ADVERTISEMENT

ಆರ್ಭಟಿಸಲು ಸಜ್ಜಾಗಿವೆ ರಾಕ್ಷಸ ಹಲ್ಲಿಗಳು

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಜುರಾಸಿಕ್ ವರ್ಲ್ಡ್–ಫಾಲೆನ್ ಕಿಂಗಡಮ್‌ ಚಿತ್ರದ ದೃಶ್ಯ
ಜುರಾಸಿಕ್ ವರ್ಲ್ಡ್–ಫಾಲೆನ್ ಕಿಂಗಡಮ್‌ ಚಿತ್ರದ ದೃಶ್ಯ   

ಮೂರು ವರ್ಷಗಳ ನಂತರ ದೈತ್ಯ ಗಾತ್ರದ ರಾಕ್ಷಸ ಹಲ್ಲಿಗಳು ತೆರೆಯ ಮೇಲೆ ಆರ್ಭಟಿಸಲು ಸಿದ್ಧವಾಗಿವೆ. ಜೆ.ಎ. ಬಯೊನಾ ನಿರ್ದೇಶನದ ‘ಜುರಾಸಿಕ್ ವರ್ಡ್– ಫಾಲೆನ್ ಕಿಂಗ್‌ಡಮ್’ ಚಿತ್ರ ಜೂನ್‌ 7ಕ್ಕೆ ವಿಶ್ವದಾದ್ಯಂತ ತೆರೆಕಾಣಲಿದೆ.

ಇಂಗ್ಲಿಷ್ ಭಾಷೆಯ ನಿರ್ಮಾಣದ ಜತೆಗೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ ಕೂಡ ಮಾಡಲಾಗಿದ್ದು, ಒಂದೇ ದಿನ ಎಲ್ಲ ಭಾಷೆಗಳಲ್ಲೂ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ.

ಕೊಲಿನ್‌ ಟ್ರೊವೆರ್ರೊ ಮತ್ತು ಡೆನೆಕ್‌ ಕೊನೊಲ್ಲಿ ಅವರು ಚಿತ್ರದ ಕಥೆ ಬರೆದಿದ್ದಾರೆ. ಫ್ರ್ಯಾಂಕ್ ಮಾರ್ಷಲ್, ಪ್ಯಾಟ್ರಿಕ್ ಕ್ರೌಲೆ ಮತ್ತು ಬೆಲೆನ್ ಅಟೆಂಜಾ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ADVERTISEMENT

ಕ್ರಿಸ್‌ ಪ್ರ್ಯಾಟ್, ಬೈಸ್‌ ಡಲ್ಲಾಸ್ ಹೋವರ್ಡ್‌, ಟೆಡ್ ಲೆವಿನಿ, ರೇಫ್ ಸ್ಪಾಲ್‌, ಟೋಬಿ ಜೋನ್ಸ್‌ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮೈಕೆಲ್ ಗಿಯಾಚ್ಚಿನಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಆಸ್ಕರ್ ಫೌರಾ ಸಿನಿಮಾಟೊಗ್ರಫಿಯಲ್ಲಿ ಚಿತ್ರ ಮೂಡಿಬರಲಿದೆ.

ಮೈಕಲ್ ಕ್ರಿಂಕ್ಟನ್ ಅವರ ಕಾದಂಬರಿ ಆಧರಿಸಿದ ಈ ಸರಣಿಯ ಮೊದಲ ಚಿತ್ರ 1990ರಲ್ಲಿ ತೆರೆಕಂಡಿತ್ತು. ಆಗ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೃಷ್ಟಿಸಿದ ತಲ್ಲಣದಿಂದಾಗಿ, ಎರಡನೇ ಚಿತ್ರವನ್ನು 1993ರಲ್ಲಿ ಸ್ಟೀವನ್ ಸ್ಪೈಲ್ ಬರ್ಗ್ ನಿರ್ದೇಶಿಸಿ ಯಶಸ್ವಿಯಾಗಿದ್ದರು.

ರಾಕ್ಷಸ ಹಲ್ಲಿಗಳ ಆರ್ಭಟಕ್ಕೆ ಪ್ರೇಕ್ಷಕರು ಮನ ಸೋತಿದ್ದರಿಂದ, ‘ದಿ ಲಾಸ್ಟ್‌ ವರ್ಡ್ ಜುರಾಸಿಕ್ ಪಾರ್ಕ್’ (1997), ‘ಜುರಾಸಿಕ್‌ ಪಾರ್ಕ್‌ –3’ (2001), ಮತ್ತು 2015ರಲ್ಲಿ ‘ಜುರಾಸಿಕ್ ವರ್ಲ್ಡ್’ ಹೆಸರಿನ ಸರಣಿ ಚಿತ್ರಗಳು ತೆರೆಕಂಡಿದ್ದವು. 2021ಕ್ಕೆ ಮೊತ್ತೊಂದು ಚಿತ್ರವೂ ಬರಲಿದೆ.

ಕಾಲಾಗೆ ಪೈಪೋಟಿ?
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಕಾಲಾ’ ಚಿತ್ರವು ಇದೇ ದಿನ ತೆರೆ ಕಾಣುತ್ತಿರುವುದರಿಂದ, ರಾಕ್ಷಸ ಹಲ್ಲಿಗಳು ಕಾಲಾಗೆ ಪೈಪೋಟಿ ನೀಡುವ ಸಂಭವವಿದೆ. ಪಾ.ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪಾ. ರಂಜಿತ್‌ ನಿರ್ದೇಶನದ ಈ ಚಿತ್ರವನ್ನು ವಂಡರ್‌ಬಾರ್ಸ್‌ ಬ್ಯಾನರ್‌ನಲ್ಲಿ ರಜನಿಕಾಂತ್ ಅಳಿಯ ಧನುಷ್‌ ನಿರ್ಮಿಸುತ್ತಿದ್ದಾರೆ. ಚಿತ್ರದ ಟೀಸರ್‌ ಬಿಡುಗಡೆಯಾದ 24 ಗಂಟೆಗಳಲ್ಲೇ 1.2 ಕೋಟಿ ವೀಕ್ಷಣೆ ಕಂಡು ದಾಖಲೆ ನಿರ್ಮಿಸಿತ್ತು. ಸಂತೋಷ್‌ ನಾರಾಯಣನ್ ಅವರು ಸಂಗೀತ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.