ADVERTISEMENT

ಅನಾಥ ವೃದ್ಧರಿಗೆ `ಜೈ ಮಾರುತಿ' ಆಸರೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST
`ಜೈ ಮಾರುತಿ' ವೃದ್ಧಾಶ್ರಮದಲ್ಲಿ ಬಾಳ ಮುಸ್ಸಂಜೆ ಕಳೆಯುತ್ತಿರುವ ವೃದ್ಧರು. ಒಳಚಿತ್ರದಲ್ಲಿ ವೃದ್ಧಾಶ್ರಮ ಸ್ಥಾಪಕ ಕುಮಾರ್
`ಜೈ ಮಾರುತಿ' ವೃದ್ಧಾಶ್ರಮದಲ್ಲಿ ಬಾಳ ಮುಸ್ಸಂಜೆ ಕಳೆಯುತ್ತಿರುವ ವೃದ್ಧರು. ಒಳಚಿತ್ರದಲ್ಲಿ ವೃದ್ಧಾಶ್ರಮ ಸ್ಥಾಪಕ ಕುಮಾರ್   

ಬಾಳ ಮುಸ್ಸಂಜೆಯಲ್ಲಿರುವ ಆ ವೃದ್ಧೆಗೆ ಕೈ ಹಿಡಿದು ನಡೆಸುವ ಆಸರೆ ಬೇಕಾಗಿತ್ತು. ಮಕ್ಕಳಿಲ್ಲದ ಅವರು ಅನಿವಾರ್ಯವಾಗಿ ಭಿಕ್ಷಾಟನೆಗಿಳಿದರು. ಒಂದು ದಿನ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದು ಗಾಯಗೊಂಡರು. ಆಗ ಅವರ ನೆರವಿಗೆ ಬಂದದ್ದು `ಜೈ ಮಾರುತಿ' ವೃದ್ಧಾಶ್ರಮ. ಇದು ಒಬ್ಬ ಅಜ್ಜಿಯ ಕತೆಯಲ್ಲ. ಆಶ್ರಮದ ಒಬ್ಬೊಬ್ಬರದ್ದೂ ಇಂತಹ ವ್ಯಥೆಗಳ್ದ್ದದೇ ಹಿನ್ನೆಲೆ.

ಮಾಗಡಿ ರಸ್ತೆಯ ಸುಂಕದಕಟ್ಟೆ, ವಿಘ್ನೇಶ್ವರ ನಗರದಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ಆರಂಭವಾದ `ಜೈ ಮಾರುತಿ ವೃದ್ಧಾಶ್ರಮ'ದಲ್ಲಿ ಅನಾಥರಾದ ಇಂಥ ನಾಲ್ಕೈದು ಮಂದಿ ಆಸರೆ ಪಡೆದಿದ್ದಾರೆ. ಐವರು ಸೇರಿ ಆರಂಭಿಸಿದ ಈ ವೃದ್ಧಾಶ್ರಮ ಇಂಥ ಅನೇಕ ವೃದ್ಧರಿಗೆ ಆಸರೆಯಾಗಿದೆ. ಕುಣಿಗಲ್ ತಾಲ್ಲೂಕಿನ ಬೆಟ್ಟೇಗೌಡನಪಾಳ್ಯದ ಬಿ.ಸಿ.ಕುಮಾರ್, ಬೆಂಗಳೂರಿನವರೇ ಆದ ಮೂರ್ತಿ, ಪದ್ಮಾ, ನಾರಾಯಣಪ್ಪ ಹಾಗೂ ಬಿ.ಸಿ. ಮುನಿರಾಜು ಎಂಬುವರು ಸೇರಿ ಇದನ್ನು ಆರಂಭಿಸಿದ್ದಾರೆ.

ಕಡಬಗೆರೆ ಕ್ರಾಸ್ ಬಳಿ ಇರುವ ವೃದ್ಧಾಶ್ರಮವೊಂದರಲ್ಲಿ ಎಂಟು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕುಮಾರ್ ಅವರು ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ನಗರದ ಕೆಲ ಆಸ್ಪತ್ರೆಗಳಿಂದ ಅನೇಕ ಅನಾಥ ವೃದ್ಧರನ್ನು ಕರೆತಂದು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಐಟಿ, ಬಿಟಿ ಕಂಪೆನಿಗಳು, ವಿವಿಧ ಸಂಘ ಸಂಸ್ಥೆಗಳಿಂದ ದೇಣಿಗೆ ಹಣವನ್ನು ಪಡೆದು ವೃದ್ಧಾಶ್ರಮಕ್ಕೆ ನೀಡುತ್ತಿದ್ದರು. ವಯಸ್ಸಾಗಿ ಅಥವಾ ಕಾಯಿಲೆಯಿಂದ ಸತ್ತವರನ್ನೂ ಕುಮಾರ್ ಶವಸಂಸ್ಕಾರ ಮಾಡಿದ್ದಾರೆ.

`ಊರಿನಲ್ಲಿ ಜಮೀನು ಇದೆ. ಅದರಿಂದ ಬಂದ ಹಣವನ್ನು ವೃದ್ಧಾಶ್ರಮಕ್ಕೆ ಬಳಸಿಕೊಳ್ಳುತ್ತೇನೆ. ಈಗಾಗಲೇ ಒಂದು ಲಕ್ಷ ರೂಪಾಯಿ ತೊಡಗಿಸಿದ್ದೇವೆ. ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕು. ಆಗ ಮಾತ್ರ ಜನ ನಮ್ಮನ್ನು ಗುರುತಿಸುತ್ತಾರೆ. ಮುಂದಿನ ಪೀಳಿಗೆಯವರಿಗೂ ಇಂಥ ಕೆಲಸಗಳು ದಾರಿದೀಪವಾಗಬೇಕು. ಆದ್ದರಿಂದ ಈ ವೃದ್ಧಾಶ್ರಮ ಆರಂಭಿಸಿದ್ದೇವೆ. ಅನಾಥರು ಎಂಬ ಭಾವನೆ ಯಾರಿಗೂ ಬೇಡ. ನಮ್ಮ ಸಾಮರ್ಥ್ಯ ಮೀರಿ ಸೇವೆ ಸಲ್ಲಿಸುತ್ತೇವೆ' ಎಂದು ವೃದ್ಧಾಶ್ರಮ ಆರಂಭಿಸಲು ಕಾರಣ ನೀಡುತ್ತಾರೆ ಕುಮಾರ್.

`ಈ ಕಾರ್ಯಕ್ಕೆ ತಾಯಿಯೂ ಕೈ ಜೋಡಿಸಿದ್ದಾರೆ. ನಾಲ್ವರು ಕೆಲಸಗಾರರಿದ್ದಾರೆ. ಇಪ್ಪತ್ತು ವೃದ್ಧರನ್ನು ನೋಡಿಕೊಳ್ಳುವ ವ್ಯವಸ್ಥೆ ಆಶ್ರಮದಲ್ಲಿದ್ದು, ಅನಾಥ ವೃದ್ಧರು ವೃದ್ಧಾಶ್ರಮಕ್ಕೆ ಸೇರಬಹುದು' ಎಂದು ಹೇಳುತ್ತಾರೆ ಅವರು. `ಜೈ ಮಾರುತಿ ವೃದ್ಧಾಶ್ರಮ' ವೃದ್ಧರ ಬಾಳಿಗೆ ಆಶಾಕಿರಣವಾಗಿದೆ. ಕುಮಾರ್ ಅವರನ್ನು ಸಂಪರ್ಕಿಸಲು: 96116 34854, 92429 49658.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.