ಎರಡು ವರ್ಷಗಳ ಹಿಂದಿನ ಮಾತು. ರಾಜಭವನದ ಆವರಣದಲ್ಲಿ ರಾಜ್ಯೋತ್ಸವ ಸಮಾರಂಭ.
`ಗಾಂಧಿ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ...~ ಏಳು ವರ್ಷದ ಪುಟಾಣಿಯ ಸುಂದರ ಕಂಠದಿಂದ ಹೊಮ್ಮುತ್ತಿತ್ತು ರಾಗಾಲಾಪ. ರಾಜಭವನದ ಆವರಣದ ಗಿಡಮರಗಳು ತಲೆದೂಗುವಷ್ಟು ಇಂಪು ಆ ಸ್ವರದಲ್ಲಿ. ಅಲ್ಲಿ ಸುಳಿದಾಡುತ್ತಿದ್ದ ಗಾಳಿಯೂ ಒಂದು ಕ್ಷಣ ನಿಂತು ಕೇಳುವಂತಹ ನಿನಾದ.
ಹಾಡು ಮುಗಿಯುತ್ತಿದ್ದಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆ ಪುಟಾಣಿಯನ್ನು ತಬ್ಬಿಕೊಂಡರು. ರಾಜಭವನದಲ್ಲಿ ನಡೆಯಲಿದ್ದ ಚಹಾಕೂಟಕ್ಕೆ ಆಹ್ವಾನ ನೀಡಿದರು. ಆ ಬಾಲಕಿ ತನ್ನ ಸಿರಿಕಂಠದಿಂದ ಅಂತಹ ಮೋಡಿ ಮಾಡಿದ್ದಳು.
ಆಕೆ ಟಿ.ಎಸ್. ಅನ್ವಿತಾ. ಶ್ರೀನಗರದ ನಿವಾಸಿ. ಬನಶಂಕರಿಯ ಲಿಟಲ್ ಫ್ಲವರ್ ಪಬ್ಲಿಕ್ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಬಾಲಕಿ (ಈಗ 9 ವರ್ಷ).
ಯಾವುದೇ ವೇದಿಕೆ ಇರಲಿ, ಸಮಾರಂಭವಿರಲಿ ಮುದ್ದುಮುಖದ ಅನ್ವಿತಾ ಹಾಡಲು ಆರಂಭಿಸಿದರೆ ಅಲ್ಲಿ ನಿಶ್ಶಬ್ದ. ಆ ಕಂಠಸಿರಿಯ ಸೊಬಗು ಎಲ್ಲೆಡೆ ಮಾರ್ದನಿಸುತ್ತದೆ.
ಭಾವಗೀತೆ, ಚಿತ್ರಗೀತೆ, ಜಾನಪದ ಗೀತೆ, ದಾಸರ ಪದ ಯಾವುದೇ ಆಯ್ದುಕೊಂಡರೂ ಆಕೆ ಹಾಡು ಮುಗಿಸಿದಾಗ ಚಪ್ಪಾಳೆಯ ಸುರಿಮಳೆ. `ಒನ್ಸ್ ಮೋರ್~ ಕೂಗು.
ಓದಿನಲ್ಲೂ ಬಹುಜಾಣೆಯಾಗಿರುವ ಅನ್ವಿತಾಗೆ ಸಂಗೀತ ಜ್ಞಾನ ಜನ್ಮದತ್ತವಾಗಿ ಬಂದಿದೆ. ಆಕೆ ಬಾಲ ಪ್ರತಿಭೆ ಎನ್ನುತ್ತಾರೆ ಪಾಲಕರು.
ಆರು ತಿಂಗಳ ಶಿಶುವಾಗಿದ್ದಾಗಲೇ ಮಾತು ಆರಂಭಿಸಿದ್ದ ಅನ್ವಿತಾ ಒಂದೂಕಾಲು ವರ್ಷದ ಹಸುಳೆಯಾಗಿದ್ದಾಗ ಟಿವಿಯಲ್ಲಿ `ಏ ಮೇರೆ ವತನ್ ಕೆ ಲೋಗೊ~ ಹಾಡು ಪ್ರಸಾರವಾಗುತ್ತಿತ್ತಂತೆ. ಆ ಹಾಡು ಮುಗಿಯುವವರೆಗೂ ಆಕೆ ಅಲ್ಲಾಡದೇ ಅದನ್ನು ಆಲಿಸಿದ್ದಳಂತೆ.
ಮೂರು ವರ್ಷದವಳಿದ್ದಾಗ ಧೂಮ್-1ರ `ಧೂಮ್ ಮಚಾಲೆ...~ ಹಾಡು ಎಲ್ಲೆಡೆ ಜನಪ್ರಿಯವಾಗಿತ್ತು. ಆ ಚಿತ್ರಗೀತೆಯ ಗುಂಗು ಹಿಡಿಸಿಕೊಂಡು ಐದಾರು ಸಿ.ಡಿ. ಹಾಳು ಮಾಡಿದ್ದಳು ಅನ್ವಿತಾ.
ಅನ್ವಿತಾಳ ಪ್ರತಿಭಾ ಕಥನ ಇಲ್ಲಿಗೆ ಮುಗಿಯುವುದಿಲ್ಲ. ಚಿತ್ರಗೀತೆ, ಭಾವಗೀತೆ, ಜಾನಪದ ಗೀತೆ ಯಾವುದೇ ಪ್ರಕಾರದ ಗೀತಗಾಯನ ಸ್ಪರ್ಧೆಯಲ್ಲಿ ಆಕೆ ಭಾಗವಹಿಸಿದರೂ ಮೊದಲ ಸ್ಥಾನ ಕಟ್ಟಿಟ್ಟ ಬುತ್ತಿ. ಯಾವುದೇ ದಾಟಿಯ, ಯಾವುದೇ ಭಾಷೆಯ ಸಂಗೀತ ಆಲಿಸಿದರೂ ಆ ರಾಗದ, ಆಲಾಪದ ಬೆನ್ನು ಹತ್ತುತ್ತಾಳೆ. ಒಂಬತ್ತು ವರ್ಷದ ಈ ಬಾಲೆ ರಾಜ್ಯದಾದ್ಯಂತ ಹಲವು ಕಾರ್ಯಕ್ರಮ ನೀಡಿದ್ದಾಳೆ. ಎರಡು ಭಕ್ತಿಗೀತೆ ಕ್ಯಾಸೆಟ್‌ಗಳಿಗಾಗಿ ಹಾಡಿರುವ ಅನ್ವಿತಾ, `ಟಿನೇಜ್~ ಚಿತ್ರಕ್ಕಾಗಿ ಹಿನ್ನೆಲೆ ಗಾಯನವನ್ನೂ ಮಾಡಿದ್ದಾಳೆ.
ನಾಲ್ಕು ವರ್ಷದವಳಿದ್ದಾಗ ಮನೆಯ ಸಮೀಪವೇ ಇದ್ದ ಶಾರದಾ ಎಂಬುವವರ ಬಳಿ ಸಂಗೀತಾಭ್ಯಾಸ ಆರಂಭಿಸಿದ್ದ ಅನ್ವಿತಾ, ಪ್ರಸ್ತುತ ವಿದ್ವಾನ್ ಆರ್.ಕೆ. ಪದ್ಮನಾಭ್ ಅವರ ಶಿಷ್ಯ ಎಸ್.ಆರ್. ವಿನಯ್ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತಕಲಿಯುತ್ತಿದ್ದಾಳೆ. ಸೃಜನ ಸಂಚಾರಿ ಸಂಗೀತ ಶಾಲೆಯ ನರಹರಿ ದೀಕ್ಷಿತ್ ಆಕೆಗೆ ಭಾವಗೀತೆಯಲ್ಲಿ ಗುರು. ಮಂಜುಳಾ ಗುರುರಾಜ್ ಬಳಿ ಚಿತ್ರಗೀತೆ ಅಭ್ಯಾಸ. ರತ್ನಮ್ಮ ದಾಸರ ಪದ ಹೇಳಿಕೊಟ್ಟಿದ್ದಾರೆ. ಇದರ ಜತೆ ಕೀಬೋರ್ಡ್‌ನಲ್ಲೂ ಪರಿಣತಿ.
ಇಷ್ಟೆಲ್ಲ ಇದ್ದರೂ `ರಿಯಾಲಿಟಿ ಷೋ~ಗಳ ಗುಂಗು ಆಕೆಗೆ ಹತ್ತಿಲ್ಲ. ಎಷ್ಟೋ ಬಾರಿ `ರಿಯಾಲಿಟಿ ಷೋ~ ನಂತರ ಮಕ್ಕಳು ಸಂಗೀತದ ಆಸಕ್ತಿ ಕಳೆದುಕೊಳ್ಳುತ್ತಾರೆ. ಅದು ಪ್ರಚಾರಕ್ಕೆ ಸೀಮಿತವಾಗುತ್ತದೆ. ಹಾಗಾಗಿ ಆಕೆಯನ್ನು ಅತ್ತ ಬಿಟ್ಟಿಲ್ಲ ಎನ್ನುತ್ತಾರೆ ಆಕೆಯ ಅಮ್ಮ ವಿದ್ಯಾ.
ಬೆಂಗಳೂರು ದೂರದರ್ಶನ ಏರ್ಪಡಿಸಿದ್ದ `ಮಧುರ ಮಧುರವೀ ಮಂಜುಳಗಾನ~ ಕಾರ್ಯಕ್ರಮದಲ್ಲಿ ಅನ್ವಿತಾ ಸಂಗೀತ ಎಲ್ಲರನ್ನೂ ಮಂತ್ರಮುಗ್ಧರಾಗಿಸಿತ್ತು. ಆಕೆಯ ಹಾಡು ಮುಗಿದ ತಕ್ಷಣ ಅಭಿನಂದಿಸಲು ಎಲ್ಲರೂ ಮುತ್ತುತ್ತಿದ್ದರು. ಆಕೆ ಮಾತ್ರ ಸಭಾಂಗಣದ ಹೊರಗೆ ಇದ್ದ ಬಲೂನ್‌ವಾಲಾನ ಬಳಿ ಓಡಿದ್ದಳು...! ಈ ಎಲ್ಲ ಸಾಧನೆ, ಹೊಗಳಿಕೆಯ ಮಧ್ಯೆಯೂ ಅನ್ವಿತಾ ಮುಗ್ಧತನ ಕಳೆದುಕೊಂಡಿಲ್ಲ ಎಂಬುದಕ್ಕೆ ಇದು ಸಾಕ್ಷಿ.
ದೊಡ್ಡವಳಾದ ಮೇಲೆ ಏನಾಗುತ್ತಿಯಾ ಎಂದರೆ `ಸೈಂಟಿಸ್ಟ್~ ಎಂದು ಥಟ್ಟನೆ ಉತ್ತರಿಸುವ ಅನ್ವಿತಾಗೆ ಸಂಗೀತ ಉಸಿರಿನಷ್ಟು ಸಹಜ. ಎಸ್. ಜಾನಕಿ ಗೀತೆಗಳೆಂದರೆ ಪಂಚಪ್ರಾಣ. ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜತೆ ವೇದಿಕೆಯಲ್ಲಿ ಹಾಡಬೇಕು ಎಂಬ ಮಹದಾಸೆ ಈ ಪುಟ್ಟಿಗಿದೆ.
ಆಲ್ ದಿ ಬೆಸ್ಟ್ ಅನ್ವಿತಾ...!
ದೂ: 94489 70183
ಅಪ್ಪ-ಅಮ್ಮನ ಒತ್ತಾಸೆ
ಅನ್ವಿತಾಳ ತಂದೆ ಟಿ. ಎಸ್. ಶೀಧರ್ ಜಿ.ಇ. ಕಂಪೆನಿಯಲ್ಲಿ ವ್ಯವಸ್ಥಾಪಕರು. ಅಮ್ಮ ಒ.ಎನ್. ವಿದ್ಯಾ ಪಿ.ಇ.ಎಸ್. ಕಾಲೇಜಿನ ಬಯೋಕೆಮೆಸ್ಟ್ರಿ ವಿಭಾಗದ ಮುಖ್ಯಸ್ಥೆ. ಅಕ್ಕ ಅಂಕಿತಾ ಮೆಡಿಕಲ್ ಓದುತ್ತಿದ್ದಾಳೆ. ಸಂಗೀತದ ಅಲ್ಪಸ್ವಲ್ಪ ಹಿನ್ನೆಲೆಯಿದ್ದ ಈ ಕುಟುಂಬವೀಗ ಅನ್ವಿತಾ ಪ್ರತಿಭೆ ಬೆಳಗಲು ಟೊಂಕ ಕಟ್ಟಿ ನಿಂತಿದೆ. ಕಾರ್ಯಕ್ರಮ ಎಲ್ಲೇ ನಡೆಯಲಿ ಅಮ್ಮ ಮಗಳ ಜತೆ ನಡೆಯುತ್ತಾರೆ. ಸಂಗೀತ ಪಾಠಕ್ಕೆ ಅಗತ್ಯವಾದುದ್ದನ್ನೆಲ್ಲ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.