ಪ್ರವಾಸಿಗರ ಪೈಕಿ ಅತಿ ಹೆಚ್ಚು ಜನರು ಭೇಟಿ ನೀಡುವ ಸ್ಥಳ ಇದು.

ದ್ವೀಪದ ಸುತ್ತಲೂ ಹರಿಯುವ ನದಿ ಝರಿಯಲ್ಲಿ ದೋಣಿ ವಿಹಾರಕ್ಕೆ ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅವಕಾಶ ಮಾಡಿದೆ. ದ್ವೀಪದ ಪ್ರವೇಶವನ್ನು ಕೇರಳ ಅರಣ್ಯ ಇಲಾಖೆಯ ವನ ಸಂರಕ್ಷಣಾ ಸಮಿತಿ ನಿಯಂತ್ರಿಸುತ್ತಿದೆ. ಹಾಗಾಗಿ ಎಲ್ಲ ಸಂದರ್ಭಗಳಲ್ಲಿಯೂ ಇಲ್ಲಿ ಪ್ರವೇಶ ಲಭ್ಯವಿಲ್ಲ. ಮಳೆಗಾಲದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಬಂದ್.

950 ಎಕರೆಗಳಷ್ಟು ವಿಶಾಲವಾಗಿರುವ ಕುರುವ ದ್ವೀಪದಲ್ಲಿ ಅಪರೂಪದ ಸಸ್ಯ ಪ್ರಬೇಧಗಳು, ಪಕ್ಷಿ ಸಂಕುಲವನ್ನು ನೋಡಬಹುದು. ಪ್ರವಾಸಿಗರಿಗೆ ಪ್ರಕೃತಿ ನೀಡಿದ ಕೊಡುಗೆ ಇದೆಂದು ಬಣ್ಣಿಸಲಾಗುತ್ತಿದೆ. ಇಲ್ಲಿರುವುದು ಮಳೆ ಕಾಡು. ಸುಮಾರು 65 ಎಕರೆ ಪ್ರದೇಶವನ್ನು ಮಾತ್ರ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಅಂದಾಜಿನ ಪ್ರಕಾರ ಈ ದ್ವೀಪ ಸಂಕುಲದಲ್ಲಿ ಸುಮಾರು 150 ಚಿಕ್ಕಪುಟ್ಟ ದ್ವೀಪಗಳಿದ್ದು, ಎರಡು ತೊರೆಗಳಿವೆ.

ಇಲ್ಲಿನ ಇನ್ನೊಂದು ವಿಶೇಷ ಆಕರ್ಷಣೆಯೆಂದರೆ ತೆಪ್ಪದ ಪ್ರಯಾಣ. ಬೊಂಬುಗಳಿಂದ ನಿರ್ಮಿಸಲಾದ ತೆಪ್ಪದ ಮೇಲೆ ಜನರನ್ನು ಕೂರಿಸಿಕೊಂಡು ಹಗ್ಗದ ನೆರವಿನಿಂದ ಇನ್ನೊಂದು ತುದಿ ತಲುಪಿಸುವುದು ವಿಭಿನ್ನ ಅನುಭವ ನೀಡುತ್ತದೆ. ಐದೇ ನಿಮಿಷದ ಪ್ರಯಾಣವಾದರೂ ಬಹಳ ಸಮಯ ನೆನಪಿನಲ್ಲಿಟ್ಟುಕೊಳ್ಳಬಹುದಾದ ಅನುಭವ. ಆದರೆ ಈ ತೆಪ್ಪದ ಪ್ರಯಾಣಕ್ಕೆ ಯಾರೂ ಗ್ಯಾರಂಟಿ ಕೊಡುವುದಿಲ್ಲ. ಅಂದರೆ ಸುರಕ್ಷತೆಯ ಪ್ರಮಾಣಪತ್ರ ಯಾರಿಂದಲೂ ಇಲ್ಲ.

ಪ್ರಯಾಣಿಕರು ತಮ್ಮ ಧೈರ್ಯವನ್ನು ನೆಚ್ಚಿಕೊಂಡು ಪ್ರಯಾಣಿಸಬಹುದು. ಅಪರೂಪಕ್ಕೊಮ್ಮೆ ಅಪಘಾತ ಸಂಭವಿಸಿದಾಗಲೆಲ್ಲ ಇದನ್ನು ನಿಷೇಧಿಸಬೇಕೆಂಬ ಕೂಗು ಕೇಳಿಬರುತ್ತಿದೆ.
ಕುರುವ ದ್ವೀಪದಲ್ಲಿ ಏನೂ ಸಿಗುವುದಿಲ್ಲ. ಹೊರಗಿನಿಂದ ಆಹಾರ ಕೊಂಡೊಯ್ಯಲೂ ಅವಕಾಶ ಇಲ್ಲ. ಪ್ಲಾಸ್ಟಿಕ್ ಬಳಕೆ ನಿಷೇಧ. ಕೈಯಲ್ಲಿರುವ ವಸ್ತುಗಳ ಮೇಲೆ ಹದ್ದಿನ ಕಣ್ಣಿಡುವ ವಾಚ್‌ಮನ್‌ಗಳಿದ್ದಾರೆ. ಮಿನರಲ್ ನೀರಿನ ಬಾಟಲಿ ಇದ್ದರೂ ರಿಸೆಪ್ಷನ್‌ನಲ್ಲಿಟ್ಟು ಬರಲು ಸೂಚಿಸುತ್ತಾರೆ. ಹಾಗಾಗಿ ದಿನವಿಡೀ ಅಲ್ಲಿ ಕಳೆಯುವುದು ಕಷ್ಟ. ಪಾರ್ಟಿ, ಪಿಕ್ನಿಕ್‌ಗಳಿಗೆ ಅವಕಾಶ ಇಲ್ಲ.

ಮಾನಂತವಾಡಿಯಿಂದ ಪೂರ್ವಕ್ಕೆ 17 ಕಿ.ಮೀ., ಜಿಲ್ಲಾ ಕೇಂದ್ರ ಕಲ್ಪೆಟ್ಟಾದಿಂದ 40 ಕಿ.ಮೀ. ದೂರದಲ್ಲಿ ಕುರುವ ದ್ವೀಪ ಇದೆ. ಸ್ವಂತ ವಾಹನ ಇಲ್ಲದಿದ್ದರೆ, ಸ್ಥಳೀಯ ಬಸ್ ಅಥವಾ ಜೀಪುಗಳನ್ನು ನೆಚ್ಚಿಕೊಳ್ಳಬಹುದು. ಬೆಳಿಗ್ಗೆ ಒಂಬತ್ತೂವರೆಯಿಂದ ಸಂಜೆ ನಾಲ್ಕೂಕಾಲು ಗಂಟೆಯವರೆಗೆ ಪ್ರವೇಶಕ್ಕೆ ಅವಕಾಶ ಇದೆ. ಆದರೆ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೆ, ಹವಾಮಾನ ಪ್ರತಿಕೂಲವಾಗಿದ್ದರೆ ಪ್ರವೇಶವನ್ನು ಯಾವುದೇ ಸಂದರ್ಭದಲ್ಲಿ ಮುಚ್ಚಬಹುದು.

ಈಗಿರುವ ವ್ಯವಸ್ಥೆಯಲ್ಲಿ ಪ್ರವಾಸಿ ಮಾರ್ಗವೊಂದನ್ನು ನಿರ್ಮಿಸಲಾಗಿದೆ. ಮರಗಳನ್ನು ಬಳಸಿಕೊಂಡೇ ಆಕರ್ಷಣೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗಿದೆ. ಬಿದಿರ ಮೆಳೆಯ ನಡುವೆ ನಿರ್ಮಿಸಿದ ಅಟ್ಟಣಿಗೆ ಇದಕ್ಕೊಂದು ಉದಾಹರಣೆ. ದ್ವೀಪಕ್ಕೆ ಒಂದು ಸುತ್ತು ಬರುವುದು ಸಾಧ್ಯವಿಲ್ಲ. ಹೋದ ದಾರಿಯಲ್ಲಿಯೇ ಹಿಂದಿರುಗಬೇಕು. ಸುಮಾರು ಎರಡು ಕಿ.ಮೀ. ಹೆಜ್ಜೆ ಹಾಕಿದರೆ ನದಿ ಝರಿ ಸಿಗುತ್ತದೆ. ಕಲ್ಲುಗಳ ಸಂದಿಯಿಂದ ತೂರಿ ಬರುವ ಬೆಳ್ನೊರೆಗೆ ಮೈಯೊಡ್ಡಬಹುದು. ಜಡಗಟ್ಟಿದ ಮೈಮನಗಳಿಗೆ ಹೊಸ ಹುರುಪು ತುಂಬಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.