ಮನಸ್ಸಿನ ಏಕಾಗ್ರತೆಯೇ ಅವಧಾನ. ಇದೊಂದು ಕಲೆಯಾಗಲು ಅದಕ್ಕೆ ನವರಸಗಳ ಸೇರ್ಪಡೆ ಅನಿವಾರ್ಯ. ಜೊತೆಗೆ, ಚಮತ್ಕಾರವನ್ನು ಹೆಚ್ಚಿಸುವಂತಹ ಅದ್ಭುತ ರಮಣೀಯ ಸಂಗತಿಗಳೂ ಕೂಡಿದಾಗ ಇದೊಂದು ರಂಜಕ ಕಾರ್ಯಕ್ರಮವಾಗುತ್ತದೆ.
ಪ್ರಸ್ತುತ ಅಷ್ಟಾವಧಾನ ಇಂತಹ ಒಂದು ಕಲೆ. ಇದನ್ನು ನಿರ್ವಾಹ ಮಾಡಬಲ್ಲವನೇ ಅವಧಾನಿ. ಅವನನ್ನು ಪ್ರಶ್ನಿಸಿ ತನ್ಮೂಲಕ ಇಡಿಯ ಕಾರ್ಯಕ್ರಮವನ್ನು ರೂಪಿಸಬಲ್ಲ ವಿದ್ವಾಂಸರೇ ಪಚ್ಛಕರು.
ನಾಲ್ಕು ಸುತ್ತುಗಳಲ್ಲಿ ನಡೆಯುವ ಈ ಕಾರ್ಯಕ್ರಮವು ಸುಮಾರು 3 ಗಂಟೆಗಳ ಅವಧಿಯಲ್ಲಿ ಹರಳುಗಟ್ಟುವ ಗದ್ಯ-ಪದ್ಯಾತ್ಮಕ ಸಾಹಿತ್ಯ ವಿನೋದ. ಇದರಲ್ಲಿ ಅವಧಾನಿಗೆ ಯಾವುದೇ ಪೂರ್ವಸಿದ್ಧತೆಗಾಗಲಿ, ಬರೆದುಕೊಳ್ಳುವುದಕ್ಕಾಗಲಿ ಅವಕಾಶವಿರುವುದಿಲ್ಲ. ಎಲ್ಲವನ್ನೂ ಬಾಯಿಯಲ್ಲಿಯೇ ಹೇಳಬೇಕು.
ಇದೇ ಆಶುಕವಿತೆಯ ಲಕ್ಷಣ. ಅಲ್ಲದೆ ಇಲ್ಲಿಯ ಎಲ್ಲ ಪದ್ಯಗಳೂ ಛಂದಸ್ಸು, ವ್ಯಾಕರಣ ಮತ್ತು ಅಲಂಕಾರಶಾಸ್ತ್ರಗಳ ನಿಯಮಕ್ಕೆ ಒಳಪಟ್ಟಿರಲೇಬೇಕು. ಅವಧಾನವು ಪಚ್ಛಕರ ಸಂಖ್ಯೆಗೆ ಅನುಗುಣವಾಗಿ ಅಷ್ಟ, ಶತ, ಸಹಸ್ರ ಇತ್ಯಾದಿ ರೂಪಗಳಲ್ಲಿ ಬೆಳೆದಿದೆಯಾದರೂ ಅಷ್ಟಾವಧಾನವೇ ಎಲ್ಲದರ ಮೂಲ.
ಜಯನಗರದ ವಿಜಯ ಕಾಲೇಜು ಶನಿವಾರ ಶತಾವಧಾನಿ ಆರ್. ಗಣೇಶ ಅವರಿಂದ ಅಷ್ಟಾವಧಾನ ಕಾರ್ಯಕ್ರಮ ಏರ್ಪಡಿಸಿದೆ. ಪಚ್ಛಕ ವರ್ಗ: ಕೆ.ಎಸ್.ಕಣ್ಣನ್ (ನಿಷೇಧಾಕ್ಷರ), ರಾಮಚಂದ್ರ ಕೆ. ಬಿ. ಎಸ್. (ಸಮಸ್ಯಾಪುರಾಣ), ಡಾ. ಶಂಕರ್ ಆರ್. (ದತ್ತಪದಿ), ಶ್ರೀಶ ಕಾರಂತ್ ಹೆಚ್. ಆರ್. (ಚಿತ್ರ ಕವಿತೆ), ಹೆಚ್.ಎ.ವಾಸುಕಿ (ಆಶು ಕವಿತೆ), ಮೀರಾ (ಕಾವ್ಯ ವಾಚನ), ರಘು ವಿ. (ಅಪ್ರಸ್ತುತ ಪ್ರಸಂಗ), ಉಮಾಶಂಕರ ಆರ್. ಪಿ. (ಸಂಖ್ಯಾ ಬಂಧ).
ವಿಜಯ ಕಾಲೇಜು (ಪೂರ್ವದಲ್ಲಿ ಬಿಹೆಚ್‌ಎಸ್ ಪ್ರಥಮ ದರ್ಜೆ ಕಾಲೇಜು ಆಗಿತ್ತು) ಸ್ಥಾಪನೆಗೊಂಡು 21 ವರ್ಷಗಳಾಗಿದ್ದು, ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
ಎಂಟು ವರ್ಷಗಳಿಂದ ನಾಡಿನ ಶ್ರೇಷ್ಠ ಸಾಹಿತಿಗಳ ಸಾಹಿತ್ಯ ಕುರಿತಾಗಿ ವಿಚಾರ ಸಂಕಿರಣ ನಡೆಸಿಕೊಂಡು ಬಂದಿದೆ. ಈಗ ಅವಧಾನ ಕಾರ್ಯಕ್ರಮ. ಸ್ಥಳ: ಬಿ.ವಿ.ನಾರಾಯಣರಾವ್ ಸಭಾಂಗಣ, ವಿಜಯ ಕಾಲೇಜು, 4ನೇ ಬ್ಲಾಕ್, ಜಯನಗರ. ಸಂಜೆ: 4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.