ADVERTISEMENT

ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು

ಚ.ಹ.ರಘುನಾಥ
Published 11 ಜೂನ್ 2014, 19:30 IST
Last Updated 11 ಜೂನ್ 2014, 19:30 IST

ಬಸ್ಸಿನಲ್ಲಿ ಪ್ರಯಾಣಿಸುವಾಗ ಸೀಟು ಸಿಕ್ಕರೆ ಏನು ಮಾಡುವಿರಿ? ಸೀಟು ಸಿಕ್ಕಾಗ ಕೂರುವುದು ಸಹಜವಲ್ಲವೇ? ಕೂತಮೇಲೆ ಏನು ಮಾಡುವಿರಿ ಎನ್ನುವುದು ಇಲ್ಲಿಯ ಪ್ರಶ್ನೆ. ಕೆಲವರು ಸೀಟು ಸಿಕ್ಕ ತಕ್ಷಣ ಕಿಸೆಯಲ್ಲೋ ಬ್ಯಾಗಿನಲ್ಲೋ ವಿಶ್ರಾಂತ ಸ್ಥಿತಿಯಲ್ಲಿದ್ದ ಮೊಬೈಲ್‌ನ ನಿದ್ರಾಭಂಗ ಮಾಡಿ, ಅದರಿಂದ ಹೊರಬಿದ್ದ ಎರಡು ವೈರನ್ನು ಕಿವಿಗೆ ಸಿಕ್ಕಿಸಿಕೊಂಡು ಅರೆನಿಮೀಲಿತರಾಗುತ್ತಾರೆ.

ಕೆಲವರು ಮೊಬೈಲಿನ ಸಂಗಕ್ಕೆ ಹೋಗದೆ ನಿದ್ರಾವಶರಾಗುತ್ತಾರೆ. ಮತ್ತೆ ಕೆಲವರು ಪರಿಚಿತರು ಅಕ್ಕಪಕ್ಕ ಇದ್ದರೆ ಸಿದ್ದರಾಮಯ್ಯನವರನ್ನು ಬಯ್ಯುತ್ತಲೋ ಇಲ್ಲ ಮೋದಿ ಮಹಿಮೆಯನ್ನು ಕೊಂಡಾಡುತ್ತಲೋ, ಆ ಮಾತುಗಳ ಮರೆಯಲ್ಲಿ ಟ್ರಾಫಿಕ್‌ ದಣಿವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವೇ ಕೆಲವರು ಮಾತ್ರ– ಕಿಟಿಕಿಯಾಚೆ ಕಣ್ಣುಗಳ ಹೊರಳಿಸುತ್ತಾರೆ. ಬಸ್ಸಿನೊಂದಿಗೆ ತಾನೂ ಓಡುವ ರಸ್ತೆಯಲ್ಲಿ ಅಗಣಿತ ಚಿತ್ರಗಳು. ಓಡುನಡಿಗೆಯ ಮಕ್ಕಳು, ಕನಸುಗಳನ್ನು ತುಳುಕಿಸುತ್ತ ನಡೆಯುವ ತರಳೆಯರು, ಮ್ಲಾನವದನರಾದ ಹಿರಿಯರು, ಸುಮ್ಮಸುಮ್ಮನೆ ನಗುವವರು, ಕಾರಣವಿಲ್ಲದೆ ಸಿಡುಕುವವರು... ಹೀಗೆ ಗುಂಪಿನಲ್ಲಿ ಕಾಣುವ ಮುಖಗಳನ್ನು ಕೆಲವರು ಕಣ್ತುಂಬಿಕೊಂಡರೆ, ಮತ್ತೆ ಕೆಲವರು ದಾರಿಬದಿಯ ಕಟ್ಟಡಗಳ ನಾಮಫಲಕಗಳ ಓದುತ್ತ ಕಣ್ಣರಳಿಸುತ್ತಾರೆ.

ಈಗ ಮತ್ತದೇ ಪ್ರಶ್ನೆ– ಸೀಟು ಸಿಕ್ಕಾಗ ನೀವು ಏನು ಮಾಡುವಿರಿ? ದಾರಿಬದಿಯ ಬರಹಗಳ ಓದುವ ಸಾಲಿಗೆ ನೀವು ಸೇರಿದ್ದೀರಾದರೆ ನಿಮಗೊಂದು ಶಹಬ್ಬಾಸ್‌. ಈ ಓದುವ ಸುಖವನ್ನು ಅನುಭವಿಸಿಯೇ ತೀರಬೇಕು. ಇದರ ಲಾಭಗಳೇನೂ ಕಡಿಮೆಯವಲ್ಲ. ಕಣ್ಣೋಟ ಚುರುಕಾಗುತ್ತದೆ. ಹೊಸ ಪದಗಳು ಶಬ್ದಕೋಶ ಸೇರಿಕೊಳ್ಳುವ ಸಾಧ್ಯತೆಗಳಿವೆ. ಮುಖ್ಯವಾಗಿ ಆ ಪದವಿಲಾಸದ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳುವುದು ಮನರಂಜನೆಯ ಒಂದು ಮಾರ್ಗವೂ ಹೌದು. ಬನ್ನಿ, ಈ ‘ಪದಮಾರ್ಗ’ದಲ್ಲೊಮ್ಮೆ ಹೋಗಿಬರೋಣ.

ADVERTISEMENT

ಹನುಮಂತ ನಗರದ ರಸ್ತೆಗಳು ನಿಮಗೆ ಪರಿಚಿತವಾದರೆ, ‘ಸಾಹಿತ್ಯ ಲೇಡೀಸ್‌ ಟೈಲರ್‌’ ಎನ್ನುವ ಹೆಸರು ಗಮನಿಸಿರಬೇಕು. ಅಷ್ಟೇನೂ ಆಕರ್ಷಕವಲ್ಲದ ಕಟ್ಟಡವೊಂದರಲ್ಲಿನ ಅಂಗಡಿಯೊಂದರ ಈ ಬರಹ ಪ್ರತಿಸಲ ನೋಡಿದಾಗಲೂ ಮನಸ್ಸಿಗೆ ಕಚಗುಳಿ ಇಟ್ಟಂತಾಗುತ್ತದೆ. ಲೇಡೀಸ್‌ ಟೈಲರ್‌ ಜೊತೆಗೆ ತಳಕು ಹಾಕಿಕೊಂಡು ‘ಸಾಹಿತ್ಯ’ ಈ ಕಚಗುಳಿಗೆ ಕಾರಣ. ಹೆಣ್ಣುಮಕ್ಕಳ ಬಟ್ಟೆ ಹೊಲಿಯುವುದರಲ್ಲೂ ಒಂದು ಸಾಹಿತ್ಯ ಇರಬಹುದೇ? ಅದರಲ್ಲೊಂದು ಅಪೂರ್ವ ವ್ಯಾಕರಣ ಇರಬಹುದೇ? ಬಟ್ಟೆಯ ಬಗ್ಗೆ ಮಹಿಳೆಯರು ವಹಿಸುವ ಆಸ್ಥೆಯನ್ನು ನೋಡಿದರೆ ಇಂಥದ್ದೊಂದು ಸಾಹಿತ್ಯ ಇರಲೇಬೇಕು ಎನ್ನಿಸುತ್ತದೆ. ಬಹುಶಃ, ‘ಸಾಹಿತ್ಯ’ ಎನ್ನುವುದು ಈ ಲೇಡೀಸ್‌ ಟೈಲರ್‌ನ ಮಗಳ ಹೆಸರು ಆಗಿರಬಹುದೇನೊ? ಹೀಗೆ, ಹಲವು ಸಾಧ್ಯತೆಗಳ ಕಾರಣದಿಂದಾಗಿ ‘ಸಾಹಿತ್ಯ’ ಲೇಡೀಸ್‌ ಟೈಲರ್‌ ಪುಳಕ ಹುಟ್ಟಿಸುತ್ತದೆ.

ಕತ್ರಿಗುಪ್ಪೆ ಪರಿಸರದಲ್ಲಿನ ವೃತ್ತವೊಂದರ ಹೆಸರು ‘ಸೀತಾ ಸರ್ಕಲ್‌’. ಬೆಂಗಳೂರಿನ ವೃತ್ತಗಳನೊಮ್ಮೆ ನೆನಪಿಸಿಕೊಳ್ಳಿ. ಅಲ್ಲೆಲ್ಲ ಪುರುಷರದೇ ಪಾರುಪತ್ಯ. ಹಾಗಾಗಿ ಹೆಣ್ಣುಮಗಳ ಹೆಸರಿನ ‘ಸೀತಾ ಸರ್ಕಲ್‌’ ವಿಶೇಷ ಎನ್ನಿಸುತ್ತದೆ. ಅಂದಹಾಗೆ, ಈ ಸೀತಾ ರಾಮಾಯಣದ ಸೀತಮ್ಮನೋ ಅಥವಾ ಕತ್ರಿಗುಪ್ಪೆ ಪರಿಸರದಲ್ಲೆಲ್ಲೋ ಬದುಕಿ ಬಾಳಿದ ತಾಯಿಯೊಬ್ಬಳ ಹೆಸರೋ... ಈ ಜಿಜ್ಞಾಸೆಯಲ್ಲಿ ಮನಸು ಮುಳುಗಿರುವಾಗಲೇ ಕಲ್ಯಾಣಮಂಟಪವೊಂದು ಕಾಣಿಸುತ್ತದೆ. ಅದರ ಹೆಸರು ‘ಸಪ್ತಪದಿ ಕಲ್ಯಾಣಮಂಟಪ’. ಹೆಸರು ಇಷ್ಟು ವಾಚ್ಯವಾಗಬೇಕೆ ಎಂದುಕೊಳ್ಳುವಷ್ಟರಲ್ಲಿ ಕಣ್ಣು ಮಿಟುಕಿಸುವುದು– ‘20:20 ವೈನ್‌ ಸೆಂಟರ್‌’.

ತಕ್ಷಣವೇ ನಶೆಯೇರಿದ ಅನುಭವ. ಎಷ್ಟೊಂದು ಗಮ್ಮತ್ತಿನ ಹೆಸರಲ್ಲವೇ? ಟ್ವೆಂಟಿ ಟ್ವೆಂಟಿ ಕ್ರಿಕೆಟ್ಟಿನ ರೋಚಕತೆಯನ್ನು ಮದಿರೆಯೊಂದಿಗೆ ಬೆಸೆದ ಸೃಜನಶೀಲತೆಗೆ ಭೇಷ್‌ ಅನ್ನಲೇಬೇಕು. ಹಾಂ, ಹೀಗೆ ಮೆಚ್ಚಿಕೊಳ್ಳುವಾಗಲೇ ನೆನಪಾಗುವುದು ಎಲ್ಲೋ ನೋಡಿದ, ‘ನಂಜು ವೈನ್ಸ್‌’ ಎನ್ನುವ ಅಂಗಡಿ. ಈ ನಂಜು ಮಾಲೀಕರ ಮಗ ನಂಜುಂಡ ಇರಬಹುದೇನೊ? ನಂಜುಂಡ ಮುದ್ದಿನಲ್ಲಿ ‘ನಂಜು’ ಆಗಿರಬಹುದು. ‘ನಂಜು’ ಎನ್ನುವ ಶಬ್ದಕ್ಕೆ ವಿಷ ಎನ್ನುವ ಅರ್ಥವೂ ಇದೆ. ಕುಡಿತದ ಕೆಡುಕುಗಳನ್ನು ‘ನಂಜು ವೈನ್ಸ್‌’ ಎನ್ನುವ ಹೆಸರು ಸಂಕೇತಿಸುತ್ತಿದೆಯೇ?

ಜಯನಗರದ 4ನೇ ಹಂತದಲ್ಲಿ ಇರುವ ರೇಷ್ಮೆ ಮಳಿಗೆಯೊಂದರ ಹೆಸರು ‘ಶಿ ಸಿಲ್ಕ್‌ ಸ್ಯಾರೀಸ್‌’. ಹೆಣ್ಣುಮಕ್ಕಳನ್ನು ನೇರವಾಗಿ ಓಲೈಸುವ ಪರಿಯಿದು. ಆ ಪರಿಸರದಲ್ಲೇ ಇರುವ ‘ಶಾಂತಿಸಾಗರ್‌ ಹೋಟೆಲ್‌’ ಸಮೀಪ ‘ಪಾತ್ರ ಬಜಾರ್‌’ ಎನ್ನುವ ಅಂಗಡಿಯೊಂದಿದೆ. ಹೆಸರಿಗೆ ತಕ್ಕಂತೆ ಅಲ್ಲಿ ಪಾತ್ರೆಗಳ ಪ್ರಪಂಚ ಅನಾವರಣಗೊಂಡಿದೆ.

ಯಾವ ರಸ್ತೆಯಲ್ಲಿ ಹೋದರೂ ಗಣೇಶನಿಂದ ತಪ್ಪಿಸಿಕೊಂಡು ಹೋಗುವಂತಿಲ್ಲ. ಔಷಧಿ ಅಂಗಡಿ, ಬೇಕರಿ, ತರಕಾರಿ ಅಂಗಡಿ– ಗಣೇಶ ಎಲ್ಲೆಡೆ ಸಲ್ಲುವವನು. ಈ ಗಣೇಶ ಪ್ರೀತಿಗೆ ಕಾರಣ ಏನಿರಬಹುದು? ವಿಘ್ನನಿವಾರಕ ಎನ್ನುವ ನಂಬಿಕೆಯ ಜೊತೆಗೆ, ಆತ ಏನನ್ನು ಬೇಕಾದರೂ ಅರಗಿಸಿಕೊಳ್ಳಬಲ್ಲ ಹೊಟ್ಟೆಯುಳ್ಳವನು (ಲಂಬೋದರ) ಎನ್ನುವುದೂ ಕಾರಣ ಇದ್ದೀತೆ? ಹಾಂ, ಗಣೇಶನೊಂದಿಗೆ ಮಾರುತಿ, ಮಂಜುನಾಥ, ಅಯ್ಯಪ್ಪ, ರಾಘವೇಂದ್ರ, ದೇವಿ (ಶ್ರೀದೇವಿ, ಅನ್ನಪೂರ್ಣೆ, ದುರ್ಗಿ, ಲಕ್ಷ್ಮಿ, ಕಾಳಿಕಾಂಬ, ಇತ್ಯಾದಿ) ಮತ್ತು ವೆಂಕಟೇಶ್ವರ (ಬಾಲಾಜಿ) ಕೂಡ ಹೆಚ್ಚು ಜನಪ್ರಿಯರು.

ಅಂಗಡಿಗಳ ಹೆಸರುಗಳಾಗಿ ಬದಲಾಗಿರುವುದು ಕೂಡ ದೇವರುಗಳು ಚಲಾವಣೆಯಲ್ಲಿರುವ ಒಂದು ಮಾರ್ಗ ಎನ್ನಿಸುತ್ತದೆ. ಈ ದೇವರುಗಳೊಂದಿಗೆ ದಾವಣಗೆರೆ, ಮಂಗಳೂರು, ಧಾರವಾಡದಂಥ ಊರುಗಳೂ ನಾಮಫಲಕಗಳಿಗೆ ಒದಗಿಬಂದಿವೆ. ದಾವಣಗೆರೆಯ ಜೊತೆಗೆ ಬೆಣ್ಣೆದೋಸೆಯೂ ಮಂಗಳೂರು ಜೊತೆಗೆ ಅಲ್ಲಿನ ಖಾದ್ಯಗಳೂ, ಧಾರವಾಡದ ಜೊತೆಗೆ ರೊಟ್ಟಿ ಮತ್ತು ಪೇಡೆ ಕಾಣಿಸಿಕೊಳ್ಳುವುದು ಮಾಮೂಲು.

ನಾಮಫಲಕಗಳನ್ನು ಇಟ್ಟುಕೊಂಡು ಊಟಕ್ಕೆ ಸಂಬಂಧಿಸಿದಂತೆ ಒಂದು ಅಧ್ಯಯನ ಮಾಡುವಷ್ಟು ಸಾಮಗ್ರಿ ಬೆಂಗಳೂರಿನ ರಸ್ತೆಗಳಲ್ಲಿದೆ. ‘ಕಡಾಯಿ’ ಎನ್ನುವುದು ಹೋಟೆಲ್‌ ಒಂದರ ಹೆಸರು. ಇಲ್ಲಿನ ಕಡಾಯಿ ಊಟ ಬೇಯಿಸುವ ಪಾತ್ರೆಯೂ ಇರಬಹುದು, ತಿನ್ನುವವರ ಹೊಟ್ಟೆಯೂ ಇರಬಹುದು. ‘ಸಾತ್ವಿಕ್‌ ಫುಡ್ಸ್‌’ ಎನ್ನುವ ಹೆಸರೇ ಅಲ್ಲಿನ ತಿನಿಸುಗಳ ಸ್ವರೂಪವನ್ನು ಹೇಳುವಂತಿದೆ. ‘ಅಮ್ಮ’ ಹೆಸರಿನ ಹೋಟೆಲ್‌ಗಳೂ ಇವೆ. ಅಮ್ಮನ ಕೈರುಚಿಯ ಬಗ್ಗೆ, ವಾತ್ಸಲ್ಯದ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅಮ್ಮನ ಈ ಅನುಬಂಧ ಆಸ್ಪತ್ರೆಗಳ ಹೆಸರುಗಳಲ್ಲಿ ಕಾಣಿಸಿಕೊಂಡಿದೆ. ಅಶ್ವತ್ಥನಗರದಲ್ಲಿನ ಆಸ್ಪತ್ರೆಯೊಂದರ ಹೆಸರು ‘ಮಾ ಕ್ಲಿನಿಕ್’. ಅಮ್ಮ–ಮಕ್ಕಳ ಅನುಬಂಧದ ಪ್ರಸೂತಿಗೃಹಗಳೂ (ಮದರ್‌ಹುಡ್‌, ಕ್ಲೌಡ್‌ನೈನ್‌, ಕ್ರಾಡಲ್...) ಸಾಕಷ್ಟಿವೆ.

ಹೋಟೆಲ್‌ಗಳ ಬಗ್ಗೆ ಮಾತನಾಡುವಾಗ ‘ವಿದ್ಯಾರ್ಥಿ ಭವನ’ವನ್ನು ಮರೆಯುವುದು ಹೇಗೆ? ಗಾಂಧಿಬಜಾರಿನಲ್ಲಿನ ‘ವಿದ್ಯಾರ್ಥಿ ಭವನ’ದ  ಖ್ಯಾತಿ ಅಷ್ಟಿಷ್ಟಲ್ಲ. ಜಿ.ಪಿ. ರಾಜರತ್ನಂ, ನಿಸಾರ್‌, ಮಾಸ್ತಿ, ರಾಜಕುಮಾರರಂಥ ಸಾಂಸ್ಕೃತಿಕ ಲೋಕದ ಹಿರಿಯರ ಜೊತೆಗೆ ರಾಜಕಾರಣಿಗಳೂ ಕೂಡ ಈ ಭವನದಲ್ಲಿ ದೋಸೆ ಮುರಿದವರೇ. ಅಂದಹಾಗೆ, ‘ವಿದ್ಯಾರ್ಥಿ ಭವನ’ಕ್ಕೆ ಆ ಹೆಸರು ಬಂದುದಾದರೂ ಯಾಕೆ? ಗೊತ್ತಿಲ್ಲ. ಆದರೆ, ಅಲ್ಲಿನ ಚಿಕ್ಕ ಸೈಜಿನ ದೋಸೆ ತಿನ್ನುವಾಗಲೆಲ್ಲ ದೋಸೆಗೂ ಹೋಟೆಲಿನ ಹೆಸರಿಗೂ ಸಂಬಂಧ ಇರಬಹುದೇ ಎನ್ನಿಸುತ್ತದೆ. ನಮ್ಮ ಹೋಟೆಲಿಗೆ ಬರುವವರೆಲ್ಲ ವಿದ್ಯಾರ್ಥಿಗಳು, ಅವರು ಹೆಚ್ಚು ತಿನ್ನುವುದಿಲ್ಲ ಎಂದು ನಂಬಿಕೊಂಡ ಹೋಟೆಲ್‌ ಮಾಲೀಕರು ದೋಸೆಯ ಸೈಜ್‌ ಕಡಿಮೆ ಮಾಡಿದ್ದಾರೇನೊ ಅನ್ನಿಸುತ್ತದೆ.

ವಿದ್ಯಾರ್ಥಿ ಭವನದ ಜೊತೆಗೇ ನೆನಪಾಗುವ ಮತ್ತೊಂದು ಭವನ ಕೆಂಗಲ್‌ ಹನುಮಂತಯ್ಯ ರಸ್ತೆಯಲ್ಲಿರುವ ‘ಸಾರಿಗೆ ಭವನ’. ‘‘ಸಾರು ತಯಾರಿಸಲೋ ಸಂಗ್ರಹಿಸಲೋ ಇಷ್ಟೊಂದು ದೊಡ್ಡ ಕಟ್ಟಡ ಇರುವಾಗ, ಅನ್ನಕ್ಕೆ–ಪಲ್ಯಕ್ಕೆ ಇನ್ನೆಷ್ಟು ದೊಡ್ಡ ಕಟ್ಟಡಗಳಿರಬೇಡ?’ ಎಂದು ಅಮೆರಿಕನ್ನಡಿಗ ಶ್ರೀವತ್ಸ ಜೋಶಿ ತಮ್ಮ ಬರಹವೊಂದರಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಮುಂದೆಂದಾದರೂ ‘ಸಾರಿಗೆ ಭವನ’ದ ಮುಂದೆ ಹೋಗುವಾಗ ಜೋಶಿ ಅವರ ಅನ್ನಸಾರಿನ ಮೀಮಾಂಸೆ ನೆನಪಿಸಿಕೊಂಡರೆ ನಿಮ್ಮ ತುಟಿಯಲ್ಲೊಂದು ಮುಗುಳ್ನಗು ಮೂಡದಿರಲಾರದು.

ಆನಂದರಾವ್‌ ವೃತ್ತದಿಂದ ಶಿವಾನಂದ ಸ್ಟೋರ್ಸ್‌ ನಡುವಿನ ರೇಸ್‌ಕೋರ್ಸ್‌ ರಸ್ತೆಯಲ್ಲಿ ಹೋಗುವಾಗ ಎರಡು ಹೋಟೆಲ್‌ಗಳು ಗಮನಸೆಳೆಯುತ್ತವೆ. ಮೊದಲನೆಯದು ‘ಹೋಟೆಲ್‌ ಟೂರಿಸ್ಟ್‌’. ಮತ್ತೊಂದು ‘ಹೋಟೆಲ್‌ ಜನಾರ್ದನ್’. ‘ಪ್ರವಾಸಿಗ’ (ಟೂರಿಸ್ಟ್‌) ಎನ್ನುವ ವಿಶೇಷಣವನ್ನೇ ತನ್ನ ಹೆಸರಾಗಿಸಿಕೊಂಡಿರುವ ಟೂರಿಸ್ಟ್‌ ಹೋಟೆಲ್‌ ಸಿನಿಮಾ ಕಥೆಗಳ ಕಾರಣದಿಂದಲೂ ಪ್ರಸಿದ್ಧ. ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ತಂಗುತ್ತಿದ್ದುದು ಇಲ್ಲಿಯೇ ಅಂತೆ. ಅದರ ಚರಿತ್ರೆ ಗೊತ್ತಿದ್ದವರಿಗೆಲ್ಲ ‘ಟೂರಿಸ್ಟ್‌’ ಮುಂದೆ ಹಾದುಹೋಗುವಾಗ ಯಾವುದೋ ಸಿನಿಮಾ ಕಥೆಯೊಂದು ಆ ಪರಿಸರದಲ್ಲಿ ಉಸಿರಾಡುತ್ತಿರುವಂತೆ ಕಾಣಿಸುತ್ತದೆ. ಇನ್ನು ‘ಜನಾರ್ದನ್‌’ ಹೋಟೆಲ್‌ ಗಮನಸೆಳೆಯುವುದು ತನ್ನ ಹೆಸರಿನಲ್ಲಿನ ‘ಧ’ಕಾರದಿಂದಾಗಿ. ಇಲ್ಲಿ ಮಾತ್ರವಲ್ಲ, ‘ಜನಾರ್ದನ’ ಹೆಸರಿನ ಬಹುತೇಕ ಅಂಗಡಿಮುಂಗಟ್ಟುಗಳಲ್ಲಿ ‘ಜನಾರ್ಧನ’ ಎನ್ನುವ ತಪ್ಪು ಕಾಗುಣಿತ ಇರುತ್ತದೆ.

ಶಿವಾಜಿನಗರದ ಪರಿಸರದಲ್ಲಿ ಪೀಠೋಪಕರಣಗಳ ಹಲವು ಮಳಿಗೆಗಳಿವೆ. ಅವುಗಳಲ್ಲೊಂದರ ಹೆಸರು ‘ವುಡ್‌ ಪೆಕ್ಕರ್‌’. ಆ ಅಂಗಡಿ ಮುಂದೆ ಹೋಗುವಾಗ ಮನಸ್ಸಿನಲ್ಲೊಂದು ಮರಕುಟಿಗ ಹಕ್ಕಿಯು ಕಿಚಿಪಿಚಿ ಎನ್ನತೊಡಗುತ್ತದೆ. ಗುಬ್ಬಚ್ಚಿಗಳು ಗುಳೆ ಹೊರಟಿರುವ ಬೆಂಗಳೂರಿನಲ್ಲಿ ಮರ ಕುಟಿಗ! ಆ ಮಳಿಗೆಯಲ್ಲಿನ ಕುರ್ಚಿ, ಮೇಜು, ಮಂಚಗಳನ್ನು ಮರಕುಟಿಗ ಹಕ್ಕಿಯೇ ತನ್ನ ಚುಂಚಿನಿಂದ ಕೆರೆದು, ಕುಕ್ಕಿ ಸಿದ್ಧಪಡಿಸಿದೆಯೇ? ಇಂಥದೊಂದು ಕಲ್ಪನೆಯನ್ನು ಪಕ್ಕದ ಸೀಟಿನಲ್ಲಿನ ಮಗುವಿನ ಬಳಿ ಹೇಳಿಕೊಂಡರೆ, ಏನೂ ಅರ್ಥವಾಗಲಿಲ್ಲ ಎನ್ನುವಂತೆ ಮುಖ ನೋಡುತ್ತದೆ. ಬೆಂಗಳೂರಿನಲ್ಲಿ ಬೆಳೆದ ಮಕ್ಕಳಿಗೆ ಮರಕುಟಿಗ ಪಕ್ಷಿಯನ್ನು ಹೇಗೆ ಅರ್ಥ ಮಾಡಿಸುವುದು?

ನಾಮಫಲಕಗಳ ಓದು ಒಮ್ಮೆಗೆ ಮುಗಿಯುವಂತಹದ್ದಲ್ಲ. ಬಹುಶಃ, ಈ ನೋಟ ಮತ್ತು ಓದು ನಗರದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಒಂದು ಸಾಧ್ಯತೆಯೂ ಹೌದೆನ್ನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.