ADVERTISEMENT

ನಿತ್ಯಹರಿದ್ವರ್ಣದ ದೇವನಮನೆ

ಸಂಧ್ಯಾ ಹೆಗಡೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

‘ಒಂದು ಫಾಲ್ಸ್‌ ತೋರಿಸುವೆ ಬನ್ನಿ’ ಎನ್ನುತ್ತ ದೇವನಮನೆಯ ಚಿದಂಬರ ಹೆಗಡೆ ರಸ್ತೆಯ ಬದಿಯ ಕಾಡಿನೆಡೆಗೆ ಹೆಜ್ಜೆ ಇಟ್ಟರು. ಕೈಯಲ್ಲಿ ಕತ್ತಿ ಹಿಡಿದರೂ ಗಿಡವೊಂದನ್ನೂ ಸವರದೆ ನಡುವೆ ದಾರಿ ಮಾಡಿಕೊಂಡು ಮುಂದೆ ಸಾಗಿದ ಅವರನ್ನು ನಾವು ಹಿಂಬಾಲಿಸಿದೆವು.

ಅರ್ಧ ಕಿ.ಮೀ. ನಡೆದ ಮೇಲೆ ಒಮ್ಮೆಲೇ ಹಸಿರು ಕೋಟೆಯ ಬಾಗಿಲು ತೆರೆಯಿತು. ಸುತ್ತೆಲ್ಲ ನೂರಾರು ಜನ ಕುಳಿತುಕೊಳ್ಳಬಹುದಾದಷ್ಟು ವಿಸ್ತಾರದ ಕಲ್ಲಿನ ಹಾಸು, ನಡುವೆ ತಪಸ್ಸಿಗೆ ಕುಳಿತ ಸನ್ಯಾಸಿಯಂತೆ ಏಕತಾನತೆಯಲ್ಲಿ ಹರಿಯುವ ಜುಳು ಜುಳು ನೀರು.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಗಡಿ ಭಾಗದ ಕುಗ್ರಾಮ ದೇವನಮನೆಯಲ್ಲೊಂದು ಅದ್ಭುತ ಜಲಪಾತವಿದೆ. ಮನುಷ್ಯರ ಸಂಚಾರವೇ ವಿರಳವಾಗಿರುವ ಇಲ್ಲಿ ಜಲಪಾತವೊಂದಿದೆ ಎಂಬುದು ಸ್ಥಳೀಯ ನಿವಾಸಿಗಳಿಗೆ ಮಾತ್ರ ಗೊತ್ತಿದೆ. ಬೆಟ್ಟದಿಂದ ಹುಟ್ಟಿ ಬಂದಿರುವ ಕಥೆಕೊಡ್ಲು ಹಳ್ಳ ಹಸಿರು ಕೋಟೆಯ ನಡುವೆ ಜಲಪಾತ ಸೃಷ್ಟಿಸಿದೆ.

ಮೊದಲು 5 ಅಡಿ ಎತ್ತರದಿಂದ ಜಿಗಿಯುವ ಜಲಪಾತ ತುಸು ಮುಂದೆ ಸಾಗಿ 25 ಅಡಿ ಕೆಳಗೆ ಧುಮ್ಮಿಕ್ಕುತ್ತದೆ. ಮುಗಿಲಿಗೆ ಮುಖ ಮಾಡಿರುವ ಇಲ್ಲಿನ ಬೃಹತ್‌ ಮರಗಳು ಸೂರ್ಯನ ಇಣುಕನ್ನೂ ನಿರಾಕರಿಸುತ್ತವೆ. ಭೂದೇವಿ ಹಾಸಿರುವ ಕಪ್ಪು ಕಲ್ಲಿನ ಮೇಲೆ ಹಾಯಾಗಿ ಕುಳಿತು ಪ್ರಕೃತಿ ಸೌಂದರ್ಯ ಆಸ್ವಾದಿಸಬಹುದು.

ಶಿರಸಿಯಿಂದ ಮತ್ತಿಘಟ್ಟಾ ರಸ್ತೆಯಲ್ಲಿ  ಸುಮಾರು 40 ಕಿ.ಮೀ. ಸಾಗಿ ದೇವನಮನೆ 1ನೇ ತಿರುವಿನಲ್ಲಿ ಬಂದು ತುಸು ದೂರ ಕಾಲ್ನಡಿಗೆಯಲ್ಲಿ ಹೋದರೆ ಜಲಪಾತ ಕಾಣುತ್ತದೆ. ಪ್ರಸಿದ್ಧ ಯಾತ್ರಾ ಕ್ಷೇತ್ರ ಯಾಣದಿಂದ 3 ಕಿ.ಮೀ. ಅಂತರದಲ್ಲಿರುವ ಈ ಜಲಕನ್ಯೆ ಸಂಕ್ರಾಂತಿ ಹೊತ್ತಿಗೆ ಸೊರಗಿ ಮಾಯವಾಗುತ್ತಾಳೆ.

ಕಳ್ಳರ ಗುಹೆ
ಇನ್ನೊಂದು ಕುತೂಹಲ ತೋರಿಸುವೆನೆಂದು ಚಿದಂಬರ ಹೆಗಡೆ ರಸ್ತೆಯ ಇನ್ನೊಂದು ದಿಕ್ಕು ಹಿಡಿದು ಸಾಗಿದರು. ಹಸಿರು ಹಾಸಿನ ಬೆಟ್ಟ, ನಡು ನಡುವೆ ದಟ್ಟ ಕಾಡು, ಸಾಗುತ್ತಿರುವ ದಾರಿಯ ನಡುವೆ ಅಲ್ಲಲ್ಲಿ ಕಾಡುಕೋಣ, ಚಿರತೆಯ ಪಾದದ ಗುರುತು, ನರ ಮನುಷ್ಯರ ಸುಳಿವಿಲ್ಲ. ಕಾಡುಕೋಣನ ಹಿಂಡು ಕಂಡರೆ ಭಯ ಬೇಡ, ನಮ್ಮ ಪಾಡಿಗೆ ನಾವಿದ್ದರೆ ಅವು ಏನೂ ಮಾಡುವುದಿಲ್ಲ. ಹತ್ತಿರ ಬಂದರೆ ಮರ ಹತ್ತಿಬಿಡಿ ಎಂದು ಚಿದಂಬರ ಹೆಗಡೆ ಮೊದಲೇ ಸೂಚನೆ ನೀಡಿದ್ದರು.

ಸುಮಾರು ಒಂದೂವರೆ ಕಿ.ಮೀ. ಬೆಟ್ಟ ಏರಿ ಗುಡ್ಡ ದಾಟಿದ ಮೇಲೆ ದಟ್ಟಾರಣ್ಯದ ಒಳಗೆ ಪ್ರವೇಶಿಸಿದೆವು. ಒಮ್ಮೆಲೇ ಬಂದ ಬುರ್ರನೆ ಸದ್ದಿಗೆ ಎದೆಬಡಿತ ಜೋರಾಯಿತು. ಸಹಸ್ರಾರು ಬಾವಲಿಗಳು ಬೃಹತ್‌ ಗುಹೆಯಿಂದ ಹಾರಿ ಬಂದವು. ಒಂದು ಹಳ್ಳಿ ಮನೆಯ ಆಯಕ್ಕಿಂತ ದೊಡ್ಡದಾಗಿರುವ ಪ್ರಕೃತಿ ನಿರ್ಮಿತ ಗುಹೆ ಅದು. ಅದಕ್ಕೆ ಕಳ್ಳರ ಗುಹೆ ಎಂದು ಹೆಸರು. ಹಿಂದೆ ಹಳ್ಳಿಗೆ ಬರುವ ದರೋಡೆಕೋರರು ಈ ಕಲ್ಲು ಬಂಡೆಯ ಗುಹೆಯಲ್ಲಿ ಅಡಗಿಕೊಂಡು ರಾತ್ರಿ ಹಳ್ಳಿಗೆ ಕಳ್ಳತನಕ್ಕೆ ಬರುತ್ತಿದ್ದರಂತೆ. ಕಥೆಹಳ್ಳದಿಂದ ಈ ಕಳ್ಳರು ಗುಹೆಗೆ ನೀರು ಕೊಂಡೊಯ್ಯುತ್ತಿದ್ದರಂತೆ. ಅದಕ್ಕೆ ಆ ಹಳ್ಳಕ್ಕೆ ಕಥೆಹಳ್ಳ ಎಂಬ ಹೆಸರು ರೂಢಿಯಲ್ಲಿದೆ.

ಕೆಳಗೆ ಕಲ್ಲು ಹಾಸು, ಮೂರು ದಿಕ್ಕಿನಿಂದ ಬಂಡೆ ಮುಚ್ಚಿರುವ ಗುಹೆಯಲ್ಲಿ ಬೆಳಕಿಗೆ ಪ್ರವೇಶವಿಲ್ಲ. ಇಲ್ಲಿ ಕಾಡುಪ್ರಾಣಿಗಳು ಬಂದು ವಿಶ್ರಾಂತಿ ಪಡೆದು ಹೋಗುತ್ತವೆ. ನಿಸರ್ಗ ನಿರ್ಮಿತ ಈ ಗುಹೆ ವಿಸ್ಮಯ ಮೂಡಿಸುವಂತಿದೆ.

ದಿನವಿಡೀ ಅಲೆದಾಡಲು ರೆಡಿಯಿದ್ದರೆ ಹಸಿರಿನ ನಡುವೆ ಪುಟ್ಟ ಬೊಟ್ಟಿನಂತಿರುವ ದೇವನಮನೆಯಲ್ಲಿ ಕುತೂಹಲ ಹುಟ್ಟಿಸುವ ಅನೇಕ ಸ್ಥಳಗಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT