ADVERTISEMENT

ಷಿಕಾಗೋ ಮ್ಯೂಸಿಯಂನ ಸ್ಯು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಷಿಕಾಗೊ ಎಂದಾಗ ನಮಗೆ ಥಟ್ಟನೆ ನೆನಪಿಗೆ ಬರೋದು ಸ್ವಾಮಿ ವಿವೇಕಾನಂದರು ಮತ್ತು ಅಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಐತಿಹಾಸಿಕ ಭಾಷಣ. ವಿಶಾಲವಾದ ಮಿಷಿಗನ್ ಸರೋವರದ ದಂಡೆ ಮೇಲಿರುವ ಷಿಕಾಗೊ ನಗರದ ಇನ್ನೊಂದು ಪ್ರಧಾನ ಆಕರ್ಷಣೆಯೇ `ದಿ ಫೀಲ್ಡ್ ಮ್ಯೂಸಿಯಂ~ ಮತ್ತು ಅದರೊಳಗಿನ ಬೃಹದಾಕಾರದ ಟ್ರೆನೆಸೊರಸ್ ರೆಕ್ಸ್ ಅಥವಾ ಜೀವಶಾಸ್ತ್ರ ತಜ್ಞರ ನುಡಿಗಟ್ಟಿನಲ್ಲಿ `ಟಿ ರೆಕ್ಸ್~ ಎಂದು ಕರೆಯಲಾಗುವ ಜೀವಿಯ ನೈಜ ಅಸ್ಥಿಪಂಜರ.

ಡೈನೋಸಾರ್‌ಗಳು ಈ ಭೂಮಿಯ ಮೇಲೆ ಮನುಷ್ಯ ಅಸ್ತಿತ್ವ ಕಂಡುಕೊಳ್ಳುವುದಕ್ಕೂ ಮೊದಲಿದ್ದ ರಾಕ್ಷಸಗಾತ್ರದ ಪ್ರಾಣಿಗಳು ಎಂಬುದು ಈಗ ಶಾಲಾಮಕ್ಕಳಿಗೂ ಗೊತ್ತು. ಆದರೆ ಟಿ  ರೆಕ್ಸ್‌ಗಳು ಇಂಥ ಡೈನೋಸಾರ್‌ಗಳ ಅವಸಾನದ ನಂತರದ ಪೀಳಿಗೆಗೆ (ಸುಮಾರು 670 ಲಕ್ಷ ವರ್ಷ ಹಿಂದೆ) ಸೇರಿದವು.

ಫೀಲ್ಡ್ ಮ್ಯೂಸಿಯಂನ ಟಿ ರೆಕ್ಸ್‌ಗೆ `ಸ್ಯು~ ಎಂದು ಹೆಸರು. 1990ರಲ್ಲಿ ದಕ್ಷಿಣ ಡಕೋಟಾದ ಚೆಯ್ನೆ ನದಿ ಪಾತ್ರದ ಬಳಿ ಇದನ್ನು ಪತ್ತೆ ಮಾಡಿದ ಪಳೆಯುಳಿಕೆ ಶೋಧಕಿ ಸ್ಯು ಹೆಂಡ್ರಿಕ್‌ಸನ್ ಗೌರವಾರ್ಥ ಈ ಹೆಸರಿಟ್ಟಿದ್ದಾರೆ.

ಇದು 45 ಅಡಿಗಳಷ್ಟು ಉದ್ದ, ಸೊಂಟದ ಬಳಿ 13 ಅಡಿ ಎತ್ತರವಿದ್ದು ತೂಕ ಸುಮಾರು ಆರೂವರೆ ಟನ್. ತಲೆಬುರುಡೆಯೇ 5.2 ಅಡಿ ಉದ್ದವಾಗಿದ್ದು 1 ಟನ್ ಭಾರವಿದೆ. ಏಳೂವರೆಯಿಂದ 12 ಇಂಚಿನಷ್ಟು ಉದ್ದದ 60 ಹಲ್ಲುಗಳಿದ್ದು ಹೆಚ್ಚೂಕಡಿಮೆ 25 ಲೀಟರ್‌ನಷ್ಟು ನೀರು ಹಿಡಿಯುವ ಬಾಯಿ ಹೊಂದಿದೆ.

ದೇಹದ ಮೂಳೆಗಳ ಜೋಡಣೆ ಇಷ್ಟೊಂದು ಅಪಾರ ಭಾರ ತಡೆಯಲಾರದು ಎಂಬ ಕಾರಣಕ್ಕಾಗಿ ತಲೆಬುರುಡೆಯನ್ನು ಪ್ರತ್ಯೇಕವಾಗಿ ಇಟ್ಟಿದ್ದಾರೆ. ಅಸ್ಥಿಪಂಜರಕ್ಕೆ ಹಗುರವಾದ ಕೃತಕ ತಲೆಬುರುಡೆ ಜೋಡಿಸಿ ಆಕಾರ ಕೊಟ್ಟಿದ್ದಾರೆ. ಅದರ ಹಿಂಗಾಲುಗಳು ಸಾಕಷ್ಟು ಎತ್ತರವಿದ್ದರೂ ಮುಂಗಾಲುಗಳು ಮಾತ್ರ ಮನುಷ್ಯರ ಕೈಯಷ್ಟಿವೆ. ಇವು ಅದರ ಬಾಯಿವರೆಗೂ ಮುಟ್ಟಲಾರವು. ಇದು ಹೆಣ್ಣೋ- ಗಂಡೋ ಎಂಬುದನ್ನು ಪತ್ತೆ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ.

ಇನ್ನೊಂದು ವಿಶೇಷ ಎಂದರೆ ವಿಶ್ವದಲ್ಲಿ ಇದುವರೆಗೆ ದೊರೆತ ಟಿ ರೆಕ್ಸ್‌ಗಳ ಪೂರ್ಣ ಅಸ್ಥಿಪಂಜರಗಳು ಎರಡೇ ಎರಡು. ಆ ಪೈಕಿ ಇದೂ ಒಂದು. 20 ವರ್ಷದ ಹಿಂದೆಯೇ ಇದರ ಬೆಲೆ 84 ಲಕ್ಷ ಡಾಲರ್ (ಸುಮಾರು 40 ಕೋಟಿ ರೂಪಾಯಿ). ಇದರ ರಾಕ್ಷಸ ಗಾತ್ರದ ಮುಂದೆ ಮನುಷ್ಯರು ಕುಬ್ಜರಾಗಿ ಕಾಣುತ್ತಾರೆ.

ಈ ಮ್ಯೂಸಿಯಂನಲ್ಲಿ ಇದಷ್ಟೇ ಅಲ್ಲ. ಈಜಿಪ್ತ್‌ನ ಅನೇಕ ಮಮ್ಮಿಗಳು, ದೊರೆ ಸೆನ್ ವೊಸ್ರೆಟ್‌ನ ಶವವನ್ನು ಸಾಗಿಸಲು ಬಳಸಿದ ಅತ್ಯಂತ ಅಪರೂಪದ ದೋಣಿ, ಈಜಿಪ್ತ್‌ನಲ್ಲಿದ್ದ ಉನಿಸ್ ಆಂಕ್ ಮತ್ತು ನೆಷೆರ‌್ಯೂಸರ್‌ನ ಗೋರಿಗಳ ಇಡೀ ಪೂಜಾ ಕೋಣೆ, ಅಮೂಲ್ಯ ಕಲೆ, ಇತಿಹಾಸದ 2 ಕೋಟಿಗೂ ಹೆಚ್ಚು ವಸ್ತುಗಳಿವೆ.

ಭೂಮಿ ಹಾಗೂ ಅದರ ಮೇಲೆ ಜೀವಾಂಕುರದ 460 ಕೋಟಿ ವರ್ಷದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರದರ್ಶನ ಇಲ್ಲಿನ ಇನ್ನೊಂದು ಹೈಲೈಟ್. ತಿಂಗಳುಗಟ್ಟಲೇ ಬಿಟ್ಟೂ ಬಿಡದೆ ನೋಡಿದರೂ ಮುಗಿಯದಷ್ಟು ಅಪಾರ ವಸ್ತುಗಳನ್ನು, ಮಾಹಿತಿಯನ್ನು ತನ್ನೊಳಗೆ ಇಟ್ಟುಕೊಂಡಿದೆ ಈ ಮ್ಯೂಸಿಯಂ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.