ADVERTISEMENT

ಅಪ್ಪ-ಅಮ್ಮನಿಗೂ ವಸ್ತ್ರಸಂಹಿತೆ!

ಸವಿತಾ ಎಸ್.
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST
ಅಪ್ಪ-ಅಮ್ಮನಿಗೂ ವಸ್ತ್ರಸಂಹಿತೆ!
ಅಪ್ಪ-ಅಮ್ಮನಿಗೂ ವಸ್ತ್ರಸಂಹಿತೆ!   

ಮುಂಜಾನೆ ಸಿಹಿನಿದ್ದೆಯನ್ನು ಅತ್ತ ಕೊಡವಿ, ಕಣ್ಣುಜ್ಜಿಕೊಳ್ಳುತ್ತಾ ಬೈಕ್ ಕೀ ತಡವಿ ಮಗುವನ್ನು ಶಾಲೆಗೆ ಕರೆದೊಯ್ಯುವ ಪೋಷಕರಲ್ಲಿ ನೀವೂ ಒಬ್ಬರೇ...?ಬೆಳಗಿನ ಉಪಾಹಾರಕ್ಕೆಂದು ತಯಾರಿಸಿದ ದೋಸೆ ಹಿಟ್ಟಿನ ಕೈಯನ್ನು ಉಡುಪಿಗೆ ಒರೆಸಿಕೊಳ್ಳುತ್ತಾ ತೊಟ್ಟ ನೈಟಿಯಲ್ಲೇ ಸ್ಕೂಟಿಗೆ ಕಿಕ್ ಹೊಡೆಯುವ ಅಭ್ಯಾಸ ನಿಮಗಿದೆಯೇ...?

ಹಾಗಿದ್ದರೆ ನಿಮಗೆ ಗಾಬರಿ ಹಾಗೂ ಅಚ್ಚರಿ ಮೂಡಿಸುವ ಸುದ್ದಿ ಇಲ್ಲೊಂದಿದೆ. ನಿದ್ದೆಯ ಅಮಲಿನಲ್ಲಿ ನೀವು ಇನ್ನು ಶಾಲೆಯ ಗೇಟ್ ತಟ್ಟುವಂತಿಲ್ಲ. ಬ್ರಶ್ ಮಾಡಿ, ನೀಟಾಗಿ ಮುಖ ತೊಳೆದು, ಶಿಷ್ಟಾಚಾರದ ವಸ್ತ್ರ ಧರಿಸಿ ಶಾಲೆಗೆ ಹೊರಡಬೇಕು. ಅವಸರಕ್ಕೆ ಹೀಗೆ ಬಂದರೆ ನಿಮ್ಮಂದಿಗೆ ಮಗುವಿಗೂ ಶಾಲೆಗೆ ಪ್ರವೇಶ ಸಿಗದಿರಬಹುದು!

ನಗರದ ಬಹುತೇಕ ಖಾಸಗಿ ಶಾಲೆಗಳು ಮಕ್ಕಳನ್ನು ಬಿಡಲು ಇಲ್ಲವೇ ಸಂಜೆ ಕರೆದೊಯ್ಯಲು ಬರುವ ಪೋಷಕರಿಗೂ ವಸ್ತ್ರದ ಶಿಸ್ತು ಬೋಧಿಸಲು ನಿರ್ಧರಿಸಿವೆ. ಪ್ರಾಯೋಗಿಕವಾಗಿ ಅದು ನಗರದ ಬ್ಲಾಸಮ್ ಶಾಲೆಯಲ್ಲಿ ಜಾರಿಗೆ ಬಂದಿದೆ.
 
ಈ ಕುರಿತಾಗಿ ಶಾಲೆಯ ಎಲ್ಲಾ ಪೋಷಕರಿಗೂ ಸುತ್ತೋಲೆ ಹೊರಡಿಸಿದೆ. ರಾಜ್ಯದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟವೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಸದ್ಯದಲ್ಲೇ ಪರಿಹಾರ ಕಂಡುಕೊಳ್ಳುವ ಭರವಸೆಯಲ್ಲಿದೆ.

`ಶಾಲೆ ದೇಗುಲಕ್ಕೆ ಸಮಾನ. ಹೀಗಿದ್ದು ಹಾಸಿಗೆಯಿಂದ ಎದ್ದ ಅವತಾರದಲ್ಲೇ ಶಾಲೆಗೆ ಬರುವುದು ಎಷ್ಟು ಸರಿ? ಮಕ್ಕಳಿಗೆ ಮಾದರಿಯಾಗಬೇಕಾದ ಪೋಷಕರೇ ತುಂಡು ತೋಳು, ಮೊಣಕಾಲವರೆಗಿನ ರಾತ್ರಿ ಉಡುಪುಗಳನ್ನೇ ಧರಿಸಿ ಬಂದರೆ..? ತಿಂಗಳ ಸಭೆಗಳಲ್ಲಿ ಹಲವಾರು ಬಾರಿ ಈ ವಿಷಯ ಚರ್ಚೆಗೆ ಬಂದಿದೆ.
 
ಪೋಷಕರಲ್ಲಿ ಕೆಲವು ಮಂದಿ ಸಮಯ ಹೊಂದಿಸುವುದು ಕಷ್ಟ ಎಂದು ಹಿಂದೇಟು ಹಾಕಿದರು. ಕೆಲಸಕ್ಕೆ ಹೊರಡುವ ತರಾತುರಿಯಲ್ಲಿ ಮಗುವಿನ ಬುತ್ತಿ, ಬೆಳಗಿನ ತಿಂಡಿ ತಯಾರಿಸುವುದೇ ಕಷ್ಟ.
 
ಇನ್ನು ಬಟ್ಟೆ ಬದಲಾಯಿಸಿ ಬನ್ನಿ ಎಂದರೆ ಹೇಗೆ ಎಂದು ನಮ್ಮನ್ನೇ ಪ್ರಶ್ನಿಸಿದ್ದರು. ಇದು ಆದೇಶವಾಗದ ಹೊರತು ಪಾಲನೆಯಾಗದು ಎಂಬ ಕಾರಣಕ್ಕೆ ಈ ಬಾರಿ ಸುತ್ತೋಲೆ ಹೊರಡಿಸಿದ್ದೇವೆ~ ಎಂಬುದು ಬ್ಲಾಸಮ್ ಶಾಲೆಯ ನಿರ್ದೇಶಕ ಶಶಿಕುಮಾರ್ ನೀಡುವ ಸ್ಪಷ್ಟನೆ.

ಮೀಟಿಂಗ್ ವೇಳೆ ಕೆಲ ಅಪ್ಪ-ಅಮ್ಮಂದಿರು ಪೋಷಕರ ವಸ್ತ್ರದಲ್ಲೂ ಶಿಸ್ತಿರಬೇಕು, ನಮ್ಮ ಮಕ್ಕಳು ಮನೆಯಲ್ಲಿ ಬಂದು ಬೇರೆಯವರ ಚಡ್ಡಿ, ನೈಟಿ ಬಗ್ಗೆ ಮಾತನಾಡುತ್ತಾರೆ ಎಂದಿದ್ದರಂತೆ.  `ಆಗಲೇ ನಮಗನಿಸಿದ್ದು, ಯಾಕೆ ಇದನ್ನು ಪ್ರಾಯೋಗಿಕವಾಗಿ ಶಾಲೆಯಲ್ಲಿ ಜಾರಿಗೆ ತರಬಾರದು ಎಂದು.
 
ಈ ಸಮಸ್ಯೆಯನ್ನು ಈಗಾಗಲೇ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟದ ಮುಂದಿಡಲಾಗಿದ್ದು, ಎಲ್ಲಾ ಶಾಲೆಗಳಲ್ಲೂ ಇದು ಅನ್ವಯವಾಗುವಂತೆ ಮಾಡುವ ಉದ್ದೇಶವಿದೆ~ ಎನ್ನುತ್ತಾರವರು. ಶಶಿಕುಮಾರ್ ಈ ಒಕ್ಕೂಟದ ಸಂಘಟನಾ ಕಾರ್ಯದರ್ಶಿಯೂ ಹೌದು.

`ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಬಿಡಲು ಇಲ್ಲವೇ ಸಂಜೆ ಕರೆದೊಯ್ಯಲು ಬರುವವರು ಶಾಲೆಯ ಆವರಣದೊಳಗೆ ಪ್ರವೇಶಿಸಬೇಕು. ಎಲ್ಲಾ ಮಕ್ಕಳೂ ಇತರರ ಪೋಷಕರನ್ನು ಗಮನಿಸುವುದರಿಂದ ಅಸಹ್ಯವಾಗಿ ಬಟ್ಟೆ ತೊಡುವುದು ಮುಜುಗರ ಹುಟ್ಟಿಸುತ್ತದೆ.

ಶಾಲೆ ಮಕ್ಕಳಲ್ಲಿ ಶ್ರೀಮಂತ-ಬಡವ ಭೇದ ಭಾವ ಮೂಡಬಾರದೆಂಬ ಕಾರಣಕ್ಕೆ ಸಮವಸ್ತ್ರ ಕಡ್ಡಾಯ ಮಾಡಿರುವಾಗ ಪೋಷಕರು ವಿಚಿತ್ರವಾಗಿ ಬಟ್ಟೆ ಧರಿಸುವುದು ಎಷ್ಟು ಸರಿ? ಖಂಡಿತವಾಗಿಯೂ ಇದು ಪೋಷಕರಿಗೆ ಡ್ರೆಸ್ ಕೋಡ್ ಅಲ್ಲ, ಶಿಸ್ತಾಗಿ ಬನ್ನಿ ಎನ್ನುತ್ತಿದ್ದೇವೆ ಅಷ್ಟೆ~ ಎಂದು ವಿವರಿಸಿದರು ಮುಖ್ಯೋಪಾಧ್ಯಾಯ ಸುರೇಶ್.

`ಕೆಲವು ಮಕ್ಕಳಂತೂ ಶಾಲೆಯಿಂದ ಒಂದಷ್ಟು ದೂರದಲ್ಲೇ ವಾಹನ ನಿಲ್ಲಿಸಿ, ಇಲ್ಲಿಂದ ನಡೆದುಕೊಂಡೇ ಹೋಗುತ್ತೇವೆ ಎನ್ನುತ್ತಿದ್ದರು. ಪೋಷಕರಿಗೂ ಮಕ್ಕಳ ಭಾವನೆ ಅರ್ಥವಾಗಿರಲಿಲ್ಲ. ಅವರು ಗೆಳೆಯರೊಂದಿಗೆ ಮಾತನಾಡುವಾಗ ಹೆತ್ತವರ ಉಡುಪುಗಳ ಬಗ್ಗೆ ಚರ್ಚೆ ನಡೆಸುತ್ತಿರುವುದನ್ನು ನಾವು ಗಮನಿಸಿದೆವು.

ಗೆಳೆಯರು ಚುಡಾಯಿಸುತ್ತಾರೆ ಎಂಬ ಕಾರಣಕ್ಕೆ ಶಾಲೆಯ ಬಳಿಗೆ ಪೋಷಕರನ್ನು ಬರಗೊಡದ ಮಕ್ಕಳ ಮನೋಭಾವ ನಮಗೆ ಅರ್ಥವಾಯಿತು. ಇದೇ ಕಾರಣ ಮುಂದಿಟ್ಟುಕೊಂಡು ಪೋಷಕರ ಸಭೆಯಲ್ಲೂ ಚರ್ಚಿಸಿದೆವು. ಶೇ 90 ಮಂದಿ ಮೊದಲ ದಿನವೇ ಒಪ್ಪಿಗೆ ಸೂಚಿಸಿದರು.
 
ಇನ್ನು ಶೇ 10 ಮಂದಿ ಇದಕ್ಕೆ ಒಪ್ಪಿಗೆ ಸೂಚಿಸಲು ಹಿಂಜರಿಯುತ್ತಿದ್ದಾರೆ. ಶಿಕ್ಷಕರು ತರಗತಿಯಲ್ಲಿ ನೈಟಿ ಧರಿಸಿ ಪಾಠ ಹೇಳಿದರೆ ನೀವು ಒಪ್ಪುವಿರಾ ಎಂದು ಮರುಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ.

ಎಂಟು ವರ್ಷದವರೆಗೆ ಪೋಷಕರ ನಡವಳಿಕೆ ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಅಸಹ್ಯ ವಸ್ತ್ರ ಧರಿಸಿ ಬಂದಾಗ ಕರೆದು ತಿಳಿಹೇಳಿದ್ದೂ ಇದೆ. ವಿದ್ಯಾವಂತರೇ ಹೀಗೆ ವರ್ತಿಸಿದರೆ ಹೇಗೆ~ ಎಂಬ ಪ್ರಶ್ನೆ ಯಶವಂತಪುರದ ರಾಜರಾಜೇಶ್ವರಿ ಆಂಗ್ಲ ಶಾಲೆಯ ಮುಖ್ಯಸ್ಥ ಶ್ರೀನಾಥ್ ಅವರದ್ದು. 

`ಶಾಲೆಯು ಮಕ್ಕಳಿಗೆ ಭಕ್ತಿ, ವಿನಯ ಕಲಿಸುವ ಸ್ಥಳ. ಇಲ್ಲಿ ಶಿಸ್ತಿನ ಉಡುಪಿದ್ದರಷ್ಟೇ ಗೌರವ ಮೂಡಲು ಸಾಧ್ಯ. ಆ ಸ್ಥಳಕ್ಕೆ ಪೋಷಕರು ಎಷ್ಟು ಶ್ರದ್ಧೆಯಿಂದ ಕರೆದುಕೊಂಡು ಹೋಗುತ್ತಾರೆ ಎಂಬುದೂ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ.

ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ನಾವು ಶಾಲೆಗೆ ಮಕ್ಕಳನ್ನು ಕರೆದೊಯ್ಯುವಲ್ಲಿ ಅವರ ಪದ್ಧತಿಯನ್ನು ಅನುಕರಿಸುವುದಿಲ್ಲ. ಇಂತಹ ಉಡುಪಿನ ಬಗ್ಗೆ ಮಕ್ಕಳೂ ನೇರವಾಗಿ ಚರ್ಚಿಸುತ್ತಾರೆ. ಮಕ್ಕಳಿಗೆ ನಾಗರಿಕತೆ ಕಲಿಸಬೇಕಾದ ನಾವುಗಳೇ ಅನಾಗರಿಕರಂತೆ ವರ್ತಿಸುವುದು ಸರಿಯಲ್ಲ~ ಎನ್ನುತ್ತಾರೆ ಪೋಷಕ ರಮೇಶ್ ಬಾಬು.  

`ನೀಟಾಗಿದ್ದರೆ ಚೆಂದ~
`ಶಾಲೆಯ ಕ್ಯಾಂಪಸ್‌ನಲ್ಲಿ ಒಳ್ಳೆ ಬಟ್ಟೆ ತೊಟ್ಟವರನ್ನ ಕಂಡರೆ ಖುಷಿ ಆಗುತ್ತೆ. ನಾವೂ ನೀಟಾಗಿ ಬರಬೇಕು ಅನ್ಸುತ್ತೆ. ಅಪ್ಪ ಅಮ್ಮ ನೈಟ್ ಡ್ರೆಸ್ ಹಾಕಿ ಬಂದ್ರೆ ನಿಮ್ಗೆ ಇಷ್ಟ ಆಗುತ್ತಾ ಅಂತ ಅಧ್ಯಾಪಕರು ಒಮ್ಮೆ ಕ್ಲಾಸಲ್ಲಿ ಕೇಳಿದ್ರು. ನಾವೆಲ್ಲಾ ಇಲ್ಲ ಅಂದಿದ್ದೆವು. ಕೆಲವರ ಪೇರೆಂಟ್ಸ್ ಅದೇ ರೀತಿಯ ವಸ್ತ್ರ ತೊಟ್ಟು ಬರುವುದರಿಂದ ಅವರು ಉತ್ತರಿಸದೆ ಸುಮ್ಮನೆ ಕೂರಬೇಕಾಯಿತು.

ಆ ರೀತಿ ಬಟ್ಟೆ ತೊಟ್ಟು ಬರುವ ಪೋಷಕರಿಂದ ಮಕ್ಕಳಿಗೂ ಮುಜುಗರ. ಕಳೆದ ಎರಡು ವರ್ಷಗಳಿಂದ ನಮ್ಮ ಶಾಲೆಯಲ್ಲಿ ನೈಟ್ ಡ್ರೆಸ್ ಹಾಕಿ ಬರುವ ಪೋಷಕರ ಸಂಖ್ಯೆ ತುಂಬಾನೇ ಕಡಿಮೆಯಾಗಿದೆ~ ಎನ್ನುತ್ತಾನೆ ಬ್ಲಾಸಮ್ ಶಾಲೆಯ ಒಂಬತ್ತನೇ ತರಗತಿಯ ಸೂರ್ಯ. 

ಶಾಲೆಯ ಆವರಣ ಸರಸ್ವತಿಯ ದೇವಾಲಯದಂತಿರಬೇಕು ಎಂದು ಆಶಿಸುವ ಪೋಷಕರು ಕಡ್ಡಾಯ ನೀತಿ ಬರುವ ಮೊದಲು ತಾವೇ ಎಚ್ಚೆತ್ತು ಶಿಸ್ತು ಮೈಗೂಡಿಸಿಕೊಳ್ಳುವುದು ಒಳಿತು. ಇಲ್ಲವಾದಲ್ಲಿ ನಿಮ್ಮಂದಿಗೆ ಮಕ್ಕಳೂ ಶಾಲೆಯಿಂದ ಹೊರಬಿದ್ದಾರು, ಹುಷಾರು! 

`ಸಮಯದ ನೆಪ ಬೇಡ~
ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ವರ್ಷಾಳ ತಾಯಿ ಶೈಲಜಾ ಕೂಡ ಈ ಮಾತಿಗೆ ಬೆಂಬಲ ನೀಡುತ್ತಾರೆ. `ಮಕ್ಕಳನ್ನು ಶಿಸ್ತಿನಿಂದ ಬೆಳೆಸಬೇಕಾದ ನಾವೇ ಅಶಿಸ್ತಿನಿಂದ ವರ್ತಿಸಿದರೆ ಮಕ್ಕಳಿಗೆ ಮಾದರಿಯಾಗುವುದು ಹೇಗೆ. ಪೋಷಕರು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
 
ಪ್ರತಿದಿನ ನಾನು ಶಾಲೆಗೆ ಮಗಳನ್ನು ಬಿಡಲು ಹೋಗುವಾಗ ನೋಡುತ್ತೇನಲ್ಲಾ, ಅದೇ ನೈಟಿ ಇಲ್ಲವೇ ಅರ್ಧ ತೋಳಿನ ಅಂಗಿ ತೊಟ್ಟಿರುತ್ತಾರೆ. ಅಡುಗೆ ಕೆಲಸದ ಮಧ್ಯೆ ಉಡುಗೆ ಬದಲಾಯಿಸಲು 30 ಸೆಕೆಂಡು ಸಾಕು. ಸಮಯದ ನೆಪ ಹೇಳುವ ಬದಲು ಶಿಸ್ತಿನ ವಸ್ತ್ರ ಧರಿಸಿ ಶಾಲೆಗೆ ಬರುವುದು ಕ್ಷೇಮ~ ಎನ್ನುತ್ತಾರೆ ಶೈಲಜಾ.

`ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಬಿಡಲು ಬರುವ ಇಲ್ಲವೇ ಸಂಜೆ ಕರೆದೊಯ್ಯಲು ಬರುವ ಪೋಷಕರು ನೈಟಿ, ಟ್ರ್ಯಾಕ್ ಪ್ಯಾಂಟ್, ಬರ್ಮುಡಾ, ಲುಂಗಿ ತೊಡಬಾರದು~ -ಇದು ಬ್ಲಾಸಮ್ ಶಾಲೆ ಹೊರಡಿಸಿರುವ ಸುತ್ತೋಲೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.