‘ಸತ್ಯಮೇವ ಜಯತೇ’ ಟಿ.ವಿ. ಷೋದ ಎರಡನೇ ಸರಣಿ ಮತ್ತೆ ಆರಂಭವಾಗಿದೆ. ಹಾಗಾಗಿ ಅಮೀರ್ ಖಾನ್ ಸುದ್ದಿಯಲ್ಲಿದ್ದಾರೆ. ಈ ಷೋಗೂ, ಅಮೀರ್ ರಾಜಕೀಯಕ್ಕೆ ಕಾಲಿಡಬಹುದೆಂಬ ಊಹೆಗೂ ಸಂಬಂಧವಿದೆ.
ಅದೇ ಕಾರಣಕ್ಕೆ ಅಮೀರ್, ಟಿ.ವಿ. ಷೋ ಪ್ರಚಾರಕ್ಕೆಂದು ಮಾತಿಗೆ ತೆರೆದುಕೊಂಡಾಗ ಅವರತ್ತ ರಾಜಕೀಯದ ಕುರಿತೇ ಪ್ರಶ್ನೆಗಳು ಹೊಮ್ಮಿದವು. ನೀವು ರಾಜಕೀಯ ಪ್ರವೇಶಿಸುವುದಿಲ್ಲವೇ? ರಾಹುಲ್ ಗಾಂಧಿ, ನರೇಂದ್ರ ಮೋದಿ ಅಲೆಯಲ್ಲಿ ಯಾವುದು ದೊಡ್ಡದು? ರಾಜಕೀಯದಲ್ಲಿ ನಟರ ಪಾತ್ರವೇನು?– ಇಂಥ ಪ್ರಶ್ನೆಗಳಿಗೆ ಅವರು ತುಂಬಾ ನಾಜೂಕಾಗಿಯೇ ಉತ್ತರ ಕೊಟ್ಟರು.
‘ಜನಸೇವೆಯ ದೃಷ್ಟಿಯಿಂದ ಅನೇಕರು ರಾಜಕೀಯಕ್ಕೆ ಇಳಿಯುತ್ತಾರೆ. ನನಗೂ ಜನರಿಗೆ ಏನಾದರೂ ಮಾಡಬೇಕೆಂಬ ಬಯಕೆ ಇದೆ. ಆದರೆ ಅದಕ್ಕೆ ನಾನು ರಾಜಕಾರಣಿಯೇ ಆಗಬೇಕಾಗಿಲ್ಲ. ಸಿನಿಮಾ ಮೂಲಕ ಇದುವರೆಗೆ ನಾನು ಮಾಡಿರುವ ಕೆಲಸ ತೃಪ್ತಿ ತಂದಿದೆ. ನೈತಿಕ ಎಳೆಗಳಲ್ಲಿ ಜನರನ್ನು ಕಟ್ಟಿಹಾಕುವ ದಿವ್ಯವಾದ ಶಕ್ತಿ ಸಿನಿಮಾ ಮಾಧ್ಯಮಕ್ಕಿದೆ. ಅದರ ಅರಿವಿಟ್ಟುಕೊಂಡೇ ನಾನು ಅಭಿನಯಿಸುತ್ತಾ ಇರುವುದು’ ಎನ್ನುವ ಅಮೀರ್ ತಾವು ಯಾವ ರೀತಿಯ ಸಮಾಜ ಸೇವೆ ಮಾಡುತ್ತಿರುವುದು ಎಂಬುದನ್ನು ಹೇಳಲು ಒಪ್ಪಲಿಲ್ಲ. ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬುದು ಅವರ ಜಾಯಮಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.