ADVERTISEMENT

ಆತ್ಮಹತ್ಯೆ ಬೇಡ- ಆತ್ಮವಿಶ್ವಾಸವಿರಲಿ

ಎನ್.ಸ್ವಾತಿ
Published 9 ಜನವರಿ 2017, 19:30 IST
Last Updated 9 ಜನವರಿ 2017, 19:30 IST
ಆತ್ಮಹತ್ಯೆ ಬೇಡ- ಆತ್ಮವಿಶ್ವಾಸವಿರಲಿ
ಆತ್ಮಹತ್ಯೆ ಬೇಡ- ಆತ್ಮವಿಶ್ವಾಸವಿರಲಿ   

ಪತ್ರಿಕೆ ಓದುತ್ತಾ ಕುಳಿತಿದ್ದಾಗ ಮೊಬೈಲ್ ಫೋನ್ ರಿಂಗಣಿಸಿತು. ಫೋನ್ ಕೈಗೆತ್ತಿಕೊಂಡು ಮಾತನಾಡಿದೆ. ಅತ್ತಕಡೆಯಿಂದ ಬಂದ ಸುದ್ದಿ ಕೇಳಿ ಅರೆಕ್ಷಣ ಏನು ಹೇಳಬೇಕೆಂದೇ ತಿಳಿಯಲಿಲ್ಲ. ‘ವಿಶ್ವಾಸ್ ಆತ್ಮಹತ್ಯೆ ಮಾಡಿಕೊಂಡನಂತೆ’ ಎಂದಿದ್ದಳು ಗೆಳತಿ ಸುಮಾ. ‘ಅರೆ! ಆತನಿಗೇನಾಯ್ತು?’ ಎಂದೆ. ‘ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಮಾರ್ಕ್ಸ್‌ ಬರಲಿಲ್ಲವಂತೆ, ಅದಕ್ಕಾಗಿ ನೇಣು ಹಾಕಿಕೊಂಡನಂತೆ’ ವಿಶ್ವಾಸ್‌ಗೆ ಆತ್ಮವಿಶ್ವಾಸವಿಲ್ಲ!

***
ಹೌದು, ಪ್ರಕಾಶ್ ಬ್ಯಾಂಕ್ ಉದ್ಯೋಗಿ. ಒಳ್ಳೆಯ ನಡತೆ. ಎಲ್ಲರಲ್ಲೂ ಪ್ರೀತಿ-ವಿಶ್ವಾಸದಿಂದ ಇರುತ್ತಿದ್ದ. ಇನ್ನಷ್ಟು ಗಳಿಸುವ ಆಸೆಯಿಂದಲೋ ಏನೋ, ಷೇರು ಮಾರ್ಕೆಟ್‌ನಲ್ಲಿ ಹಣ ತೊಡಗಿಸುತ್ತಿದ್ದ. ಒಂದಷ್ಟು ದುಡ್ಡನ್ನೂ ಗಳಿಸಿದ. ಅದೇ ಮುಳುವಾಯ್ತು. ಇನ್ನಷ್ಟು ಮತ್ತಷ್ಟು ತೊಡಗಿಸುತ್ತಾ ಹೋದ. ಅದೃಷ್ಟ ಕೈಕೊಟ್ಟಿತು.

ನಷ್ಟದ ನೋವನ್ನು ಮರೆಯಲು ಕುಡಿತದ ಮೊರೆ ಹೋದ. ಕೊಂಚ ನೆಮ್ಮದಿ ಎನಿಸಿದರೂ ಆರ್ಥಿಕ ಏರು ಪೇರನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ. ಚಿಂತೆ ಹೆಚ್ಚಾಯಿತು.

ಪ್ರಕಾಶ್ ಬ್ಯಾಂಕ್‌ಗೆ ಬರಲಿಲ್ಲ. ಮರುದಿನ ಪತ್ರಿಕೆಯಲ್ಲಿನ ಸುದ್ದಿ ಸಹೋದ್ಯೋಗಿಗಳನ್ನು ದಂಗುಬಡಿಸಿತು. ಪ್ರಕಾಶ್ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಕೈತುಂಬ ಸಂಬಳ ಬರುತ್ತಿದ್ದರೂ ಇಂತಹ ಸ್ಥಿತಿ.

***
ನಮಿತಾ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳಂತೆ. ಕಾರಣ ಗಂಡನೊಂದಿಗೆ ಭಿನ್ನಾಭಿಪ್ರಾಯ. ಆಕೆಗೆ ಗಂಡನ ಮನೆಯಲ್ಲಿ ಯಾವುದೇ ಕೊರತೆ ಇರಲಿಲ್ಲ. ಯಾವುದೋ ಸಣ್ಣ ಕಾರಣಕ್ಕಾಗಿ ಗಂಡನೊಂದಿಗೆ ಜಗಳವಾಯ್ತು. ಒಂದೆರಡು ದಿನಗಳಲ್ಲೇ ಸರಿ ಹೋಗುತ್ತಿತ್ತು. ಆಕೆ ದುಡುಕಿ ತನ್ನ ಅಂತ್ಯವನ್ನು ತಾನೇ ಕಂಡುಕೊಂಡಳು.

***
ರಜನಿ ಮತ್ತು ಪ್ರದೀಪ್ ಕಾಲೇಜು ದಿನಗಳಲ್ಲಿ ಒಳ್ಳೆಯ ಸ್ನೇಹಿತರು. ಸ್ನೇಹ ಪ್ರೇಮಕ್ಕೆ ತಿರುಗಿತು. ಮೊಬೈಲ್ ವಾಟ್ಸ್ ಆಪ್ ಸಂದೇಶಗಳು ಅವರನ್ನು ಇನ್ನಷ್ಟು ಹತ್ತಿರ ತಂದವು.

ಭವಿಷ್ಯದ ಬಗ್ಗೆ ಏನೇನೋ ಕನಸುಗಳು, ಹಲವು ಕಲ್ಪನೆಗಳು. ಆದರೆ ಮನೆಯಲ್ಲಿ ಹಿರಿಯರ ಪ್ರಬಲವಾದ ಅಡ್ಡಿ ಅವರ ಮದುವೆಗೆ ಆತಂಕ ಮೂಡಿಸಿದ್ದು ಸತ್ಯ. ರಜನಿಯನ್ನು ಕೋಣೆಯಲ್ಲಿರಿಸಿ ಬೀಗ ಹಾಕಿದರು. ಮನೆಯವರೂ ಆಕೆಗೆ ತಿಳಿವಳಿಕೆ ನೀಡುವ ಪ್ರಯತ್ನ ಮಾಡಲಿಲ್ಲ. ಕೋಣೆಯಲ್ಲಿ ಬಂಧಿಯಾದದ್ದೇ ಆತ್ಮಹತ್ಯೆಗೆ ಅವಕಾಶ ಮಾಡಿಕೊಟ್ಟಂತಾಯಿತು. ಫ್ಯಾನ್‌ಗೆ ಚೂಡಿದಾರ್ ಶಾಲನ್ನೇ ಬಳಸಿ ನೇಣು ಹಾಕಿಕೊಂಡಳು.

***
ಇದೇನಿದೂ ಸಾಲುಸಾಲಾಗಿ ಇಂಥ ಕೆಟ್ಟ ಸುದ್ದಿ ಹೇಳುತ್ತಿದ್ದಾರೆ ಎಂದುಕೊಳ್ಳಬೇಡಿ. ನಮ್ಮ ದೇಶದಲ್ಲಿ ವರ್ಷಕ್ಕೆ ಹತ್ತು ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಾನು ಹೇಳಿದ್ದು ನಮ್ಮ ಸುತ್ತಲಿನ ಉದಾಹರಣೆಗಳನ್ನು.

ಆತ್ಮಹತ್ಯೆಗೆ ಕಾರಣ ಹುಡುಕಿದರೆ ಅನಾರೋಗ್ಯ, ಬಡತನ, ಸಾಲ, ಪ್ರೇಮ ವೈಫಲ್ಯ, ಪರೀಕ್ಷೆಯಲ್ಲಿ ಅನುತ್ತೀರ್ಣ, ನಿರುದ್ಯೋಗ, ವೈವಾಹಿಕ ಸಮಸ್ಯೆ, ಮಾನಸಿಕ ಸಮಸ್ಯೆಗಳು ಎದ್ದು ಕಾಣುತ್ತವೆ. ಮನಸಿನ ಭಾವನೆಗಳನ್ನು ನಿರ್ವಹಿಸಲು ಕಲಿಯುವುದೇ ಇದಕ್ಕೆ ಉತ್ತಮ ಪರಿಹಾರ.

ಆತ್ಮಹತ್ಯೆಯ ಯೋಚನೆ ಬರುವ ವ್ಯಕ್ತಿಗೆ ಸಾಂತ್ವನ ಹೇಳುವ ವ್ಯಕ್ತಿ ಲಭಿಸಿದರೆ ಆತ ಬದುಕುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ ಮನೋವೈದ್ಯರು ‘ಆತ್ಮಹತ್ಯೆಯ ಮಾತನ್ನು ಲಘುವಾಗಿ ಪರಿಗಣಿಸಬೇಡಿ’ ಎಂದು ಎಚ್ಚರಿಸುತ್ತಾರೆ.

ಸಮಸ್ಯೆಗಳೆಂದೂ ಶಾಶ್ವತವಲ್ಲ, ಕ್ಷಣಿಕ. ಅದಕ್ಕೆ ಪರಿಹಾರ ಇದ್ದೇ ಇದೆ. ಮಾತ್ರವಲ್ಲ ನಮಗೆ ಬಂದ ಸಮಸ್ಯೆಗಳಿಗಿಂತಲೂ ಕಠಿಣವಾದ ಸಮಸ್ಯೆ ನಮ್ಮ ಗೆಳೆಯರಿಗೆ, ನೆರೆ-ಹೊರೆಯವರಿಗೆ ಬಂದಿದ್ದರೂ ಅವರು ಅದನ್ನು ಗೆದ್ದು ಬಂದಿರುತ್ತಾರೆ.

ಅದೇ ರೀತಿ ನಾವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಗೆಲುವನ್ನು ಸಾಧಿಸಬಹುದು ಎಂಬ ಆತ್ಮವಿಶ್ವಾಸದ ಮನೋಭಾವ ಮೂಡಿಸಿ ಕೊಂಡಾಗ ಆತ್ಮಹತ್ಯೆಯ ಯೋಚನೆ ದೂರವಾ ಗುತ್ತದೆ. ಆತ್ಮಹತ್ಯೆಯನ್ನು ಗೆದ್ದು ನಿಂತ ವ್ಯಕ್ತಿಗೆ ‘ತನ್ನ ನಿಲುವು ಎಂತಹ ಹಾಸ್ಯಾಸ್ಪದವಾಗಿತ್ತು ಮತ್ತು ಎಂತಹ ಪ್ರಮಾದ ಎಸಗುತ್ತಿದ್ದೆ’ ಎಂದು ಅನ್ನಿಸದಿರದು.

ದಾಸರ ಪದದಲ್ಲಿ ‘ಚಿಂತೆ ಬ್ಯಾಡಿರೋ, ನಿಶ್ಚಿಂತರಾಗಿರೋ’ ಎಂಬುದನ್ನು ಕೇಳಿದ್ದೇವೆ. ‘ಚಿತೆಯು ಮರಣಾನಂತರ ದೇಹ ವನ್ನು ಸುಟ್ಟರೆ, ಚಿಂತೆಯು ಜೀವಂತ ದೇಹವನ್ನೇ ಸುಡುತ್ತದೆ’ ಎಂಬುದನ್ನರಿತು ಆತ್ಮಹತ್ಯೆಯ ಯೋಚನೆ ಬಂದಾಕ್ಷಣ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವತ್ತ ಮನ ಮಾಡಿದರೆ ಅದುವೇ ಜಾಣತನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.