ADVERTISEMENT

ಅಭಿನಯ ಕಿರುದಾರಿ

ರೋಹಿಣಿ ಕೇಜ್ರಿವಾಲ್
Published 31 ಜುಲೈ 2013, 19:59 IST
Last Updated 31 ಜುಲೈ 2013, 19:59 IST
ಅಭಿನಯ ಕಿರುದಾರಿ
ಅಭಿನಯ ಕಿರುದಾರಿ   

ತುಸು ಉದ್ದ ಮುಖ, ಅದರಲ್ಲಿ ಪುಂಖಾನುಪುಂಖವಾಗಿ ಎದ್ದು ಕಾಣುವ ಆತ್ಮವಿಶ್ವಾಸ, ಬಳುಕುವ ತೆಳು ನಡು, ಮನಸ್ಸಿಗನಿಸಿದ್ದನ್ನು ಮುಜುಗರವಿಲ್ಲದೆ ಹೇಳಿಬಿಡುವ ಮಾಡೆಲ್ ನಟಿ ಪಿಯಾ ತ್ರಿವೇದಿ ಇತ್ತೀಚೆಗೆ ಫ್ಯಾಷನ್ ಶೋ ಒಂದಕ್ಕಾಗಿ ನಗರದಲ್ಲಿ ಕಾಣಿಸಿಕೊಂಡರು.

ಸಾಗರ್ ಬಳ್ಳಾರಿ ಅವರ `ಹಮ್ ತುಮ್ ಶಬಾನಾ' ಚಿತ್ರದಲ್ಲಿ ನಟಿಸಿದ್ದ ಇವರು `ಮಿಶನ್ ಇಸ್ತಾನ್‌ಬುಲ್', `ಬ್ಲಫ್‌ಮಾಸ್ಟರ್' ಚಿತ್ರಗಳಲ್ಲಿ ಐಟಂ ಗರ್ಲ್ ಆಗಿಯೂ ಕಾಣಿಸಿಕೊಂಡಿದ್ದರು. ಅನೇಕ ಕ್ಯಾಲೆಂಡರ್‌ಗಳಲ್ಲಿಯೂ ಮಿಂಚಿದ್ದಾರೆ. ಈಜುಡುಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅನೇಕ ವಿನ್ಯಾಸಕರ ಉಡುಗೆಗಳನ್ನು ತೊಟ್ಟು ಫ್ಯಾಷನ್ ಲೋಕದಲ್ಲಿ ಮಿಂಚಿದ್ದಾರೆ.

`ಫ್ಯಾಷನ್ ನನ್ನನ್ನು ಯಾವಾಗಲೂ ಜೀವಂತವಾಗಿರಿಸುತ್ತದೆ. ಅನೇಕ ವಿನ್ಯಾಸದ ಬಟ್ಟೆ, ಟ್ರೆಂಡ್‌ಗಳಿಗೆ ನಾವು ತೆರೆದುಕೊಂಡಿರುತ್ತೇವೆ. ಫ್ಯಾಷನ್ ಲೋಕದ ಒಳ ಹೊರಗೆ ಏನಾಗುತ್ತಿದೆ ಎಂಬ ಬಗ್ಗೆ ನಮಗೆ ಅರಿವಿರುತ್ತದೆ. ಆದರೆ ಇವ್ಯಾವ ಬೆಳವಣಿಗೆಗಳೂ ನನ್ನ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರಿಲ್ಲ.

ಯಾವಾಗ ಯಾವ ರೀತಿಯ ಬಟ್ಟೆ ತೊಡಬೇಕು ಎಂದು ನನಗನಿಸುತ್ತದೋ ಅದನ್ನೇ ಧರಿಸುತ್ತೇನೆ. ಆರಾಮವಾಗಿರುವ ಹಾಗೂ ನನ್ನನ್ನು ಸೆಕ್ಸಿಯಾಗಿ ಕಾಣಿಸುವಂಥ ಉಡುಗೆಗಳಿಗೆ ನಾನು ಪ್ರಾಧಾನ್ಯ ನೀಡುತ್ತೇನೆ. ಇಲ್ಲವೆಂದರೆ ಅಂಥ ಉಡುಗೆಯನ್ನು ನಾನು ತೊಡುವುದೇ ಇಲ್ಲ' ಎನ್ನುತ್ತಾರೆ ಈ ಸುಂದರಿ.

ತಾನು ಧರಿಸುವ ಉಡುಗೆ ಆರಾಮದಾಯಕವಾಗಿರಬೇಕು, ತೃಪ್ತಿ ನೀಡುವಂತಿರಬೇಕು ಎನ್ನುವ ಇವರು ಫಿಟ್‌ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರಂತೆ. ತಿಂಡಿಪೋತಿಯಾಗಿರುವ ಇವರಿಗೆ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವುದು ಕೆಲವೊಮ್ಮೆ ಕಷ್ಟವಾಗುತ್ತದಂತೆ. ಹೀಗಾಗಿ ಮನಸ್ಸು ಬಯಸ್ಸಿದ್ದೆಲ್ಲವನ್ನೂ ಅವರು ತಿನ್ನುತ್ತಾರಂತೆ. ಹಿತಮಿತವಾಗಿ ಆಹಾರ ಸೇವಿಸಿ, ನಿರಂತರ ವ್ಯಾಯಾಮ ಮಾಡುವುದೇ  ಈ ಬೆಡಗಿಯ ದೇಹಸಿರಿಯ ಗುಟ್ಟಂತೆ.

`ಆಹಾರ ಸೇವಿಸುವಾಗ ತುಂಬಾ ಕಟ್ಟುನಿಟ್ಟಾಗಿರುವುದು ಒಳ್ಳೆಯದಲ್ಲ. ವಿವಿಧ ರೀತಿಯ ಆಹಾರ ಸೇವಿಸಬೇಕು ಎಂದು ಎಲ್ಲರಿಗೂ ಅನಿಸುವುದು ಸಹಜ. ಹೀಗಾಗಿ ಒಂದು ಮಿತಿಯಲ್ಲಿಯೇ ಆಹಾರ ಸೇವಿಸಿ, ವರ್ಕ್‌ಔಟ್ ಮಾಡಿ. ವ್ಯಾಯಾಮ ಹೆಚ್ಚು ಮಾಡಿದಂತೆ ದೇಹಕ್ಕೆ ಸೌಂದರ್ಯ ಲಭಿಸುತ್ತಾ ಹೋಗುತ್ತದೆ. ಜಿಮ್‌ನಲ್ಲಿ ವ್ಯಾಯಾಮ ಮಾಡಿದರೆ ಮಾತ್ರ ಸಣ್ಣಗಾಗುತ್ತಾರೆ ಎಂದು ಭಾವಿಸುವುದು ಬೇಡ. ನಿಮ್ಮದೇ ಶೈಲಿಯ ವ್ಯಾಯಾಮವೂ ಉತ್ತಮವೇ' ಎಂದು ಸಲಹೆ ನೀಡುತ್ತಾರೆ ಪಿಯಾ.

ಮಾಡೆಲಿಂಗ್, ನಟನೆ ಎಂಬ ಎರಡೂ ದೋಣಿಗಳ ಮೇಲೆ ಕಾಲಿಟ್ಟ ಅವರಿಗೆ ಅಚ್ಚುಮೆಚ್ಚಿನ ಕ್ಷೇತ್ರ ಯಾವುದು ಎಂಬ ಬಗ್ಗೆ ಕೊಂಚವೂ ಸಂದೇಹವಿಲ್ಲ. `ನಟನೆ ಎಂದಿಗೂ ನನ್ನ ಪೂರ್ಣ ವೃತ್ತಿ ಆಗಲು ಸಾಧ್ಯವಿಲ್ಲ. ಮಾಡೆಲಿಂಗ್‌ನಲ್ಲೇ ನನಗೆ ಹೆಚ್ಚಿನ ತೃಪ್ತಿ.

ಇತ್ತೀಚೆಗೆ ಫ್ಯಾಷನ್, ಮಾಡೆಲಿಂಗ್ ಕ್ಷೇತ್ರಗಳು ಬಾಲಿವುಡ್ ಪ್ರವೇಶಿಸಲು ಉತ್ತಮ ವೇದಿಕೆ ಒದಗಿಸಿಕೊಡುತ್ತಿವೆ. ದೊಡ್ಡ ದೊಡ್ಡ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಪ್ರದರ್ಶನಗಳನ್ನು ನೋಡುತ್ತಾರೆ. ಯಾರು ಉತ್ತಮ ನಟಿಯಾಗಬಲ್ಲರು ಎಂಬ ಬಗ್ಗೆ ಅವರೆಲ್ಲಾ ಒಂದು ಕಣ್ಣಿಟ್ಟಿರುತ್ತಾರೆ. ಹೀಗಾಗಿ ಅವಕಾಶ ತಾನಾಗಿಯೇ ಮನೆಬಾಗಿಲಿಗೆ ಬರುತ್ತದೆ' ಎಂಬುದು ಅವರ ಅನುಭವದ ಮಾತು.

ಅಂದಹಾಗೆ ಪಿಯಾ ಅವರಿಗೆ ಬೆಂಗಳೂರು ಅಚ್ಚುಮೆಚ್ಚಿನ ನಗರವಂತೆ. ಇದು ತುಂಬಾ ಸುಂದರ ನಗರಿ ಎನ್ನುವ ಅವರಿಗೆ ಇಲ್ಲಿನ ತಂಪು ವಾತಾವರಣ, ಸ್ನೇಹಮಯಿ ಜನ ಹಾಗೂ ದಕ್ಷಿಣ ಭಾರತದ ಆಹಾರ ಆಕರ್ಷಿಸಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.